ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾವೈಕ್ಯದ ಸಂಕೇತ ಶಿವ ದೀಪೋತ್ಸವ

Last Updated 9 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಮಂಡ್ಯದಿಂದ ೧೫ ಕಿ.ಮೀ.ದೂರದಲ್ಲಿರುವ ಆಲಕೆರೆ ಗ್ರಾಮದಲ್ಲೀಗ ಶಿವದೀಪದ ವೈಭವ. ಜಾತಿ, ಧರ್ಮಗಳ ಬೇಧವಿಲ್ಲದೆ ಭಾವೈಕ್ಯತೆಯ ಸಂಕೇತವಾಗಿರುವ ಈ ಹಬ್ಬ ಇದೇ 15ರಂದು ನಡೆಯಲಿದ್ದು ಇದಕ್ಕೆ ಗ್ರಾಮ ಸಜ್ಜಾಗಿ ನಿಂತಿದೆ.

ಮಧ್ಯರಾತ್ರಿ ಆಚರಿಸುವ ಈ ಉತ್ಸವದಲ್ಲಿ ದೀಪಗಳದ್ದೇ ಕಾರುಬಾರು. ರಾತ್ರಿ ೧೧ರ ಸಮಯಕ್ಕೆ ಕೀಲಾರ ಗ್ರಾಮಸ್ಥರು ನಂದಿಕಂಬ, ವಾದ್ಯ, ತಮಟೆ ಸಮೇತ ಆಲಕೆರೆ ಗ್ರಾಮದ ಹೊರವಲಯಕ್ಕೆ ಬರುತ್ತಾರೆ. ಆಲಕೆರೆ ಗ್ರಾಮಸ್ಥರು ಅವರನ್ನು ಬರಮಾಡಿಕೊಳ್ಳುತ್ತಾರೆ.

ದೇವರ ಮನೆಯಲ್ಲಿಡಲಾದ ಉತ್ಸವ ಮೂರ್ತಿಗಳನ್ನು ದೇವಾಲಯಕ್ಕೆ ತಂದು ಮೂರು ಸುತ್ತು ಮೆರವಣಿಗೆ ನಡೆದ ನಂತರ ಪ್ರವೇಶದ್ವಾರದ ಮೇಲಿರುವ ನಂದಿ ವಿಗ್ರಹದ ಹತ್ತಿರ ಬಿಳಿ ಬಟ್ಟೆ ಸುಡುತ್ತಾರೆ. ಅದರ ಬೂದಿಯನ್ನು ಪಡೆದುಕೊಳ್ಳಲು ಭಕ್ತರು ಪೈಪೋಟಿಗಿಳಿಯುತ್ತಾರೆ! ನಂತರ ಸಾಲುದೀಪಗಳಿಗೆ ಜ್ಯೋತಿ ಬೆಳಗಿಸುವ ಮೂಲಕ ಶಿವದೀಪೋತ್ಸವಕ್ಕೆ ನಾಂದಿ ಹಾಡಲಾಗುತ್ತದೆ.

ಪುರಾಣ ಐತಿಹ್ಯ
ಮೂರು ಶತಮಾನಗಳ ಈ ಜಾಗ ಗಿಡ-ಗಂಟಿಗಳಿಂದ ಕೂಡಿತ್ತು. ಈ ಗಿಡಗಂಟಿಗಳ ನಡುವೆ ಇರುವ ಹುತ್ತದ ಬಳಿ ಹಸುವೊಂದು ಹಾಲು ಕರೆಯುತ್ತಿತ್ತು. ಅಲ್ಲಿ ಊರಿನ ಗೌಡನಿಗೆ ಶಿವಲಿಂಗ ದೊರೆಕಿತು. ಲಿಂಗ ಇದ್ದ ಸ್ಥಳದಲ್ಲಿ ಚಿಕ್ಕ ಗುಡಿ ನಿರ್ಮಿಸಿ ಪೂಜೆ ಮಾಡಲು ಲಿಂಗಾಯಿತನೊಬ್ಬನನ್ನು ನೇಮಿಸಲಾಯಿತು. ಲಿಂಗಾಯಿತರ ಸಂಖ್ಯೆ ಹೆಚ್ಚಿದಂತೆ ಮೈಸೂರು ಒಡೆಯರ ಕಾಲದಲ್ಲಿ ಶಿವಲಿಂಗದ ಜೊತೆಗೆ ವೀರಭದ್ರ ದೇವರು ಇರುವ ಎರಡು ಗರ್ಭಗೃಹದ ಶಿಲಾದೇವಾಲಯ ನಿರ್ಮಾಣಗೊಂಡಿತು. ದೇಗುಲಕ್ಕೆ ಪ್ರಾಕಾರ, ಮುಖಮಂಟಪ ಹಾಗೂ ಪ್ರವೇಶದ್ವಾರದ ಮೇಲೆ ನಂಬಿಯ ಗಾರೆ ಶಿಲ್ಪ ನಿರ್ಮಾಣವಾಯಿತು. ಗುಡಿ ಇದ್ದ ಕಡೆ ಊರು ತಲೆ ಎತ್ತಿತು. ಆ ಊರಿಗೆ ಹಾಲುಕರೆ, ಹಾಲುಕೆರೆ ಎಂದಾಗಿ ಆಲಕೆರೆ ಎಂದಾಗಿದೆ.

ದೀಪಾವಳಿ ಅಮವಾಸ್ಯೆಯಂದು ದೇಗುಲದ ಮುಂಭಾಗ ಎತ್ತರದ ಕಂಬ ನೆಟ್ಟು ಅದರ ತುದಿಗೆ ಆಕಾಶದೀಪ ಕಟ್ಟಲಾಗುತ್ತದೆ. ಇದು ಮುಂದೆ ಹಬ್ಬ ನಡೆಯುವ ಸೂಚನೆ. ಆಕಾಶದೀಪವನ್ನು ಶಿವದೀಪ ಹಬ್ಬದವರೆಗೂ ಉರಿಸಲಾಗುತ್ತದೆ.

ಆಕಾಶದೀಪ ಕಟ್ಟಿದ ಮೇಲೆ ಆಲಕೆರೆ ಗ್ರಾಮದಲ್ಲಿ ಹಬ್ಬದ ಚಟುವಟಿಕೆ ಪೂರ್ವ ಸಿದ್ಧತೆ ನಡೆಯತೊಡಗುತ್ತದೆ. ೭೦–೮೦ ಅಡಿ ಎತ್ತರದ ಅಡಿಕೆ ಮರಗಳನ್ನು ತಂದು ಚಂದ್ರಮಂಡಲ ನಿರ್ಮಿಸಲಾಗುತ್ತದೆ.  ಚಂದ್ರಮಂಡಲಕ್ಕೆ ಧಾರ್ಮಿಕ ಸಂಕೇತದ ಬಾವುಟಗಳನ್ನು ಹಾಗೂ ಅದರ ನೆತ್ತಿಯ ಮೇಲೆ ಛತ್ರಿಯನ್ನು ಅಳವಡಿಸಿ ವೀರಭದ್ರ ಹಾಗೂ ಬಸವೇಶ್ವರ ಉತ್ಸವ ಮೂರ್ತಿಗಳ ಪ್ರಭಾಳೆಗಳನ್ನಿಟ್ಟು ಹೂವುಗಳಿಂದ ಅಲಂಕರಿಸುತ್ತಾರೆ. ಚಂದ್ರಮಂಡಲವನ್ನು ಗ್ರಾಮದ ಬೀದಿಗಳಲ್ಲಿ ಜನರೇ ಎಳೆದು ಉತ್ಸವ ಆಚರಿಸುತ್ತಾರೆ.

ರಥೋತ್ಸವದ ಸಂದರ್ಭದಲ್ಲಿ ನಂದಿಕಂಬ, ಪಟಪೂಜೆ ಸಮೇತ ಮೆರವಣಿಗೆ ಉತ್ಸವ ಮಾರನೆ ದಿನದ ಬೆಳಗಿನವರೆಗೆ ನಡೆಯುತ್ತದೆ. ಬೆಳಿಗ್ಗೆ ಮಹಾಮಂಗಳಾರತಿ ನಂತರ ಕೀಲಾರ ಗ್ರಾಮಸ್ಥರು ಆಲಕೆರೆಯಿಂದ ಹೋಗುತ್ತಾರೆ. ಗ್ರಾಮದಲ್ಲಿರುವ ಆದಿಶಕ್ತಿ, ಶನಿದೇವರು ಹಾಗೂ ಕಟ್ಟೆಮಾದಪ್ಪ ದೇಗುಲಗಳಲ್ಲೂ ದೀಪೋತ್ಸವವನ್ನು ಆಚರಿಸಲಾಗುತ್ತದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT