ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತೀಯ ಸಂವೇದನೆ ಇಲ್ಲದ ವೇದಮೀಮಾಂಸೆ

ವಿಮರ್ಶೆ
Last Updated 13 ಆಗಸ್ಟ್ 2016, 19:30 IST
ಅಕ್ಷರ ಗಾತ್ರ

ಪ್ರಾಚೀನ ಭಾರತೀಯ ಸಂಸ್ಕೃತಿ – ಎಂದ ಕೂಡಲೇ ನೆನಪಾಗುವ ಅಥವಾ ಆಗಬೇಕಾದ ವಿವರ ಎಂದರೆ ‘ವೇದ’. ಭಾರತೀಯ ಸಂಸ್ಕೃತಿಯನ್ನು ಹೊಗಳುವವರಿಗೂ ತೆಗಳುವವರಿಗೂ ಸಾವಿರಾರು ವರ್ಷಗಳಿಂದ ಆಹಾರವನ್ನು ಒದಗಿಸುತ್ತ ಬಂದಿರುವುದೇ ವೇದ. ಮಾನವ ಜನಾಂಗದ ಇತಿಹಾಸದಲ್ಲಿ ಲಭ್ಯವಿರುವ ಅತ್ಯಂತ ಪ್ರಾಚೀನ ಸಾಹಿತ್ಯವೆಂದರೆ ವೇದವೇ ಹೌದು.

ಇಂದು ನಮ್ಮ ಎಣಿಕೆಯಲ್ಲಿರುವುದು ನಾಲ್ಕು ವೇದಗಳು – ಋಗ್ವೇದ, ಯಜುರ್ವೇದ, ಸಾಮವೇದ ಮತ್ತು ಅಥರ್ವವೇದ. ಆದರೆ ಪರಂಪರೆಯ ನಂಬಿಕೆಯಂತೆ ವೇದ ಎನ್ನುವುದು ಒಂದೇ; ಅಧ್ಯಯನದ ಸೌಲಭ್ಯಕ್ಕಾಗಿ ಒಂದಾಗಿದ್ದ ಒಂದಾಗಿದ್ದ ವೇದವನ್ನು ನಾಲ್ಕಾಗಿ ವಿಂಗಡಿಸಲಾಯಿತು.

ಈ ವಿಭಾಗವನ್ನು ಮಾಡಿದವರು ವ್ಯಾಸ ಮಹರ್ಷಿಗಳು. ಸಂಪ್ರದಾಯದ ಪ್ರಕಾರ ವೇದ ಅಪೌರುಷೇಯ; ಎಂದರೆ ಮನುಷ್ಯರು ಮಾಡಿದ್ದಲ್ಲ. ಅದು ನಿತ್ಯ; ಎಂದರೆ ಎಲ್ಲ ಕಾಲಕ್ಕೂ ಇರುವಂಥದ್ದು. ಆದರೆ ‘ಆಧುನಿಕ’ರ ಪ್ರಕಾರ ವೇದಗಳಿಗೆ ಐತಿಹಾಸಿಕ ಬೆಳವಣಿಗೆಯಿದೆ; ಋಗ್ವೇದ ಅದರ ಮೊದಲ ಹಂತ; ಆ ಗ್ರಂಥದಲ್ಲೂ ಬೆಳವಣಿಗೆಯ ಬೇರೆ ಬೇರೆ ಹಂತಗಳಿವೆ.

ವೇದದ ಬಗ್ಗೆ ನಾವು ಆಗಾಗ ಪ್ರಶಂಸೆಯನ್ನೋ ಟೀಕೆಯನ್ನೋ ಕೇಳುತ್ತಿರುತ್ತೇವೆ. ಇತ್ತೀಚಿಗೆ ಕೂಡ, ಮತ್ತೂರಿನಲ್ಲಿ ನಡೆಯಿತೆನ್ನಲಾದ ಸೋಮಯಾಗದ ಬಗ್ಗೆ ವಾದ–ವಿವಾದಗಳು ನಡೆದ ಸಮಯದಲ್ಲೂ ಕೂಡ ವೇದಸಂಸ್ಕೃತಿಯ ಬಗ್ಗೆ ಚರ್ಚೆ ನಡೆಯಿತಷ್ಟೆ. ನಾವು ಗಮನಿಸಬಹುದಾದ ಸಾಮಾನ್ಯ ಸಂಗತಿಯೊಂದಿದೆ; ವೇದದ ಬಗ್ಗೆ ನಡೆಯುವ ಚರ್ಚೆಗಳಲ್ಲಿ ಎರಡು ರೀತಿಯ ಅತಿರೇಕಗಳಿರುತ್ತವೆ.

ಒಂದು: ವೇದದಲ್ಲಿ ಎಲ್ಲವೂ ಇದೆ; ಎಲ್ಲವೂ ಎಂದರೆ – ಈ ಕ್ಷಣ ವಿಜ್ಞಾನ ಹೊಸತಾಗಿ ಏನನ್ನು ಹೇಳಿದರೂ ಅದು ವೇದದಲ್ಲಿ ಈ ಮೊದಲೇ ಇತ್ತು – ಎನ್ನುವ ಉದ್ಗಾರ. ಎರಡು: ವೇದದಲ್ಲಿ ಏನೂ ಇಲ್ಲ; ಇರುವುದೆಲ್ಲವೂ ಪುರೋಹಿತಶಾಹಿಯು ಸಮಾಜವನ್ನು ಶೋಷಿಸಲು ಹುಟ್ಟುಹಾಕಿದ ಕಟ್ಟುಕತೆಗಳ ಜಾಲ – ಎನ್ನುವ ತಾತ್ಸಾರ.

ಈ ಎರಡು ಪಕ್ಷದವರಿಗೂ ಸಮಾನವಾಗಿರುವ ಗುಣವೊಂದಿದೆ; ಅದೆಂದರೆ – ಈ ಎರಡು ಗುಂಪಿನವರೂ ವೇದದ ಅಧ್ಯಯನವನ್ನೇ ಮಾಡಿರುವುದಿಲ್ಲ. (ವೇದದ ಅಧ್ಯಯನಕ್ಕೆ ಇರುವ ದೊಡ್ಡ ತೊಡಕೆಂದರೆ – ಅದರ ಭಾಷೆ. ಅದು ಸಂಸ್ಕೃತ ಎಂಬ ಕಾರಣವಷ್ಟೆ ಅಲ್ಲ; ಲೌಕಿಕ ಸಂಸ್ಕೃತದ ಪರಿಣತಿಯಷ್ಟೆ ವೇದಾರ್ಥವನ್ನು ತಿಳಿಯಲು ಸಾಕಾಗದು. ಹೀಗಾಗಿ ವೇದಗಳನ್ನು ಅಧ್ಯಯನ ಮಾಡಲು ವಿಶೇಷ ತಜ್ಞತೆಯೇ ಬೇಕಾಗುತ್ತದೆ ಎನ್ನವುದರಲ್ಲಿ ಸಂದೇಹವಿಲ್ಲ.

ವೇದಗಳನ್ನು ಕಲಿಯಲು ಒದಗುವ ಸಲಕರಣೆಗಳನ್ನೇ ಪರಂಪರೆ ‘ವೇದಾಂಗ’ಗಳು ಎಂದಿರುವುದು.) ಎಂದರೆ, ವೇದವನ್ನು ಪ್ರಶಂಸಿಸಲೋ ಅಥವಾ ನಿಂದಿಸಲೋ ಬೇಕಾದ ಮೊದಲ ಅರ್ಹತೆ ಎಂದರೆ, ಅದನ್ನು ಸಮಗ್ರವಾಗಿ ಅಭ್ಯಸಿಸುವುದು. ಆದರೆ ಈ ಅರ್ಹತೆಯನ್ನು ದಕ್ಕಿಸಿಕೊಂಡವರ ಸಂಖ್ಯೆ ವಿರಳವೇ. ಇಂಥ ವಿರಳರಲ್ಲಿ ಒಬ್ಬರು ನಮ್ಮ ನಡುವೆಯೇ ಇರುವ ಹಿರಿಯ ವಿದ್ವಾಂಸರೂ ಚಿಂತಕರೂ ಆದ ಡಾ.ಜಿ. ರಾಮಕೃಷ್ಣ. 

ಅವರು ಸಂಸ್ಕೃತ ವಿದ್ವಾಂಸರು; ವೇದ–ವೇದಾಂತ–ತರ್ಕಗಳನ್ನು ಕಲಿತವರು. ವೇದಗಳನ್ನು, ಮುಖ್ಯವಾಗಿ ಋಗ್ವೇದವನ್ನು ಕುರಿತು ಅವರು ಬರೆದಿರುವ ಲೇಖನಗಳು ‘ಋಗ್ವೇದ ಪ್ರವೇಶಿಕೆ – ಐತಿಹ್ಯ ಮತ್ತು ವಾಸ್ತವ’ ಎಂಬ ಹೆಸರಿನಲ್ಲಿ ಈಚೆಗಷ್ಟೆ ಪ್ರಕಟವಾಗಿವೆ. ಅವರ ಈ ಬರಹದ ಹಿಂದಿರುವ ತಾತ್ವಿಕತೆ ಏನು ಎನ್ನುವುದನ್ನು ಮುನ್ನುಡಿಯ ಅವರ ವಾಕ್ಯಗಳು ಸ್ಪಷ್ಟಪಡಿಸುತ್ತವೆ:

‘ಬೇರೆಲ್ಲ ಸಾಹಿತ್ಯದಂತೆ ಋಗ್ವೇದ ಸಹ ಸಾಮಾಜಿಕ, ಚಾರಿತ್ರಿಕ, ಸಾಂಸ್ಕೃತಿಕ ಸಂಗತಿಗಳ ಆಗರ. ಚಾರಿತ್ರಿಕ ದೃಷ್ಟಿಯಿಂದ ವೇದವನ್ನು ಅಭ್ಯಾಸ ಮಾಡಿದರೆ ಈ ಮಜಲುಗಳನ್ನು ಗ್ರಹಿಸುವುದು ಕಷ್ಟವಲ್ಲ. ನಾಗರಿಕತೆಯ ಒಂದು ಹಂತದ ವಿಸ್ಮಯ, ತುಮುಲ, ಸಂಘರ್ಷ, ಆಚರಣೆ, ಆಂತರಿಕ ಸಂಬಂಧಗಳು, ಸಾಮಾಜಿಕ ನೀತಿಯ ಚಿತ್ರಣ, ಪ್ರಕೃತಿಯ ರಮ್ಯತೆ, ಇತ್ಯಾದಿಗಳೆಲ್ಲಾ ಯಾವುದೇ ಸಾಹಿತ್ಯದಲ್ಲಿದ್ದಂತೆ ಋಗ್ವೇದದಲ್ಲಿಯೂ ಪ್ರತಿಫಲನಗೊಂಡಿವೆ. ಆದರೆ ಅದು ವಿಶ್ವಕೋಶವಲ್ಲ, ಜ್ಞಾನಸರ್ವಸ್ವದ ಖನಿಯಲ್ಲ. ಅನಗತ್ಯವಾಗಿ ಋಗ್ವೇದ ಸಾಹಿತ್ಯವನ್ನು ವೈಭವೀಕರಿಸುವುದಾಗಲೀ ನಗಣ್ಯವೆಂದು ತಳ್ಳಿಹಾಕುವುದಾಗಲೀ ಸರಿಯಲ್ಲ.’

ರಾಮಕೃಷ್ಣ ಅವರು ವೇದದ ಬಗ್ಗೆ ಇರುವ ಹಲವು ತಪ್ಪು ಅಭಿಪ್ರಾಯಗಳನ್ನು ಹೋಗಲಾಡಿಸುವ ಪ್ರಯತ್ನವನ್ನು ಈ ಕೃತಿಯಲ್ಲಿ ಮಾಡಿದ್ದಾರೆ. ಆದರೆ ಓದುಗರಲ್ಲಿ ಕೆಲವು ತಪ್ಪು ತಿಳಿವಳಿಕೆಗಳನ್ನು ಉಂಟುಮಾಡುವ ಕೆಲಸವನ್ನೂ ಮಾಡಿದ್ದಾರೆ ಎನ್ನದೆ ವಿಧಿಯಿಲ್ಲ. ಇಲ್ಲಿ ಆನಂದ ಕುಮಾರಸ್ವಾಮಿಯವರ  ಮಾತುಗಳು ನೆನಪಾಗುತ್ತವೆ:

‘It is very evident that for an understanding of the Vedas, a knowledge of Sanskrit, however profound, is insufficient.’

ವೇದದಲ್ಲಿ ವಿಜ್ಞಾನ ಇದೆ, ವಿದ್ಯುಚ್ಛಕ್ತಿಯನ್ನು ತಯಾರಿಸುವ ವಿದ್ಯೆ ಅದರಲ್ಲಿದೆ – ಎಂಬಂಥ ಬಾಲಿಶ ಮಾತುಗಳನ್ನು ಯಾವ ಪ್ರಜ್ಞಾವಂತ ವೇದಚಿಂತಕರೂ ಸಮರ್ಥಿಸಲಾರರು. ಹೀಗೆಯೇ ವೇದವನ್ನು ಕೇವಲ ಪದ್ಯಗಳ ಗುಚ್ಛವಾಗಿಯಷ್ಟೆ ಸ್ವೀಕರಿಸಿ, ಅದರಲ್ಲಿರುವ ತಾತ್ವಿಕ ಆಯಾಮಗಳನ್ನು ನಿರ್ಲಕ್ಷಿಸುವುದು ಹೇಗೆ ಸರಿಯಾದೀತು? ರಾಮಕೃಷ್ಣ ಅವರಿಗೆ ತತ್ತ್ವಶಾಸ್ತ್ರ ಎನ್ನುವುದು ಒಂದು ಗೀಳಾಗಿ ಕಾಣುತ್ತದೆ (ಪು. 59).

ಹೀಗೆ ತತ್ತ್ವಶಾಸ್ತ್ರದ ಬಗ್ಗೆಯೇ ಪೂರ್ವಗ್ರಹವಿದ್ದಾಗ ವೇದದಲ್ಲಿರುವ ತಾತ್ವಿಕತೆಯನ್ನು ಲೇಖಕರು ಹೇಗೆ ಮೆಚ್ಚಲು ಸಾಧ್ಯ? ಇದರ ಅರ್ಥ, ವೇದದ ಪ್ರತಿ ಮಂತ್ರವೂ ತಾತ್ವಿಕತೆಯನ್ನೇ ಹೊಂದಿದೆ ಎಂದಲ್ಲ; ಆದರೆ ಅಂಥ ಮಂತ್ರಗಳೂ ಇವೆ ಎನ್ನುವುದನ್ನು ಉಪೇಕ್ಷಿಸಲಾಗದು. ಆದರೆ ರಾಮಕೃಷ್ಣ ಅವರು ವೇದವನ್ನು ಕಾವ್ಯವನ್ನಾಗಿಯೂ ವೇದಕಾಲೀನ ಜನರನ್ನು ಬುಡಕಟ್ಟು ಜನರಂತೆಯೂ ಕಾಣುತ್ತಾರಷ್ಟೆ.

ಇಂಥ ನಿಲುವು ಟೀಕಾರ್ಹವಾದುದೇನಲ್ಲ; ಆದರೆ ಕಾವ್ಯಕ್ಕೂ ಕೂಡ ಧ್ವನಿಶಕ್ತಿಯೊಂದಿರುತ್ತದೆ ಎಂಬುದನ್ನು ಮರೆತರೆ ಹೇಗೆ? ವೇದಸಾಹಿತ್ಯ ಎನ್ನುವುದು ಸಂಕೀರ್ಣವಾದುದು; ಅದರ ಎಷ್ಟೋ ಭಾಗಗಳ ಅರ್ಥ ಜಟಿಲವಾದುದು ಎಂಬ ಮಾತನ್ನು ಅವರೇ ಆಡಿದ್ದಾರೆ. ಆದರೆ ಪುಸ್ತಕದ ಉದ್ದಕ್ಕೂ ವೇದದ ವಾಚ್ಯಾರ್ಥವನ್ನಷ್ಟೆ ಅವರು ಪ್ರತಿಪಾದಿಸುತ್ತಾರೆ.

ವೇದ ಎಂದರೆ ವಿಶ್ವಕೋಶ, ಅದರಲ್ಲಿ ಇಲ್ಲದ ವಿದ್ಯೆಯೇ ಇಲ್ಲ – ಎಂದು ಬಡಬಡಿಸುವುದು ಹಾಸ್ಯಾಸ್ಪದ. ಅಂತೆಯೇ ವೇದವನ್ನು ಈಗಿನ ಸಾಮಾಜಿಕ ಸಿದ್ಧಾಂತಗಳ ಹಿನ್ನೆಲೆಯಲ್ಲಿ, ಪ್ರಾಚೀನ ಇತಿಹಾಸದ ಕೃತಿಯಾಗಿ ಮಾತ್ರವೇ ನೋಡುವುದೂ ತಪ್ಪಾಗುತ್ತದೆ. ಇಂಥ ಮಾನಸಿಕತೆಯನ್ನೇ ಆನಂದ ಕುಮಾರಸ್ವಾಮಿಯವರು ಹೀಗೆಂದಿರುವುದು:

‘The sacred literature of India is available to most of us only in translations made by scholars trained in linguistics rather than in metaphysics; and it has been expounded and explained - or as I should rather say, explained away - mainly by scholars ready provided with the assumptions of the naturalist and anthropologist, scholars whose intellectual capacities have been so much inhibited by their own powers of observation that they can no longer distinguish the reality from appearance, the Supernal Sun of metaphysics from the physical sun of their own experience.’

ಆನಂದ ಕುಮಾರಸ್ವಾಮಿಯವರು ಇಲ್ಲಿ ಎತ್ತಿರುವ ಆಕ್ಷೇಪಗಳು ರಾಮಕೃಷ್ಣ ಅವರ ಈ ಕೃತಿಗೂ ಸಲ್ಲುತ್ತವೆ.
‘ವೇದ’ ಎನ್ನುವುದಕ್ಕೆ ಪರಂಪರೆಯಲ್ಲಿ ಅರಿವು, ತಿಳಿವಳಿಕೆ ಎಂಬ ವಿಶಾಲಾರ್ಥವಿದೆ. ಹೀಗಾಗಿಯೇ ವೇದವನ್ನು ಅನಂತ ಎಂದೂ ಕರೆದಿರುವುದು. ಈ ಹಿನ್ನೆಲೆಯಲ್ಲಿ ನೋಡಿದಾಗ ಅಪೌರುಷೇಯ ಎನ್ನುವುದರ ಸೀಮಿತಾರ್ಥ ಕಳಚಿಹೋಗುತ್ತದೆ. ಆದರೆ ರಾಮಕೃಷ್ಣ ಅವರು ಹಟಕ್ಕೆ ಬಿದ್ದವರಂತೆ ವೇದವನ್ನು ಸಂಕುಚಿತವಾದ ನೆಲೆಯಲ್ಲಿಯೇ ವಿಶ್ಲೇಷಿಸುತ್ತಾರೆ.

ವೇದದ ಬಗ್ಗೆ ಪಾಶ್ಚಾತ್ಯ ವಿದ್ವಾಂಸರ ಹೇಳಿಕೆಗಳನ್ನು ನೋಡುವಾಗಿನ ಉದಾರತೆಯು ಭಾರತೀಯ ಭಾಷ್ಯಕಾರರ ಮತ್ತು ವಿದ್ವಾಂಸರ ಮಾತುಗಳನ್ನು ವಿಶ್ಲೇಷಿಸುವಾಗ ಮರೆಯಾಗಿಬಿಡುತ್ತವೆ. ಈ ಮಾತುಗಳನ್ನು ಉದಾರವಾಗಿಯೇ ನೋಡಬೇಕೆಂದಿಲ್ಲ, ನಿಜ. ಆದರೆ ವೇದಕಾಲಕ್ಕೆ ಸಾಕಷ್ಟು ದೂರವಾಗಿದ್ದ ಸಾಯಣಾಚಾರ್ಯರ ಭಾಷ್ಯದಲ್ಲಿ ತಪ್ಪುಗಳು ನುಸುಳಬಹುದಾದರೆ, ಅವರಿಗಿಂತಲೂ ವೇದಕ್ಕೆ ಎಲ್ಲ ರೀತಿಯಿಂದಲೂ ದೂರವಾಗಿರುವ ನಮ್ಮ ವ್ಯಾಖ್ಯಾನಗಳಲ್ಲಿ ತಪ್ಪುಗಳು ಇರಲಾರವೆ?

ರಾಮಕೃಷ್ಣ ಅವರ ಕೆಲವೊಂದು ಮಾತುಗಳಲ್ಲಿ ವೇದಸಂಸ್ಕೃತಿಯ ಬಗ್ಗೆ ಅವರಿಗಿರುವ ಮನೋಭಾವದ ಸಣ್ಣ ಪರಿಚಯ ಒದಗುತ್ತದೆ. ಉದಾಹರಣೆಗೆ, ಪಿತೃಸೂಕ್ತದ ಬಗ್ಗೆ ಬರೆಯುತ್ತ – ‘ಇದರ ಕೆಲವು ಮಂತ್ರಗಳನ್ನು ಒಂದು ವರ್ಣದವರು ಶ್ರಾದ್ಧಕರ್ಮದಲ್ಲಿ ಪ್ರಯೋಗಿಸುವುದುಂಟು’ (ಪು.147). ಎರಡೇ ಪುಟಗಳಲ್ಲಿ ಈ ‘ಒಂದು ವರ್ಣದವರು’ ಏನಾಗುತ್ತಾರೆ ನೋಡಿ! ‘ಸಾಮಾನ್ಯವಾಗಿ ಈ ಸೂಕ್ತದ ಎಲ್ಲ ಮಂತ್ರಗಳನ್ನೂ ಬ್ರಾಹ್ಮಣವರ್ಣದವರು ಶ್ರಾದ್ಧಕರ್ಮದಲ್ಲಿ ಬಳಸುತ್ತಾರೆ’ (ಪು. 150). ಲೇವಡಿಯ ಮಾತುಗಳೂ, ಕುಹಕಗಳೂ ಸಾಕಷ್ಟಿವೆ.

ಇಂಥದೊಂದು ಗಂಭೀರ ಕೃತಿಯಲ್ಲಿ ಈ ರೀತಿಯ ಸಡಿಲವಾದ ಮಾತುಗಳು ಅನೌಚಿತ್ಯವಾಗುತ್ತವೆ; ಬರಹದ ತೂಕವನ್ನು ಕಡಿಮೆ ಮಾಡುತ್ತವೆ ಎಂಬ ಎಚ್ಚರಿಕೆ ರಾಮಕೃಷ್ಣ ಅವರಂಥ ಹಿರಿಯರಿಗೆ ತಪ್ಪಿಹೋದದ್ದು ಹೇಗೆ? (ಉದಾ. ಪುಟ 228ರಲ್ಲಿ ಗೀತೆಯ ಶ್ಲೋಕವೊಂದನ್ನು ಉಲ್ಲೇಖಿಸುತ್ತ ‘ಚಾಯಂ’ ಎನ್ನುವುದನ್ನು ‘ಟೀ’ಗೆ ಹೋಲಿಸಿ ತಮಾಷೆ ಮಾಡಿರುವುದನ್ನು ನೋಡಬಹುದು.) ಮಾಹಿತಿಯ ದೃಷ್ಟಿಯಿಂದಲೂ ಕೆಲವೊಂದು ಗೊಂದಲಗಳು ಪುಸ್ತಕದಲ್ಲಿ ಕಾಣಿಸಿಕೊಂಡಿವೆ.

ಉದಾ: ಒಂದೆಡೆ, ‘ಇಲ್ಲಿಯ ಯಮನಿಗೂ ನಮ್ಮ ಪುರಾಣಗಳ ಮೃತ್ಯುದೇವತೆ ಎನಿಸಿಕೊಂಡ ಯಮಧರ್ಮರಾಯನಿಗೂ ಏನೇನೂ ಸಂಬಂಧವಿಲ್ಲ’ ಎನ್ನುತ್ತಾರೆ (ಪು. 28). ಮುಂದೆ, ‘ಋಗ್ವೇದ ಕಾಲಕ್ಕಾಗಲೇ ಯಮನು ಮೃತ್ಯುದೇವತೆಯಾಗಿ ಕಂಡುಬರುತ್ತಾನೆ’ (ಪು. 144) – ಎನ್ನುತ್ತಾರೆ. ಇಂಥ ಹಲವು ಮಿತಿಗಳಿದ್ದರೂ ಕೂಡ ವೇದಾಸಕ್ತರೆಲ್ಲರೂ ‘ಋಗ್ವೇದ ಪ್ರವೇಶಿಕೆ’ಯನ್ನು ಗಮನಿಸಲೇಬೇಕು. ಏಕೆಂದರೆ, ವೇದವನ್ನು ಕೇವಲ ಆರಾಧನೆಗಷ್ಟೆ ಸೀಮಿತ ಮಾಡುವ ಮತೀಯವಾದ ಜಡತೆ ತೊಲಗುತ್ತದೆ.

ವೇದವನ್ನು ಅಧ್ಯಯನ ಮಾಡಲು ಈ  ಕೃತಿ ಉತ್ತೇಜಿಸುತ್ತದೆ. ಋಗ್ವೇದದ ಸ್ವಾರಸ್ಯಕರ ಭಾಗಗಳ ಪರಿಚಯವನ್ನು ಮಾಡಿಕೊಡುತ್ತದೆ. ವೇದದಲ್ಲಿಯೇ ವೇದವನ್ನು ಪ್ರಶ್ನಿಸುವ ಸಂದರ್ಭಗಳನ್ನು ಕಾಣಬಹುದು. ಹೀಗಿರುವಾಗ ವೇದದ ಕೆಲವೊಂದು ನಿಲುವುಗಳನ್ನು ಟೀಕಿಸಿದ ಮಾತ್ರಕ್ಕೆ ಇಡಿಯ ಗ್ರಂಥವನ್ನು ಉಪೇಕ್ಷಿಸಬೇಕು ಎಂದೇನಿಲ್ಲವಷ್ಟೆ. ಮಾತ್ರವಲ್ಲ, ಭಾರತೀಯತೆ ಎನ್ನುವುದು ಯಾವುದೋ ಒಂದು ಗ್ರಂಥದ ಆಧಾರದ ಮೇಲೆ ನಿಂತಲ್ಲ.

‘ವೇದ ಸುಳ್ಳಾದರೂ ಗಾದೆ ಸುಳ್ಳಾಗದು’ ಎಂಬ ಮಾತಿಗೆ ಅವಕಾಶ ಇದೇ ವೇದಸಂಸ್ಕೃತಿ ಒದಗಿಸಿದೆ ಎನ್ನುವುದನ್ನೂ ಮರೆಯುವಂತಿಲ್ಲ. ರಾಮಕೃಷ್ಣ ಅವರು ಕೃತಿಯ ಕೊನೆಯಲ್ಲಿ ಉಲ್ಲೇಖಿಸಿರುವ ‘ಪರಸ್ಪರ ಚಿತ್ತ ಏಕೀಕರಣಂ’ ಸೂಕ್ತವೇ ಇಂದು ನಮಗೆ ವೇದದಿಂದ ಬೇಕಾದ ಜೀವನಸೂತ್ರ. ಅಂಥದೊಂದು ಚಿಂತನೆಗೆ ಈ ಕೃತಿಯ ಓದು ಕೂಡ ತಕ್ಕಮಟ್ಟಿಗೆ ನೆರವಾಗುತ್ತದೆಯೆನ್ನಿ! 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT