ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾಷೆ: ಕನ್ನಡಿ ಮತ್ತು ಬಲೆ

Last Updated 7 ಜನವರಿ 2012, 19:30 IST
ಅಕ್ಷರ ಗಾತ್ರ

ನನಗೆ ಆಗ ಆರು ವರ್ಷವೋ ಏಳು ವರ್ಷವೋ ಆಗಿದ್ದಿರಬಹುದು. ಮದ್ದೂರಿನಲ್ಲಿದ್ದೆವು. ನಮ್ಮಪ್ಪನ ಜೊತೆಯಲ್ಲಿ ಸಂಜೆಯ ಹೊತ್ತು ವಾಕಿಂಗ್ ಹೋಗುತಿದ್ದೆ. ಈಗ ಇರುವ ಪ್ರವಾಸಿ ಮಂದಿರದ ಹಿಂಭಾಗ. ಅಲ್ಲೊಂದು ದೊಡ್ಡ ನೀರಿನ ಟ್ಯಾಂಕ್ ಇತ್ತು. ವಾಕಿಂಗ್ ಹೋಗುತ್ತಾ ಅಪ್ಪ ದಿನಾ ಕೆಲವು ಹೊಸಪದಗಳನ್ನು ಹೇಳಿ ಅದರ ಅರ್ಥ ತಿಳಿಸುತಿದ್ದರು. ಸೂರ್ಯ ಮುಳುಗುತಿದ್ದ. ನಾನು ಆಟವಾಡಲು ಹೋಗುತಿದ್ದ ಮರಳು ಗುಡ್ಡೆ ಅಲ್ಲೇ ಇತ್ತು. ಆಕಾಶದಲ್ಲಿ ಆಗಿನ್ನೂ ನನಗೆ ಹೆಸರು ಗೊತ್ತಿರದ ಬಣ್ಣಗಳಿದ್ದವು. ಅಪ್ಪ ಅವತ್ತು ಮೂರು ಪದಗಳನ್ನು ಹೇಳಿದ್ದರು- ಮಾತಾ ಅಂದರೆ ಅಮ್ಮ, ಪಿತಾ ಅಂದರೆ ಅಪ್ಪ, ಜಾಲ ಅಂದರೆ ಬಲೆ. ಹತ್ತಿರ ಹತ್ತಿರ ಅರುವತ್ತು ವರ್ಷಗಳಾಗುತ್ತ ಬಂದರೂ ಅವರು ಹೇಳಿಕೊಟ್ಟ ಈ ಮೂರು ಪದಗಳ ಚಿತ್ರ ಮನಸ್ಸಿನಲ್ಲೇ ಕೂತಿದೆ.

ಅಪ್ಪ ಅಮ್ಮ ಅನ್ನುವುದು ಸಂಬಂಧಗಳ ಹೆಸರು. ಬೇಕು ಎಂದರೂ ಬೇಡ ಎಂದರೂ ಇಲ್ಲವಾಗದ ಸಂಬಂಧಗಳು ಬದುಕಿನುದ್ದಕ್ಕೂ ಬಲೆಯಾಗಿ ಬಂಧಿಸುತ್ತವೆ. ಸಂಬಂಧಗಳ ಬಗ್ಗೆ ಪ್ರೀತಿ ಗೌರವ ಉಳಿಸಿಕೊಂಡೂ ಸ್ವತಂತ್ರವಾಗಿ ಇರಲು ಹೆಣಗುವಂತೆ ಮಾಡುತ್ತವೆ. ಈ ಸಂಬಂಧಗಳ ಹೆಸರಿನ ಜೊತೆಗೆ ನಾನಾಡುವ ಭಾಷೆ, ಭಾಷೆಯ ಜನ ಕಲ್ಪಿಸಿರುವ ಭಾವದ ಪ್ರಭಾವಳಿಯ ಕಾರಣದಿಂದ ಹಾಗಾಗುತ್ತದೆಯೋ? ಸಂಬಂಧಗಳಲ್ಲ, ಯಾವುದೇ ಸಂಬಂಧದ ಹೆಸರಿನ ಜೊತೆಗೆ ಹುಟ್ಟುವ ನಿರೀಕ್ಷೆ, ಅಪೇಕ್ಷೆ, ಬಯಕೆ, ಉದಾಸೀನ, ಸಿಟ್ಟು, ಕೋಮಲತೆ ಇತ್ಯಾದಿಗಳು ಬಲೆಯಂತೆ ನನ್ನನ್ನು, ನಮ್ಮನ್ನು ಸುತ್ತುವರಿದಿವೆಯೋ?

ಭಾಷೆ ಅನ್ನುವುದು ನಮ್ಮನ್ನು ಈ ಲೋಕದ ಗೂಟಕ್ಕೆ ಬಿಗಿದು ಕಟ್ಟುವ ಹಗ್ಗ. ನಾವಾಡುವ ಒಂದೊಂದು ಮಾತಿನಲ್ಲೂ ಆ ಭಾಷೆಯನ್ನಾಡುವ, ಆಡುತಿದ್ದ ಎಲ್ಲ ಜನರೂ ಗುಪ್ತವಾಗಿದ್ದೇ ಇರುತ್ತಾರೆ. `ಹೆಂಗಸರ ಬುದ್ಧಿ ಮೊಳಕಾಲ ಕೆಳಗೆ~ ಅನ್ನುವ ಗಾದೆಯನ್ನೇನಾದರೂ ಬಳಸಿದರೆ ಆ ಗಾದೆಯನ್ನು ಕಟ್ಟಿದ, ಬಳಸಿ ಚಾಲ್ತಿಗೆ ತಂದ ಎಲ್ಲ ಜನರ ಮನೋಧರ್ಮಗಳೂ ಮನಸ್ಸಿನಲ್ಲಿದೆಯೆಂದೇ ಅರ್ಥ. ಎಂದೋ ಹುಟ್ಟಿದ ಕಟ್ಟಿದ ಅರ್ಥಗಳೆಲ್ಲ ಇರುವ ಮ್ಯೂಸಿಯಂ ನಮ್ಮ ಮನಸ್ಸಿನೊಳಗೆ ಇರುವ ಭಾಷೆ. ನಾವಾಡುವ ಮಾತಿನ ಅರ್ಥ ಏನಾಗಬಹುದು ಅನ್ನುವ ವಿವೇಕ, ಎಚ್ಚರ ಮೂಡದಿದ್ದರೆ ಭಾಷೆ ನಮ್ಮನ್ನು ಹೇಗೆ ಬಿಗಿದು ಕಟ್ಟಿದೆ ಅನ್ನುವುದು ತಿಳಿಯುವುದೇ ಇಲ್ಲ.

ಮದ್ದೂರು ಅಂದೆ. ಅದು `ನಿಜವಾದ~ ಮದ್ದೂರಲ್ಲ, ನನ್ನ ಮನಸ್ಸಿನೊಳಗೆ ಇರುವ ಊರು. ಹಾಗೆ ನೋಡಿದರೆ ನಾವು ಯಾವ ಊರನಲ್ಲೂ ನಿಜವಾಗಿ ಇರುವುದೇ ಇಲ್ಲ. ನಮ್ಮಳಗೆ ಊರು ಊರಿಕೊಂಡು ಇರುತ್ತದೆ ಅಷ್ಟೆ. ಮದ್ದೂರು, ಶಿವಮೊಗ್ಗ, ಹಂಪಿ, ಮೈಸೂರು ಇತ್ಯಾದಿಗಳೆಲ್ಲ ಅಲ್ಲಲ್ಲಿ ನನಗೆ ಯಾರ ಯಾರೊಡನೆ ಸಂಬಂಧ ಹುಟ್ಟಿತೋ, ನಾನು ಅವರು ಏನೇನು ಮಾತಾಡಿಕೊಂಡೆವೋ ಅಥವಾ ಮಾತಾಡಿಕೊಳ್ಳಲಿಲ್ಲವೋ, ಏನೇನು ಮಾಡಿದೆವೋ ಅಥವ ಮಾಡಲಿಲ್ಲವೋ ಅದೆಲ್ಲ ಮನಸ್ಸಿನಲ್ಲಿ ಊರಿಕೊಂಡು ಊರಿನ ಚಿತ್ರ ಮೂಡಿಕೊಂಡಿರುತ್ತದೆ, ಸಂಬಂಧಗಳ ಜಾಲ ಸೃಷ್ಟಿಯಾಗುತ್ತದೆ.

`ಮಗು ಹುಟ್ಟುತಿದ್ದಂತೆ ಭಾಷೆಯೊಡನೆ ವ್ಯವಹಾರ ಶುರುವಾಗುತ್ತದೆ, ಭಾಷೆ ದತ್ತವಾದದ್ದು, ಹುಟ್ಟುವ ಮೊದಲೇ ಮಗು ಭಾಷೆಯ ಬಲೆಗೆ ಸಿಕ್ಕಿಬಿದ್ದಿರುತ್ತದೆ~.

ಇದು ಜಾಕ್ವೆಸ್ ಲಕಾನ್ ಎಂಬ ಫ್ರೆಂಚ್ ಮನೋವಿಜ್ಞಾನಿ ಮತ್ತು ಮನೋವಿಶ್ಲೇಷಕನ (1901-1981) ಮಾತು. ಅವನ ಬಳಿ ಚಿಕಿತ್ಸೆಗೆ ಬಂದವರು ಹೇಳಿಕೊಳ್ಳುತಿದ್ದ ಮಾತುಗಳನ್ನು ಕೇಳುತ್ತಾ ಮಾತಿನಲ್ಲಿ ಹೇಳಲಾಗುವ ಸತ್ಯ `ಸತ್ಯ~ವೇ ಅಲ್ಲ. ಸತ್ಯವು ಹೇಳಬಹುದಾದ ಅಥವ ಹೇಳಲು ಬಯಸುವ ಮಾತಿನ ಜಟಿಲವಾದ ಪದರಗಳ ಹಿಂದೆ ಎಲ್ಲೋ ಮರೆಯಾಗಿಬಿಟ್ಟಿರುತ್ತದೆ, ಅದು ಹೇಳುವವರಿಗೂ, ಕೇಳುವವರಿಗೂ ದಕ್ಕುವುದೇ ಇಲ್ಲ. ಇರುವುದು ಕೇವಲ ಭಾಷೆಯ ಕಥನವಷ್ಟೇ ಅಂದುಕೊಂಡ ಲಕಾನ್. 

ಅವನ ಯೋಚನೆಗಳು ಮನೋವಿಶ್ಲೇಷಣೆಗೂ ಭಾಷೆಯ ಅಧ್ಯಯನಕ್ಕೂ ತಿರುವು ತಂದವು. ಕನ್ನಡಿಯಲ್ಲಿ ಕಂಡದ್ದು, ಮಾತಿನಲ್ಲಿ ಬಂದದ್ದು ಮತ್ತು ಮಾತಿಗೆ ದಕ್ಕದ್ದು ಅನ್ನುವ ಮೂರು ವಲಯಗಳನ್ನು ಊಹಿಸಿಕೊಂಡ ಲಕಾನ್.

ಹದಿನೆಂಟು ತಿಂಗಳಾಗುವವರೆಗೆ ಕೂಸಿಗೆ ಕಾಲವೂ ಇಲ್ಲ. ದೇಶವೂ ಇಲ್ಲ. ಇರುವಲ್ಲಿ ಸುಮ್ಮನೆ ಇರುವುದಷ್ಟೇ ಅದರ ಸತ್ಯ. ಆದರೂ ಕೂಸು ಸುತ್ತಲಿನವರ ಮಾತಿನೊಳಗಾಗಿಯೇ ಬೆಳೆಯುತ್ತಾ ಇರುತ್ತದೆ, ಬೇರೆಯವರ ಮಾತು ಅದಕ್ಕೆ ಅರ್ಥವಾಗದಿದ್ದರೂ, ಅದು ಕೇವಲ ಶಬ್ದಗಳ ದನಿಯ ಏರಿಳಿತ ಮಾತ್ರವಾಗಿದ್ದರೂ. ಕೂಸು ತನ್ನನ್ನು ತಾನು ಇಡಿಯಾಗಿ ನೋಡಿಕೊಳ್ಳಲಾಗುವುದು ಕನ್ನಡಿಯಲ್ಲಿ ಮಾತ್ರ. ಕನ್ನಡಿಯಲ್ಲಿ ಕಂಡದ್ದು `ನಾನು~ ಅನ್ನುವುದು ಕೂಸಿನ ಮನಸ್ಸಿನಲ್ಲಿ ನಿಧಾನವಾಗಿ ಊರಿಕೊಳ್ಳಲು ತೊಡಗುತ್ತದೆ.

ತಾಯ ಒಡಲಿಂದ ಬೇರ್ಪಟ್ಟ ಜೀವ ತಾನು ಇತರ ಎಲ್ಲರಿಗಿಂತ ಬೇರೆ ಅನ್ನುವುದನ್ನು ಗುರುತಿಸಲು ಕಲಿಯುವುದೇ ಒಂದು ಬೆರಗು. ಮಲಗಿರುವ ಹಾಸು, ಕಾಣುವ ಆಟಿಕೆ, ಅಲ್ಲೇನೋ ಕಿಟಕಿಯಲ್ಲಿ ಹಾರಿ ಬಂದು ಕೂತದ್ದು, ತನ್ನನ್ನು ಎತ್ತಿ ಆಡಿಸುವವರು ಕಾಣುವುದೆಲ್ಲ ತನಗಿಂತ ಬೇರೆ, ಒಂದೊಂದೂ ಪ್ರತ್ಯೇಕ ಪ್ರತ್ಯೇಕವಾಗಿ ಇವೆ. ಹಾಗಾದರೆ ನಾನು? ಅದೇ ಕನ್ನಡಿಯಲ್ಲಿ ಕಂಡದ್ದೇ ನಾನು. ನಾನು ಹೀಗಿದ್ದೇನೆ, ನಾನು ಕೂಡ ಕಣ್ಣಿಗೆ ಕಾಣುವ ಎಲ್ಲಕ್ಕಿಂತ ಬೇರೆಯಾಗಿ ಇದ್ದೇನೆ ಅನ್ನುವ ಅರಿವು ಕನ್ನಡಿಯಲ್ಲಿ ಕಂಡ ಇಡಿತನದ ಬಿಂಬದ ಮೂಲಕ ಕೂಸಿನ ಮನಸ್ಸಿನಲ್ಲಿ ಮೂಡುತ್ತದೆ. ನಾನು ಬೇರೆ ಉಳಿದೆಲ್ಲವೂ ಬೇರೆ ಬೇರೆ ಅನ್ನುವ ಕಾಲ್ಪನಿಕ ಬಿಂಬಗಳ ವ್ಯವಸ್ಥೆಗೆ ಒಳಪಡುತ್ತದೆ. ಮನಸ್ಸಿನಲ್ಲಿ ಊರಿಕೊಳ್ಳುವ ನಾನು ಅನ್ನುವ ಬಿಂಬ ಮತ್ತು ಜೈವಿಕವಾಗಿ ಇರುವ ನಾನು ಈ ದ್ವಂದ್ವ, ಅದು ದ್ವಂದ್ವ ಅನ್ನುವುದು ಗೊತ್ತಾಗುವ ಮೊದಲೇ ಮನಸ್ಸಿನಲ್ಲಿ ಮೂಡಿ ಬದುಕಿನುದ್ದಕ್ಕೂ ತೊಡಕೋ, ಸವಾಲೋ, ಸಮಸ್ಯೆಯೋ ಆಗುತ್ತದೆ. ಇದು ನಾನತ್ವ ಮತ್ತು ನಾನಲ್ಲದ ಇತರ ಅನ್ನುವ ದ್ವಂದ್ವ ಮನುಷ್ಯನ ಮನಸ್ಸಿನಲ್ಲಿ ಮೂಡುವ ಹಂತ.

ನಾನೇ ಬೇರೆ, ಈ ಲೋಕದಲ್ಲಿರುವ ಎಲ್ಲವೂ ನನಗಿಂತ ಬೇರೆ ಅನ್ನುವುದನ್ನು ಮತ್ತಷ್ಟು ಗಟ್ಟಿಮಾಡುವುದು ಸುತ್ತಲಿನವರು ಆಡುವ ಭಾಷೆ. ಭಾಷೆ ತುಂಬ ಪ್ರಬಲವಾದ ಸಾಂಕೇತಿಕ ವ್ಯವಸ್ಥೆ. ಈ ವ್ಯವಸ್ಥೆ ಅನ್ಯ, ಇತರ ಅನ್ನುವುದನ್ನು ಒಳಗೊಂಡಿದೆ ಅನ್ನುತ್ತಾನೆ ಲಕಾನ್. ಮಾತು ಉತ್ತರವನ್ನು ಬಯಸುತ್ತದೆ, ಏನನ್ನೋ ಕೋರುತ್ತದೆ. ಉತ್ತರ ಕೊಡುವವರು, ಕೋರಿಕೆ ಈಡೇರಿಸುವವರು ನನಗಿಂತ ಅನ್ಯ, ನನಗಿಂತ ಬೇರೆ, ಇತರರು- ಅಲ್ಲವೇ?

ಕೂಸು ಭಾಷೆಯೊಂದನ್ನು ಕಲಿಯುವಾಗ ಶಬ್ದ ಅರ್ಥಗಳ ಐಕ್ಯವೇನೂ ಇರುವುದಿಲ್ಲ. ಏನಿದ್ದರೂ ದನಿಗಳು, ದನಿಗಳ ಏರಿಳಿತ. ಯಾವ ದನಿ ಹೇಗೆ ಹೊರಡಿಸಿದರೆ ಯಾವ ಶಬ್ದ, ಯಾವ ಅರ್ಥ, ಇತರರಿಂದ ಯಾವ ಪ್ರತಿಕ್ರಿಯೆ ಅನ್ನುವುದನ್ನು ದನಿಗಳೆಂಬ ಸೂಚಕಗಳೊಡನೆ ಆಡುತ್ತ ಕೂಸು ಕಲಿಯುತ್ತದೆ. ದನಿಗಳು ಅರ್ಥಪೂರ್ಣ ಪದಗಳಾಗುತ್ತ, ಪದಗಳು ವಾಕ್ಯಗಳಾಗುತ್ತ ಕೂಸು ತಾಯಿನುಡಿಯನ್ನು ಕಲಿಯುವುದೆಂದರೆ ಸುತ್ತಲ ಜಗತ್ತು ಹೇಗಿದೆ, ತನ್ನ ದೇಹವನ್ನು ತಾನು ಹೇಗೆ ಅನುಭವಪಡಬಹುದು ಅನ್ನುವುದನ್ನು ತನ್ನ ಸುತ್ತಲ ಜನ ಆಡುತ್ತಿರುವ ಭಾಷಾ ವ್ಯವಸ್ಥೆಯ ಮೂಲಕ ತನ್ನ ಮನಸ್ಸಿನಲ್ಲಿ ಅಚ್ಚೊತ್ತಿಸಿಕೊಳ್ಳುವುದೇ ಆಗಿದೆ. ಸ್ವತಂತ್ರಜೀವಿ ಮಾತ್ರವಾಗಿದ್ದ ಕೂಸು ವ್ಯಕ್ತಿತ್ವವನ್ನು ಪಡೆಯುವುದೆಂದರೆ ಅದರ ಮೈ ಮನಸ್ಸುಗಳು ಒಪ್ಪಿತವಾದ ಅರ್ಥ ನಿರ್ಮಾಣದ ಆಟದಲ್ಲಿ ಸಿಲುಕುವುದು. ಈ ಆಟದಲ್ಲಿ ವ್ಯಕ್ತವಾಗುವ ವ್ಯಕ್ತಿತ್ವದೊಡನೆ ಬದುಕಲು ಕಲಿಯುವುದು. ಈ ಆಟ ತಾನಲ್ಲದ ಇತರರೊಡನೆ, ತನಗಿಂತ ಭಿನ್ನವಾದ ಎಲ್ಲ ಅನ್ಯದೊಡನೆ ಹೇಗೆ ಗುರುತಿಸಿಕೊಳ್ಳಬೇಕು ಅನ್ನುವುದನ್ನು ಅಪ್ರಜ್ಞಾಪೂರ್ವಕವಾಗಿ ಕಲಿಯುವುದು. ಈ ಅಪ್ರಜ್ಞೆ ಅನ್ನುವುದು ತನ್ನ ನಿಯಂತ್ರಣಕ್ಕೆ ಸಿಗದ ಸಂಗತಿ. ಭಾಷೆಯಲ್ಲಿ ಯಾವುದು `ವ್ಯಕ್ತ~ವಾಗದೆ ಉಳಿದದ್ದೆಲ್ಲ ಅವ್ಯಕ್ತ, ಅಪ್ರಜ್ಞೆ.

ಭಾಷೆ ಅನ್ನುವುದು ವಾಸ್ತವವಲ್ಲ, ಕಲ್ಪಿತ. ಭಾಷೆಯಲ್ಲಿರುವ ಶಬ್ದಗಳೆಲ್ಲವೂ ಮತ್ತೊಂದರ ಸಂಕೇತಗಳು. ಬಾಗಿಲು, ಹಾಲು, ಪ್ರೀತಿ, ದೇವರು ಇತ್ಯಾದಿಗಳೆಲ್ಲ ನಿರ್ದಿಷ್ಟ ಕ್ರಮದಲ್ಲಿ ಜೋಡಣೆಗೊಂಡ, ಕನ್ನಡಬಲ್ಲವರು ಅರ್ಥಪೂರ್ಣವೆಂದು ಒಪ್ಪಿರುವ ದನಿಗಳಷ್ಟೇ. ಬಾಗಿಲು ಅನ್ನುವ ಪದವೇ ಬಾಗಿಲಲ್ಲ. ಪ್ರೀತಿ ಅನ್ನುವುದು ಪದವೇ ಹೊರತು ಅದೇ ಪ್ರೀತಿಯಲ್ಲ. ಹಾಗೆ ದೇವರು ಕೂಡ. ನಾವು ಯಾವುದನ್ನು ಸತ್ಯ ಅಂದುಕೊಳ್ಳುತ್ತೇವೋ ಅದನ್ನು ಶಬ್ದರೂಪದಲ್ಲಿ ಪ್ರತಿನಿಧಿಸುವುದು, ಮಂಡಿಸುವುದು ಭಾಷೆಯ ಕೆಲಸ. ನಮಗೆ ಸಿಗುವುದು ಕೇವಲ ಭಾಷೆಯಷ್ಟೇ ಹೊರತು ವಾಸ್ತವವಲ್ಲ. ಪದವನ್ನಷ್ಟೆ ಇಟ್ಟುಕೊಂಡು ಪದಾರ್ಥವನ್ನು ಕಳಕೊಳ್ಳುವುದು, ಸಾಂಕೇತಿಕತೆಯಲ್ಲೆ ತೃಪ್ತಿ ಕಾಣಲು ಹೆಣಗುವುದು, ಸತ್ಯವೆಂಬುದರ ಪೂರ್ಣತೆ ಅನ್ನುವುದರ ಸುಳಿವನ್ನಷ್ಟೆ ಉಳಿಸಿಕೊಳ್ಳುವುದು ಭಾಷೆಯ ಮೂಲಕ ವ್ಯವಹರಿಸುವ ಮನುಷ್ಯರ ವಿಧಿ. `ನಾನು~ ಅನ್ನುವ ಅರಿವು ಬಂದ ಮೇಲೆ ನಾನಲ್ಲದ ಎಲ್ಲವೂ ಅನ್ಯವೇ, ನನಗೆ ಗೊತ್ತಿರದ ಒಳಗಿನ ನಾನು ಕೂಡಾ.

ಕನ್ನಡಿಯಲ್ಲಿನ ಬಿಂಬವನ್ನು ಕಾಣಬಹುದು, ಹಿಡಿಯಲಾಗದು. ಭಾಷೆಯ ಶಬ್ದಗಳ ಮೂಲಕ ವಸ್ತುವಿನ ಸುಳಿವು ಮೂಡಬಹುದು, ವಸ್ತುವೇ ಸಿಗದು. ಕನ್ನಡಿಯಲ್ಲಿ ಕಾಣುವ ನಾನು ಮತ್ತು ನಾನು ಭಿನ್ನ ಅನ್ನುವ ದ್ವಂದ್ವ ಭಾಷೆಯ ಸಂಕೇತ ವ್ಯವಸ್ಥೆಯ ಮೂಲಕ ಇನ್ನೂ ಗಟ್ಟಿಯಾಗುತ್ತದೆ. ಹಾಗಾಗದೆ ವ್ಯಕ್ತಿತ್ವ ರೂಪುಗೊಳ್ಳುವುದಕ್ಕೆ ಸಾಧ್ಯವೇ ಇಲ್ಲ. ಕಾಣುವ ಎಲ್ಲಕ್ಕೆ ತನ್ನ ಸುತ್ತಲಿನವರ ಭಾಷಾವ್ಯವಸ್ಥೆಯಲ್ಲಿರುವ ಹೆಸರು, ಕಾಣುವುದೆಲ್ಲ ಹೇಗೆ ಭಿನ್ನ, ತಾನು ಏನು ಹೇಗೆ ಹೇಳಬಹುದು, ಯಾವುದು ಸರಿ, ಯಾವುದು ತಪ್ಪು ಅನ್ನುವುದನ್ನೆಲ್ಲ ಭಾಷೆಯ ಮೂಲಕವೇ ಮಗು ಕಲಿಯುತ್ತದೆ.

ಯಾವುದು ವ್ಯಕ್ತವಾಗುತ್ತದೋ ಅದು ಮಾತ್ರ ವ್ಯಕ್ತಿತ್ವ. ವ್ಯಕ್ತವಾಗಲೊಲ್ಲದ ದೊಡ್ಡ ಭಾಗ ಇದೆಯಲ್ಲ ಅದನ್ನು ಕಾಣುವ ಹಂಬಲ ಬದುಕಿನುದ್ದಕ್ಕೂ ಇದ್ದೇ ಇರುತ್ತದೆ. ಮಾತಿನಲ್ಲಿ ಕಾಣುವ, ರೂಪುಗೊಳ್ಳುವ ವ್ಯಕ್ತಿತ್ವ ಮಾತಾಡುತ್ತಿರುವ ವ್ಯಕ್ತಿಯಲ್ಲ. ಆಡಲಾಗದ್ದನ್ನು ಮೌನದಲ್ಲುಳಿಸಿ ಆಡಬಹುದಾದ್ದನ್ನಷ್ಟೆ ಆಡಲು ಕಲಿತಾಗಷ್ಟೇ ಅಂದರೆ ಭಾಷೆಯ ಬಳಕೆಯ ಸಾಮರ್ಥ್ಯ ವಿಕಾಸಗೊಂಡಾಗಷ್ಟೇ ವ್ಯಕ್ತಿತ್ವದ ಉಗಮವೂ ಆಗುತ್ತದೆ.

`ಎನ್ನ ನಾನರಿಯದಂದು ಮುನ್ನ ನೀನೇನಾಗಿದ್ದೆ ಹೇಳಾ~ ಅನ್ನುವುದು ಅಲ್ಲಮ ಕೇಳುವ ಪ್ರಶ್ನೆ. ನನ್ನನ್ನು ನಾನು ಅರಿಯುವುದಕ್ಕೆ, ನನಗಿಂತ ಭಿನ್ನವಾದದ್ದನ್ನು ಗುರುತಿಸುವುದಕ್ಕೆ, ನಾನು ಮತ್ತು ಅನ್ಯ ಅನ್ನುವುದನ್ನು ಮೀರುವುದಕ್ಕೆ- ಭಾಷೆ ಅದಕ್ಕಾಗಿಯೇ ಇದೆಯೋ? 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT