ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರವಾದ ತೆಂಗು, ನಿರೀಕ್ಷೆಯಲ್ಲಿ ರಾಗಿ

ಮಾರುಕಟ್ಟೆ ವಿಶ್ಲೇಷಣೆ
Last Updated 5 ಡಿಸೆಂಬರ್ 2013, 7:09 IST
ಅಕ್ಷರ ಗಾತ್ರ

ತುಮಕೂರು: ಆ ವ್ಯಾಪಾರಿ ಸೇಬಿನ ಕುರಿತು ಮಾತನಾಡ ತೊಡಗಿದರು. ಮಾರುಕಟ್ಟೆ ಪ್ರಾಂಗಣದ ಗೋದಾಮು­ಗಳಲ್ಲಿ ರಾಶಿರಾಶಿಯಾಗಿ ಒಟ್ಟಿದ್ದ  ತೆಂಗಿನಕಾಯಿ ಕುರಿತು ಕೇಳಿದರೆ ಅವರು ಸೇಬು ಬಂದಿದ್ದರೆ ಒಂದಿಷ್ಟು ತೆಂಗು ಬಿಕರಿಯಾಗುತ್ತಿದ್ದ ಕನಸಿಗೆ ಬಿದ್ದರು. ಕಲ್ಪತರು ನಾಡಿನ ತೆಂಗಿನಕಾಯಿಗೂ ದೆಹಲಿಗೂ ಸಂಬಂಧವಿರುವಂತೆ, ಇಲ್ಲಿ ತಿನ್ನುವ ಸೇಬಿಗೂ ತೆಂಗಿನ ಮಾರಾಟಕ್ಕೂ ನಂಟಿದೆ.


ದೆಹಲಿಯಿಂದ ಸೇಬು ತುಂಬಿ­ಕೊಂಡು ಬರುವ ಲಾರಿಗಳು ಈ ಕಡೆಯಿಂದ ಖಾಲಿ ಹೋಗುವ ಬದಲಿಗೆ ಚೌಕಾಶಿ ಬಾಡಿಗೆಗೆ ತೆಂಗಿನ ಕಾಯಿ ತುಂಬಿಕೊಂಡು ಹೋಗುತ್ತವೆ. ಬಾಡಿಗೆಯಲ್ಲಿ ಸ್ವಲ್ಪ ಹಣ ಉಳಿದರೆ ಸಾಗಾಟ ವೆಚ್ಚ ಕಡಿಮೆಯಾಗಿ ದೆಹಲಿಯಲ್ಲಿ ತೆಂಗಿನಕಾಯಿಗೆ ಬೆಲೆ ಕಡಿಮೆ ಸಿಕ್ಕರೂ ಮಾರಲಾಗುತ್ತದೆ.

ದೆಹಲಿಗೆ ಲಾರಿಯೊಂದಕ್ಕೆ ₨ 75 ಸಾವಿರ ಬಾಡಿಗೆ ನೀಡಬೇಕು. ಇದರಲ್ಲಿ ₨ 20 ಸಾವಿರ ಕಡಿಮೆಯಾದರೂ ಆ ಮಟ್ಟಿಗೆ ತೆಂಗಿನಕಾಯಿ ಹೆಚ್ಚು ಮಾರಾಟವಾಯಿತೆಂದೇ ಮಾರಾಟಗಾರರ ಲೆಕ್ಕಾಚಾರ.

ಮಾರುಕಟ್ಟೆಯ ಸರಪಳಿ ಸಂಬಂಧಗಳ ಲೆಕ್ಕಾಚಾರ ಏನೇ ಇರಲಿ, ಈ ವಾರದ ಮಾರುಕಟ್ಟೆ ಬೆಲೆಯಲ್ಲಿ ಸ್ಥಿತಂತರ ಕಂಡುಬರಲಿಲ್ಲ. ಅತ್ಯಲ್ಪ ಬದಲಾವಣೆ ಬಿಟ್ಟರೆ ಕಳೆದ ವಾರದ ಮಾರುಕಟ್ಟೆ ದರದಲ್ಲಿ ಹೆಚ್ಚು ಬದಲಾವಣೆ ಕಾಣಲಿಲ್ಲ. ದೆಹಲಿಯಲ್ಲಿ ಚಳಿ ಹೆಚ್ಚುತ್ತಿರುವ ಕಾರಣ ತೆಂಗಿನಕಾಯಿ ಮಾರುಕಟ್ಟೆ­ಯಲ್ಲಿ ಹಿಂಜರಿಕೆ ಕಂಡು ಬಂದರೂ ಬೆಲೆಯಲ್ಲಿ ಇಳಿಕೆ ಕಾಣಲಿಲ್ಲ. ಕಾಯಿಯೊಂದಕ್ಕೆ ಬೆಲೆ ₨ 9–11ರ ವರೆಗೂ ಇತ್ತು. ತಾಂಬೂಲ ಕಾಯಿಗೆ ದೊಡ್ಡ­ಬಳ್ಳಾಪುರದ ವರ್ತಕರಿಂದ ಬೇಡಿಕೆ ಬಂದಿರುವುದ­ರಿಂದ ಬೆಲೆಯಲ್ಲಿ ಸ್ಥಿರತೆ ಕಾಪಾಡಿಕೊಂಡಿತು.
ಕೊಬ್ಬರಿ ಸ್ಥಿರತೆ: ಕೊಬ್ಬರಿ ಬೆಲೆಯಲ್ಲಿ ಸ್ಥಿರತೆ ಕಂಡುಬಂತು. ವಾರ ಪೂರ ತಿಪಟೂರು ಮಾರುಕಟ್ಟೆಯಲ್ಲಿ ಕ್ವಿಂಟಲ್‌ಗೆ ₨ 6900–7130 ಇತ್ತು.

ಬೆಂಬಲ ಬೆಲೆ ನಿರೀಕ್ಷೆಯಲ್ಲಿ ರಾಗಿ: ರಾಗಿ ಬೆಲೆಯಲ್ಲಿ ಸುಧಾರಣೆ ಕಾಣಲಿಲ್ಲ. ಬೆಂಬಲ ಬೆಲೆಯಲ್ಲಿ ರಾಗಿ ಕೊಳ್ಳುವುದಾಗಿ ಸರ್ಕಾರ ಪ್ರಕಟಿಸಿದೆ.  ಇದಕ್ಕೆ ಮಾರುಕಟ್ಟೆ ಪ್ರತಿಕ್ರಿಯೆ ಕಾದು ನೋಡಬೇಕು.

ಬಣ್ಣ ಕಳೆದುಕೊಂಡ ಕಪ್ಪು ರಾಗಿ ಬೆಲೆ ಕ್ವಿಂಟಲ್‌ಗೆ ₨ 1440–1450 ಇತ್ತು. ಗುಣಮಟ್ಟದ ಕೆಂಪು ಬಣ್ಣದ ರಾಗಿ ಬೆಲೆ ₨ 1500–1600ಕ್ಕೆ ಬಂದು ನಿಂತಿತು.

ಸುಧಾರಿಸದ ಶೇಂಗಾ
ಶೇಂಗಾ ಬೆಲೆಯಲ್ಲೂ ಸುಧಾರಣೆ ಕಾಣಲಿಲ್ಲ. ಮಾರುಕಟ್ಟೆಗೆ ಬರುತ್ತಿರುವ ಶೇಂಗಾ ಗುಣಮಟ್ಟ­ದಿಂದ ಕೂಡಿಲ್ಲ. ಇದರ ನಡುವೆ ಶೇಂಗಾ ಬೀಜದ ದರ ಇಳಿದಿರುವ ಕಾರಣ ಶೇಂಗಾ ಬೆಲೆಯಲ್ಲಿ ಚೇತರಿಕೆ ಕಾಣದಿರಲು ಕಾರಣ ಎಂದು ಹೇಳಲಾಗುತ್ತಿದೆ. ಕ್ವಿಂಟಲ್‌ಗೆ ₨ 3300–4000 ಬೆಲೆ ಇತ್ತು. 

ಮುಸುಕಿನ ಜೋಳ ಮಾರುಕಟ್ಟೆಯಲ್ಲಿ ಕ್ವಿಂಟಲ್‌ಗೆ ₨ 1000–1130 ಇದ್ದರೆ ಕೆಎಂಎಫ್‌ ಗುಣಮಟ್ಟದ ಜೋಳವನ್ನು ₨ 1300ಕ್ಕೆ ಕೊಳ್ಳುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT