ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತೀಯರ ಹೆಮ್ಮೆ‘ಮಿಸ್‌ ಅಮೆರಿಕ’

Last Updated 18 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ವಾಷಿಂಗ್ಟನ್‌ (ಐಎಎನ್‌ಎಸ್‌): ಭಾರತೀಯ ಮೂಲದ ನೀನಾ ದವುಲುರಿ ಮಿಸ್‌ ಅಮೆರಿಕ ಆಗಿ ಆಯ್ಕೆಯಾಗಿರುವುದು ಅಮೆರಿಕದಲ್ಲಿ ನೆಲೆಸಿರುವ ಭಾರತೀಯ ಸಮುದಾಯಕ್ಕೆ ಈಗ ವಿಶಿಷ್ಟ ಮಾನ್ಯತೆ ತಂದುಕೊಟ್ಟಿದೆ.

ನೀನಾ ‘ಮಿಸ್‌ ಅಮೆರಿಕ’ ಆಗಿ ಆಯ್ಕೆಯಾದ ಮೇಲೆ ಜನಾಂಗೀಯ ನಿಂದನೆಗೆ ಗುರಿಯಾಗಿರುವುದು ಈ ಸಮುದಾಯದ ಕುರಿತು ಇತರ ಅಮೆರಿಕನ್ನರಲ್ಲಿ ಆಸಕ್ತಿಯನ್ನು  ಹುಟ್ಟಿಸಿದೆ.

ವಾಷಿಂಗ್ಟನ್‌ನ ಚಿಂತಕರ ಚಾವಡಿ ಪ್ಯೂ ಸಂಶೋಧನಾ ಕೇಂದ್ರವು ಅಮೆರಿಕದಲ್ಲಿ ವರ್ಷದಿಂದ ವರ್ಷಕ್ಕೆ ಭಾರತ ಮೂಲದವರ ಪ್ರಭಾವ ಹೆಚ್ಚುತ್ತಿರುವುದನ್ನು ಗುರುತಿಸಿದೆ.

ಶಿಕ್ಷಣದ ವಿಷಯಕ್ಕೆ ಬಂದಾಗ 30 ಲಕ್ಷಕ್ಕಿಂತ ಹೆಚ್ಚಿರುವ ಭಾರತೀಯರು ಇತರೆಲ್ಲ ಸಮುದಾಯ­ಗಳಿಗಿಂತ ಮುಂದಿದ್ದಾರೆ ಎಂದು ಸಂಶೋಧನಾ ಕೇಂದ್ರ ಹೇಳಿದೆ. 25 ವರ್ಷಕ್ಕಿಂತ ಮೇಲ್ಪಟ್ಟ ಭಾರತೀಯ ಯುವಜನರಲ್ಲಿ ಶೇ 70ರಷ್ಟು ಜನ ಕಾಲೇಜು ಪದವಿ ಪಡೆದಿದ್ದಾರೆ. ಇದೇ ವಯೋಮಾನದ ಅಮೆರಿಕದ ಇತರ ಸಮುದಾಯಗಳ ಯುವಕರಲ್ಲಿ ಶೇ 28ರಷ್ಟು ಮಂದಿ ಮಾತ್ರ ಕಾಲೇಜು ಪದವಿ ಹೊಂದಿದ್ದಾರೆ ಎಂದು ಸಂಶೋಧನಾ ಕೇಂದ್ರ ತಿಳಿಸಿದೆ.

ಭಾರತೀಯ ಸಮುದಾಯದ ಮಹಿಳೆಯರು ಸಹ ಮುಖ್ಯವಾಹಿನಿಯಲ್ಲಿ ಮುಂಚೂಣಿಯಲ್ಲಿದ್ದಾರೆ. ರಾತ್ರಿ ವೇಳೆ ಫುಟ್‌ಬಾಲ್‌ ಪಂದ್ಯಕ್ಕೆ ತೆರಳುವುದರಿಂದ ಹಿಡಿದು ಪೆಪ್ಸಿಯಂತಹ ಕಂಪೆನಿಯ ಮುಖ್ಯಸ್ಥರ ಹುದ್ದೆ ನಿರ್ವಹಿಸುವವರೆಗೆ ಮುಂದುವರಿದಿದ್ದಾರೆ ಎಂದು ವೆಬ್‌ಸೈಟ್‌ವೊಂದು ಪ್ರತಿಕ್ರಿಯಿಸಿದೆ.

ಇಎಸ್‌ಪಿಎನ್‌ನ ಸಂಸ್ಥಾಪಕ ಸಂಪಾದಕರಾದ ರೊಕ್ಸಾನ್‌ ಜೋನ್ಸ್‌ ಮಿಸ್‌ ಅಮೆರಿಕ ಆಗಿರುವ ನೀನಾ  ದವುಲುರಿ ‘ಸಾಂಪ್ರದಾಯಿಕ ಅಮೆರಿಕ ಸುಂದರಿ’ಯರನ್ನು ಪ್ರತಿನಿಧಿಸುತ್ತಿದ್ದಾರೆ ಎಂದು ಹೊಗಳಿದ್ದಾರೆ.

ಫ್ಯಾಷನ್‌ ನಿಯತಕಾಲಿಕವೊಂದು  ಸೆರೆನಾ ವಿಲಿಯಮ್ಸ್‌, ಮಿಷೆಲ್‌ ಒಬಾಮ ಅವರಂತೆ ನೀನಾ ಸಹ ಅಮೆರಿಕದ ಸುಂದರಿಯಾಗಿದ್ದಾರೆ ಎಂದು ಹೊಗಳಿದೆ.

ಒಬಾಮ, ಸಿಂಗ್‌ ಔತಣ: ನೀನಾಗೆ ಆಹ್ವಾನ ?
ವಾಷಿಂಗ್ಟನ್‌ (ಪಿಟಿಐ
): ಅಮೆರಿಕ ಪ್ರವಾಸ ಕೈಗೊಳ್ಳಲಿರುವ ಭಾರತದ ಪ್ರಧಾನಿ ಮನ­ಮೋಹನ್‌ ಸಿಂಗ್‌ ಅವರ ಗೌರವಾರ್ಥ ಅಧ್ಯಕ್ಷ ಬರಾಕ್‌ ಒಬಾಮ ಅವರು ಮುಂದಿನ ಶುಕ್ರವಾರ (ಸೆ.27ರಂದು) ಶ್ವೇತಭವನದಲ್ಲಿ ವಿಶೇಷ ಔತಣಕೂಟ ಏಪರ್ಡಿಸಿದ್ದಾರೆ.

ಇತ್ತೀಚೆಗೆ ಸೌಂದರ್ಯ ಸ್ಪರ್ಧೆಯಲ್ಲಿ ಮಿಸ್‌ ಅಮೆರಿಕ ಕಿರೀಟ ಮುಡಿಗೇರಿಸಿಕೊಂಡ ಭಾರತ ಮೂಲದ ಮೊದಲ ಅಮೆರಿಕ ಸಂಜಾತೆ ನೀನಾ ದವುಲುರಿ ಅವರನ್ನು ಈ ಔತಣಕೂಟಕ್ಕೆ ಆಹ್ವಾನಿ­ಸುವ ಸಾಧ್ಯತೆ ಇದೆ.

ಅಮೆರಿಕಕ್ಕೆ ಭಾರತೀಯರು ನೀಡಿದ ಕೊಡುಗೆಯನ್ನು ಸ್ಮರಿಸುವ ಉದ್ದೇಶದಿಂದ ನೀನಾ ಅವರನ್ನು ಈ ಆಹ್ವಾನಿಸುವ ನಿರ್ಧಾರಕ್ಕೆ ಬರಲಾಗಿದೆ ಎಂದು ಶ್ವೇತಭವನದ ಮೂಲಗಳು ತಿಳಿಸಿವೆ.

ಭಾರತದ ಮಾಧ್ಯಮ ಹಾಗೂ ಜನರಿಂದ ಪ್ರಶ್ನೆ ಹಾಗೂ ಶುಭಾಶಯಗಳ ಸುರಿಮಳೆ ಹರಿದು ಬರುತ್ತಿದೆ. ಈ ಹಿನ್ನೆಲೆಯಲ್ಲಿ ನೀನಾ ಮುಂಬರುವ ದಿನಗಳಲ್ಲಿ ಭಾರತ ಪ್ರವಾಸ ಕೈಗೊಳ್ಳುವ ಸಾಧ್ಯತೆ ಇದೆ.ಈ ನಡುವೆ ಅಮೆರಿಕದಲ್ಲೂ ನೀನಾ ಮಾಧ್ಯಮಗಳ ಸಂದರ್ಶನ, ಶುಭ ಕೋರಲು ಬರುವ ಜನರಿಂದಾಗಿ  ಎಡಬಿಡದ ಕಾರ್ಯಕ್ರಮ­ದಲ್ಲಿ ನಿರತರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT