ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಭಾಷೆ ಶ್ರೀಮಂತಗೊಳಿಸುವ ಪತ್ರಿಕೆಗಳ ಸಾಹಿತ್ಯ ಸ್ಪರ್ಧೆ'

`ಪ್ರಜಾವಾಣಿ' ದೀಪಾವಳಿ ವಿಶೇಷಾಂಕದ ವಿವಿಧ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಣೆ
Last Updated 22 ಡಿಸೆಂಬರ್ 2012, 19:59 IST
ಅಕ್ಷರ ಗಾತ್ರ

ಶಿವಮೊಗ್ಗ: `ಪತ್ರಿಕೆಗಳ ವಿಶೇಷಾಂಕಗಳು ನಡೆಸುವ ಸ್ಪರ್ಧೆಯಿಂದ ಭಾಷೆ ಶ್ರೀಮಂತವಾಗಿದ್ದು, ಸಾಹಿತ್ಯ ಪರಂಪರೆಗೆ ಬಹಳ ದೊಡ್ಡ ಉಪಯೋಗವಾಗಿದೆ' ಎಂದು ಹಿರಿಯ ಸಾಹಿತಿ ನಾ. ಡಿಸೋಜಾ ಅಭಿಪ್ರಾಯಪಟ್ಟರು. ನಗರದ ಸುವರ್ಣ ಸಂಸ್ಕೃತಿ ಭವನದಲ್ಲಿ ಶನಿವಾರ `ಪ್ರಜಾವಾಣಿ' ದೀಪಾವಳಿ ವಿಶೇಷಾಂಕದ ಕಥೆ, ಕವಿತೆ, ಮಕ್ಕಳ ವರ್ಣಚಿತ್ರ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಿಸಿ ಅವರು ಮಾತನಾಡಿದರು.

`ಪ್ರಜಾವಾಣಿ'ಯು ಕಥೆ, ಕವನ, ಮಕ್ಕಳ ವರ್ಣಚಿತ್ರಗಳ ಸ್ಪರ್ಧೆ ಏರ್ಪಡಿಸುವ ಮೂಲಕ ಕನ್ನಡಕ್ಕೆ ಬಹಳಷ್ಟು ಯುವ ಲೇಖಕರನ್ನು ನೀಡಿದೆ. ಭಾಷೆ ಮತ್ತು ಸಾಹಿತ್ಯ ಪರಂಪರೆಯನ್ನು ಇನ್ನಷ್ಟು ಉತ್ಕೃಷ್ಟಗೊಳಿಸಿದೆ ಎಂದರು.

`ಇಂದು ಕೆಲ ಹಿರಿಯ ಲೇಖಕರು ಹೇಳಬೇಕಾಗಿದ್ದು ಹೇಳದೆ, ಬರೆಯಬೇಕಾಗಿದ್ದು ಬರೆಯದೆ ಸನ್ಯಾಸತ್ವ ತೆಗೆದುಕೊಂಡಿದ್ದಾರೆ. ತಮ್ಮ ಸುತ್ತ ತಮ್ಮದೇ ಹುತ್ತ ನಿರ್ಮಿಸಿಕೊಂಡಿದ್ದಾರೆ' ಎಂದು ಆಕ್ಷೇಪ ವ್ಯಕ್ತಪಡಿಸಿದರು.

`ಲೇಖಕ ಸಮಾಜದ ಪ್ರತಿಧ್ವನಿಯಾಗಿ, ಸಮಾಜಕ್ಕೆ ಬದ್ಧನಾಗಿ ಸಾಹಿತ್ಯ ರಚನೆ ಮಾಡಬೇಕು. ಅದು ಲೇಖಕನ ಜವಾಬ್ದಾರಿಯೂ ಆಗಿದೆ. ಆದರೆ ಕೆಲವು ಹಿರಿಯ ಲೇಖಕರು ಇದನ್ನು ಮರೆಯುತ್ತಿರುವುದು ದೊಡ್ಡ ದೋಷವಾಗಿದೆ' ಎಂದು ವಿಷಾದಿಸಿದರು.

`ಬತ್ತಿದ ಸಾಹಿತ್ಯದ ರಕ್ತಕ್ಕೆ ಹೊಸ ಶಕ್ತಿ ಕೊಡುವ ಕೆಲಸ ಹೊಸಬರಿಂದ ಸಾಧ್ಯವಿದೆ. ಅವರನ್ನು ಪ್ರೋತ್ಸಾಹಿಸುವ ಕೆಲಸ ಆಗಬೇಕು' ಎಂದು ಡಿಸೋಜಾ ಪ್ರತಿಪಾದಿಸಿದರು.

ಓದುಗನ ಮನ್ನಣೆ ಮುಖ್ಯ: `ಅತ್ಯುತ್ತಮ ಕೃತಿ ನೀಡುವುದು ಬರಹಗಾರನ ಜವಾಬ್ದಾರಿಯಾಗಿದ್ದು, ಬರಹಗಾರನಿಗೆ ಪ್ರಶಸ್ತಿಗಳ ಮನ್ನಣೆ ತೃಪ್ತಿ ನೀಡಬಾರದು. ಓದುಗನ ಮನ್ನಣೆಗಿಂತ ದೊಡ್ಡ ಬಹುಮಾನ ಮತ್ತೊಂದಿಲ್ಲ' ಎಂದು ವಿಮರ್ಶಕ ರಹಮತ್ ತರೀಕೆರೆ ಅಭಿಪ್ರಾಯಪಟ್ಟರು.

`ಬರಹಗಾರನಿಗೆ ಪತ್ರಿಕೆಗಳ ಸಖ್ಯ ಎರಡು ಅಂಚಿನ ಕತ್ತಿ ಇದ್ದ ಹಾಗೆ; ಪತ್ರಿಕೆಯಲ್ಲಿ ಬರೆದರೆ ವಿಶಾಲ ಓದುಗ ವರ್ಗ, ಮನ್ನಣೆ, ವಿಮರ್ಶೆ, ದೊರೆಯುತ್ತದೆ. ಆದರೆ, ಕಾಲದ ಮಿತಿ ಇರುವುದರಿಂದ ವಿಶಾಲವಾದ ಅಧ್ಯಯನದ ಹಿನ್ನಡೆ, ಬರಹಗಾರನಿಗೆ ಪತ್ರಿಕೆ ಧೋರಣೆಗಳ ಮಿತಿ, ಗಾತ್ರದ ಮಿತಿ ಇವು ಬರಹಗಾರನನ್ನು ನಿಯಂತ್ರಿಸುತ್ತವೆ. ಈ ಕುರಿತು ಬರಹಗಾರರು ಎಚ್ಚರ ವಹಿಸಬೇಕು' ಎಂದು ವಿಶ್ಲೇಷಿಸಿದರು.

`ಬರಹಗಾರನಿಗೆ ಬರಹ ಎಂಬುದು ಬಿಡುಗಡೆಯ ಭಾವ ಇದ್ದಹಾಗೆ. ಆದರೆ, ಜತೆಗೆ ಬರಹ ಬರೆದಿದ್ದು ಸರಿಯೇ ಎಂಬ ಬಗ್ಗೆ ಭಾಷೆ ಕುರಿತ ಆಂತರಿಕ ಹೋರಾಟ ಬರಹಗಾರನಲ್ಲಿ ನಡೆಯುತ್ತದೆ. ಬರಹಗಾರರು ತಮ್ಮ ಬರಹವನ್ನು ಉತ್ತಮವಾಗಿ ರಚಿಸಲು ವೈಯಕ್ತಿಕ ಹೋರಾಟದೊಂದಿಗೆ ಸಮನಾಂತರವಾಗಿ ಸಾಮಾಜಿಕ ಹೋರಾಟ ನಡೆಸುತ್ತಾರೆ. ಈ ಹೋರಾಟದ ತಾಕಲಾಟಕ್ಕೆ ಹಿರಿಯ ಬರಹಗಾರರು ಸಹ ಒಳಗಾಗಿದ್ದಾರೆ' ಎಂದು ಅಭಿಪ್ರಾಯಪಟ್ಟರು. 

`ಅನೇಕ ಯುವ ಸಾಹಿತಿಗಳು ಮೊದಲಿಗೆ ಅದ್ಭುತ ಸಾಹಿತ್ಯ ರಚಿಸಿ, ಮುಂದೆ ಅಂತಹ ಕೃತಿಗಳನ್ನು ರಚಿಸುವಲ್ಲಿ ಎಡವುತ್ತಾರೆ. ಇದು ಅವರಿಗೆ ಸಿಕ್ಕ ಪ್ರಶಸ್ತಿಗಳ ಮನ್ನಣೆ ತೃಪ್ತಿ ಭಾವ ನೀಡುವುದೇ ಕಾರಣ' ಎಂದರು.

ಸಮಾರಂಭದಲ್ಲಿ ಟಿ.ಕೆ. ದಯಾನಂದ, ಪರಮೇಶ್ವರ ಗುಂಡ್ಕಲ್, ಶಂಕರಯ್ಯ ಆರ್. ಘಂಟಿ, ಪ್ರಗಾಥ ಮೋಹನ, ಡಾ.ಎಚ್.ಎಸ್.ಅನುಪಮಾ, ಎಸ್. ವಿಜಯರಾಘವನ್, ಶಿ.ಜು. ಪಾಶ, ವಂದನಾ ಭಟ್, ಪಿ.ಎಚ್. ಶ್ರೇಯಸ್, ಶ್ರೇಯಾ ಗಣಪತಿ, ರಾಯಭಾಗ ಚೈತನ್ಯ, ಬಾಬುರಾವ್ ನಡೋಣಿ, ಎಸ್. ಶಮಿತಾ, ಆರೂಢ ಮ. ಕನ್ನೂರ, ಪ್ರತೀಕ್ಷಾ ಮರಕಿಣಿ, ಶ್ರೀಪ್ರಿಯಾ ಅತಿಥಿಗಳಿಂದ ಬಹುಮಾನ ಸ್ವೀಕರಿಸಿದರು. ಪ್ರಶಸ್ತಿ ಪುರಸ್ಕೃತರು ಮಾತನಾಡಿದರು.

ಇದಕ್ಕೂ ಮೊದಲು ಆಕಾಶವಾಣಿ ಕಲಾವಿದ ಶಿವಮೊಗ್ಗ ಎಲ್. ವೇಣುಗೋಪಾಲ್ ಮತ್ತು ತಂಡ ಕನ್ನಡಗೀತೆಗಳ ಗಾಯನ ಪ್ರಸ್ತುತಪಡಿಸಿತು.
`ಪ್ರಜಾವಾಣಿ' ಕಾರ್ಯನಿರ್ವಾಹಕ ಸಂಪಾದಕ ಪದ್ಮರಾಜ ದಂಡಾವತಿ ಪ್ರಾಸ್ತಾವಿಕ ಮಾತನಾಡಿ, `ಪ್ರಜಾವಾಣಿ' ಸ್ಪರ್ಧಾ ಪರಂಪರೆಯನ್ನು ವಿಶ್ಲೇಷಿಸಿದರು. `ಪ್ರಜಾವಾಣಿ' ಸಂಪಾದಕ ಕೆ.ಎನ್. ಶಾಂತಕುಮಾರ್ ಉಪಸ್ಥಿತರಿದ್ದರು. `ಪ್ರಜಾವಾಣಿ' ಮುಖ್ಯ ಉಪಸಂಪಾದಕ ರಘುನಾಥ ಚ.ಹ. ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT