ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾವೈಕ್ಯ ಸಾರುವ ಬನ್ನಿಕಟ್ಟೆ

Last Updated 31 ಮೇ 2012, 8:40 IST
ಅಕ್ಷರ ಗಾತ್ರ

ಲಿಂಗಸುಗೂರ(ಮಸ್ಕಿ): ತಾಲ್ಲೂಕಿನ ಬಹುತೇಕ ಕಡೆಗಳಲ್ಲಿ ಭಾವೈಕ್ಯ ಮೈಗೂಡಿಸಿಕೊಂಡಿರುವ ಮಠ, ಮಂದಿರ, ಮಸೀದಿಗಳು ಕಾಣಸಿಗುತ್ತವೆ. ಬಹುತೇಕ ಹಬ್ಬ ಹರಿದಿನಗಳನ್ನು ಕೂಡ ಹಿಂದು-ಮುಸ್ಲಿಂ ಜನಾಂಗದವರು ಭಾಗವಹಿಸುವುದು ವಾಡಿಕೆ. ಅಂತಹ ಸಂದೇಶವನ್ನೆ ಸಾರುವ ಬನ್ನಿಕಟ್ಟೆಯೊಂದು ತಾಲ್ಲೂಕಿನ ಮಸ್ಕಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕಾಟಗಲ್‌ನಲ್ಲಿ ಕಾಣಸಿಗುತ್ತದೆ.

ಅಂಕುಶದೊಡ್ಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಕಾಟಗಲ್ ಗ್ರಾಮ ಪ್ರವೇಶಿಸುತ್ತಿದ್ದಂತೆ ಬಸವಣ್ಣ ದೇವರು ಪ್ರತಿಷ್ಠಿಸಿದ ಬನ್ನಿಗಿಡಕ್ಕೆ ಮುಸ್ಲಿಂ ಶೈಲಿಯ ಕಟ್ಟೆ ನಿರ್ಮಿಸಿ 786 ಎಂದು ಬರೆದಿರುವುದು ಹೊಸದಾಗಿ ಹೋಗುವ ಎಲ್ಲರನ್ನು ಒಂದು ಕ್ಷಣ ಯೋಚನೆಗೆ ಸಿಲುಕಿಸುತ್ತದೆ. ಮಾಹಿತಿ ಹುಡುಕಿ ಹೋಗುವವರಿಗೆ ಮಾತ್ರ ವಾಸ್ತವ ಸತ್ಯ ಬಹಿರಂಗಗೊಂಡು ಖುಷಿ ಪಡುವ ಸಂಗತಿಗಳೆ ಹೆಚ್ಚು.

ಈ ಗ್ರಾಮದಲ್ಲಿ ಶೇ 60ರಷ್ಟು ಪರಿಶಿಷ್ಟ ಪಂಗಡದವರೆ ವಾಸಿಸುತ್ತಿದ್ದಾರೆ. ಶೇ 30ರಷ್ಟು ಮುಸ್ಲಿಂ ಜನಾಂಗ. ಶೇ 20ರಲ್ಲಿ ಲಿಂಗಾಯತ ಮತ್ತು ಇತರೆ ಜನಾಂಗದವರು ವಾಸಿಸುತ್ತಾರೆ. ಹಿಂದು ದೇವಾಲಯಗಳ ಜೊತೆಗೆ ಚರ್ಚ್, ಮಸೀದಿ, ಈದ್ಗಾ ಮೈದಾನ ಕಾಣಸಿಗುತ್ತವೆ. ಮೊಹರಂ ಹಬ್ಬದಲ್ಲಿ ಈ ಗ್ರಾಮದ ಮಸೀದಿಯಲ್ಲಿ 9 ಅಲಾಯಿ ದೇವರುಗಳನ್ನು ಕೂಡಿಸುವುದು ಸಂಪ್ರದಾಯ ಎಂದು ಶರಣಗೌಡ ಕಾಟಗಲ್ ಹೇಳುತ್ತಾರೆ.

ಧರ್ಮ, ಜಾತಿಗಳು ಕುಟುಂಬಕ್ಕೆ ಮಾತ್ರ ಸೀಮಿತವಾಗಿವೆ. ಗ್ರಾಮದ ವಿಷಯ ಬಂದಾಗ ಸರ್ವ ಜನಾಂಗದವರು ಒಂದಾಗಿ ಆಚರಣೆಗಳಲ್ಲಿ ಪಾಲ್ಗೊಳ್ಳುತ್ತೇವೆ. ಮೊಹರಂದಲ್ಲಿ ಅಲಾಯಿ ದೇವರು ಬನ್ನಿಕಟ್ಟೆಗೆ ಭೇಟಿ ನೀಡುತ್ತವೆ. ಉಟಗನೂರು ತಾತನ ಜಾತ್ರೆಯಲ್ಲಿ ಇದೇ ಬನ್ನಿ ಕಟ್ಟೆವರೆಗೆ ಉತ್ಸವ ಎಳೆಯಲಾಗುತ್ತದೆ. ದಸರಾ ಹಬ್ಬದಲ್ಲಿ ಬನ್ನಿ ಮುಡಿಯುವುದು ಇಲ್ಲೆಯೆ ಎಂದು ಗ್ರಾಮಸ್ಥರು ಬನ್ನಿ ಗಿಡದ ವಿಶೇಷತೆ ಬಗ್ಗೆ ವಿವರಣೆ ನೀಡಿದರು.

ಮೌಲಾಲಿ ಅಲಾಯಿ ದೇವರನ್ನು ಹಿಡಿಯುವವರು ಈ ಗ್ರಾಮದಲ್ಲಿ ಹಿಂದುಗಳೆ. ಸೋಮಣ್ಣ ಪೂಜಾರಿ ಎಂಬುವರರು. ಅವರು ಈ ಬನ್ನಿ ಗಿಡದ ಬಳಿ ವಿಶ್ರಾಂತಿ ಪಡೆದುಕೊಳ್ಳುವುದು ಸಾಮಾನ್ಯ. ಒಂದು ಸಂದರ್ಭದಲ್ಲಿ ತಾವು ಮೃತಪಟ್ಟಾಗ ಇದೇ ಬನ್ನಿಗಿಡದ ಬಳಿ ಮಣ್ಣು ಮಾಡುವಂತೆ ಹೇಳಿದ್ದರು. ಆದರೆ, ಅವರು, ದುಡಿಯಲು ಹೋದಾಗ ಸಿಂಧನೂರ ತಾಲ್ಲೂಕಿನ ದೇವಿಕ್ಯಾಂಪ್‌ನಲ್ಲಿ ಮೃತಪಟ್ಟಿದ್ದರಿಂದ ಈ ಸ್ಥಳದಲ್ಲಿ ಮಣ್ಣು ಮಾಡಲಾಗಲಿಲ್ಲ ಎಂದು ಜಮೀನು ಮಾಲೀಕ ಅಮರೇಗೌಡ ದೇವರಮನಿ ಹಿನ್ನೆಲೆ ಹೇಳಿದರು.

ಕಳೆದ 20 ವರ್ಷಗಳ ಹಿಂದೆ ಸೋಮಣ್ಣ ಪೂಜಾರಿ ಮೃತಪಟ್ಟಿದ್ದಾರೆ. ಆದರೆ, ಪ್ರತಿ ವರ್ಷ ಮೊಹರಂ ಹಬ್ಬದಲ್ಲಿ ಮೌಲಾಲಿ ದೇವರು ಬನ್ನಿಕಟ್ಟೆಗೆ ಭೇಟಿ ನೀಡುತ್ತಿರುವುದರಿಂದ ಅವರ ಸ್ಮರಣಾರ್ಥ ಮುಸ್ಲಿಂ ಶೈಲಿಯಲ್ಲಿ ಕಟ್ಟೆ ನಿರ್ಮಿಸಲಾಗಿದೆ. ಉಟಗನೂರು ತಾತನ ಜಾತ್ರೆಯು ಅದ್ದೂರಿಯಾಗಿ ಜರುಗುವುದರಿಂದ ಬನ್ನಿ ಕಟ್ಟೆಯನ್ನೆ ಪಾದಗಟ್ಟೆ ಎಂದು ಗುರ್ತಿಸಿ ಬಸವಣ್ಣ ಮೂರ್ತಿ ಪ್ರತಿಷ್ಠಾಪಿಸಲಾಗಿದೆ.
 
ನಮ್ಮಲ್ಲಿ ಹಿಂದು, ಮಸ್ಲಿಂ, ಕ್ರೈಸ್ತರೆಂಬ ವ್ಯತ್ಯಾಸಗಳಿಲ್ಲ ಎಂದು ದಳಪತಿ ಹನುಮಗೌಡ ಪ್ರಜಾವಾಣಿಗೆ ವಿವರಿಸಿದರು. ಬನ್ನಿಮರವೊಂದು ಹಿಂದು ಮುಸ್ಲಿಂ ಬಾಂಧವರ ಭಾವೈಕ್ಯ  ಕೇಂದ್ರವಾಗಿ ಕಾಣಿಸಿಕೊಂಡಿರುವುದು ಈ ಭಾಗದಲ್ಲಿ ವಿಶೇಷವಾಗಿದೆ ಎಂಬುದು ವಿವಿಧ ಧರ್ಮ ಗುರುಗಳ ಅಭಿಪ್ರಾಯವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT