ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತ್ ನಿರ್ಮಾಣ ಆಂದೋಲನ ನಾಳೆ

Last Updated 19 ಮಾರ್ಚ್ 2011, 6:50 IST
ಅಕ್ಷರ ಗಾತ್ರ

ಕಾರವಾರ: ಕೇಂದ್ರ ಸರಕಾರದ ಯೋಜನೆಗಳ ಬಗ್ಗೆ ಫಲಾನುಭವಿಗಳಿಗೆ ಮಾಹಿತಿ ನೀಡುವ ಉದ್ದೇಶದಿಂದ ಕೇಂದ್ರ ಸರಕಾರದ ವಾರ್ತಾ ಮತ್ತು ಪ್ರಸಾರ ಸಚಿವಾಲಯ ರಾಜ್ಯದಾದ್ಯಂತ ‘ಭಾರತ್ ನಿರ್ಮಾಣ’ ಸಾರ್ವಜನಿಕ ಮಾಹಿತಿ ಆಂದೋಲನವನ್ನು ಹಮ್ಮಿಕೊಳ್ಳುತ್ತಿದೆ ಎಂದು ಪಿಐಬಿಯ ಹೆಚ್ಚುವರಿ ಮಹಾನಿರ್ದೇಶಕ ಎಂ.ವಿ.ವಿ.ಎಸ್ ಮೂರ್ತಿ ಹೇಳಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಭಾರತ್ ನಿರ್ಮಾಣ ಕಾರ್ಯಕ್ರಮದ ಭಾಗವಾಗಿ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲ್ಲೂಕಿನಲ್ಲಿ ಸ್ಥಳೀಯ ನಗರಸಭೆ ಮೈದಾನದಲ್ಲಿ ಮಾ. 20, 21 ಹಾಗೂ 22ರಂದು ಭಾರತ್ ನಿರ್ಮಾಣ ಸಾರ್ವಜನಿಕ ಮಾಹಿತಿ ಆಂದೋಲನ ಮತ್ತು ವಸ್ತು ಪ್ರದರ್ಶನವನ್ನು ಆಯೋಜಿಸಲಾಗಿದೆ ಎಂದರು.

ಸರಕಾರದ ಯೋಜನೆಗಳು ಸಮಾಜದ ಕಟ್ಟಕಡೆಯ ವ್ಯಕ್ತಿಗೆ ತಲುಪಬೇಕು ಎನ್ನುವುದು ಸರಕಾರದ ಆಶಯ. ಸರಕಾರ ಜಾರಿಗೊಳಿಸುವ ಅಭಿವೃದ್ಧಿ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡುವ ಮೂಲಕ ಸಮುದಾಯವನ್ನು ಸಬಲೀಕರಣ ಮಾಡುವುದು ಆಂದೋಲನದ ಮುಖ್ಯ ಧ್ಯೇಯವಾಗಿದೆ ಎಂದರು.

ಗ್ರಾಮೀಣ ವಿದ್ಯುದ್ದೀಕರಣ, ನೀರು ಪೂರೈಕೆ, ವಸತಿ ನಿರ್ಮಾಣ, ರಸ್ತೆ ಸೌಲಭ್ಯ ಹಾಗೂ ನೀರಾವರಿ ಈ ಆರು ಮೂಲ ಸೌಕರ್ಯಗಳ ಅಭಿವೃದ್ಧಿ ಭಾರತ್ ನಿರ್ಮಾಣ ಆಂದೋಲನ ಕಾರ್ಯಕ್ರಮದ ವ್ಯಾಪ್ತಿಗೆ ಸೇರಿದೆ. ಈ ಕಾರ್ಯಕ್ರಮಗಳ ದಕ್ಷತೆ ಹೆಚ್ಚಿಸಿ ಇನ್ನಷ್ಟು ಪರಿಣಾಮಕಾರಿಯನ್ನಾಗಿ ಮಾಡುವ ಪ್ರಯತ್ನ ನಡೆದಿದೆ ಎಂದು ಮೂರ್ತಿ ನುಡಿದರು.

ಫಲಾನುಭವಿಯ ಮನೆ ಬಾಗಿಲಿಗೆ ಸೇವೆ ಒದಗಿಸುವ ಮತ್ತು ಮಾಹಿತಿ ನೀಡುವ ಉದ್ದೇಶವನ್ನು ಭಾರತ್ ನಿರ್ಮಾಣ ಆಂದೋಲನ ಒಳಗೊಂಡಿದೆ. ಆಂದೋಲನದ ಸಂದರ್ಭದಲ್ಲಿ ವಸ್ತು ಪ್ರದರ್ಶನ ಮತ್ತು ಮಾಹಿತಿ ಹಾಗೂ ಮನರಂಜನೆ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ. ಆಂದೋಲನದಲ್ಲಿ ಪಾಲ್ಗೊಳ್ಳುವ ಸಂಘಟನೆಗಳಿಗೆ ಉಚಿತ ದರದಲ್ಲಿ ಮಳಿಗೆಗಳನ್ನು ಹಂಚಿಕ ಮಾಡಲಾಗುತ್ತದೆ ಎಂದು ಮೂರ್ತಿ ವಿವರಿಸಿದರು.

ಆರೋಗ್ಯ ತಪಾಸಣಾ ಶಿಬಿರ, ಆಯುರ್ವೇದ, ಯುನಾನಿ, ಹೋಮಿಯೋಪಥಿ ಔಷಧಗಳ ಉಚಿತ ವಿತರಣೆ, ಹೊಲಿಗೆ ಯಂತ್ರಗಳು, ಉದ್ಯೋಗ ಚೀಟಿ ವಿತರಣೆ, ನಿರ್ಮಲ ಗ್ರಾಮ, ಸಂಪೂರ್ಣ ಸ್ವಚ್ಛತಾ ಆಂದೋಲನದ ತಂತ್ರಜ್ಞಾನ ಪ್ರದರ್ಶನ, ಮಕ್ಕಳ ಆರೋಗ್ಯ ಮತ್ತು ಪೌಷ್ಟಿಕಾಂಶದ ತಪಾಸಣೆ, ಕಿಸಾನ್ ಕಾರ್ಡ್‌ಗಳನ್ನು ಸಂಬಂಧಪಟ್ಟವರಿಗೆ ತಲುಪಿಸುವುದು ಆಂದೋಲನದ ಮುಖ್ಯಭಾಗವಾಗಿದೆ ಎಂದು ಅವರು ನುಡಿದರು.

ಸಾರ್ವಜನಿಕ ಮಾಹಿತಿ ಮೊದಲ ಹಂತದಲ್ಲಿ ಪೂರ್ವ ಪ್ರಚಾರ, ಎರಡನೇ ಹಂತದಲ್ಲಿ ಅಂತಿಮ ಆಂದೋಲನ ಹಾಗೂ ಅಭಿಯಾನವನ್ನು ನಡೆಸಲಾಗುವುದು, ಆಂದೋಲನ ನಡೆಯುವ ಪ್ರಮುಖ ಕೇಂದ್ರದ ಆಸುಪಾಸಿನ ಹಳ್ಳಿಗಳಲ್ಲಿ ಕ್ಷೇತ್ರ ಪ್ರಚಾರ ನಿರ್ದೇಶನಾಲಯ, ಸಂಗೀತ ಮತ್ತು ನಾಟಕ ವಿಭಾಗದ ಸಹಯೋಗದೊಂದಿಗೆ ಆಂದೋಲನದ ಪೂರ್ವಭಾವಿ ಪ್ರಚಾರ ಕೈಗೊಳ್ಳಲಾಗಿದೆ ಎಂದರು. ಜಿಲ್ಲಾಧಿಕಾರಿ ಬಿ.ಎನ್. ಕೃಷ್ಣಯ್ಯ, ಅಪರ ಜಿಲ್ಲಾಧಿಕಾರಿ ಡಾ. ಕೆ.ಎಚ್. ನರಸಿಂಹಮೂರ್ತಿ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT