ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾವನೆ ಸಂಭಾವನೆ!

Last Updated 24 ಜುಲೈ 2012, 19:30 IST
ಅಕ್ಷರ ಗಾತ್ರ

`ಯಾವ ಕಲಾವಿದರಿಗೂ ಒಂದು ರೂಪಾಯಿ ಸಂಭಾವನೆಯನ್ನೂ ಬಾಕಿ ಉಳಿಸಿಕೊಂಡಿಲ್ಲ. ಆದರೂ ನನ್ನ ಮೇಲೆ ವಿನಾಕಾರಣ ಆಪಾದನೆ ಮಾಡಲಾಗಿದೆ. ಸಂಭಾವನೆ ನೀಡದಿರುವುದಕ್ಕೇ ಪ್ರಚಾರಕ್ಕೆ ಬರುತ್ತಿಲ್ಲ ಎಂದು ಹೇಳುತ್ತಿದ್ದಾರೆ. ಇದೆಲ್ಲಾ ಸುಳ್ಳು. ಸಾಲ ಮಾಡಿ ಸಿನಿಮಾ ಮಾಡಿದ್ದೇನೆ. ನನಗೆ ನಷ್ಟವಾದರೆ ನಿಖಿತಾ ಭರಿಸುತ್ತಾರೆಯೇ....?~ ನಿರ್ಮಾಪಕ-ನಿರ್ದೇಶಕ ಮಂಜು ಮಸ್ಕಲ್ ಮಟ್ಟಿ ಭಾವುಕರಾದರು. ಮೈಕು ಕೆಳಗಿಟ್ಟು ಉಕ್ಕಿ ಬರುತ್ತಿದ್ದ ಕಣ್ಣೀರನ್ನು ತಡೆಯುವ ಪ್ರಯತ್ನ ಮಾಡಿದರು.

ಸಂಭಾವನೆ ನೀಡಿಲ್ಲ ಎಂಬ ತಮ್ಮ ಮೇಲಿನ ಆರೋಪವನ್ನು ತಿರಸ್ಕರಿಸಿ ಸ್ಪಷ್ಟೀಕರಣ ನೀಡಿದ ಮಂಜು ಮಸ್ಕಲ್ ಮಟ್ಟಿ ಚಿತ್ರೀಕರಣದ ವೇಳೆ ಅನುಭವಿಸಿದ ತೊಂದರೆಗಳನ್ನು ಬಿಚ್ಚಿಟ್ಟರು. ಅವರ ನಿರ್ದೇಶನದ ಬಹುತಾರಾಗಣದ `ಗೌರಿಪುತ್ರ~ ಚಿತ್ರದ ಸುದ್ದಿಗೋಷ್ಠಿಯದು. ಬಿಡುಗಡೆಗೆ ಸಿದ್ಧವಾಗಿರುವ `ಗೌರಿಪುತ್ರ~ನಿಗೆ ವಿವಾದದ ವಿಘ್ನ! ಮಂಜು ತಮಗೆ ಸಂಭಾವನೆ ನೀಡಿಲ್ಲ. ಹೀಗಾಗಿ ಪ್ರಚಾರಕ್ಕೆ ಬರುತ್ತಿಲ್ಲ ಎಂಬುದು ಮೂವರು ನಾಯಕಿಯರಲ್ಲಿ ನಿಖಿತಾ ಮತ್ತು ನಿವೇದಿತಾ ಆರೋಪವಾಗಿತ್ತು. ಪ್ರಚಾರಕ್ಕೆ ಬರುವಂತೆ ಕರೆ ಮಾಡಿದಾಗ ಇಬ್ಬರಿಂದಲೂ ಬೈಗುಳ ಕೇಳಬೇಕಾಯಿತು ಎಂದು ಮಂಜು ನಿರ್ಮಾಪಕರ ಸಂಘಕ್ಕೆ ದೂರು ನೀಡಿದ್ದರು. ಚಿತ್ರದ ನಾಯಕರಲ್ಲಿ ಒಬ್ಬರಾದ ನಾಗಶೇಖರ್ ವಿರುದ್ಧವೂ ಇದೇ ಆರೋಪವಿತ್ತು.

ವಿವಾದ ಬಗೆಹರಿದಿದೆ ಎನ್ನುತ್ತಲೇ ಮಂಜು ತಮ್ಮ ಬೇಸರ ಹೊರಹಾಕತೊಡಗಿದರು. ಮಾತಿನುದ್ದಕ್ಕೂ ತಮ್ಮನ್ನು ಸಮರ್ಥಿಸಿಕೊಂಡರು. ನಟ ನಾಗಶೇಖರ್ ತಮ್ಮ `ಮೈನಾ~ ಚಿತ್ರದಲ್ಲಿ ಬಿಜಿಯಾಗಿದ್ದರು. ಆರೋಪ ಕೇಳಿ ಬಂದ ಕೂಡಲೇ ತಮ್ಮ ಜೊತೆ ಮಾತನಾಡಿ ಪ್ರಚಾರದಲ್ಲಿ ಭಾಗವಹಿಸಿ ಸಹಕರಿಸಿದರು. ನಿವೇದಿತಾ ತಮ್ಮನ್ನು ದಿನಗೂಲಿಯಂತೆ ಬಳಸಿಕೊಳ್ಳಲಾಯಿತು ಎಂದು ದೂರಿದ್ದರು. ಮಾತುಕತೆ ನಡೆಸಿ ಅವರ ವಿವಾದವನ್ನೂ ಇತ್ಯರ್ಥ ಮಾಡಲಾಗಿದೆ ಎಂದರು ಮಂಜು. ಅವರ ಆಕ್ರೋಶವಿದ್ದದ್ದು ನಿವೇದಿತಾ ಮತ್ತು ನಿಖಿತಾ ಮೇಲೆ. ಚಿತ್ರೀಕರಣದ ಸಂದರ್ಭದಲ್ಲಿ ನಿವೇದಿತಾ ತಮ್ಮನ್ನು ಅವರು ನಟಿಸುತ್ತಿದ್ದ `ಪರಿ~ ಮತ್ತು `ಕಿಲಾಡಿ ಕಿಟ್ಟಿ~ ಚಿತ್ರಗಳ ನಿರ್ದೇಶಕರಿಗೆ ಹೋಲಿಸಿ ಹೀಯಾಳಿಸುತ್ತಿದ್ದರು. ಆ ನಿರ್ದೇಶಕರಂತೆ ನೀವು ಸರಿಯಾಗಿ ನೋಡಿಕೊಳ್ಳುತ್ತಿಲ್ಲ ಎಂದು ಸಿಟ್ಟಿನಿಂದ ಹೇಳುತ್ತಿದ್ದರು. ಆದರೆ ಆ ಎರಡೂ ಚಿತ್ರಗಳು ಬಿಡುಗಡೆಯಾದ ಬಳಿಕ ಅವರ ವಿರುದ್ಧವೇ ನನ್ನ ಬಳಿ ಮಾತನಾಡಿದ್ದರು ಎಂದು ಮಂಜು ನಿವೇದಿತಾ ವರ್ತನೆ ಬಗ್ಗೆ ಕಿಡಿಕಾರಿದರು.

`ಚಿತ್ರೀಕರಣಕ್ಕೆ ತಿಂಗಳುಗಳ ಮೊದಲೇ ದಿನ ನಿಗದಿ ಪಡಿಸಲಾಗಿತ್ತು. ನಿಖಿತಾ ಅವರಿಗಾಗಿ ವಿಮಾನ ಸೀಟು ಕಾಯ್ದಿರಿಸಿ ಚಿತ್ರೀಕರಣಕ್ಕೆ ಕಾಯುತ್ತಿದ್ದೆವು. ಅವರಿಗಾಗಿ ಬೆಂಗಳೂರಿನಿಂದ 150 ಕಿ.ಮೀ ದೂರದಲ್ಲಿ ಚಿತ್ರೀಕರಣಕ್ಕೆ ಸೆಟ್ ಹಾಕಿಸಿದ್ದೆವು. ಬೆಳಿಗ್ಗೆ 11 ಗಂಟೆಗೆ ಬರಬೇಕಿದ್ದ ಅವರು ಮಧ್ಯಾಹ್ನ ಮೂರು ಗಂಟೆಯಾದರೂ ಬರಲಿಲ್ಲ. ಕರೆ ಮಾಡಿದಾಗ ನಾನು ಬಾಂಬೆಯಲ್ಲಿದ್ದೇನೆ ಎಂದು ಉತ್ತರಿಸಿ ಫೋನ್ ಇಟ್ಟರು. ಕೊನೆಗೆ ಅದನ್ನು ರದ್ದುಪಡಿಸಿ ವಾಪಸು ಬರುವಂತಾಯಿತು. ಈ ರೀತಿ ಹಲವು ಬಾರಿ ನಿಖಿತಾ ತೊಂದರೆ ನೀಡಿದ್ದಾರೆ. ಚಿತ್ರ ಸೆನ್ಸಾರ್ ಆದ ಕೂಡಲೇ ಅವರಿಗೆ ಫೋನ್ ಮಾಡಿ ಪ್ರಚಾರಕ್ಕೆ ಬರುವಂತೆ ಹೇಳಿದ್ದೇನೆ. ಆಗ ಒಪ್ಪಿಕೊಂಡಿದ್ದ ಅವರು ಬಳಿಕ ಕರೆ ಮಾಡಿದರೆ ಸ್ವೀಕರಿಸುತ್ತಿರಲಿಲ್ಲ. ಕೊನೆಗೆ ಸಂಭಾವನೆ ನೀಡಿಲ್ಲ ಎಂಬ ಆರೋಪವನ್ನು ನಾನೇ ಎದುರಿಸಬೇಕಾಗಿ ಬಂತು~ ಎಂದು ಮಂಜು ಅಲವತ್ತುಕೊಂಡರು.

`ಸಂಭಾವನೆ ವಿಚಾರದಲ್ಲಿ ಒಪ್ಪಂದ ಮಾಡಿಕೊಳ್ಳದೆ ನಂಬಿಕೆ ವಿಶ್ವಾಸದಿಂದಲೇ ವ್ಯವಹಾರ ನಡೆಸಿದ್ದೆ. ಅದು ನಾನು ಮಾಡಿರುವ ದೊಡ್ಡ ತಪ್ಪು ಎಂದು ಮಂಜು ಹೇಳಿದರು. ಈ ವಿವಾದ ಚಿತ್ರದ ಪುಕ್ಕಟೆ ಪ್ರಚಾರದ ಸಲುವಾಗಿ ಹುಟ್ಟಿಕೊಂಡದ್ದಲ್ಲ~ ಎಂಬ ಸ್ಪಷ್ಟನೆ ಅವರದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT