ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾವಕ್ಕೆ ತಕ್ಕ ಪಾಠ

Last Updated 6 ಫೆಬ್ರುವರಿ 2013, 19:59 IST
ಅಕ್ಷರ ಗಾತ್ರ

ಉತ್ತರ ಭಾರತದ ಸಂಗೀತವೆಂದು ಕರೆಯಲಾಗುವ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಬೆಂಗಳೂರು ನಗರಕ್ಕೆ ಹೊಂದಿಕೊಳ್ಳಲು ಕೆಲ ಸಮಯ ಹಿಡಿಯತೊಡಗಿತ್ತು. ಆಗ ತಮ್ಮ ಹಾರ್ಮೋನಿಯಂ ಅನ್ನು ಸೈಕಲ್ ಹಿಂದಿನ ಸೀಟಿಗೆ ಕಟ್ಟಿಕೊಂಡು, ವಿದ್ಯಾರ್ಥಿಗಳ ಮನೆಮನೆಗೆ ಹೋಗಿ ಪಾಠ ಮಾಡಿ, ಈ ಸಂಗೀತಕ್ಕೆ ನಗರದಲ್ಲಿ ಭದ್ರ ಬುನಾದಿಯನ್ನು ಹಾಕಿದವರು ಪಂ. ಶೇಷಾದ್ರಿ ಗವಾಯಿ. ಅವರಿಂದ ಪ್ರೇರೇಪಿತರಾಗಿ ಹಲವಾರು ಶಿಷ್ಯರು ಸಂಗೀತ ಶಾಲೆಗಳನ್ನು ನಡೆಸುತ್ತಿದ್ದಾರೆ. ಅದೇ ಹಾದಿಯಲ್ಲಿ ನಡೆಯುತ್ತಿದೆ, ಹಿಂದೂಸ್ತಾನಿ ಸಂಗೀತದ ಪ್ರಮುಖ ಶಾಲೆ `ಶ್ರೀ ಸದ್ಗುರು ಮ್ಯೂಸಿಕ್ ಅಕಾಡೆಮಿ'.

ಇದರ ರೂವಾರಿ ಪಂ. ಸತೀಶ್ ಹಂಪಿಹೊಳಿ. ಆಕಾಶವಾಣಿಯ ಬಿ ಹೈ ಶ್ರೇಣಿಯ ತಬಲಾ ವಾದಕರಾಗಿರುವುದಲ್ಲದೆ ಸಾಗರದಾಚೆಗೂ ತಮ್ಮ ತಬಲಾ ನಾದವನ್ನು ಒಯ್ದವರು ಇವರು. ಮೊದಲಿಗೆ ಗಿರಿನಗರದಲ್ಲಿ ಸಣ್ಣ ಪ್ರಮಾಣದಲ್ಲಿ ಆರಂಭಗೊಂಡ ಈ ಸಂಗೀತ ಶಾಲೆ ಹಲವು ವೈಶಿಷ್ಟ್ಯಗಳಿಂದ ದಿನದಿಂದ ದಿನಕ್ಕೆ ವಿಸ್ತಾರಗೊಳ್ಳುತ್ತಲೇ ಬಂದಿದೆ. 1992ರಲ್ಲಿ ಆರಂಭವಾದ ಶಾಲೆಗೆ ಇದೀಗ 21ರ ವಸಂತ. ಶಾಲೆ ಆರಂಭಗೊಂಡು ವರ್ಷದ ನಂತರ ಗಾಯಕಿ ಸ್ನೇಹಾ ಅವರನ್ನು ಮದುವೆಯಾದ ಮೇಲೆ ಹಂಪಿಹೊಳಿಯವರ ಸಂಗೀತ ಶಾಲೆ ಮತ್ತಷ್ಟು ಬಲಗೊಂಡಿತು.

ಕೋಣನಕುಂಟೆಯಲ್ಲಿರುವ ಈ ಶಾಲೆಯಲ್ಲಿ ಹಿಂದೂಸ್ತಾನಿ ಶಾಸ್ತ್ರೀಯ ಗಾಯನ (ಶಾಸ್ತ್ರೀಯ ಸಂಗೀತದೊಂದಿಗೆ ವಚನ, ದಾಸರ ಪದ, ಭಾವಗೀತೆಗಳು), ತಬಲಾ ಹಾಗೂ ಕೀಬೋರ್ಡ್ ವಾದನ (ಶಾಸ್ತ್ರೀಯ) ಹೇಳಿಕೊಡಲಾಗುತ್ತದೆ. ಸುಮಾರು ಆರು ವರ್ಷದ ಮಗುವಿನಿಂದ ಹಿಡಿದು 60 ವರ್ಷ ವಯೋಮಾನದ ಸಂಗೀತಾಸಕ್ತರು ಇಲ್ಲಿ ಸಂಗೀತ ಕಲಿಯುತ್ತಿದ್ದಾರೆ.

ಇಲ್ಲಿ ಮಕ್ಕಳ ಮನೋಭಾವಕ್ಕನುಗುಣವಾಗಿ ಸಂಗೀತವನ್ನು ಬೋಧಿಸಲಾಗುತ್ತದೆ. `ಸಂಗೀತ ಕಲಿಯಲು ವಯಸ್ಸಿನ ಹಂಗಿಲ್ಲ. ಆದರೆ ಮಕ್ಕಳಿಗೆ ಕನಿಷ್ಠ ಪಕ್ಷ ಆರು ವರ್ಷಗಳು ತುಂಬಿದ್ದರೆ ಒಳ್ಳೆಯದು. ಹಾಗೆಂದು ಆರು ವರ್ಷದ ಮಗುವನ್ನು ತಾಸುಗಟ್ಟಲೆ ಕೂರಿಸಿಕೊಂಡು ಸಂಗೀತ ಹೇಳಿಕೊಡಲು ಮುಂದಾದರೆ ಮಗು ಸಂಗೀತದಲ್ಲಿ ಆಸಕ್ತಿಯನ್ನೇ ಕಳೆದುಕೊಳ್ಳಬಹುದು. ಹಾಗಾಗಿ ಕಲಿಯುವವರ ಏಕಾಗ್ರತೆಯನ್ನರಿತು ಕಲಿಸುವುದು ಅತ್ಯವಶ್ಯಕ.

ತಬಲಾ ಕಲಿಸುವಾಗ ಮೊದಲ ಒಂದು ತಿಂಗಳು ಬರೀ ಹತ್ತು ನಿಮಿಷ ಪಾಠ ಮಾಡುತ್ತೇವೆ. `ತಿ ರ ಕಿ ಟ' ಇಷ್ಟನ್ನೇ ಮಗುವಿಗೆ ಮನನ ಮಾಡಿಸುತ್ತ, ಹಂತಹಂತವಾಗಿ ಸಮಯವನ್ನು ಹೆಚ್ಚಿಸಲಾಗುತ್ತದೆ. ಗಾಯನದಲ್ಲಿ ಬೋಧನೆಯ ಸ್ವರೂಪವೇ ಬೇರೆ. ಅಲಂಕಾರದಿಂದ ಆರಂಭವಾಗುವ ಪಾಠ ರಾಗವನ್ನು ತಲುಪಿದ ನಂತರವಷ್ಟೇ ಸುಗಮ ಸಂಗೀತ ಪಾಠ ಹೇಳಿಕೊಡಲಾಗುತ್ತದೆ.

ಮಗುವು ಗುರುಗಳು ಹೇಳಿಕೊಡುವುದಕ್ಕಿಂತ ತನ್ನ ಪಕ್ಕದಲ್ಲಿ ಕುಳಿತು ಹಾಡುವವರನ್ನು ಹೆಚ್ಚು ಗಮನಿಸುತ್ತಿರುತ್ತದೆ. ಪಕ್ಕದವರು ಹಾಡುವುದನ್ನು ಕೇಳಿ ತಾನೂ ಚೆನ್ನಾಗಿ ಹಾಡಬೇಕು ಎನ್ನುವ ಮನೋಭಾವ ಬೆಳೆಸಿಕೊಳ್ಳುತ್ತದೆ. ಕೆಲವು ಮಕ್ಕಳಿಗೆ ಪೋಷಕರ ಇಚ್ಛೆಯಂತೆ ಗುಂಪಿನಲ್ಲಿ ಹೇಳಿಕೊಟ್ಟರೂ ಪ್ರತ್ಯೇಕವಾಗಿಯೇ ಎಲ್ಲ ವಿದ್ಯಾರ್ಥಿಗಳ ಪ್ರಗತಿಯ ಬಗ್ಗೆ ಒತ್ತು ನೀಡಲಾಗುತ್ತದೆ. ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಕಲಿಕೆಯ ಯಾವ ಪ್ರಾಕಾರವೇ ಆಗಲಿ, ಗುರು ಹಾಗೂ ಶಿಷ್ಯರ ನಡುವಣ ಹೊಂದಾಣಿಕೆ ಉತ್ತಮಗೊಳ್ಳಲು ಕೆಲ ಸಮಯ ಬೇಕು. ಆಗ ಕಲಿಕೆ, ಕಲಿಸುವಿಕೆ ಎರಡೂ ಸರಳವಾಗುತ್ತದೆ' ಎನ್ನುತ್ತಾರೆ ಹಂಪಿಹೊಳಿ ದಂಪತಿ.

ಪರೀಕ್ಷಾ ದೃಷ್ಟಿಯ ಬೋಧನೆ
ಇಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಗೂ ಪಠ್ಯಕ್ರಮದ ಅನುಸಾರವೇ ಸಂಗೀತ ಹೇಳಿಕೊಡಲಾಗುತ್ತದೆ. ಪರೀಕ್ಷಾ ದೃಷ್ಟಿಯಿಂದ ಸಂಗೀತ ಬೋಧಿಸುವುದರಿಂದ ಸಂಗೀತ ಸಿದ್ಧಾಂತದ ಜೊತೆಗೆ ಸೀನಿಯರ್, ಜೂನಿಯರ್ ಹಾಗೂ ವಿದ್ವತ್ ಪರೀಕ್ಷೆಗಳಲ್ಲಿ ಭಾಗವಹಿಸಲು ಪ್ರೋತ್ಸಾಹ ನೀಡಲಾಗುತ್ತದೆ. ಮಕ್ಕಳ ಇಚ್ಛೆಯನುಸಾರ ಮಾತ್ರವೇ ಪರೀಕ್ಷೆ ತಯಾರಿ ನಡೆಯುತ್ತದೆ. ಈ ಸಂಸ್ಥೆ ಸಂಗೀತ ಬೋಧನೆಗಷ್ಟೇ ಸೀಮಿತವಾಗಿರದೆ ಅಖಿಲ ಭಾರತ ಗಂಧರ್ವ ಮಹಾವಿದ್ಯಾಲಯ (ಮುಂಬೈ) ನಡೆಸುವ ಪ್ರಮುಖ ಸಂಗೀತ ಪರೀಕ್ಷಾ ಕೇಂದ್ರವಾಗಿಯೂ ಹೆಸರು ಮಾಡಿದೆ.

ಸದ್ಯ 160ಕ್ಕೂ ಹೆಚ್ಚು ವಿದ್ಯಾರ್ಥಿಗಳಿರುವ ಈ ಶಾಲೆ ತನ್ನ ವಾರ್ಷಿಕೋತ್ಸವದ ದಿನ ಮಕ್ಕಳಿಗೆ ವೇದಿಕೆ ಕಲ್ಪಿಸಿ ಪ್ರೋತ್ಸಾಹಿಸುವುದಲ್ಲದೆ ಪ್ರತಿಭಾವಂತ ವಿದ್ಯಾರ್ಥಿಗಳ ಕಲಿಕೆಗೆ ಹಾಗೂ ಪ್ರಗತಿಗೆ ಶ್ರಮಿಸುತ್ತಿದೆ. ಇಲ್ಲಿ ಕಲಿತ ಹಲವಾರು ವಿದ್ಯಾರ್ಥಿಗಳು ಸಂಗೀತ ಕ್ಷೇತ್ರದಲ್ಲಿ ಛಾಪು ಮೂಡಿಸುತ್ತಿದ್ದಾರೆ. ಅವರಲ್ಲಿ ತಬಲಾ ವಾದನದಲ್ಲಿ ಹಿರಿಯ ಶಿಷ್ಯ ಅಮೃತೇಶ ಕುಲಕರ್ಣಿ, ಗುರುರಾಜ ಹೊಳೆನರಸೀಪುರ, ಅಭಯ್ ಕುಲಕರ್ಣಿ, ಪ್ರಶಾಂತ್, ರಾಕೇಶ್, ಮುಖೇಶ್, ಗಾಯನದಲ್ಲಿ ಆಕಾಂಕ್ಷಾ ಬಾದಾಮಿ, ರಮ್ಯಾ, ಶೋಭಾ ಅಲೆ, ಉಮಾ ವಿಶ್ವನಾಥ್ ಪ್ರಮುಖರು.
 
ಮಾನವೀಯತೆಯ ಬುನಾದಿ
ಈ ಶಾಲೆಯ ಇನ್ನೊಂದು ವಿಶೇಷತೆ ಎಂದರೆ ಆರ್ಥಿಕವಾಗಿ ಹಿಂದುಳಿದ ಮಕ್ಕಳಿಗೆ ಉಚಿತವಾಗಿ ಸಂಗೀತ ಬೋಧಿಸಲಾಗುತ್ತದೆ. ಇದು ಶೇಷಾದ್ರಿ ಗವಾಯಿಗಳು ಪರಿಪಾಲಿಸಿಕೊಂಡು ಬಂದ ನೀತಿ (ಶೇಷಾದ್ರಿ ಗವಾಯಿಗಳ ಶಿಷ್ಯವರ್ಗದವರು ಈ ಪರಿಪಾಠವನ್ನು ನಡೆಸಿಕೊಂಡು ಬರುತ್ತಿದ್ದಾರೆ). ಅಲ್ಲದೇ ಶಾಲೆಯಲ್ಲಿ ಎಲ್ಲ ವಿದ್ಯಾರ್ಥಿಗಳಿಗೂ ಮನೆ ಮಕ್ಕಳ ಸ್ಥಾನವನ್ನು ನೀಡಿದ್ದಾರೆ. ಶಾಲೆಯಿಂದ ನೇರವಾಗಿ ತರಗತಿಗೆ ಹಾಜರಾಗುವ ಮಕ್ಕಳು ಅಡುಗೆಮನೆ ಹೊಕ್ಕು ಉಂಡು ಪಾಠಕ್ಕೆ ಕುಳಿತುಕೊಳ್ಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT