ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತೀಯ ಸಂಸ್ಕೃತಿ ಮೂಲ ನವನವೀನ

Last Updated 4 ಜನವರಿ 2012, 6:10 IST
ಅಕ್ಷರ ಗಾತ್ರ

ಮಂಗಳೂರು: ಭಾರತೀಯ ಸಂಸ್ಕೃತಿಯ ಮೂಲ ಎಂದೂ ಹಳೆಯದಾಗುವುದಿಲ್ಲ. ಆ ಸಂಸ್ಕೃತಿ, ಪರಂಪರೆಯನ್ನು ನಾವು ಕರಗತ ಮಾಡಿಕೊಂಡಾಗ ಅದು ಎಲ್ಲಾ ರೀತಿಯ ಆಧುನಿಕ ಪ್ರಕಾರಗಳಿಗೂ ಹೊಂದಿಕೊಂಡು ನವನವೀನವಾಗಿ ಹೊರಹೊಮ್ಮುತ್ತದೆ. ಸಿಂಧು ಭೈರವಿ ರಾಗ ಆಧರಿಸಿ ರಚಿಸಲಾದ ಇತ್ತೀಚಿನ `ಕೊಲವರೆ ಡಿ..~ ಹಾಡು ಜನಪ್ರಿಯತೆ ಗಳಿಸಿದ್ದರ ಒಳಗುಟ್ಟೂ ಇದೇ ಆಗಿದೆ ಎಂದು ಶತಾವಧಾನಿ ಆರ್.ಗಣೇಶ್ ಹೇಳಿದ್ದಾರೆ.

ನಗರದ ಕೆನರಾ ಪದವಿ ಪೂರ್ವ ಕಾಲೇಜಿನಲ್ಲಿ ಮಂಗಳವಾರ `ಏರ್ಯ ಪ್ರಶಸ್ತಿ~ ಸ್ವೀಕರಿಸಿದ ಅವರು, ಭಾರತೀಯ ತಾತ್ವಿಕ ನೆಲೆಗಟ್ಟು ಅತ್ಯಂತ ಪ್ರಬಲವಾಗಿದೆ. ಅದು ಒಳಗೊಳ್ಳದ ವಿಚಾರವೇ ಇಲ್ಲ. ಭಾರತೀಯ ತತ್ವ, ಚಿಂತನೆ ಯಾವತ್ತೂ ಪ್ರಬಲವಾಗಿ ನಿಲ್ಲುವುದು ಇಂತಹ ಗಟ್ಟಿ ನೆಲೆಗಟ್ಟಿನಿಂದಲೇ ಎಂದು ಅವರು ಪ್ರತಿಪಾದಿಸಿದರು.

ವಿದ್ಯಾರ್ಥಿಗಳು ಒಟ್ಟು ನಾಲ್ಕು ವಿಚಾರಗಳತ್ತ ಗಮನ ಹರಿಸಬೇಕು. ತರ್ಕಬದ್ಧವಾದ ಜ್ಞಾನ ಕೊಡುವ ವಿಜ್ಞಾನದ ಅಧ್ಯಯನ, ತರ್ಕಶುದ್ಧಿ, ಕಲೆಯತ್ತ ಗಮನ ಹಾಗೂ ತತ್ವದ ಬಗ್ಗೆ ತಿಳಿವಳಿಕೆ ಪಡೆಯಬೇಕು. ಈ 4 ಅಂಶಗಳನ್ನು ಜೀವನದಲ್ಲಿ ತೊಡಗಿಸಿಕೊಂಡರೆ ನಿರ್ಭೀತಿಯಿಂದ, ನೆಮ್ಮದಿಯಿಂದ ಜೀವನ ನಡೆಸಲು ಸಾಧ್ಯವಿದೆ ಎಂದು ಗಣೇಶ್ ನುಡಿದರು.

`ನಾವು ಸಂತೋಷವಾಗಿಲ್ಲದೆ ಬೇರೊಬ್ಬರಿಗೆ ಸಂತೋಷ ಕೊಡುವುದು ಸಾಧ್ಯವಿಲ್ಲ. ಮಾಡುವ ಪ್ರತಿಯೊಂದು ಕೆಲಸದಲ್ಲೂ ಇಷ್ಟ ಇರಬೇಕು, ಆಗ ಕೆಲಸದ ಕಷ್ಟವೂ ಗೊತ್ತಾಗುತ್ತದೆ. ಅದರಲ್ಲಿ ಪ್ರೀತಿಯೂ ಹುಟ್ಟುತ್ತದೆ.

ವಾಸ್ತವವನ್ನು ದಿಟ್ಟತನದಿಂದಲೇ ಎದುರಿಸಬೇಕು. ಕಠೋರ ಸತ್ಯಗಳನ್ನು ಸ್ವೀಕರಿಸುವ ಶಕ್ತಿಯೂ ನಮಗೆ ಬೇಕು. ಕ್ರಾಂತಿ, ಕ್ರೋಧದ ಕೊನೆಯಲ್ಲಿ ಶಾಂತಿ ಇರಲೇಬೇಕು. ಒಲೆ ಉರಿಯುವುದು ಸ್ವಲ್ಪ ಸಮಯ, ಅದರಿಂದ ಬೇಯುವ ಆಹಾರ ನಮಗೆ ಹಲವು ಗಂಟೆಗಳ ಕಾಲ ಶಕ್ತಿ ನೀಡುತ್ತದೆ. ಜೀವನದಲ್ಲಿ ಸಹ ನಾವು ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಅದನ್ನು ಜೀವನಕ್ಕೆ ಹೊಂದಿಸಿಕೊಳ್ಳಬೇಕು~ ಎಂದು ಅವರು ಹೇಳಿದರು.

ವೇಗದ ಜೀವನ ಕ್ರಮ, ಬಸ್‌ಗಳ ವೇಗ ಸಹಿತ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಜನಜೀವನದಿಂದ ಹಾಗೂ ಯಕ್ಷಗಾನದಿಂದ ತಾವು ತೀವ್ರವಾಗಿ ಪ್ರಭಾವಿತರಾಗಿದ್ದಾಗಿ ಅವರು ನಗುತ್ತಲೇ ನುಡಿದರು.

ಅಭಿನಂದನಾ ಭಾಷಣ ಮಾಡಿದ ಹಿರಿಯ ವಿದ್ವಾಂಸ ಪ್ರಭಾಕರ ಜೋಷಿ ಅವರು, `ಗಣೇಶ್ ಅವರು 9 ಭಾಷೆಗಳಲ್ಲಿ ಕಾವ್ಯ ಬರೆಯವಲ್ಲ ಸಮರ್ಥ. ಸತತ ಓದುವ ಹವ್ಯಾಸ, ವಿಷಯವನ್ನು ಆಳವಾಗಿ ಅಭ್ಯಸಿಸುವ ಗುಣದಿಂದಾಗಿಯೇ ಅವರು ದೇಶವೇ ಹೆಮ್ಮೆಪಡುವಂತಹ ಸಾಧನೆ ಮಾಡಿದ್ದಾರೆ~ ಎಂದು ಬಣ್ಣಿಸಿದರು.

ಹಿರಿಯ ಸಾಹಿತಿ, ಸಂಘಟಕ ಏರ್ಯ ಲಕ್ಷ್ಮೀನಾರಾಯಣ ಆಳ್ವ ಮಾತನಾಡಿ, ಕೆನರಾ ಹೈಸ್ಕೂಲ್‌ನಲ್ಲಿ ತಾವು ಓದಿದ್ದನ್ನು ಸ್ಮರಿಸಿಕೊಂಡು, ಸನ್ಮಾನದ ರೂಪದಲ್ಲಿ ತಮಗೆ ನೀಡಿದ 1.25 ಲಕ್ಷ ರೂಪಾಯಿಯ ನಿಧಿ ಧಾರ್ಮಿಕ ಸಾಹಿತ್ಯ ಕ್ಷೇತ್ರದಲ್ಲಿ ಕೊಡುಗೆ ಸಲ್ಲಿಸುವವರಿಗೆ ಸೂಕ್ತ ರೀತಿಯಿಂದ ಸಲ್ಲಿಕೆಯಾಗುತ್ತಿರುವುದರಿಂದ ತಮಗೆ ತೃಪ್ತಿಯಾಗಿದೆ ಎಂದರು.

ಪ್ರಶಸ್ತಿ 10 ಸಾವಿರ ರೂಪಾಯಿ ನಗದು, ಶಾಲು, ಸ್ಮರಣಿಕೆ ಒಳಗೊಂಡಿದೆ. 10 ವರ್ಷಗಳಿಂದ ಪ್ರಶಸ್ತಿ ನೀಡಲಾಗುತ್ತಿದೆ. ಕೆನರಾ ಹೈಸ್ಕೂಲ್ ಅಸೋಸಿಯೇಷನ್ ಉಪಾಧ್ಯಕ್ಷ ಎಸ್.ಎಸ್.ಕಾಮತ್ ಪ್ರಶಸ್ತಿ ಪ್ರದಾನ ಮಾಡಿದರು.  ಕಾಲೇಜಿನ ಪ್ರಾಚಾರ್ಯ ಜಿ.ಎನ್.ಭಟ್, ಅಸೋಸಿಯೇಷನ್ ಗೌರವ ಕಾರ್ಯದರ್ಶಿ ಎಂ.ರಂಗನಾಥ ಭಟ್, ಸಂಚಾಲಕ ಎಂ.ಸುಧೀರ್ ಪೈ ಮಾರೂರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT