ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತದಲ್ಲಿ ಜೈವಿಕ ಇಂಧನ ಅಧಿಕ

Last Updated 1 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ವಾಷಿಂಗ್ಟನ್ (ಪಿಟಿಐ): ಸುಮಾರು 83.6 ಕೋಟಿ ಭಾರತೀಯರು ಇಂಧನ ಬಳಕೆಯಲ್ಲಿ ವಿದ್ಯುತ್ ಬದಲಿಗೆ ಇನ್ನೂ ಸಾಂಪ್ರದಾಯಿಕ ಜೈವಿಕ ವಸ್ತುಗಳನ್ನು ಅವಲಂಬಿಸಿದ್ದಾರೆ ಎಂದು ಸಂಶೋಧನಾ ವರದಿಯೊಂದು ಪ್ರಕಟಿಸಿದೆ.

ಇದು 2035ರೊಳಗೆ ಜಾಗತಿಕ ಮಟ್ಟದಲ್ಲಿ ಆಧುನಿಕ ಇಂಧನ ಬಳಕೆಯ ಅರ್ಧದಷ್ಟು ಪಾಲನ್ನು ಚೀನಾ ಮತ್ತು ಭಾರತ ಹೊಂದಲಿವೆ ಎಂಬ ಅಮೆರಿಕದ ವಾದಕ್ಕೆ ವ್ಯತಿರಿಕ್ತವಾಗಿದೆ.

ಏಷ್ಯಾದ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಬೃಹತ್ ಸಂಖ್ಯೆಯ ಜನರು ಇಂಧನಕ್ಕಾಗಿ ಸಾಂಪ್ರದಾಯಿಕ ಉರುವಲು (ಜೈವಿಕ ವಸ್ತು)ಗಳನ್ನು ಅವಲಂಬಿಸಿದ್ದು, ಇದರಲ್ಲಿ ಭಾರತವೊಂದರಲ್ಲೇ ಮೇಲಿನ ಪ್ರಮಾಣದಷ್ಟು ಇವುಗಳನ್ನು ನೆಚ್ಚಿಕೊಂಡಿರುವುದಾಗಿ `ವರ್ಲ್ಡ್‌ವಾಚ್ ಸಂಸ್ಥೆ~ ತನ್ನ ಆನ್‌ಲೈನ್ ಪತ್ರಿಕೆಯಲ್ಲಿ ಪ್ರಕಟಿಸಿದ ಹೊಸ ಸಂಶೋಧನೆಯೊಂದು ತಿಳಿಸಿದೆ.

ಇದರ ಪ್ರಕಾರ, ಅಭಿವೃದ್ಧಿ ಹೊಂದುತ್ತಿರುವ ಏಷ್ಯಾ ರಾಷ್ಟ್ರಗಳಲ್ಲಿ ಶೇ 54ರಷ್ಟು ಜನಸಂಖ್ಯೆ ಸಾಂಪ್ರದಾಯಿಕ ಜೈವಿಕ ಇಂಧನ ವಸ್ತುಗಳನ್ನು ಬಳಸುತ್ತಿದೆ. ಕಳೆದ ಎರಡು ದಶಕಗಳಲ್ಲಿ ಜಾಗತಿಕ ವಿದ್ಯುಚ್ಛಕ್ತಿ ಲಭ್ಯತೆಯಲ್ಲಿ ಸಾಕಷ್ಟು ಹೆಚ್ಚಳವಾಗಿದ್ದರೂ, ಸರ್ಕಾರ ಮತ್ತು ಅಭಿವೃದ್ಧಿ ಸಂಸ್ಥೆಗಳು ಕ್ಲಿಷ್ಟ ಆರೋಗ್ಯ, ಪರಿಸರ ಹಾಗೂ ಜೀವನ ನಿರ್ವಹಣೆಯಲ್ಲಿ ಯಶಸ್ಸು ಸಾಧಿಸಲು ವಿದ್ಯುದ್ದೀಕರಣದಲ್ಲಿ ಬಂಡವಾಳ ಹೂಡಿಕೆಯನ್ನು ಮುಂದುವರಿಸಬೇಕಾಗಿದೆ.

1990 ಮತ್ತು 2008ರ ನಡುವಿನ ಅವಧಿಯಲ್ಲಿ ವಿಶ್ವದಾದ್ಯಂತ ಸುಮಾರು ಎರಡು ಶತಕೋಟಿ ಜನರು ವಿದ್ಯುಚ್ಛಕ್ತಿ ಸೌಲಭ್ಯವನ್ನು ಹೊಂದಿದ್ದಾರೆ. ಆದರೆ ಅಂತರರಾಷ್ಟ್ರೀಯ ಇಂಧನ ಸಂಸ್ಥೆ (ಐಇಎ)ಯ ಅಂದಾಜಿನ ಪ್ರಕಾರ, 1.3 ಶತಕೋಟಿಗೂ ಅಧಿಕ ಜನರು ಇನ್ನೂ ವಿದ್ಯುತ್ ಸೌಲಭ್ಯವನ್ನು ಪಡೆಯಬೇಕಿದೆ. ಇದರೊಂದಿಗೆ ವಿಶ್ವಸಂಸ್ಥೆಯು ಇನ್ನೂ ಒಂದು ಶತಕೋಟಿ ಜನರು ವಿದ್ಯುತ್ ಸೌಲಭ್ಯದಿಂದ ವಂಚಿತರಾಗಿರುವುದಾಗಿ ಹೇಳಿದೆ.

ಸಂಶೋಧನಾ ವರದಿಯನ್ವಯ, ಕನಿಷ್ಠ 2.7 ಶತಕೋಟಿ ಜನರು ಮತ್ತು ಸಂಭವನೀಯ 3 ಶತಕೋಟಿಗೂ ಅಧಿಕ ಜನಸಂಖ್ಯೆ ಅಡುಗೆ ಮತ್ತು ಬಿಸಿಯುತ್ಪನ್ನಗಳ ತಯಾರಿಕೆಯಲ್ಲಿ ಆಧುನಿಕ ಇಂಧನವನ್ನು ಬಳಸುವ ಸೌಲಭ್ಯ ಹೊಂದಿಲ್ಲ. ಇವುಗಳಿಗೆ ಬದಲಾಗಿ ಇವರು ಕಟ್ಟಿಗೆ, ಇದ್ದಿಲು, ಕೃತಕಗೊಬ್ಬರ ಹಾಗೂ ಕೃಷಿಯುತ್ಪನ್ನಗಳ ನಿಷ್ಪಲ ಉಳಿಕೆ ಭಾಗ ಮುಂತಾದುವುಗಳನ್ನು ಬಳಸುತ್ತಿದ್ದಾರೆ. ಇವುಗಳು  ಹಾನಿಕಾರಕ ಹೊಗೆಯಂತಹ ಮಾಲಿನ್ಯ ಅಂಶಗಳನ್ನು ಹೊರಸೂಸುತ್ತಿವೆ ಎಂದೂ ವರದಿಯಲ್ಲಿ ತಿಳಿಸಲಾಗಿದೆ.

ಈ ಮಾಲಿನ್ಯಕಾರಕ ಸಾಂಪ್ರದಾಯಿಕ ಜೈವಿಕ ಇಂಧನ ವಸ್ತುಗಳ ಬಳಕೆಯಿಂದಾಗಿ ಪ್ರತಿವರ್ಷ ಜಗತ್ತಿನಾದ್ಯಂತ ಸುಮಾರು 20 ಲಕ್ಷ ಜನರು ಅಕಾಲಿಕ ಸಾವನ್ನಪ್ಪುತ್ತಿದ್ದಾರೆ. ಇವರಲ್ಲಿ ಶೇ 44ರಷ್ಟು ಮಕ್ಕಳು ಮತ್ತು ವಯಸ್ಕರ ಪೈಕಿ ಶೇ 60ರಷ್ಟು ಮಹಿಳೆಯರು ಎಂದು ವರದಿ ಅಂದಾಜಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT