ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾಲ್ಕಿ: ವಾರದಿಂದ ನೀರು ಕಾಣದ ಜನ!

Last Updated 19 ಏಪ್ರಿಲ್ 2013, 10:55 IST
ಅಕ್ಷರ ಗಾತ್ರ

ಭಾಲ್ಕಿ: ಪಟ್ಟಣಕ್ಕೆ ಕುಡಿಯುವ ನೀರು ಪೂರೈಸುವ ದಾಡಗಿ ತೊರೆ ಬರಿದಾಗಿರುವದರಿಂದ ವಾರದಿಂದ ನೀರಿಲ್ಲದೇ ಪರಿತಪಿಸುವಂತಾಗಿದೆ. ಖಾಲಿ ಕೊಡಗಳನ್ನು ಹಿಡಿದು ಓಡಾಡುವ ಮಹಿಳೆಯರು, ಮಕ್ಕಳು ಬಹುತೇಕ ಬಡಾವಣೆಗಳಲ್ಲಿ ಕಾಣುವಂತಾಗಿದೆ.

ಭಾಲ್ಕಿಯಲ್ಲಿ 23 ವಾರ್ಡ್‌ಗಳಿವೆ. ಸುಮಾರು 50ಸಾವಿರಕ್ಕೂ ಹೆಚ್ಚು ಜನರು ವಾಸಿಸುತ್ತಾರೆ. ವಾರದವರೆಗೆ ಕುಡಿಯುವ ನೀರು ಪೂರೈಕೆ ಸ್ಥಗಿತಗೊಂಡಿದೆ. ಆದರೂ ಪುರಸಭೆ ಅಧಿಕಾರಿಗಳು ಮುಂಜಾಗೃತಾ ಕ್ರಮ ಕೈಗೊಂಡಿಲ್ಲ. ಇದು ತೀರಾ ನಿರ್ಲಕ್ಷತೆಯ ಪರಮಾವಧಿಯಾಗಿದೆ ಎಂದು ರೈತ ಸಂಘದ ಅಧ್ಯಕ್ಷ ಸಿದ್ರಾಮಪ್ಪ ಅಣದೂರೆ ಖಂಡಿಸಿದ್ದಾರೆ.   

ಮಕ್ಕಳು, ಮಹಿಳೆಯರು ರಾತ್ರಿ ಹಗಲು ನೀರಿಗಾಗಿ ಮನೆಮನೆಗೆ ಅಲೆಯುತ್ತಿದ್ದಾರೆ. ಖಾಸಗಿ ಟ್ಯಾಂಕರ್ ಮಾಲೀಕರು ಮನ ಬಂದಂತೆ ಹಣ ಸುಲಿಗೆ ಮಾಡುತ್ತಿದ್ದರೂ ಅವರಿಗೆ ನಿಯಂತ್ರಿಸುವವರಿಲ್ಲ. ನೀರಿನ ಪೂರೈಕೆ ಬಗ್ಗೆ ಪುರಸಭೆ ಅಧಿಕಾರಿಗಳಿಗೆ ಕೇಳಿದರೆ ನಾಳೆ, ನಾಡಿದ್ದು ಬರುತ್ತವೆ ಎಂಬ ಉಡಾಫೆಯ ಉತ್ತರ ಸಿಗುತ್ತಿದೆ. ಟ್ಯಾಂಕರ್ ಮೂಲಕವಾದರೂ ನೀರು ಪೂರೈಸಬೇಕಿತ್ತು ಎನ್ನುತ್ತಾರೆ ಮಲ್ಲಿಕಾರ್ಜುನ ಸ್ವಾಮಿ. ನೀರಿನ ಸಮಸ್ಯೆ ಉದ್ಭವಿಸುವ ಮೊದಲೇ ಅದಕ್ಕೊಂದು ಪೂರ್ವಸಿದ್ಧತೆ ಮಾಡಿಕೊಳ್ಳಬೇಕಾದ ಅಧಿಕಾರಿಗಳು ಮುಗುಮ್ಮಾಗಿದ್ದಾರೆ. ಈಗ ಜನ ರೊಚ್ಚಿಗೆದ್ದಾಗ `ಗಡ್ಡಕ್ಕೆ ಬೆಂಕಿ ಬಿದ್ದರೆ ಬಾವಿ ತೋಡಿದ ಹಾಗೆ' ಗಡಿಬಿಡಿಯ ನಾಟಕವಾಡುತ್ತಿದ್ದಾರೆ ಎನ್ನುವದು ಬಾಲಾಜಿನಗರ ಬಡಾವಣೆಯ ಸಂಗೀತಾ, ಲಕ್ಷ್ಮಿ, ಜಗದೇವಿ, ಅನೀತಾ ಅವರ ಆರೋಪವಾಗಿದೆ.

ಸಮಸ್ಯೆಯ ಗಂಭೀರತೆ ಅರಿತು ಕೂಡಲೇ ಅಧಿಕಾರಿಗಳು ನೀರು ಪೂರೈಕೆಗೆ ಕ್ರಮ ಜರುಗಿಸದೇ ಹೋದರೆ ಪುರಸಭೆ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಲಾಗುವದು ಎಂದು ರೈತ ಸಂಘದ ಮುಖಂಡರು ಪ್ರಕಟಣೆಯಲ್ಲಿ ಎಚ್ಚರಿಸಿದ್ದಾರೆ.

ಭಾಲ್ಕಿಗೆ ಕುಡಿಯುವ ನೀರು ಪೂರೈಸಬೇಕಾದರೆ ಕಾರಂಜಾ ಡ್ಯಾಂನಿಂದ ನೀರು ಬಿಡಬೇಕಾಗುತ್ತದೆ. ಅದು ಶುಕ್ರವಾರ ಬಿಡುವ ಸಾಧ್ಯತೆ ಇದೆ. ನಗರಕ್ಕೆ ಬರಲು ಭಾನುವಾರವಾದರೂ ಬೇಕಾಗಬಹುದು ಎಂದು ಪುರಸಭೆ ಮುಖ್ಯಾಧಿಕಾರಿ ಭರತ ನಾಗರೆ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT