ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾವೈಕ್ಯದ ಭಾಷ್ಯ ಬರೆದ ರತ್ನಾಪುರಿ ಉತ್ಸವ

Last Updated 13 ಫೆಬ್ರುವರಿ 2012, 9:00 IST
ಅಕ್ಷರ ಗಾತ್ರ

ಹುಣಸೂರು: ಭಾವೈಕ್ಯತೆಗೆ ಹೆಸರಾದ ತಾಲ್ಲೂಕಿನ ರತ್ನಾಪುರಿ ಆಂಜನೇಯಸ್ವಾಮಿ ಜಾತ್ರೆ ಮತ್ತು ಜಮಾಲಮ್ಮ ಬೀಬಿ ಉರುಸ್ ಶನಿವಾರ ರಾತ್ರಿ ಮತ್ತು ಭಾನುವಾರ ವಿಜೃಂಭಣೆಯಿಂದ ನಡೆದವು.

ಶನಿವಾರ ರಾತ್ರಿ ನಡೆದ ಆಂಜನೇಯಸ್ವಾಮಿ ಮಹೋತ್ಸವದಲ್ಲಿ ಎರಡೂ ಕೋಮಿನ ಮುಖಂಡರು ಮತ್ತು ಸ್ಥಳೀಯರು ಸೇರಿ ಉತ್ಸವವನ್ನು ಅದ್ದೂರಿಯಿಂದ ಗ್ರಾಮದ ಪ್ರಮುಖ ರಸ್ತೆಯಲ್ಲಿ ನಡೆಸಿದರು. ಕರ್ನಾಟಕ ಗೃಹ ಮಂಡಳಿ ಅಧ್ಯಕ್ಷ ಜಿ.ಟಿ. ದೇವೇಗೌಡ ಮತ್ತು ವಿಧಾನಪರಿಷತ್ ಸದಸ್ಯ ಎಸ್.ಚಿಕ್ಕಮಾದು ಉತ್ಸವಕ್ಕೆ ಚಾಲನೆ ನೀಡಿದರು. ಕೀಲು ಕುಣಿತ, ದೇವರ ಕುಣಿತ, ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ಹೆಗ್ಗೋಡಿನ ವನಿತಾ ಕಲಾ ಮಹಿಳಾ ಡೊಳ್ಳಿನ ತಂಡದ ವಾದ್ಯ ವೃಂದ ಗಮನ ಸೆಳೆದವು.

ರೂ. 3.5 ಲಕ್ಷ ಬೆಲೆಗೆ ಮಾರಾಟವಾದ ಜೋಡೆತ್ತು ಈ ಬಾರಿಯ ಮೆರವಣಿಗೆಯಲ್ಲಿ ಭಾಗವಹಿಸಿದ್ದವು. ಇಡೀ ಜಾತ್ರೆಯಲ್ಲಿ ಭಾರೀ ಬೆಲೆಗೆ ಮಾರಾಟವಾದ ಈ ಜೋಡೆತ್ತಿನದೇ ಸುದ್ದಿ. ಕೇರಳದ ಸಾಂಸ್ಕೃತಿಕ ಚಂಡೆ ವಾದ್ಯ ತಂಡ ಈ ಬಾರಿಯೂ ಆಂಜನೇಯಸ್ವಾಮಿ ಉತ್ಸವದಲ್ಲಿ ಭಾಗವಹಿಸಿತು.
 
ಕಿರುತೆರೆಯಲ್ಲಿ ಪ್ರಸಾರವಾದ `ಪ್ಯಾಟಿ ಮಂದಿ ಕಾಡಿಗ್ ಬಂದ್ರು~ ರಿಯಾಲಿಟಿ ಶೋನಲ್ಲಿ ಭಾಗವಹಿಸಿದ್ದ ಯುವಕ-ಯುವತಿಯರನ್ನು ಜಾತ್ರೆಯಲ್ಲಿ ಸನ್ಮಾನಿಸಲಾಯಿತು. ಈ ಕಾರ್ಯಕ್ರಮ ಜಾತ್ರೆಗೆ ಸೇರಿದ ಯುವ ಸಮೂಹವನ್ನು ಸೆಳೆಯಿತು. ಆಕಾಶಕ್ಕೆ ಚಿಮ್ಮಿ ಸ್ಫೋಟಿಸುತ್ತಿದ್ದ ಬಾಣ ಬಿರುಸುಗಳಿಂದ ಮೆರವಣಿಗೆ ಕಳೆಗಟ್ಟಿತು. ಕರಿ ಆಕಾಶದಲ್ಲಿ ಬಣ್ಣಬಣ್ಣದ ಹೂಗಳನ್ನು ಚಿಮ್ಮಿಸುತ್ತಿದ್ದ ದೃಶ್ಯ ಮನಮೋಹಕವಾಗಿ ಕಂಡುಬಂದಿತು.

ಜಮಾಲಮ್ಮನವರ ಸಂಭ್ರಮದ ಉರುಸ್
ಭಾನುವಾರ ರಾತ್ರಿ 9 ಗಂಟೆಯಿಂದ ಆರಂಭವಾಗಲಿರುವ ಜಮಾಲಮ್ಮನವರ ಉರುಸ್, ಗಂಧ ಮಹೋತ್ಸವ ಕಾರ್ಯಕ್ರಮ ಸಂಭ್ರಮದಿಂದ ನಡೆದಿವೆ. ಜೀರ್ಣೋದ್ಧಾರಗೊಂಡ ದರ್ಗಾದಲ್ಲಿ ವಿಶೇಷ ಪ್ರಾರ್ಥನೆ ಹಮ್ಮಿಕೊಳ್ಳಲಾಗಿದೆ. ಧರ್ಮ ಗುರುಗಳು ಖುರಾನ್ ಪಠಣ ಮಾಡಲಿದ್ದು, ನಂತರದಲ್ಲಿ ಧಾರ್ಮಿಕ ಸನ್ಯಾಸಿಗಳು ಗ್ರಾಮದಲ್ಲಿ ಮೆರವಣಿಗೆ ತೆರಳಲಿದ್ದಾರೆ.

ಪೊಲೀಸ್ ಇಲಾಖೆ ವಿಶೇಷ ತುಕಡಿ ನಿಯೋಜಿಸಿ ಜಾತ್ರೆಗೆ ಎಲ್ಲಿಯೂ ಚ್ಯುತಿ ಬಾರದಂತೆ ವಿಶೇಷ ಕಾಳಜಿ ವಹಿಸಿದೆ. ಡಿವೈಎಸ್‌ಪಿ ಮುದ್ದುಮಹದೇವಯ್ಯ ಮತ್ತು ಸರ್ಕಲ್ ಇನ್ಸ್‌ಪೆಕ್ಟರ್ ಗಜೇಂದ್ರ ಪ್ರಸಾದ್ ನೇತೃತ್ವ ವಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT