ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾವೈಕ್ಯದ ತಾಣ ಸೈಯ್ಯದಸಾಬ ದರ್ಗಾ

Last Updated 24 ಸೆಪ್ಟೆಂಬರ್ 2011, 5:10 IST
ಅಕ್ಷರ ಗಾತ್ರ

ಮುಧೋಳ: ಮಾಜಿ ಸಂಸದ ದಿವಂಗತ ಎಸ್.ಟಿ.ಪಾಟೀಲರು ನಿರ್ಮಿಸಿದ ಇಲ್ಲಿನ ಸೈಯ್ಯದಸಾಬರ ದರ್ಗಾಕ್ಕೆ ಮುಸ್ಲಿಂ ಸಮಾಜದವರಿಗಿಂತ ಹಿಂದುಗಳೇ ಹೆಚ್ಚಾಗಿ ಬರುತ್ತಾರೆ. ಮನೆಗಳಲ್ಲಿ ಗಂಡು ಹುಟ್ಟಿದರೆ ಸೈದಪ್ಪ, ಹೆಣ್ಣು ಮಗು ಹುಟ್ಟಿದರೆ ಸೈದವ್ವ ಇನ್ನು ಮುಸ್ಲಿಂ ಸಮಾಜದವರು ಸೈಯ್ಯದ್, ಸೈದಾಮಾ ಎಂದು ಮಕ್ಕಳಿಗೆ ನಾಮಕರಣ ಮಾಡುತ್ತಾರೆ. ಮನೆಗಳಲ್ಲಿ ಮದುವೆ, ಸಮಾರಂಭಗಳಿದ್ದರೆ, ಸೈಯ್ಯದಸಾಬ ದರ್ಗಾಕ್ಕೆ ನೈವೇದ್ಯ ತೆಗೆದುಕೊಂಡು ಹೋಗುವುದು. ದರ್ಗಾದ ಗದ್ದುಗೆಗೆ ಹೂವು, ಹಣ್ಣು ನೀಡುವುದು. ನಿಶಾನೆ ಒಯ್ಯುವದು ಇವೆಲ್ಲ ಭಾವೈಕ್ಯದ ಪ್ರತೀಕವಾಗಿವೆ. ಇಂಥ ವಿಭಿನ್ನವಾದ ಭಾವೈಕ್ಯತಾ ಕೇಂದ್ರ ಮುಧೋಳದಲ್ಲಿದ್ದು, ಇದೇ 24ರಿಂದ ಇಲ್ಲಿ ಉರುಸು ಪ್ರಾರಂಭಗೊಳ್ಳಲಿದೆ.

ಮಹಾಕವಿ ರನ್ನನ ಹುಟ್ಟೂರಾದ ಮುಧೋಳವು ಪ್ರಸಿದ್ಧ ಬೇಟೆನಾಯಿಗಳ ಕೇಂದ್ರ. ಇಲ್ಲಿನ ಧಾರ್ಮಿಕ ಆಚರಣೆಗಳೂ ಅಷ್ಟೇ ಮಹತ್ವ ಪಡೆದುಕೊಂಡಿವೆ. ಮಾಚಕನೂರು ಹೊಳೆಬಸವೇಶ್ವರ, ಬೆಳಗಲಿಯ ಅಮೃತೇಶ್ವರ ಐತಿಹಾಸಿಕ ದೇವಾಲಯಗಳು, ನಗರದ ಕಲ್ಮೇಶ್ವರ, ಢವಳೇಶ್ವರದ ಲಕ್ಷ್ಮಿಯ ದೇವಾಲಯ , ಬೆಳಗಲಿಯ ಬಂದ ಲಕ್ಷ್ಮಿ ,  ತಾಲ್ಲೂಕಿನ ಮಹಾಲಿಂಗಪುರದ ಶ್ರೀ ಮಹಾಲಿಂಗೇಶ್ವರ, ಲೋಕಾಪೂರದ ಶ್ರೀ ಲೋಕೇಶ್ವರ, ಮಂಟೂರಿನ ಶ್ರೀ ಸ್ದ್ದಿದಾರೂಢರ ಮಠ, ಯಡಹಳ್ಳಿ-ಇಂಗಳಗಿಯ ಶ್ರೀ ಅಡವಿಸಿದ್ದೇಶ್ವರ, ಲೋಕಾಪುರ ದುರಗಮ್ಮ ಇನ್ನೂ ಹಲವಾರು ಪ್ರಸಿದ್ಧ ಪುಣ್ಯ ಕ್ರೇತ್ರಗಳನ್ನು ಹೊಂದಿರುವ ತಾಲ್ಲೂಕಿನಲ್ಲಿ ಪ್ರತಿ ವರ್ಷ ಹತ್ತಾರು ಜಾತ್ರೆಗಳು ನಡೆಯುವುದು ವಿಶೇಷ.

ನಗರದಲ್ಲಿ ಹಿಂದೂ-ಮುಸ್ಲಿಂ ಭಾವೈಕ್ಯದ ಪುಣ್ಯಸ್ಥಳ ಹಜರತ ಸೈಯ್ಯದಸಾಬ ದರ್ಗಾಕ್ಕೆ ಎಲ್ಲ ಜನಾಂಗದ ಭಕ್ತರು ಆಗಮಿಸಿ ಭಕ್ತಿ ಸಮರ್ಪಿಸುತ್ತಾರೆ.

ಕ್ಷೇತ್ರ ಮಹಿಮೆ: ಹಜರತ ಸೈಯ್ಯದಸಾಬರು ವಿಜಾಪುರದ ಆದಿಲ್‌ಶಾಹಿ ಕಾಲದಲ್ಲಿ ಮುಧೋಳಕ್ಕೆ ಬಂದು ತಮ್ಮ ಹಲವಾರು ಪವಾಡ ಶಕ್ತಿಗಳಿಂದ, ಧಾರ್ಮಿಕ ಚಟುವಟಿಕೆಗಳಿಂದ ಜನಮನಗ್ದ್ದೆದರು. ಅಲ್ಲದೆ ಅವರಿಗೆ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಇದ್ದರು. ಕಾಲಾನಂತರ ಇಲ್ಲಿಯೇ ದೇಹ ತ್ಯಾಗ ಮಾಡಿದರು. ಆಗ ಅಂದಿನ ಘೋರ್ಪಡೆ ಸಂಸ್ಥಾನದ ಮಹಾರಾಜರು ಗದ್ದುಗೆ ಸ್ಥಾಪನೆ ಮಾಡಿ ಪೂಜನೀಯ ಸ್ಥಳವನ್ನಾಗಿ ನಿರ್ಮಿಸಿದರು. ಗದ್ದುಗೆಯ ಸುತ್ತಲೂ ಕಂಪೌಂಡ್ ನಿರ್ಮಿಸಿಕೊಟ್ಟರು. ನಂತರ 1985 ರಲ್ಲಿ ಎಸ್. ಟಿ. ಪಾಟೀಲರು ಗಾಲವ ಋಷಿಯ ಆಸ್ಥಾನ ಗಲಗಲಿಯಿಂದ ಕೃಷ್ಣಾ ನದಿ ನೀರು ತರಿಸಿ, ತಮ್ಮದೇ ಆದ ಪ್ರಸಿದ್ಧ ಲೋಕಾಪುರ ಸಿಮೆಂಟ್ ಬಳಸಿ, ಒಂದೇ ರಾತ್ರಿಯಲ್ಲಿ ತಮ್ಮ ಕಾರ್ಮಿಕರಿಂದ ದರ್ಗಾನಿರ್ಮಿಸಿ ಕೊಟ್ಟರು.

ಪ್ರತಿವರ್ಷ ಉರುಸಿನ ಸಂದರ್ಭದಲ್ಲಿ ದಿ.ಎಸ್.ಟಿ. ಪಾಟೀಲರ ಮನೆಯಿಂದ ಈಗಲೂ ಪುಷ್ಪದಿಂದ ಅಲಂಕೃತಗೊಂಡ ನಿಶಾನೆಯನ್ನು ಮೆರವಣಿಗೆ ಮೂಲಕ ಕರೆದೊಯ್ದು, ಗದ್ದುಗೆಗೆ ಗಂಧ ಏರಿಸಲಾಗುವುದು. ಪಾಟೀಲರ ನಿಧನದ ನಂತರ ಈ ಜವಾಬ್ದಾರಿಯನ್ನು ಯುವ ಧುರೀಣ ದಯಾನಂದ ಪಾಟೀಲರು ನಿರ್ವಹಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ರಾಜ್ಯದ ನಾನಾ ಜಿಲ್ಲೆಯಿಂದ ಹಾಗೂ ನೆರೆ ರಾಜ್ಯದಿಂದಲೂ ಅಲ್ಪಸಂಖ್ಯಾತರು ವಿವಿಧ ಜನಾಂಗದ ಭಕ್ತರು ಪಾಲ್ಗೊಂಡು ನೈವೇದ್ಯ ಸಲ್ಲಿಸಿ ದರ್ಶನ ಪಡೆಯುತ್ತಾರೆ. ತಮ್ಮ ಜಾತಿ, ಮತ, ಪಂಥ ಮರೆತು ಭಕ್ತಿ, ಭಾವದಿಂದ ಶ್ರದ್ಧೆಯಿಂದ ಪಾಲ್ಗೊಂಡು ಆರಾಧಿಸುತ್ತ ಬಂದಿರುವ ಸೆೃಯ್ಯದಸಾಬರ ದರ್ಗಾ ಇಂದು ಎಲ್ಲಾ ಜಾತಿ ಧರ್ಮದವರ ಆರಾಧನಾ ಸ್ಥಳವಾಗಿದೆ.

ಧಾರ್ಮಿಕ ಕ್ರಿಯೆಗಳು: ಇದೇ 24 ರಂದು ಬೆಳಿಗ್ಗೆ ಗದ್ದುಗೆ ಪೂಜೆ, ಪುಷ್ಪಾಲಂಕಾರ ನಡೆಯುವುದು. ರಾತ್ರಿ 8ಕ್ಕೆ ದಯಾನಂದ ಪಾಟೀಲರ ಮನೆಯಿಂದ ಅಲಂಕೃತ ನಿಶಾನೆ ಹಾಗೂ ಗಂಧವನ್ನು ಮೆರವಣಿಗೆಯ ಮೂಲಕ ದರ್ಗಾಕ್ಕೆ ತೆಗೆದುಕೊಂಡು ಹೋಗಲಾಗುವುದು. ನಂತರ ಗಂಧ ಸಮರ್ಪಣೆ, ರಾತ್ರಿ ಹಾಜಿ ಸೈಯ್ಯದಸಾಬ  ಮುಲ್ಲಾರಿಂದ ಕುರಾಣ ಪಠಣ. 25ರಂದು ಬೆಳಿಗ್ಗೆ ಗದ್ದುಗೆಗೆ ಮಹಾಪೂಜೆ, ಗಂಧ ಪುಷ್ಪಾರ್ಚನೆ, ವಿವಿಧ ಸೇವೆಗಳು ನಡೆಯಲಿದೆ. 28ರವರೆಗೆ ನಿತ್ಯ ಕೆಲವು ಪ್ರಮುಖರು ನಿಶಾನೆಗಳನ್ನು ಮೆರವಣಿಗೆ ಮೂಲಕ ತೆಗೆದುಕೊಂಡು ಬರುವ ಕಾರ್ಯಕ್ರಮಗಳು ನಡೆಯಲಿದೆ.

ಸೈಸಾಬ ದರ್ಗಾಕ್ಕೆ ಮತ್ತು ಇಲ್ಲಿ ನಡೆಯುವ ಜಾತ್ರೆ ಉತ್ಸವಗಳಲ್ಲಿ  ಎಲ್ಲ ಸಮುದಾಯದವರನ್ನು ಸಮಾನ ಭಾವದಿಂದ ಕಾಣುವ ಸಮಿತಿಯೊಂದನ್ನು ರಚಿಸಲಾಗಿದೆ. ಸಮಿತಿಯ ಗೌರವ ಅಧ್ಯಕ್ಷರಾಗಿ ಯುವಧುರೀಣ ದಯಾನಂದ ಪಾಟೀಲ, ಅಧ್ಯಕ್ಷ ಎಂ.ಎಸ್.ನಾಯಕವಾಡಿ, ಇಬ್ರಾಹಿಂ ಸಾರವಾನ, ರಾಚಪ್ಪ ಕರೇಹೊನ್ನ, ಇಬ್ರಾಹಿಂ ಪಠಾಣ, ಮೀರಾಸಾಬ ನದಾಫ್, ಅನಂತ ಘೋರ್ಪಡೆ, ಸೈದುಸಾಬ ಮುಲ್ಲಾ, ಸತ್ತಾರ ಮುಲ್ಲಾ, ಮಹಾದೇವ ಹೊಸಕೋಟಿ, ಮಹಿಬೂಬ ಅಮಲಝರಿ, ಅಸ್ಲಂ ಕಿರಸೂರ,  ಇಸ್ಮಾಯಿಲ್ ಕುಡಚಿ, ನಬಿ ಜಹಾಗಿರದಾರ, ರಜಿಯಾಬಿ ಮಕಾನದಾರ, ಗುರುರಾಜ ಕಟ್ಟಿ, ಮಹಾದೇವ ತೇಲಿ, ಬಸವಂತ ಕಾಟೆ,  ಸಮಿತಿಯ ಸರ್ವ ಧರ್ಮದ ಸದಸ್ಯರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಮನರಂಜನಾ ಕಾರ್ಯಕ್ರಮ: ಈ ವರ್ಷ  ಜಾತ್ರೆ ಸಂದರ್ಭದಲ್ಲಿ ವಿವಿಧ ಕಾರ್ಯಕ್ರಮಗಳನ್ನು, ಸ್ಪರ್ಧೆಗಳನ್ನು ವಿವಿಧ ಕ್ರೀಡೆ ಮತ್ತು ಸಾಂಸ್ಕೃತಿಕ, ಮನರಂಜನಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. 25 ರಂದು ಪುರುಷರ ಸೈಕಲ್ ರೇಸ್ ಇದೆ. ಅಂದು ರಾತ್ರಿ ತುರುಸಿನ ಕವ್ವಾಲಿಗಳು ನಡೆಯುತ್ತವೆ. 26 ರಂದು ಸಂಜೆ 4 ಗಂಟೆಗೆ ಜಂಗಿ ನಿಕಾಲಿ ಕುಸ್ತಿಗಳನ್ನು ಸಣ್ಣ ನೀರಾವರಿ, ಕನ್ನಡ ಮತ್ತು ಸಂಸ್ಕೃತಿ ಸಚಿವ ಗೋವಿಂದ ಕಾರಜೋಳ ಉದ್ಘಾಟಿಸಲಿದ್ದಾರೆ. ಬೃಹತ್ ಕೈಗಾರಿಕ ಸಚಿವ ಮುರಗೇಶ ನಿರಾಣಿ ಇವರಿಂದ ಅನ್ನಪ್ರಸಾದ ವಿತರಣೆ, ರಾತ್ರಿ ಮಹಾಲಿಂಗಪೂರದ ನಿಜಾಮ ಅಲ್ಲಾಖಾನರಿಂದ ಕನ್ನಡ ಕವ್ಹಾಲಿ, 27 ರಂದು ಜೆ.ಕೆ.ಸಿಮೆಂಟ್ಸ್ ಉಪಾಧ್ಯಕ್ಷ ಎಸ್.ಖಾನ್ ಟಗರಿನ ಕಾಳಗ ಉದ್ದಾಟಿಸಲಿದ್ದಾರೆ. ಮುತ್ತೈದೆಯ ಮಹಿಮೆ ಎಂಬ ನಾಟಕವನ್ನು ಪ್ರದರ್ಶಿಸಲಾಗುವದು, 28 ರಂದು ಕಲ್ಲು ಎತ್ತುವ ಸ್ಪರ್ಧೆ ಇದೆ.. ಹೀಗೆ ಹಲವಾರು ಸ್ಪರ್ಧೆಗಳು ಜರುಗಲಿವೆ.

ಇಂಥ ಅಪರೂಪದ ಜಾತ್ರೆಗೆ ದೂರದ ಊರುಗಳಿಂದ ಭಕ್ತರು ಬರುತ್ತಾರೆ. ನಗರಕ್ಕೆ ಎಲ್ಲ ಕಡೆಗಳಿಂದಲೂ ಬಸ್ಸಿನ ಸೌಕರ್ಯವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT