ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತದಲ್ಲಿ ರೇಸ್...ಅದೇ ಹೆಮ್ಮೆಯ ಕ್ಷಣ

Last Updated 24 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಸಹರಾ ಫೋರ್ಸ್ ಇಂಡಿಯಾ ತಂಡದ ಚಾಲಕ ಅಡ್ರಿಯಾನ್ ಸುಟಿಲ್ ಇಂಡಿಯನ್ ಗ್ರ್ಯಾನ್ ಪ್ರಿ ಫಾರ್ಮುಲಾ -1 ರೇಸ್‌ನಲ್ಲಿ ಪಾಲ್ಗೊಳ್ಳುವುದನ್ನು ಎದುರು ನೋಡುತ್ತಿದ್ದಾರೆ. ಈ ರೇಸ್ ವಿಶೇಷ ಅನುಭವ ನೀಡಲಿದೆ ಎಂಬುದು ಅವರ ಹೇಳಿಕೆ.


ಬುದ್ಧ ಇಂಟರ್‌ನ್ಯಾಷನಲ್ ಸರ್ಕ್ಯೂಟ್‌ನಲ್ಲಿ ಕಾರು ಓಡಿಸುವುದು ಎಂತಹ ಅನುಭವ ನೀಡಲಿದೆ ಎಂಬ ಪ್ರಶ್ನೆಗೆ ಜರ್ಮನಿಯ ಚಾಲಕ ಸುಟಿಲ್, `ಈ ರೇಸ್ ನನಗೆ ತವರು ನೆಲದಲ್ಲಿ ನಡೆಯುವ ರೇಸ್‌ನಲ್ಲಿ ಪಾಲ್ಗೊಳ್ಳುವ ಸಂದರ್ಭ ಉಂಟಾಗುವ ವಿಶೇಷ ಅನುಭವ ನೀಡಲಿದೆ~ ಎಂದು ಉತ್ತರಿಸಿದ್ದಾರೆ.

ಚೊಚ್ಚಲ ಇಂಡಿಯನ್ ಗ್ರ್ಯಾನ್ ಪ್ರಿ ರೇಸ್ ಭಾನುವಾರ ನಡೆಯಲಿದೆ. `ಆರಂಭದಿಂದಲೂ ನಾನು ಫೋರ್ಸ್ ಇಂಡಿಯಾ ತಂಡದ ಜೊತೆಗೆ ಇದ್ದೇನೆ. ಆದ್ದರಿಂದ ಭಾರತದಲ್ಲಿ ನಡೆಯುವ ಚೊಚ್ಚಲ ರೇಸ್‌ನಲ್ಲಿ ಭಾರತದ ಏಕೈಕ ಫಾರ್ಮುಲಾ ಒನ್ ತಂಡವನ್ನು ಪ್ರತಿನಿಧಿಸುವ ಅವಕಾಶ ಲಭಿಸಿರುವುದು ಹೆಮ್ಮೆಯ ಸಂಗತಿ~ ಎಂದು ಸುಟಿಲ್ ಸೋಮವಾರ ಪ್ರತಿಕ್ರಿಯಿಸಿದ್ದಾರೆ.

ಈ ರೇಸ್‌ನಲ್ಲಿ ಉತ್ತಮ ಫಲಿತಾಂಶ ದೊರೆಯುವಂತಾಗಲು ತಕ್ಕ ಪ್ರಯತ್ನ ನಡೆಸುವುದಾಗಿ ತಿಳಿಸಿದ ಸುಟಿಲ್ ಯಾವುದೇ `ಭರವಸೆ~ ನೀಡಲು ಮುಂದಾಗಲಿಲ್ಲ. `ಫೋರ್ಸ್ ಇಂಡಿಯಾ ತಂಡ ಅಗ್ರ ಮೂರರಲ್ಲಿ ಕಾಣಿಸಿಕೊಳ್ಳಬೇಕು ಎಂಬುದು ಎಲ್ಲರ ಕನಸು. ಆದರೆ ಇಂತಹ ಕನಸು ಕಾಣುವ ಸಂದರ್ಭ ವಾಸ್ತವಾಂಶವನ್ನು ಅರಿತಿರಬೇಕು. ನಮ್ಮ ತಂಡದ ಎರಡೂ ಕಾರು ಪಾಯಿಂಟ್ ಗಿಟ್ಟಿಸುವಲ್ಲಿ ಯಶಸ್ವಿಯಾದರೆ, ಅದು ಬಲುದೊಡ್ಡ ಸಾಧನೆಯೇ ಸರಿ. ಏಕೆಂದರೆ ಈಗ ಫಾರ್ಮುಲಾ ಒನ್ ರೇಸ್‌ನಲ್ಲಿ ಸಾಕಷ್ಟು ಪೈಪೋಟಿ ಇದೆ~ ಎಂದು ಅವರು ತಿಳಿಸಿದರು.

ಸುಟಿಲ್ ಹಾಗೂ ತಂಡದ ಇನ್ನೊಬ್ಬ ಚಾಲಕ ಪೌಲ್ ಡಿ ರೆಸ್ಟಾ ಪ್ರಸಕ್ತ ಋತುವಿನ ಎರಡನೇ ಅವಧಿಯಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ. ಆದರೆ ಈ ರೇಸ್ ಫೋರ್ಸ್ ಇಂಡಿಯಾ ತಂಡದ ತವರು ದೇಶದಲ್ಲಿ ನಡೆಯುತ್ತಿರುವ ಕಾರಣ ಇಬ್ಬರ ಮೇಲೂ ಹೆಚ್ಚಿನ ಒತ್ತಡ ಇದೆ ಎಂದು ಸುಟಿಲ್ ಹೇಳಿದರು.

`ನಾವು ಈ ಹಿಂದೆಯೂ ಒತ್ತಡ ಅನುಭವಿಸಿದ್ದೆವು. ಹಲವು ವರ್ಷಗಳಿಂದ ರೇಸ್‌ನಲ್ಲಿ ಪಾಲ್ಗೊಳ್ಳುತ್ತಿದ್ದೇವೆ. ತಂಡದ ಮಟ್ಟಿಗೆ ಈ ವಾರ ನಿಜವಾಗಿಯೂ ಮಹತ್ವದ್ದು. ಎಲ್ಲ ರೇಸ್‌ಗಳಲ್ಲೂ ಒಂದೇ ರೀತಿಯ ಪಾಯಿಂಟ್ ಪದ್ಧತಿ ಇದೆ. ಈ ಕಾರಣ ಋತುವಿನ ಎಲ್ಲ ರೇಸ್‌ಗಳೂ ಮುಖ್ಯವಾದುದು. ಆದರೆ ಭಾರತದಲ್ಲಿ ಈ ರೇಸ್ ನಡೆಯುತ್ತಿರುವ ಕಾರಣ ನಮ್ಮ ಮೇಲೆ ಹೆಚ್ಚಿನ ನಿರೀಕ್ಷೆ ಹಾಗೂ ಒತ್ತಡ ಇದೆ. ಆದ್ದರಿಂದ ಇಲ್ಲಿನ ಅಭಿಮಾನಿಗಳಿಗೆ ಸಂಭ್ರಮ ಉಂಟಾಗುವ ರೀತಿಯಲ್ಲಿ ಪ್ರದರ್ಶನ ನೀಡುವುದು ಅಗತ್ಯ~ ಎಂದು ನುಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT