ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾವೈಕ್ಯ ಬಿಂಬಿಸಿದ ಸಮರ್ಪಣಾದಿನ

Last Updated 8 ಫೆಬ್ರುವರಿ 2012, 6:05 IST
ಅಕ್ಷರ ಗಾತ್ರ

ಪ್ರತಿನಿತ್ಯ ಬಿಳಿಕೋಟು ಧರಿಸಿ, ರೋಗಿಗಳ ಹಾರೈಕೆ ಬಗ್ಗೆ ಮಾಹಿತಿ ಪಡೆದು, ನರ್ಸಿಂಗ್‌ಹೋಂ, ಕ್ಲಿನಿಕ್‌ಗಳಿಗೆ ಅಡ್ಡಾಡುತ್ತಿದ್ದವರಿಗೆ ಅಂದು ಬಣ್ಣದ ಬಟ್ಟೆ ತೊಡುವ ಸಂಭ್ರಮ. ಜತೆಗೇ, ತಮ್ಮ ನಾಡಿನ ಸಂಸ್ಕೃತಿಯ  ಪರಿಚಯಿಸುವ ಅವಕಾಶ. ವೇದಿಕೆ ಮೇಲೆ ಹುಡುಗರು `ಪಂಚೆ~ ಉಟ್ಟು, ಹುಡುಗಿಯರು `ಸೀರೆ~ ಉಟ್ಟು ಬಂದಾಗ ನೆರೆದವರಿಂದ ಚಪ್ಪಾಳೆ ಮತ್ತು ಸಿಳ್ಳೆಯ ಕಾಂಪ್ಲಿಮೆಂಟ್...!

ಈ ದೃಶ್ಯ ಕಂಡು ಬಂದಿದ್ದು, ನಗರದ ಕುಮುದಾ ಇನ್‌ಸ್ಟಿಟ್ಯೂಟ್ ಆಫ್ ನರ್ಸಿಂಗ್ ಸೈನ್ಸ್‌ನ ರಾಘವೇಂದ್ರ ಕಾಲೇಜಿನ ನೂತನ ಕಟ್ಟಡ ಉದ್ಘಾಟನೆ ಮತ್ತು ದೀಪ ಬೆಳಗಿಸುವ- ಪ್ರತಿಜ್ಞಾವಿಧಿ ಸ್ವೀಕಾರದ `ಸಮರ್ಪಣಾ -2012ದಿನ~ದ ಸಮಾರಂಭದಲ್ಲಿ.

ಕರ್ನಾಟಕ, ಕೇರಳ ಸೇರಿದಂತೆ ಇತರೆಡೆಯಿಂದ ಬಂದ ವಿದ್ಯಾರ್ಥಿಗಳಲ್ಲಿ ಅಂದು `ಸಮರ್ಪಣಾ ದಿನ~ದ ಸಂಭ್ರಮ ಮನೆ ಮಾಡಿತ್ತು. ತಮ್ಮ ಮಕ್ಕಳ ಪ್ರತಿಭಾ ಪ್ರದರ್ಶನ ನೋಡಲು ದೂರದ ಕೇರಳದಿಂದ ಪೋಷಕರೂ ಆಗಮಿಸಿದ್ದರು. ಕಾರ್ಯಕ್ರಮ ನಿರೂಪಕರಾದ ಅಭಿಲಾಷ್ ಪಿ. ಜಾರ್ಜ್ ಮತ್ತು ಜಾನ್ಸಿ ಜಾನ್ಸನ್ ಕನ್ನಡದಲ್ಲೇ ಕಾರ್ಯಕ್ರಮ ನಡೆಸಿಕೊಟ್ಟದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ಮಧ್ಯೆ ಮಲಯಾಳಂ, ಇಂಗ್ಲಿಷ್‌ನ ಒಗ್ಗರಣೆಯೂ ಬೆರೆತು ಕಾರ್ಯಕ್ರಮಕ್ಕೆ ಮತ್ತಷ್ಟು ರಂಗೇರಿಸಿತ್ತು.  

ಉದ್ಘಾಟನಾ ಸಮಾರಂಭದಲ್ಲಿ ಕೇರಳದ ವಿದ್ಯಾರ್ಥಿನಿ ಸಾಂದ್ರಾ ವರ್ಗೀಸ್ ಮತ್ತು ಸಂಗಡಿಗರು ಹಾಡಿದ `ವಂದೇ ಮಾತರಂ~ ಮತ್ತು `ಗಣೇಶಸ್ತುತಿ~ ನೆರೆದವರನ್ನು ಮಂತ್ರ ಮುಗ್ಧರನ್ನಾಗಿಸಿತು.  `ವಂದೇ ಮಾತರಂ~ ಹಾಡಿಗೆ ಕೇರಳ ಮತ್ತು ಕರ್ನಾಟಕದ ವಿದ್ಯಾರ್ಥಿನಿಯರು ನೃತ್ಯ ಸಂಯೋಜಿಸಿ ಭಾರತ ಭಾವೈಕ್ಯದ ಬೀಡು ಎಂಬುದನ್ನು ಬಿಂಬಿಸಿದರು.

`ಹುಡುಗರು~ ಚಿತ್ರದ `ತೊಂದ್ರೆ ಇಲ್ಲ ಪಂಕಜಾ..~ ಹಾಡಿಗೆ ವೇದಿಕೆ ಮೇಲಷ್ಟೇ ಅಲ್ಲ,  ವೇದಿಕೆಯ ಕೆಳಗೂ ನರ್ಸಿಂಗ್ ಹುಡುಗರು, ಹುಡುಗಿಯರು ಸಖತ್ ಸ್ಟೆಪ್ ಹಾಕಿ, ಖುಷಿ  ಪಟ್ಟರು. ಇನ್ನು `ರಾ ಒನ್~ ಚಿತ್ರದ `ಚಮ್ಮಕ್ ಚಲ್ಲೋ~  ಹಾಡಿಗಂತೂ ನರ್ತಿಸದವರೇ  ಇಲ್ಲ. ವಿದ್ಯಾರ್ಥಿಗಳ ಜತೆ ಕೆಲ ಪೋಷಕರೂ  ಹೆಜ್ಜೆ ಹಾಕಿ ಸಾಂಸ್ಕೃತಿಕ ಸಮಾರಂಭಕ್ಕೆ ಕಳೆ  ತಂದರು. ಹುಡುಗರು ಶೇರ್ವಾನಿ, ಕೇರಳ ಶೈಲಿಯ `ಬಿಳಿ ಪಂಚೆ~ಯ  ಸಾಂಪ್ರದಾಯಿಕ ಉಡುಪಿನಲ್ಲಿ ಮಿಂಚುತ್ತಿದ್ದರೆ, ಹುಡುಗಿಯರು `ಸೀರೆ ಉಟ್ಟ ನೀರೆ ಚೆಂದ~ ಎಂಬಂತೆ ರೇಷ್ಮೆ, ಥರಾವರಿ ಡಿಸೈನರಿ ಸೀರೆಯುಟ್ಟು ಕಾರ್ಯಕ್ರಮದ ಆಕರ್ಷಣೆ ಮತ್ತಷ್ಟು  ಹೆಚ್ಚಿಸಿದರು.

ಭರತನಾಟ್ಯ, ಸಮೂಹ ಗಾನ, ನೃತ್ಯಗಳ ಮೂಲಕ   ನೆರೆದವರ ಮನಸೂರೆಗೊಂಡ  ವಿದ್ಯಾರ್ಥಿಗಳು  ಅಂದು ಕಾರ್ಯಕ್ರಮ ಮುಗಿಸಿದಾಗ ರಾತ್ರಿ 11 ದಾಟಿತ್ತು. ಸಾಂಸ್ಕೃತಿಕ ಕಾರ್ಯಕ್ರಮಕ್ಕೂ ಮುನ್ನ ವೇದಿಕೆ ಕಾರ್ಯಕ್ರಮದಲ್ಲಿ `ಫ್ಲಾರೆನ್ಸ್ ನೈಟೇಂಗಲ್~ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದ ನರ್ಸಿಂಗ್ ವಿದ್ಯಾರ್ಥಿಗಳು ರೋಗಿಗಳ ಜೀವರಕ್ಷಣೆಯ ಪಣ ತೊಟ್ಟರು. ಮೊಂಬತ್ತಿ ದೀಪ ಹಿಡಿದು ರೋಗಿಗಳ ಸೇವೆಗೆ ಬದ್ಧ ಎಂದು ಘೋಷಿಸಿದರು.

`ಕಾರ್ಯಕ್ರಮ ಸೂಪರ್ ಆಗಿತ್ತು. ಇಷ್ಟು ಚೆನ್ನಾಗಿ ಮಾಡ್ತಾರೆ ಅಂತ ನಿರೀಕ್ಷೆಯೇ ಇರಲಿಲ್ಲ. ಡೆಕೋರೇಷನ್‌ನಿಂದ ಹಿಡಿದು ಸ್ಟೇಜ್‌ವರೆಗೆ ಎಲ್ಲದರಲ್ಲೂ ಅಚ್ಚುಕಟ್ಟುತನ, ಶಿಸ್ತು ಎದ್ದು ಕಾಣುತ್ತಿತ್ತು. ನಿಜಕ್ಕೂ ತುಂಬಾ ಚೆನ್ನಾಗಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು. ತುಂಬಾ ಎಂಜಾಯ್ ಮಾಡಿದೆವು~ ಎಂದು ಉತ್ಸಾಹದಿಂದ ನುಡಿದರು ರಾಘವೇಂದ್ರ ಸ್ಕೂಲ್ ಅಂಡ್ ಕಾಲೇಜ್ ಆಫ್ ನರ್ಸಿಂಗ್‌ನ ಪ್ರಥಮ ಬಿಎಸ್ಸಿ ನರ್ಸಿಂಗ್ ವಿದ್ಯಾರ್ಥಿ ಬಿ.ಎ. ವಸಂತ್, ಮೊದಲ ಎಎನ್‌ಎಂ ವಿದ್ಯಾರ್ಥಿನಿಯರಾದ ಜಿ. ಶಾಹೀನಾ ಮತ್ತು ಟಿ. ರೇಣುಕಾ. 

ಸಮಾರಂಭ ಉದ್ಘಾಟಿಸಿದ ಸಚಿವ ಎಸ್.ಎ. ರವೀಂದ್ರನಾಥ್, `ಕರ್ನಾಟಕದಲ್ಲಿ ನರ್ಸಿಂಗ್ ಪದವಿ ಪೂರೈಸುವ ಶುಶ್ರೂಷಕರು ಹೊರದೇಶಕ್ಕೆ ಹೋಗದೇ, ರಾಜ್ಯದಲ್ಲೇ ಸೇವೆ ಸಲ್ಲಿಸಲು ಆದ್ಯತೆ ನೀಡಲಿ~ ಎಂದು ಸಲಹೆ ನೀಡಿದರೆ, ಸಂಸತ್  ಸದಸ್ಯ ಜಿ.ಎಂ. ಸಿದ್ದೇಶ್ವರ ಮಾತನಾಡಿ, ಶುಶ್ರೂಷಕರಿಗೆ ಕೇರಳ ಮಾದರಿಯಾಗಿರುವಂತೆ ರಾಜ್ಯವೂ ಈ ನಿಟ್ಟಿನಲ್ಲಿ ಅಭಿವೃದ್ಧಿ ಹೊಂದಲಿ ಎಂದು ಶುಭ ಹಾರೈಸಿದರು.

ಕುಮುದಾ ನರ್ಸಿಂಗ್ ಸೈನ್ಸ್‌ನ ಮ್ಯಾನೇಜಿಂಗ್ ಟ್ರಸ್ಟಿ ಕೆ. ಸೈಮನ್, ಎನ್. ಲಿಂಗಣ್ಣ, ಎ. ನರಸಿಂಹಪ್ಪ,  ಎ.ಆರ್. ಲಿಂಗರಾಜ  ಮತ್ತಿತರರು ಹಾಜರಿದ್ದರು.

ಕಾರ್ಯಕ್ರಮ ಮುಗಿದಾಗ ಕೇರಳದಿಂದ ಆಗಮಿಸಿದ್ದ ಪೋಷಕರು, `ಕರ್ನಾಟಕ ನಿಜಕ್ಕೂ ಸುಂದರ, ಇಲ್ಲಿನ ಭಾಷೆ, ಸಂಸ್ಕೃತಿ, ಊಟ ಎಲ್ಲವೂ ಚೆಂದ~ ಎಂದು ಮೆಚ್ಚುಗೆ ನುಡಿಗಳನ್ನಾಡಿದ್ದು `ಸಮರ್ಪಣಾ ದಿನ~ಕ್ಕೆ ಸಾರ್ಥಕ ಮೂಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT