ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾಷೆ, ಆಹಾರ ಪದ್ಧತಿ ಮೇಲೆ ನಿರ್ಬಂಧ

Last Updated 24 ಜನವರಿ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: `ಭಾಷೆ ಮತ್ತು ಆಹಾರ ಪದ್ಧತಿ ಮೇಲೆ ನಿರ್ಬಂಧ ಹೇರುವ ಯತ್ನ ಜನ ಸಂಸ್ಕೃತಿಗೆ ಎದುರಾಗುತ್ತಿರುವ ಆತಂಕ~ ಎಂದು ಸಾಹಿತಿ ಫಕೀರ್ ಮಹಮ್ಮದ್ ಕಟ್ಪಾಡಿ ಹೇಳಿದರು.

ರಾಜ್ಯ ಸಮುದಾಯ ಸಮನ್ವಯ ಸಮಿತಿಯು `ಸಂಸ್ಕೃತಿ- ಸಾಮರಸ್ಯ ಸಮುದಾಯ ರಂಗ ಸಂಗಮ~ ಕಾರ್ಯಕ್ರಮದ ಅಂಗವಾಗಿ ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಮಂಗಳವಾರ ಏರ್ಪಡಿಸಿದ್ದ `ಜನ ಸಂಸ್ಕೃತಿಗಾಗಿ ಹೊಸ ಚಳವಳಿ~ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.

`ಗೋಸಂರಕ್ಷಣಾ ಮಸೂದೆ ಮೂಲಕ ಬಿಜೆಪಿ ಆಡಳಿತ ರಾಜ್ಯಗಳಲ್ಲಿ ಒಂದು ಸಮುದಾಯದ ಆಹಾರ ಪದ್ಧತಿಯ ಮೇಲೆ ನಿರ್ಬಂಧ ವಿಧಿಸಲು ಯತ್ನಿಸುತ್ತಿದೆ. ಮಧ್ಯಪ್ರದೇಶದಲ್ಲಿ ರೂಪಿಸಿರುವ ಮಸೂದೆಗೆ ರಾಷ್ಟ್ರಪತಿ ಅವರ ಒಪ್ಪಿಗೆ ಸಿಕ್ಕಿದೆ. ಒಂದೊಮ್ಮೆ ರಾಜ್ಯದಲ್ಲೂ ಮಸೂದೆಗೂ ಒಪ್ಪಿಗೆ ಸಿಗಬಹುದು. ಆಹಾರವನ್ನೂ ಇನ್ನೊಬ್ಬರ ಮರ್ಜಿಯಲ್ಲಿಡುವ ಯತ್ನ ಒಳ್ಳೆಯದಲ್ಲ~ ಎಂದು ಅವರು ಅಭಿಪ್ರಾಯಪಟ್ಟರು.

`ಭಾಷೆ ನಮ್ಮ ಸಂಸ್ಕೃತಿಯ ಭಾಗ. ಆದರೆ ಇನ್ಫೋಸಿಸ್‌ನ ನಾರಾಯಣಮೂರ್ತಿ ಅವರು ಕೇವಲ ಕಾರ್ಪೋರೆಟ್ ಮಂದಿಯನ್ನು ಮನಸ್ಸಿನಲ್ಲಿಟ್ಟುಕೊಂಡು `ಕಾರು ಚಾಲಕನ ಮಗನೂ ಇಂಗ್ಲಿಷ್ ಕಲಿಯಬೇಕು~ ಎಂದು ಹೇಳುತ್ತಾರೆ. ಅಮೆರಿಕದ ಆರ್ಥಿಕತೆ ಕ್ಷೀಣಿಸಿ, ಭವಿಷ್ಯದಲ್ಲಿ ಚೀನಾ ದೇಶ ಆರ್ಥಿಕವಾಗಿ ಬಲಿಷ್ಠವಾದರೆ ಚೀನಿ ಭಾಷೆಯನ್ನು ಕಲಿಯಬೇಕು ಎಂದು ಅವರು ಹೇಳಬಹುದು. ಇದು ಸರಿಯಲ್ಲ~ ಎಂದು ಅವರು ಹೇಳಿದರು.

`ಸಾಹಿತಿ ಡಾ.ಯು.ಆರ್. ಅನಂತಮೂರ್ತಿ ಅವರು ಹೇಳಿರುವಂತೆ ಸಂಸ್ಕೃತಿ ಎಂಬುದು ಹಲವು ಬಣ್ಣ ಮತ್ತು ದಾರಗಳ ನೇಯ್ಗೆ. ಎಲ್ಲದಕ್ಕೂ ತನ್ನೇ ಆದ ಬಣ್ಣ ಮತ್ತು ಆಕಾರವಿದ್ದು ಎಲ್ಲವೂ ಮುಖ್ಯವಾಗುತ್ತದೆ. ಇದನ್ನು ಎಲ್ಲರೂ ಮನಗಾಣಬೇಕು~ ಎಂದು ಅವರು ಹೇಳಿದರು.
 
ಕೆಲವರು ಏಕ ಸಂಸ್ಕೃತಿ ಬೇಕು ಎನ್ನುತ್ತಾರೆ, ಇನ್ನೂ ಕೆಲವರು ಬಹು ಸಂಸ್ಕೃತಿ ಬೇಕೆನ್ನುತ್ತಾರೆ. ಒಂದೇ ಧರ್ಮಕ್ಕೆ ಸೇರಿದವರು ಸಹ ಭೌಗೋಳಿಕ ಭಿನ್ನತೆಯಲ್ಲಿ ವಿಭಿನ್ನ ಆಚರಣೆಗಳನ್ನು ಪಾಲಿಸುತ್ತಾರೆ, ಬೇರೆ ಬೇರೆ ಪದ್ಧತಿಗಳನ್ನು ಅನುರಿಸುತ್ತಾರೆ ಎಂಬುದನ್ನು ಮನಸ್ಸಿನಲ್ಲಿಟ್ಟುಕೊಳ್ಳಬೇಕು. ಆದ್ದರಿಂದ ಏಕತ್ವ ಸಂಸ್ಕೃತಿ ಹೇರುವುದು ಸರಿಯಲ್ಲ~ ಎಂದು ತಿಳಿಸಿದರು.

ಬೆಂಗಳೂರು ವಿಶ್ವವಿದ್ಯಾಲಯದ ಇತಿಹಾಸ ವಿಭಾಗದ ಸಹ ಪ್ರಾಧ್ಯಾಪಕಿ ಡಾ. ಎಂ.ವಿ. ವಸು, ಲೇಖಕ ಎನ್. ವಿದ್ಯಾಶಂಕರ್, ಬಿ. ಗಂಗಾಧರಮೂರ್ತಿ, ನಾಟಕಕಾರ ಡಾ.ಕೆ.ವೈ. ನಾರಾಯಣಸ್ವಾಮಿ, ವಿಮರ್ಶಕ ಪ್ರೊ. ಎಚ್.ಎಸ್. ರಾಘವೇಂದ್ರ ರಾವ್ ಮತ್ತಿತರರು ಉಪಸ್ಥಿತರಿದ್ದರು.

ಪ್ರತಿಭಟಿತ ಕಾವ್ಯ ಪ್ರಕಾರ ತತ್ವಪದ
ಬೆಂಗಳೂರು:
`ಪ್ರಭುತ್ವ ಹಾಗೂ ಪುರೋಹಿತ ಶಾಹಿಯನ್ನು ತನ್ನ ಸೃಷ್ಟಿಯ ಮೂಲಕವೇ ಪ್ರತಿಭಟಿಸಿದ ಕಾವ್ಯ ಪ್ರಕಾರ ತತ್ವಪದ. ವಚನ ಮತ್ತು ಕೀರ್ತನೆಗಳಿಗೆ ಸಿಕ್ಕ ಪ್ರಚಾರ ತತ್ವಪದಗಳಿಗೆ ಸಿಗಲಿಲ್ಲ. ಹೀಗಾಗಿ ತತ್ವಪದಗಳು ಸಾಹಿತ್ಯ ಚಳವಳಿಯಲ್ಲಿ ಹಿಂದುಳಿದವು~ ಎಂದು ಕವಿ ಪ್ರೊ.ಎಸ್.ಜಿ.ಸಿದ್ಧರಾಮಯ್ಯ ಹೇಳಿದರು.

ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಸೋಮವಾರ ಕರ್ನಾಟಕ ರಾಜ್ಯ ಸಮುದಾಯ ಸಮನ್ವಯ ಸಮಿತಿ `ಸಂಸ್ಕೃತಿ ಸಾಮರಸ್ಯ ಸಮುದಾಯ ರಂಗ  ಸಂಗಮ~ದ ಅಂಗವಾಗಿ ಆಯೋಜಿಸಿದ್ದ ರಾಷ್ಟ್ರೀಯ ಕವಿಗೋಷ್ಠಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

`ತಮ್ಮ ಮೌಲ್ಯಗಳ ಮೂಲಕ ಜೀವನದ ನೆಲಮೂಲದ ದನಿಗಳಾಗಿ ಹೊಮ್ಮಿದಂಥವು ತತ್ವಪದಗಳು. ತತ್ವಪದಗಳನ್ನೇ ತಮ್ಮ ಮಾರ್ಗವಾಗಿಸಿಕೊಂಡ ಕಡಕೋಳು ಮಡಿವಾಳಪ್ಪ ಅವುಗಳ ಮೂಲಕವೇ ಜೀವನದ ಹಲವು ಸತ್ಯಗಳನ್ನು ಶೋಧಿಸಲು ಪ್ರಯತ್ನಿಸಿದರು~ ಎಂದು ಅವರು ನುಡಿದರು.

ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ಕವಿ ಮೂಡ್ನಾಕೂಡು ಚಿನ್ನಸ್ವಾಮಿ,    `ದೇಶದಲ್ಲಿ ಎಲ್ಲವೂ ಭ್ರಷ್ಟಗೊಳ್ಳುತ್ತಿರುವ ಪ್ರಸ್ತುತ ಸಂದರ್ಭದಲ್ಲಿ ಪ್ರಾಮಾಣಿಕವಾಗಿ ಉಳಿದಿರುವುದು ಕಾವ್ಯ ಮಾತ್ರ. ಇಂದಿನ ದಿನಗಳಲ್ಲಿ ಕವಿಗಳೂ ಪ್ರಾಮಾಣಿಕರಾಗಿದ್ದಾರೆ ಎಂದು ಹೇಳಲು ಸಾಧ್ಯವಿಲ್ಲ.

ಕವಿಗೋಷ್ಠಿಯಲ್ಲಿ ಮೂಡ್ನಾಕೂಡು ಚಿನ್ನಸ್ವಾಮಿ, ಪ್ರೊ.ಎಸ್.ಜಿ.ಸಿದ್ಧರಾಮಯ್ಯ, ಎಚ್.ಎಲ್.ಪುಷ್ಪಾ, ಎಲ್.ಹನುಮಂತಯ್ಯ, ಡಾ.ಕೆ.ಷರೀಫಾ ಕನ್ನಡ ಕವಿತೆಗಳನ್ನು, ಟಿ.ವಿ.ಸುಬ್ಬರಾವ್ ಮತ್ತು ರಾಜೇಶ್ವರಿ ತೆಲುಗು ಕವಿತೆಗಳನ್ನು, ಮಾಹಿಲ್ ಮನ್ಸೂರ್ ಉರ್ದು ಕವಿತೆಯನ್ನೂ ಹಾಗೂ ಡಾ.ಪ್ರಭಾಶಂಕರ ಪ್ರೇಮಿ ಮತ್ತು ಕವಿತಾ ಹಿಂದಿ ಕವಿತೆಗಳನ್ನೂ ವಾಚಿಸಿದರು.

ಕವಿಗೋಷ್ಠಿಯ ನಂತರ ಕುಂದಾಪುರ ಸಮುದಾಯ ತಂಡದಿಂದ `ಕುಲಂ~ ನಾಟಕ ಪ್ರದರ್ಶನ ನಡೆಯಿತು. ಕರ್ನಾಟಕ ರಾಜ್ಯ ಸಮುದಾಯ ಸಮನ್ವಯ ಸಮಿತಿಯ ಅಧ್ಯಕ್ಷ ಆರ್.ಕೆ.ಹುಡ್ಗಿ, ಪ್ರಧಾನ ಕಾರ್ಯದರ್ಶಿ ಟಿ.ಸುರೇಂದ್ರ ರಾವ್ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT