ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತೀಯ ದಂಪತಿಗೆ ಜೈಲು

ತಂದೆಗೆ 18 ತಿಂಗಳು, ತಾಯಿಗೆ 15 ತಿಂಗಳು ಸೆರೆವಾಸ
Last Updated 4 ಡಿಸೆಂಬರ್ 2012, 20:05 IST
ಅಕ್ಷರ ಗಾತ್ರ

ಓಸ್ಲೊ (ಪಿಟಿಐ): ಏಳು ವರ್ಷದ ಮಗನ ಮೇಲೆ `ದೌರ್ಜನ್ಯ' ನಡೆಸಿದ್ದಾರೆ ಎಂಬ ಕಾರಣಕ್ಕಾಗಿ ಆಂಧ್ರಪ್ರದೇಶ ಮೂಲದ ದಂಪತಿಗೆ ಜೈಲು ಶಿಕ್ಷೆ ವಿಧಿಸಿ ನಾರ್ವೆಯ ರಾಜಧಾನಿ ಓಸ್ಲೊದ ಜಿಲ್ಲಾ ನ್ಯಾಯಾಲಯ ಮಂಗಳವಾರ ತೀರ್ಪು ನೀಡಿದೆ.

`ಈ ಪ್ರಕರಣದಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಚಂದ್ರಶೇಖರ್ ವಲ್ಲಭನೇನಿ ಮತ್ತು ಅವರ ಪತ್ನಿ ಅನುಪಮಾ ತಪ್ಪಿತಸ್ಥರು' ಎಂದು ಅದು ಘೋಷಿಸಿದೆ. ತಂದೆಗೆ 18 ತಿಂಗಳು ಹಾಗೂ ತಾಯಿಗೆ 15 ತಿಂಗಳು ಕಾರಾಗೃಹ ವಾಸ ವಿಧಿಸಿದೆ. ಆದರೆ ಉನ್ನತ ನ್ಯಾಯಾಲಯದಲ್ಲಿ ತೀರ್ಪನ್ನು ಪ್ರಶ್ನಿಸುವುದಾಗಿ ದಂಪತಿ ಪರ ವಕೀಲರು ಹೇಳಿದ್ದಾರೆ.

`ಮಗುವಿನ ಮೇಲೆ ದೌರ್ಜನ್ಯ ನಡೆಸಿರುವ ಭಾರತೀಯ ದಂಪತಿ ತಪ್ಪಿತಸ್ಥರು ಎಂಬುದು ರುಜುವಾತಾಗಿದೆ. ಅವರು ತಮ್ಮ ಮಗನ ಕಾಲನ್ನು ಕಾದ ಚಮಚೆಯಿಂದ ಅಥವಾ ಅಂತಹುದೇ ಇತರ ವಸ್ತುವಿನಿಂದ ಉದ್ದೇಶಪೂರ್ವಕವಾಗಿ ಸುಟ್ಟಿದ್ದಾರೆ. ಇದಕ್ಕೆ ಸಾಕ್ಷಿಯಾಗಿ ಕಾಲಿನಲ್ಲಿ ಸುಟ್ಟ ಗಾಯ ಕಂಡು ಬಂದಿದೆ. ಒಂದು ಸಂದರ್ಭದಲ್ಲಿ ಮಗನ ನಾಲಿಗೆಗೆ ಕಾದ ಚಮಚೆಯಿಂದ ಬರೆ ಇಡುವುದಾಗಿ ಬೆದರಿಸಿದ್ದರು ಎಂಬುದೂ ಸಾಬೀತಾಗಿದೆ' ಎಂದು ನ್ಯಾಯಾಲಯ ತಿಳಿಸಿದೆ.

`ದಂಪತಿ 6-7 ತಿಂಗಳಿನಿಂದ ಈ ರೀತಿಯಾಗಿ ಪುತ್ರನನ್ನು ಹಿಂಸಿಸುತ್ತಾ ಬಂದಿರುವುದೂ ದೃಢಪಟ್ಟಿದೆ. ಹಾಗಾಗಿ ಈ ಪ್ರಕರಣವು ದಂಡ ಸಂಹಿತೆಯ ಕಲಂ 219ಯನ್ವಯ ಅಪರಾಧ' ಎಂದು  ಹೇಳಿದೆ.ನ್ಯಾಯಾಲಯದ ತೀರ್ಪಿಗೆ ಪ್ರತಿಕ್ರಿಯಿಸಿರುವ ಭಾರತದ ವಿದೇಶಾಂಗ ಸಚಿವಾಲಯದ ಅಧಿಕಾರಿಗಳು, `ನಾರ್ವೆಯಲ್ಲಿರುವ ನಮ್ಮ ರಾಯಭಾರ ಕಚೇರಿಯು ಸಂಬಂಧಪಟ್ಟವರ ಜತೆ ಸಂಪರ್ಕದಲ್ಲಿದೆ' ಎಂದು ಹೇಳಿದ್ದಾರೆ. ಜೈಲು ಶಿಕ್ಷೆಗೆ ಗುರಿಯಾಗಿರುವ ದಂಪತಿಗೆ ಅಗತ್ಯವಿರುವ ಎಲ್ಲಾ ಸಹಾಯ ಮಾಡುವುದಾಗಿ ತಿಳಿಸಿದ್ದಾರೆ.

ಅಜ್ಜನ ಮನೆಯಲ್ಲಿ ಆತಂಕ
(ಹೈದರಾಬಾದ್ ವರದಿ): ಈ ಎಲ್ಲ ಘಟನಾವಳಿಗೆ ಕಾರಣನಾದ ಮುಗ್ದ ಬಾಲಕ ಸಾಯಿ ಶ್ರೀರಾಂ ಹೈದರಾಬಾದ್‌ನ ಅಜ್ಜನ ಮನೆಯಲ್ಲಿದ್ದಾನೆ. ಅಪ್ಪ- ಅಮ್ಮನ ಬಗ್ಗೆ ಕನವರಿಸುತ್ತಾನೆ. ತಂದೆ- ತಾಯಿ ತನ್ನಿಂದಾಗೇ ಜೈಲು ಸೇರಿದ್ದಾರೆ ಎಂಬ ಸಂಗತಿಯನ್ನುಅವನಿಗೆ ತಿಳಿಸಿಲ್ಲ.

ಶಾಲಾ ವಾಹನದಲ್ಲಿ ಮೂತ್ರ ಮಾಡಿಕೊಳ್ಳುತ್ತಿದ್ದ ಮಗನಿಗೆ ಶಿಸ್ತು ಕಲಿಸಲು ತಂದೆ ತಾಯಿ ಯತ್ನಿಸಿದ್ದರು. ಭಾರತಕ್ಕೆ ಕಳಿಸುವುದಾಗಿ ಗದರಿಸಿದ್ದರು. ಇದನ್ನಾತ ಶಾಲೆಯಲ್ಲಿ ಶಿಕ್ಷಕರಿಗೆ ತಿಳಿಸಿದ್ದ. ಕೆಲ ತಿಂಗಳ ಹಿಂದೆ ದಂಪತಿ ಮಗನನ್ನು ಕರೆದುಕೊಂಡು ಹೈದರಾಬಾದ್‌ಗೆ ಬಂದಿದ್ದರು. ಕಾರಣಾಂತರದಿಂದ ಅವನನ್ನು ಇಲ್ಲಿಯೇ ಬಿಟ್ಟು ಕಳೆದ ತಿಂಗಳು ನಾರ್ವೆಗೆ ಮರಳಿದ್ದರು. ಅಲ್ಲಿ ಶಾಲೆಯ ಶಿಕ್ಷಕ ವರ್ಗ ನೀಡಿದ ದೂರಿನಂತೆ ಪೊಲೀಸರು ಅವರನ್ನು ಬಂಧಿಸಿದರು.

ಈ ಮಧ್ಯೆ, ನ್ಯಾಯಾಲಯದ ತೀರ್ಪು `ಪೋಷಕರ ಜತೆ ಬೆಳೆಯಬೇಕಾದ ಮಗುವಿನ ಸ್ವಾಭಾವಿಕ ಹಕ್ಕಿನ ಉಲ್ಲಂಘನೆ. ಆದ್ದರಿಂದ ಭಾರತ ಸರ್ಕಾರ ಮಧ್ಯಪ್ರವೇಶಿಸಬೇಕು' ಎಂದು ಚಂದ್ರಶೇಖರ್ ಕುಟುಂಬ ಒತ್ತಾಯಿಸಿದೆ.`ಭಾರತ ಸರ್ಕಾರ ಸೂಕ್ತ ಸಮಯದಲ್ಲಿ ಸ್ಪಂದಿಸಲಿಲ್ಲ. ನನ್ನ ಚಿಕ್ಕಪ್ಪ ಜೈಲಿನಲ್ಲಿರುವವರೆಗೆ ಅವರ ಮಕ್ಕಳಿಗೆ ಪೋಷಕರ ಕಾಳಜಿ ದೊರೆಯದೇ ಇರುವುದರಿಂದ ಅದು ಖಂಡಿತವಾಗಿಯೂ ಮಕ್ಕಳ ಹಕ್ಕಿನ ಉಲ್ಲಂಘನೆಯಾಗಿದೆ.

  ಶ್ರೀರಾಮ್‌ಗೆ ಪೋಷಕರ ಆರೈಕೆಯ ಅಗತ್ಯವಿದೆ ಎಂದು ನಾರ್ವೆ ಸರ್ಕಾರವೇ ಒಪ್ಪಿಕೊಂಡಿದೆ. ತೀರ್ಪಿನ ವಿರುದ್ಧ ನಾವು ಮೇಲ್ಮನವಿ ಸಲ್ಲಿಸುತ್ತೇವೆ ಮತ್ತು ಭಾರತ ಸರ್ಕಾರದ ನೆರವನ್ನು ಕೋರುತ್ತೇವೆ' ಎಂದು ಚಂದ್ರಶೇಖರ್ ಅವರ ಸಹೋದರನ ಪುತ್ರ ಶೈಲೇಂದ್ರ ತಿಳಿಸಿದರು.

ತೀರ್ಪಿನ ಸುದ್ದಿ ಕೇಳಿ ಚಂದ್ರಶೇಖರ್ ಅವರ ತಾಯಿ ಪ್ರಜ್ಞಾಹೀನರಾದರು. ಅನುಪಮಾ ಅವರ ಪೋಷಕರನ್ನೂ ಸಂತೈಸಲು ಸಾಧ್ಯವಾಗಲಿಲ್ಲ. ಸುದ್ದಿ ಕೇಳಿ ಧಾವಿಸಿ ಬಂದ ಸಂಬಂಧಿಕರು ಪ್ರಕರಣದಲ್ಲಿ ಭಾರತ ಸರ್ಕಾರದ ಉದಾಸೀನ ಧೋರಣೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಈ ಮಕ್ಕಳ ಭವಿಷ್ಯ ಕುರಿತಂತೆ ಕಳವಳ ವ್ಯಕ್ತಪಡಿಸಿರುವ ವೈದ್ಯರಾದ ಡಾ. ಕಲ್ಯಾಣ್ ಚಕ್ರವರ್ತಿ, `ಶ್ರೀರಾಮ್ ಅತಿ ಚೂಟಿ.  ಚಂದ್ರಶೇಖರ್ ಅವರ ಇನ್ನೊಬ್ಬ ಮಗ ಅಭಿರಾಮ್ ಆಸ್ತಮಾದಿಂದ ಬಳಲುತ್ತ್ದ್ದಿದಾನೆ.  ಇದರಿಂದ ದಂಪತಿ ಅನುಭವಿಸುತ್ತಿರುವ ಮಾನಸಿಕ ಒತ್ತಡವನ್ನು ನ್ಯಾಯಾಲಯ ಗಣನೆಗೆ ತೆಗೆದುಕೊಂಡಿಲ್ಲ' ಎಂದು ದೂರಿದರು.

ಭಾರತೀಯರಲ್ಲವೆ?
`ಚಂದ್ರಶೇಖರ್ ಪ್ರಕರಣ ಖಾಸಗಿ ವ್ಯಕ್ತಿಗೆ ಸಂಬಂಧಿಸಿದ ವಿಷಯ ಎಂದು ಕೇಂದ್ರ ವಿದೇಶಾಂಗ ಸಚಿವ ಸಲ್ಮಾನ್ ಖುರ್ಷಿದ್ ಯಾವ ಆಧಾರದಲ್ಲಿ ಹೇಳಿಕೆ ನೀಡಿದ್ದಾರೆ? ಅವರು ಭಾರತೀಯ ಪ್ರಜೆಗಳಲ್ಲವೇ?'.
ಭೂಷಣ್ (ಅನುಪಮಾ ಸೋದರ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT