ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾಷೆ ಉಳಿದರೆ ಸಂಸ್ಕೃತಿ ಉಳಿವು

Last Updated 1 ಫೆಬ್ರುವರಿ 2011, 8:50 IST
ಅಕ್ಷರ ಗಾತ್ರ

ನಾಪೋಕ್ಲು: ಭಾಷೆ ಉಳಿದರೆ ಮಾತ್ರ ಯಾವುದೇ ಸಂಸ್ಕೃತಿ ಉಳಿಯಲು ಸಾಧ್ಯ. ಭಾಷೆ ಬೆಳೆದರೆ ಆ ಭಾಷೆಯನ್ನಾಡುವ ಜನಾಂಗ ಬೆಳೆಯುತ್ತದೆ. ಭಾಷೆಗೆ ವಿಶೇಷವಾದ ಒತ್ತು ನೀಡಿದರೆ ಮಾತ್ರ ಜನಾಂಗದ ಅಸ್ತಿತ್ವ ಸಾಧ್ಯ. ಭಾಷೆ ನಶಿಸಿ ಹೋದಲ್ಲಿ ಸಂಸ್ಕೃತಿ ಕೂಡ ವಿನಾಶವಾಗುತ್ತದೆ. ಈ ಹಿನ್ನೆಲೆಯಲ್ಲಿ ಕೊಡವ ಸಾಹಿತ್ಯ ಅಕಾಡೆಮಿ ಭಾಷೆ ಹಾಗೂ ಸಂಸ್ಕೃತಿಯ ಉಳಿವಿಗೆ ಪೂರಕವಾದ ಹೆಚ್ಚಿನ ಚಟುವಟಿಕೆಗಳನ್ನು ಹಮ್ಮಿಕೊಳ್ಳಬೇಕು ಎಂದು ಜಿ.ಪಂ. ಮಾಜಿ ಸದಸ್ಯ ಮನುಮುತ್ತಪ್ಪ ಸಲಹೆ ಮಾಡಿದರು.

ಇಲ್ಲಿನ ಕೊಡವ ಸಮಾಜದಲ್ಲಿ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಆಶ್ರಯದಲ್ಲಿ ನಾಪೋಕ್ಲು ಕೊಡವ ಸಮಾಜದ ಸಹಕಾರದೊಂದಿಗೆ ಸೋಮವಾರ ಏರ್ಪಡಿಸಲಾಗಿದ್ದ ಮಡಿಕೇರಿ ತಾಲ್ಲೂಕು ಕೊಡವ ಸಾಂಸ್ಕೃತಿಕ ಮೇಳದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಕೊಡಗು ಪುಟ್ಟ ಜಿಲ್ಲೆಯಾದರೂ ಇಲ್ಲಿನ ಜನಾಂಗದ ಆಚಾರ ವಿಚಾರ, ಭಾಷೆ, ಸಂಸ್ಕೃತಿ, ಕಲೆ ಎಲ್ಲವೂ ವಿಶಿಷ್ಟವಾದವು. ಕೊಡವ ಸಾಹಿತ್ಯ ಅಕಾಡೆಮಿಯು ವೈವಿಧ್ಯಮಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರ ಮೂಲಕ ಭಾಷೆ, ಸಂಸ್ಕೃತಿ, ಕಲೆಗಳ ಉಳಿವಿಗಾಗಿ ಶ್ರಮಿಸುತ್ತಿದೆ. ಪ್ರಪಂಚದ ಸುಮಾರು ಎಪ್ಪತ್ತಕ್ಕೂ ಅಧಿಕ ಭಾಷೆಗಳು ವಿನಾಶದ ಅಂಚಿಗೆ ತಲುಪಿದ್ದು, ರಾಜ್ಯದ ಕೊಂಕಣಿ ಮತ್ತು ಕೊಡವ ಭಾಷೆ ನಶಿಸುವ ಹಂತದಲ್ಲಿವೆ. ಕೊಡವ ಜನಾಂಗದವರು ತಮ್ಮ ಮಾತೃ ಭಾಷೆಗೆ ಆದ್ಯತೆ ನೀಡುವುದರ ಮೂಲಕ ಜನಾಂಗದ ಅಭಿವೃದ್ಧಿಗೆ ಶ್ರಮಿಸಬೇಕು’ ಎಂದು ಕರೆ ನೀಡಿದರು.

‘ಸಮಾಜದಲ್ಲಿ ಮೇಲಕ್ಕೆ ಬರುವ ಧಾವಂತದಲ್ಲಿ ಭಾಷೆಯನ್ನು ಕಡೆಗಣಿಸಬಾರದು’ ಎಂದು ಅವರು ಸಲಹೆ ಮಾಡಿದರು.ಕಾಫಿ ಮಂಡಳಿ ಮಾಜಿ ಉಪಾಧ್ಯಕ್ಷ ಡಾ.ಸಣ್ಣುವಂಡ ಕಾವೇರಪ್ಪ ಮಾತನಾಡಿ, ‘ಕೊಡವರ ಆಚಾರ- ವಿಚಾರ ಇಡೀ ವಿಶ್ವದಲ್ಲೇ ಮಾನ್ಯತೆ ಪಡೆದಿದೆ. ಕೊಡವ ಸಂಸ್ಕೃತಿ ವಿನಾಶದ ಹಾದಿಯಲ್ಲಿರುವಾಗ ಸಂಸ್ಕೃತಿ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಕೊಡವ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ ವಿಶೇಷ ಪ್ರಯತ್ನ ಪಡುತ್ತಿದೆ. ಮಕ್ಕಳಿಗೆ ಚಿಕ್ಕಂದಿನಿಂದಲೇ ಕೊಡವ ಭಾಷೆಯ ಬಗ್ಗೆ ಅಭಿಮಾನ ಮೂಡಿಸುವಂತಾಗಬೇಕು’ ಎಂದರು.

‘ಮುಂದಿನ ಗಣರಾಜ್ಯೋತ್ಸವ ಸಂದರ್ಭದಲ್ಲಿ ದೆಹಲಿಯಲ್ಲಿ ನಡೆಯುವ ಮೆರವಣಿಗೆಯಲ್ಲಿ ರಾಜ್ಯ ಸರ್ಕಾರ ಹಾಗೂ ಕೊಡವ ಸಾಹಿತ್ಯ ಅಕಾಡೆಮಿ ವತಿಯಿಂದ ಕೊಡವ ಜನಾಂಗದ ಸಂಸ್ಕೃತಿಯನ್ನು ಬಿಂಬಿಸುವ ಸ್ತಬ್ಧ ಚಿತ್ರವನ್ನು ಪ್ರದರ್ಶಿಸವಂತಾಗಬೇಕು’ ಎಂದು ಸಲಹೆ ಮಾಡಿದರು.

ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷೆ ಐಮುಡಿಯಂಡ ರಾಣಿ ಮಾಚಯ್ಯ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಇದಕ್ಕೂ ಮುನ್ನ ನಾಪೋಕ್ಲು ಕೊಡವ ಸಮಾಜದ ಅಧ್ಯಕ್ಷ ಮಣವಟ್ಟೀರ ಬಿ. ಮಾಚಯ್ಯ ತೆಂಗಿನಕಾಯಿಗೆ ಗುಂಡು ಹೊಡೆಯುವುದರ ಮೂಲಕ ಕೊಡವ ಸಾಂಸ್ಕೃತಿಕ ಮೇಳಕ್ಕೆ ಚಾಲನೆ ನೀಡಿದರು. ಬೊಳಕಾಟ್ ಉಮ್ಮತ್ತಾಟ್, ಕೋಲಾಟ್, ಕೊಡವಪಾಟ್ ಸೇರಿದಂತೆ ವಿವಿಧ ಸ್ಪರ್ಧೆಗಳು ಜರುಗಿದವು.

ಕೊಡವ ಸಮಾಜದ ಉಪಾಧ್ಯಕ್ಷ ಬಿದ್ದಾಟಂಡ ರಮೇಶ್ ಚಂಗಪ್ಪ ಅಧ್ಯಕ್ಷತೆಯಲ್ಲಿ ವಿಚಾರಗೋಷ್ಠಿ ನಡೆಯಿತು. ಕೊಡವ ಅಕಾಡೆಮಿಯ ಮಾಜಿ ಅಧ್ಯಕ್ಷ ಬಾಚರಣಿಯಂಡ ಅಪ್ಪಣ್ಣ ಹಾಗೂ ಮೂವೇರ ರೇಖಾ ಪ್ರಕಾಶ್ ವಿಚಾರ ಮಂಡಿಸಿದರು. ಬಾಚರಣಿಯಂಡ ರಾಣು ಅಪ್ಪಣ್ಣ ಸ್ವಾಗತಿಸಿದರು. ನೆಲ್ಲಮಕ್ಕಡ ಸಾಗರ್ ಪ್ರಾರ್ಥಿಸಿದರು. ಮಡೆಯಂಡ ವಿಜಯ್ ಬೆಳ್ಯಪ್ಪ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT