ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತೀಯ ಸಾಹಿತ್ಯದ ವಿಸ್ತಾರ ಹೆಚ್ಚಿಸಿದ ಕವಿ ಕುವೆಂಪು

Last Updated 25 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ಕೋಲ್ಕತ್ತಾ: ಕುವೆಂಪು ಕನ್ನಡದಲ್ಲಿ ಬರೆದರೂ ಅವರು ಭಾರತೀಯ ಸಾಹಿತ್ಯದ ವೈವಿಧ್ಯ ಮತ್ತು ವಿಸ್ತಾರವನ್ನು ಹೆಚ್ಚಿಸಿದ ಕಾರಣಕ್ಕೆ ನಿಜವಾದ ಅರ್ಥದಲ್ಲಿ ರಾಷ್ಟ್ರಕವಿ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಸುನಿಲ್ ಗಂಗೋಪಾಧ್ಯಾಯ ಹೇಳಿದರು.

ಅವರು ಇಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ, ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನ, ಕನ್ನಡ ವಿಶ್ವವಿದ್ಯಾಲಯ ಹಾಗೂ ಕುವೆಂಪು ಭಾಷಾ ಭಾರತಿ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಕುವೆಂಪು ಸಾಹಿತ್ಯ ಕುರಿತಾದ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.

ರವೀಂದ್ರನಾಥ ಠಾಗೋರರಂತೆ ಸಾಮಾಜಿಕ ಕಳಕಳಿ, ಸೂಕ್ಷ್ಮ ಚಿಂತನೆ ಒಳಗೊಂಡ ದಾರ್ಶನಿಕ ವ್ಯಕ್ತಿತ್ವದ ಕುವೆಂಪು ತಮ್ಮ ಬರಹಗಳ ಮೂಲಕ ಭಾರತೀಯ ಸಾಹಿತ್ಯಕ್ಕೆ ಶ್ರೀಮಂತಿಕೆಯನ್ನು ತಂದುಕೊಟ್ಟವರು ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ಹಿರಿಯ ಲೇಖಕ ಡಾ. ದೇ. ಜವರೇಗೌಡ ಅವರು ಮಾತನಾಡಿ, ಕುವೆಂಪು ಕನ್ನಡ ಮತ್ತು ಭಾರತೀಯತೆ ಎರಡನ್ನೂ ಸಮನ್ವಯಗೊಳಿಸಿ ಬರೆಯುವ ಮೂಲಕ ಏಕಕಾಲದಲ್ಲಿ ಕನ್ನಡತ್ವ ಮತ್ತು ಭಾರತೀಯತೆಯನ್ನು ಪೋಷಿಸಿದರು. ಅವರ ಕೃತಿಗಳು ಸರಿಯಾದ ಕಾಲದಲ್ಲಿ ಭಾಷಾಂತರವಾಗಿದ್ದಲ್ಲಿ ಜಗತ್ತಿನ ಒಬ್ಬ ಪ್ರಮುಖ ಲೇಖಕರಾಗಿ ಪರಿಗಣಿತರಾಗುತ್ತಿದ್ದರು ಎಂದು ಹೇಳಿದರು.

ಕುವೆಂಪು ಪ್ರತಿಷ್ಠಾನದ ಅಧ್ಯಕ್ಷ ನಾಡೋಜ ಹಂಪ ನಾಗರಾಜಯ್ಯ ಮಾತನಾಡಿ, ಕುವೆಂಪು ಅವರ ಪ್ರತಿಭಾ ಶಕ್ತಿಯನ್ನು ವಿವರಿಸಿ ಅವರ ಸಾಹಿತ್ಯ ಮತ್ತು ಆಲೋಚನೆಗಳನ್ನು ರಾಷ್ಟ್ರೀಯ ಮಟ್ಟದಲ್ಲಿ ಪ್ರಚಾರಪಡಿಸುವ ಸಲುವಾಗಿ ಇಂತಹ ರಾಷ್ಟ್ರೀಯ ವಿಚಾರಸಂಕಿರಣಗಳನ್ನು ಕರ್ನಾಟಕದ ಹೊರಗೆ ನಡೆಸಲಾಗುತ್ತದೆ.

ಈಗಾಗಲೇ ಮುಂಬೈ, ದೆಹಲಿಗಳಲ್ಲಿ ಇದೇ ಬಗೆಯ ವಿಚಾರಸಂಕಿರಣಗಳನ್ನು ನಡೆಸಲಾಗಿದ್ದು ಮುಂದೆಯೂ ಇಂಥ ರಾಷ್ಟ್ರವ್ಯಾಪಿ ಪ್ರಚಾರಾಂದೋಲನವನ್ನು ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು.

ಪ್ರಾಸ್ತಾವಿಕ ಮಾತನಾಡಿದ ಸಾಹಿತ್ಯ ಅಕಾಡೆಮಿ ಕಾರ್ಯದರ್ಶಿ ಅಗ್ರಹಾರ ಕೃಷ್ಣಮೂರ್ತಿ, ಕುವೆಂಪು ಸಾಹಿತ್ಯ ಮತ್ತು ವ್ಯಕ್ತಿತ್ವ ಕುರಿತು ಸೋದರಣವಾಗಿ ವಿವರಿಸಿದರು.

ಕನ್ನಡೇತರ ಲೇಖಕರನ್ನು ಅದರಲ್ಲಿಯೂ ಬಂಗಾಳಿ ಲೇಖಕರನ್ನು ಕುಪ್ಪಳ್ಳಿಗೆ ಆಹ್ವಾನಿಸಿದರು.
ಎರಡು ದಿನಗಳ ಕಾಲ ನಡೆದ ವಿಚಾರಗೋಷ್ಠಿಗಳಲ್ಲಿ ಕರ್ನಾಟಕ ಮತ್ತು ಪ.ಬಂಗಾಳದ ಖ್ಯಾತ ಲೇಖಕರು  ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT