ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾವನೆಗಳ ಗಡಿ ಮೀರಿದ ಕಲಾಕೃತಿಗಳು

ಕಲಾಪ
Last Updated 2 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಬಾಗಿಲ ಮುಂದಡಿ ಇಡುತ್ತಲೇ ಸ್ವಾಗತಿಸುವ ಕಾಮರೂಪದ ಕನ್ನಿಕೆಯರು, ಒಂದಡಿ ಒಳಗಿಟ್ಟರೆ ಅಹಿಂಸಾ ಮೂರ್ತಿ ಬುದ್ಧನ ದರ್ಶನ, ಎಡಕ್ಕೆ ತಿರುಗಿದರೆ ಭಾವನೆಗಳಿಗೂ ನಿಲುಕದ ಮೇಘ ಸ್ಫೋಟದ ನರ್ತನ, ಬಲಕ್ಕೆ ನೋಡಿದರೆ ಪ್ರಕೃತಿಯಲ್ಲಿ ಮಿಡಿವ ಜೀವತಂತುವಿನ ಆಹ್ಲಾದ. ಹಾಗೆಯೇ, ಒಂದು ಸುತ್ತು ಹಾಕಿದರೆ ವಿಲಾಸಿ ಕೃಷ್ಣನ ಸರಸದ ಆಲಾಪ, ಯಾವುದೋ ದುಗುಡ ಹೊತ್ತ ಮುಖವೊಂದರ ಅವ್ಯಕ್ತ ವಿಲಾಪ, ಚಂಚಲ ಚಿತ್ತವನ್ನು ಕ್ಷಣಕಾಲ ಕಟ್ಟಿಹಾಕುವ ಸೌಮ್ಯ ಮೊಗದ ನಗ್ನ ತರುಣಿ... ಜತೆಗೆ ವಿವಿಧ ಧಾರ್ಮಿಕ, ಪ್ರೇಕ್ಷಣೀಯ ಕ್ಷೇತ್ರಗಳೊಂದಿಗೆ ಹಲವು ದೈವದರ್ಶನ ಪಡೆದ ಅನುಭೂತಿ.

ನಗರದ ಚಿತ್ರಕಲಾ ಪರಿಷತ್‌ನಲ್ಲಿ ಕಳೆದ ಎರಡು ದಿನಗಳಿಂದ ಮುಂಬೈನ ಜೆ.ಎಸ್.ಆರ್ಟ್ ಗ್ಯಾಲರಿ ಅನಾವರಣಗೊಳಿಸಿರುವ ದೇಶದ ಸಮಕಾಲೀನ ಉದಯೋನ್ಮುಖ 21 ಕಲಾವಿದರ ಕಲಾಕೃತಿಗಳ ದೃಶ್ಯಕಾವ್ಯಗಳ  ಚಿತ್ರಣವಿದು.

ಮುಂಬೈ, ಪುಣೆ, ಕೋಲ್ಕತ್ತಾ ಮತ್ತು ಬೆಂಗಳೂರಿಗೆ ಸೇರಿದ 21 ಖ್ಯಾತ ಕಲಾವಿದರ ಕೃಲಾಕೃತಿಗಳ ಪ್ರದರ್ಶನ ‘ಪಿಚೆ’ಯನ್ನು (ಸ್ಪೇನ್ ಭಾಷೆಯಲ್ಲಿ ಪಿಚೆ ಎಂದರೆ 21 ಎಂದರ್ಥ) ನಗರದ ಕಲಾ ಆರಾಧಕರಿಗಾಗಿ ಚಿತ್ರಕಲೆಯ ಕ್ಷೇತ್ರದಲ್ಲಿ ತಮ್ಮದೇ ಆದ ಖ್ಯಾತಿ ಗಳಿಸಿರುವ ಜೆ.ಎಸ್.ಆರ್ಟ್ ಗ್ಯಾಲರಿಯ ಮಾಲೀಕ ಮತ್ತು ಕ್ಯುರೇಟರ್  ಸೂರಜ್ ಲಹೆರು ಏರ್ಪಡಿಸಿದ್ದಾರೆ.

ಆಯಿಲ್, ವಾಟರ್ ಕಲರ್, ಅಕ್ರಿಲಿಕ್, ಪ್ಯಾಸ್ಟೆಲ್, ಚಾರ್‌ಕೋಲ್, ಪೆನ್,ಇಂಕ್ ಇತ್ಯಾದಿ ಮಿಶ್ರ ಮಾಧ್ಯಮಗಳಲ್ಲಿ ಮೂಡಿಬಂದಿರುವ  ಮೂರ್ತ ಹಾಗೂ ಅಮೂರ್ತ ಕಲಾಕೃತಿಗಳು ನೋಡುಗರ ಭಾವ ಪ್ರಪಂಚವನ್ನು ಪ್ರವೇಶಿಸುತ್ತವೆ.

‘ಪ್ರಸಕ್ತ ಆತಂಕಕಾರಿ ವಾತಾವರಣದಲ್ಲಿ ಶಾಂತಿ, ನೆಮ್ಮದಿ ಬಯಸುವವರಿಗೆ ಬುದ್ಧನೊಬ್ಬನೇ ದಾರಿ ದೀಪವಾಗಿದ್ದಾನೆ. ಆದ್ದರಿಂದ ನನ್ನ ಎಲ್ಲಾ ಕೃತಿಗಳಲ್ಲಿ ಆತನ ನೆರಳನ್ನು ನೀವು ಕಾಣುತ್ತೀರಿ’ ಎನ್ನುತ್ತಾರೆ ತಮ್ಮ ಭಾವ ಪ್ರಪಂಚದ ತುಂಬ ಬುದ್ಧನನ್ನು ಆವಾಹಿಸಿಕೊಂಡಂತಿರುವ ಬೆಂಗಳೂರಿನ ಕಲಾವಿದ ಕಾರ್ತಿಕ್ ಪೂಜಪ್ಪ.

ಮುಂಬೈನ ಶಶಿಕಾಂತ ಪಾತಾಡೆ ಅವರ ಜೈಸಲ್ಮೇರ್ ದ್ವಾರ ಹಾಗೂ ರಾಜಸ್ತಾನದ ಸಾಂಪ್ರದಾಯಿಕ ಮಹಲುಗಳ ಚಿತ್ರಣಗಳು ವಾಸ್ತವಿಕ ನೆಲೆಗಟ್ಟಿನ ಮೇಲೆ ಭಿನ್ನ ಸಂಸ್ಕೃತಿಯನ್ನು ಪರಿಚಯಿಸುವಂತಿವೆ.

ಕೋಲ್ಕತ್ತಾದ ಪ್ರಖ್ಯಾತ ಕಲಾವಿದ, ತೊಂಬತ್ತು ವರ್ಷ ವಯಸಿನ ರಾಬಿನ್ ಮಂಡಲ್ ಅವರ ಕಲಾಕೃತಿಯೊಂದು ತನ್ನ ಬೆಲೆಯಿಂದಲೇ ಎಲ್ಲರನ್ನೂ ಸೆಳೆಯುತ್ತದೆ.

ಈ ಕುರಿತು ಕೇಳಿದರೆ, ತನ್ನ ಜೀವಿತಾವಧಿ ಪೂರ್ತಿ ಬರೀ ದುಗುಡ ತುಂಬಿದ ಮುಖಗಳ ಚಿತ್ರವನ್ನೇ ಬರೆದ ರಾಬಿನ್‌ಗೆ ಮುಖ ಒಡ್ಡಿದವರೆಲ್ಲ, ‘ಈ ಭೂತದ ಮುಖದಲ್ಲಿ ಅಂಥದ್ದೇನನ್ನು ಕಂಡು ಚಿತ್ರಿಸುತ್ತೀರಿ?’ ಎನ್ನುತ್ತಿದ್ದರಂತೆ.

ತಮ್ಮ ಜೀವನ ಪೂರ್ತಿ ಕಾಡಿದ ಆ ಪ್ರಶ್ನೆಗೆ ಉತ್ತರರೂಪದಲ್ಲಿ ‘ಅವ್ಯಕ್ತ ಮುಖ’ದ ಕಲಾಕೃತಿಯೊಂದನ್ನು ಚಿತ್ರಿಸಿದ್ದಾರೆ ಎಂದು  ಕ್ಯುರೇಟರ್‌ ಸೂರಜ್‌ ಹೇಳುತ್ತಾರೆ.

ಪುಣೆಯ ಉಲ್ಲಾಸ್ ರಾಯ್‌ಕರ್ ಅವರು ‘ಕಾಮರೂಪ’ ಚಿತ್ರ ಶೈಲಿಯಲ್ಲಿ ಬರೆದಿರುವ ಸಾಂಪ್ರದಾಯಿಕ ಪ್ರಕಾರದ ಕಲಾಕೃತಿಗಳು ಭಿನ್ನತೆಯಿಂದ ಗಮನ ಸೆಳೆಯುತ್ತವೆ.

ಮುಂಬೈನ ಪರಮೇಶ್ ಪೌಲ್ ಅವರ ಕುಂಚದಲ್ಲಿ ಮೂಡಿಬಂದಿರುವ ಕಾಶಿಯ ಗಂಗೆ ತಟದ ದೈನಂದಿನ ಚಿತ್ರಣ ನಯನ ಮನೋಹರವಾಗಿದೆ.

ಮುಂಬೈ, ಪುಣೆ, ಕೋಲ್ಕತ್ತಾ, ಚೆನ್ನೈ,  ನವದೆಹಲಿ ಸೇರಿದಂತೆ ವಿದೇಶಗಳಲ್ಲಿ ಕೂಡ ಪ್ರದರ್ಶನ ಏರ್ಪಡಿಸಿರುವ ಸೂರಜ್‌ಗೆ ನಗರದಲ್ಲಿ ಇದೇ ಮೊದಲ ಬಾರಿಗೆ ಆಯೋಜಿಸಿರುವ ಈ ಪ್ರದರ್ಶನಕ್ಕೆ ಬರುತ್ತಿರುವ ಪ್ರತಿಕ್ರಿಯೆ ತುಂಬಾ ಖುಷಿ ತಂದಿದೆಯಂತೆ.

ಕಲಾವಿದರಾದ ಆನಂದ್ ಪಂಚಾಲ್, ಅರ್ಪಿತ ಭಾವಸಾರ್, ಧನಂಜಯ್ ಠಾಕೂರ್, ದಿಲೀಪ್ ಚೌಧರಿ, ಮನೋಜ್ ದಾಸ್, ನೀತಾ ಪಥಾರೆ,  ಪ್ರಕಾಶ್ ಕರಮ್‌ಕರ್, ರಾಮಜೀ ಶರ್ಮಾ, ರಾಧಿಕಾ ಸೆಕ್‌ಸಾರಿಯಾ, ಸಯ್ಯದ್ ಅಲಿ, ಶಶಿ ಠಾಕೂರ್, ಸಿಮಿ ಕಮಲ್ ನಾಥ್, ಸುಬ್ರತ್ ಸೇನ್, ಸುನಿತಾ ವಾಧವನ್, ಸುರೇಶ್ ಪರಿಹಾರ್, ವಿನೋದ ಶರ್ಮಾ ಅವರ ಕಲಾಕೃತಿಗಳು ಪ್ರದರ್ಶನದಲ್ಲಿವೆ. ಪ್ರದರ್ಶನವು ಬುಧವಾರ (ಡಿ.4) ಸಂಜೆ ಕೊನೆಗೊಳ್ಳಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT