ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾಷೆ ಜೀವನ ವಿಧಾನ

Last Updated 17 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಒಂದರಿಂದ 10ನೇ ತರಗತಿವರೆಗೆ ನಾನು ಓದಿದ್ದು ಸೊರಬ ತಾಲ್ಲೂಜಿನ ಅನವಟ್ಟಿಯ ಕನ್ನಡ ಮಾಧ್ಯಮ ಶಾಲೆಯಲ್ಲಿ. ಎಸ್ಸೆಸ್ಸೆಲ್ಸಿಯಲ್ಲಿ ಒಳ್ಳೆಯ ಅಂಕಗಳು ಬಂದವು. ಶಿಕ್ಷಕರ ಒತ್ತಾಯದಿಂದ ಪಿಯುಸಿಗೆ ಹುಬ್ಬಳ್ಳಿಯ ಪಿಸಿ ಜಾಬಿನ್ ಸೈನ್ಸ್ ಕಾಲೇಜು ಸೇರಿದೆ.
 
ಆರಂಭ ಕೆಲ ದಿನಗಳು ದಿಕ್ಕುತಪ್ಪಿದಂತಾಯಿತು. ತರಗತಿಯಲ್ಲಿ ಎಲ್ಲರೂ ಇಂಗ್ಲಿಷ್‌ನಲ್ಲಿ ಮಾತನಾಡುತ್ತಿದ್ದರು. ಶಿಕ್ಷಕರೂ ಇಂಗ್ಲಿಸ್‌ನಲ್ಲಿ ಪಾಠ ಹೇಳುತ್ತಿದ್ದರು. ಕನ್ನಡ ಮಾಧ್ಯಮದಿಂದ ಬಂದರೆಲ್ಲ ಸೇರಿ ನಾವು ನಾವೇ ಇಂಗ್ಲಿಷ್‌ನಲ್ಲಿ ಮಾತನಾಡಲು ಆರಂಭಿಸಿದೆವು. ಮೂರ‌್ನಾಲ್ಕು ತಿಂಗಳಲ್ಲಿ  ಇಂಗ್ಲಿಷ್‌ನಲ್ಲಿ ಮಾತಾಡಲು ಸಾಧ್ಯವಾಯಿತು.

ಉಪನ್ಯಾಸಕರ ಪ್ರಶ್ನೆಗಳಿಗೆ ಇಂಗ್ಲಿಷ್‌ನಲ್ಲಿ ಉತ್ತರ ಹೇಳುವಷ್ಟರ ಮಟ್ಟಿಗೆ ತಯಾರಾದೆವು. ಪ್ರಥಮ ಪಿಯುಸಿಯಲ್ಲಿ ಉತ್ತಮ ಅಂಕಗಳೊಂದಿಗೆ ಪಿಯುಸಿ ಮುಗಿಸಿದೆ. ಬಳ್ಳಾರಿ ಮೆಡಿಕಲ್ ಕಾಲೇಜಿನಲ್ಲಿ ಎಂಬಿಬಿಎಸ್‌ಗೆ ಉಚಿತ ಸೀಟು ಸಿಕ್ಕಿತು. ಮನೆಯ ಆರ್ಥಿಕ ಸ್ಥಿತಿ ಉತ್ತಮವಾಗಿರಲಿಲ್ಲ. ಕೇವಲ ರೂ 250 ಶುಲ್ಕ ಕೊಟ್ಟು ಸೇರಿಕೊಂಡೆ. ನಂತರ ಓದಿ ಮುಗಿಸಿದ್ದೆಲ್ಲ ಸರ್ಕಾರದ ವಿದ್ಯಾರ್ಥಿವೇತನದಿಂದ. 

ಕನ್ನಡ ಮಾಧ್ಯಮದಲ್ಲಿ ಓದಿದ ನನಗೆ ಉತ್ತೇಜನ ನೀಡಿದವರು ನನ್ನ ಹೈಸ್ಕೂಲ್ ಶಿಕ್ಷಕರು. ಅದರಲ್ಲೂ ಸಾಗರದಲ್ಲಿರುವ ಜ್ಯೋತಿಲಿಂಗಪ್ಪ ಅವರು. ಸದಾ ಆಟಗಳಲ್ಲೇ ಮುಳುಗಿರುತ್ತಿದ್ದ ನನ್ನಲ್ಲಿ ವಿಶ್ವಾಸ ತುಂಬಿದರು. ಅವರ ಒತ್ತಾಯದಿಂದ ನಾನು ಪಿಯುಸಿಯಲ್ಲಿ ಸೈನ್ಸ್ ತೆಗೆದುಕೊಂಡೆ.

 ಎಂಬಿಬಿಎಸ್ ಆದ ಮೇಲೆ  ಕೆಪಿಎಸ್‌ಸಿ ಮೂಲಕ ಕಡೂರು ತಾಲ್ಲೂಕಿನ ದೇವನೂರಿನಲ್ಲಿ ವೈದ್ಯಾಧಿಕಾರಿಯಾಗಿ ನೇಮಕಗೊಂಡೆ. ಸರ್ಕಾರದ ಕುಟುಂಬ ಯೋಜನೆಯನ್ನು ಅತ್ಯುತ್ತಮವಾಗಿ ನಿರ್ವಹಿಸಿದ್ದಕ್ಕೆ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದೆ.

ಇದರಿಂದ ನನಗೆ ಎಂ.ಎಸ್. ಮಾಡಲು ಸರ್ಕಾರ ಎಲ್ಲ ಸೌಲಭ್ಯ ನೀಡಿ ಬೆಂಗಳೂರಿನ ಮೆಡಿಕಲ್ ಕಾಲೇಜಿಗೆ ಕಳುಹಿಸಿತು. ಎಂ.ಎಸ್. ಮುಗಿಸಿ ಬರುತ್ತಿದ್ದಂತೆ ಕಡೂರು ಆಸ್ಪತ್ರೆಯಲ್ಲಿ ಜನರಲ್ ಸರ್ಜನ್ ಆಗಿ 30 ಸಾವಿರ ಶಸ್ತ್ರಚಿಕಿತ್ಸೆಗಳನ್ನು ಮಾಡಲು ಸಾಧ್ಯವಾಯಿತು. ಜನರ ಪ್ರೀತಿಯನ್ನೂ ಗಳಿಸಿದೆ. ರಾಜ್ಯಮಟ್ಟದ `ವೈದ್ಯಶ್ರೀ~ ಪ್ರಶಸ್ತಿಯನ್ನೂ ಪಡೆದೆ.

ಕನ್ನಡ ಕೇವಲ ಕಲಿಕಾ ಮಾಧ್ಯಮವಲ್ಲ; ಅದೊಂದು ಜೀವನ ವಿಧಾನ; ಸಂಸ್ಕೃತಿ. ನಾವು ಜೀವನವನ್ನು ನೋಡುವ ಬಗೆ, ನಮ್ಮ ನಡವಳಿಕೆ, ಹವ್ಯಾಸಗಳೆಲ್ಲವೂ ನಮ್ಮ ಭಾಷೆಯೇ ಕಲಿಸಿಕೊಡುತ್ತದೆ. ಇಂಗ್ಲಿಷ್ ಭಾಷೆ ಯಾವುದೇ ಕೋರ್ಸ್ ಮಾಡಲು ನೆರವಾಗಬಹುದು. ಆದರೆ ಒಬ್ಬ `ಮನುಷ್ಯ~ನಾಗಲು ಮಾತೃಭಾಷೆಯ ಶಿಕ್ಷಣ ಮಾಧ್ಯಮ ಅಗತ್ಯ.~

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT