ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರಿ ಮಳೆಗೆ ಸಂಚಾರ ಅಸ್ತವ್ಯಸ್ತ

Last Updated 1 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: ನಗರದಲ್ಲಿ ಶನಿವಾರ ಸಂಜೆ ಮಳೆ ಸುರಿದ ಪರಿಣಾಮ ಹಲವೆಡೆ ಸಂಚಾರ ವ್ಯವಸ್ಥೆ ಅಸ್ತವ್ಯಸ್ತವಾಗಿ ವಾಹನ ಸವಾರರು ತೀವ್ರ ತೊಂದರೆ ಅನುಭವಿಸಿದರು.

ಮೆಜೆಸ್ಟಿಕ್, ಕೆ.ಜಿ.ರಸ್ತೆ, ಶೇಷಾದ್ರಿ ರಸ್ತೆ, ಜೆ.ಸಿ.ರಸ್ತೆ, ಕೆ.ಎಚ್.ರಸ್ತೆ, ಆರ್.ವಿ.ರಸ್ತೆ, ಲಾಲ್‌ಬಾಗ್, ಸಿಟಿ ಮಾರುಕಟ್ಟೆ, ರೆಸಿಡೆನ್ಸಿ ರಸ್ತೆ, ಎಂ.ಜಿ.ರಸ್ತೆ, ಬ್ರಿಗೇಡ್ ರಸ್ತೆ, ಸೇಂಟ್‌ಮಾರ್ಕ್ಸ್ ರಸ್ತೆ, ಕಸ್ತೂರಬಾ ರಸ್ತೆ ಸುತ್ತಮುತ್ತಲ ಪ್ರದೇಶದಲ್ಲಿ ಹಲವು ತಾಸುಗಳವರೆಗೆ ಟ್ರಾಫಿಕ್ ಜಾಮ್ ಆಗಿತ್ತು. ಪರಿಣಾಮ ಕಿಲೋ ಮೀಟರ್‌ಗಟ್ಟಲೆ ವಾಹನಗಳು ಸಾಲುಗಟ್ಟಿ ನಿಲ್ಲುವಂತಾಯಿತು.

ದಸರಾ ರಜೆ ಹಾಗೂ ಆಯುಧ ಪೂಜೆ ಹಬ್ಬದ ಹಿನ್ನೆಲೆಯಲ್ಲಿ ಊರುಗಳಿಗೆ ತೆರಳಲು ಸಾರ್ವಜನಿಕರು ಹೆಚ್ಚಿನ ಪ್ರಮಾಣದಲ್ಲಿ ಮೆಜೆಸ್ಟಿಕ್‌ಗೆ ಬಂದಿದ್ದರಿಂದ ಸುತ್ತಮುತ್ತಲ ಪ್ರದೇಶದಲ್ಲಿ ವಾಹನ ದಟ್ಟಣೆ ಹೆಚ್ಚಿತು.

ಹಬ್ಬ ಮತ್ತು ವಾರಾಂತ್ಯದ ಹಿನ್ನೆಲೆಯಲ್ಲಿ  ವಸ್ತುಗಳನ್ನು ಖರೀದಿಸಲು ಜನರು ಸಿಟಿ ಮಾರುಕಟ್ಟೆ, ಕೆ.ಜಿ.ರಸ್ತೆ, ಎಂ.ಜಿ.ರಸ್ತೆ, ಬ್ರಿಗೇಡ್ ರಸ್ತೆಗೆ ಬಂದಿದ್ದರಿಂದ ವಾಹನ ಸಂಚಾರಕ್ಕೆ ಅಡ್ಡಿಯಾಯಿತು.

ಮತ್ತೊಂದೆಡೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿದ್ದ ಚಾಂಪಿಯನ್ಸ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಪಂದ್ಯಗಳನ್ನು ನೋಡಲು ಹೆಚ್ಚಿನ ಸಂಖ್ಯೆಯಲ್ಲಿ ಜನರು ಬಂದಿದ್ದರಿಂದ ಸುತ್ತಮುತ್ತಲ ರಸ್ತೆಗಳಲ್ಲಿ ವಾಹನಗಳು ನಿಧಾನ ಗತಿಯಲ್ಲಿ ಸಾಗುವಂತಾಯಿತು.

ಇದೇ ವೇಳೆಗೆ ಮಳೆಯೂ ಆರಂಭವಾಗಿದ್ದರಿಂದ ಸಂಚಾರ ಸಮಸ್ಯೆ ಮತ್ತಷ್ಟು ಗಂಭೀರವಾಯಿತು. ಚರಂಡಿಗಳು ತುಂಬಿ ಮಳೆ ನೀರು ರಸ್ತೆ ಮೇಲೆ ಹರಿದ ಪರಿಣಾಮ ವಾಹನಗಳ ಓಡಾಟಕ್ಕೆ ಅಡ್ಡಿಯಾಯಿತು.

ಮಳೆ ಸುರಿಯುತ್ತಿದ್ದರಿಂದ ಬಹುತೇಕ ವೃತ್ತ ಮತ್ತು ಜಂಕ್ಷನ್‌ಗಳಲ್ಲಿ ಸಂಚಾರ ಪೊಲೀಸರೇ ಇರಲಿಲ್ಲ. ಇದರಿಂದಾಗಿ ವಾಹನಗಳು ಅಡ್ಡಾದಿಡ್ಡಿ ಚಲಿಸಿ ಟ್ರಾಫಿಕ್ ಜಾಮ್ ಆಯಿತು. ದ್ವಿಚಕ್ರ ವಾಹನ ಸವಾರರು ಮಳೆಯಲ್ಲೇ ನೆನೆಯುತ್ತಾ ನಿಂತಿದ್ದ ದೃಶ್ಯ ಹಲವೆಡೆ ಕಂಡುಬಂತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT