ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾಷೆಯ ಬಲೆ, ಭಾವದ ಹಕ್ಕಿ

Last Updated 6 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಚಿತ್ರ: ಇಂಗ್ಲಿಷ್ ವಿಂಗ್ಲಿಷ್ (ಹಿಂದಿ)

ನಿರ್ಮಾಪಕರು: ಸುನೀಲ್ ಲುಲ್ಲ, ಆರ್. ಭಾಲ್ಕಿ, ರಾಕೇಶ್ ಜುಂಜುನ್ವಾಲಾ, ಆರ್.ಕೆ.ದಾಮನಿ
ನಿರ್ದೇಶಕಿ: ಗೌರಿ ಶಿಂಧೆ
ತಾರಾಗಣ: ಶ್ರೀದೇವಿ, ಅಮಿತಾಭ್ ಬಚ್ಚನ್, ಮೆಹ್ದಿ ನೆಬೂ, ಪ್ರಿಯಾ ಆನಂದ್, ಸುಜಾತಾ ಕುಮಾರ್, ಅದಿಲ್ ಹುಸೇನ್ ಮತ್ತಿತರರು.

ಶ್ರೀದೇವಿ ಹದಿನೈದು ವರ್ಷಗಳ ಬಳಿಕ ನಟಿಸುತ್ತಿದ್ದಾರೆ, ಅವರದು ಮಾಗಿದ ನಟನೆ, ನಿರ್ದೇಶಕಿ ಗೌರಿ ಶಿಂಧೆಗೆ ಇದು ಮೊದಲ ಚಿತ್ರ, ಅಮಿತಾಭ್ ಬಚ್ಚನ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ ಇತ್ಯಾದಿ ಇತ್ಯಾದಿ ವಿಶೇಷಣಗಳೆಲ್ಲಾ ಆಮೇಲೆ. ಮೊದಲು ಕತೆಗೆ ಬಂದು ಬಿಡೋಣ. ಕಾರಣ ಶ್ರೀದೇವಿಯವರಷ್ಟೇ ಗಮ್ಮತ್ತಿರುವುದು ಗೌರಿ ಬರೆದಿರುವ ಕತೆಯಲ್ಲಿ. ಅದು ರೂಪಕವಾಗಿ ಕಾಡುವ ಕ್ಷಣದಲ್ಲಿ.

ಒಂದೂರಲ್ಲಿ ಒಬ್ಬ ಶ್ರೀಮಂತ. ಆತನದೋ ರೇಷಿಮೆ ಅಂಗಿ, ಮೈ ತುಂಬ ಬಂಗಾರ. ಮಾತು ಮಾತಿಗೂ ಹೂಂಕಾರ ಠೇಂಕಾರ. ಸದ್ಯಕ್ಕೆ ಅವನ ಹೆಸರನ್ನು `ಇಂಗ್ಲಿಷ್~ ಎಂದಿಟ್ಟುಕೊಳ್ಳೋಣ. ಆತನ ಮನೆಗೆ ಹೊಸ ಸೊಸೆ ಬಂದಿದ್ದಾಳೆ. ಮಾತು ಮೆಲ್ಲಗೆ, ಮನಸ್ಸು ಮಲ್ಲಿಗೆ. ಯಾರಿಗೂ ನೋವುಂಟು ಮಾಡದವಳು. ಆಕೆಯ ಹೆಸರನ್ನು `ಹಿಂದಿ~ ಎಂದು ಕರೆಯೋಣ. (ಅಥವಾ ನಿಮ್ಮಿಷ್ಟದ ಭಾಷೆಗಳ ಹೆಸರೇ ಇರಲಿ. ಕಂಗ್ಲಿಷ್, ಹಿಂಗ್ಲಿಷ್ ಆದರೂ ಅಡ್ಡಿಯಿಲ್ಲ). ಹಾಗೆ ಬಂದವಳು ಅವನದೇ ಭಾಷೆ ಕಲಿಯುತ್ತಾಳೆ. ಆತನ ಭಾಷೆಯಲ್ಲಿ ಮಾತನಾಡುತ್ತಾ ಅವನ ಕಣ್ತೆರೆಸುತ್ತಾಳೆ. ಸಬರ್‌ಮತಿ ನೆಲದ ಗಾಂಧೀಜಿ `ಕ್ವಿಟ್ ಇಂಡಿಯಾ~ ಎಂದು ಇಂಗ್ಲಿಷ್‌ನಲ್ಲಿ ಹೇಳಿದರಲ್ಲಾ ಹಾಗೆ!

ಆಕೆ ಕಣ್ತೆರೆಸುವುದಷ್ಟೇ ಅಲ್ಲ, ಕಣ್ಣೊರೆಸುತ್ತಾಳೆ ಕೂಡ. ಅಲ್ಲಿಯೇ ಇರುವುದು ಚಿತ್ರದ ಜೀವಂತಿಕೆ. ಹೂಂಕಾರ ಠೇಂಕಾರದ `ಆಂಗ್ರೇಜಿ~ಗೆ ಕೂಡ ಹೃದಯವಿದೆ. ಆ ಹೃದಯ ನಿರ್ದೇಶಕಿಗೆ ಸ್ಪಷ್ಟವಾಗಿ ಕಂಡಿದೆ. ಹಾಗಾಗಿ ಚಿತ್ರ ಇಂಗ್ಲಿಷ್ ವಿರೋಧಿ ಶುಷ್ಕ ನಿಲುವುಗಳಿಗೆ ವಿರುದ್ಧವಾಗಿ ಈಜತೊಡಗುತ್ತದೆ. ಅಪಾರ ಜೀವನಪ್ರೀತಿಯ ಫ್ರೆಂಚ್ ವ್ಯಾಮೋಹಿ, ಮರಾಠಿ ಜೋಗುಳ, ತಿಲಕವಿಟ್ಟ ಪಾಕಿಸ್ತಾನಿ, ಇಡ್ಲಿ ಬಯಕೆಯ ಮದರಾಸಿ, ಸಲಿಂಗ ಬದುಕು ಕಟ್ಟಿಕೊಂಡ ಕಪ್ಪು ವರ್ಣೀಯ, ಪಿಸುಮಾತಿನ ಮಗು... ಹೀಗೆ ಕತೆ ಹಲವು ರೆಕ್ಕೆಗಳ ಹಕ್ಕಿ. ಭಾಷೆಯಂತೆಯೇ ಬದುಕಿನ ಕುರಿತ ಅನೇಕ ಒಳನೋಟಗಳೂ ಚಿತ್ರದಲ್ಲುಂಟು.

ದೇಶ ಮೀರಿ ಬೆಳೆದಿರುವ ಚಿತ್ರೋದ್ಯಮ ಬಾಲಿವುಡ್. ಅದು ವಿಶ್ವದ ಮೂಲೆಮೂಲೆಗಳ ಚಿತ್ರರಸಿಕರನ್ನು ಸೆಳೆವ ಒತ್ತಡದಲ್ಲಿದೆ ಕೂಡ. ಈ ನಿಟ್ಟಿನಲ್ಲಿ ವಿವಿಧ ಸಂಸ್ಕೃತಿಗಳನ್ನು ದುಡಿಸಿಕೊಂಡಿರುವ ನಿರ್ದೇಶಕರ ತಾಂತ್ರಿಕ ಜಾಣ್ಮೆ ತಟ್ಟನೆ ಗೋಚರಿಸುತ್ತದೆ. ಹೊಸತನದ ಸಂಗೀತ ಅಮಿತ್ ತ್ರಿವೇದಿ ಅವರದು. ಪುಣೆ, ನ್ಯೂಯಾರ್ಕ್ ನಗರಿಗಳಿಗೆ ಲಕ್ಷ್ಮಣ್ ಉತೇಕರ್ ಕ್ಯಾಮೆರಾ ಹೊಸ ಬಣ್ಣ ಬಳಿದಿದೆ. ಚುರುಕು, ಚೂಪು ಸಂಭಾಷಣೆ ಕೂಡ ಚಿತ್ರದ ಅಗ್ಗಳಿಕೆ.

ಹಿಂದಿ- ಇಂಗ್ಲಿಷ್ ನಡುವೆ ಹುಯ್ದಾಡುವ ಮುಗ್ಧ ಹೆಣ್ಣುಮಗಳಾಗಿ ಸುಕ್ಕು ಕೆನ್ನೆಗಳ ಶ್ರೀದೇವಿ ಕಾಡುತ್ತಾರೆ. ಫ್ರೆಂಚ್ ನಟ ಮೆಹ್ದಿ ನೆಬೂ ಕಣ್ಣಿನಲ್ಲೇ ಮಾತಿಗಿಳಿದು ಕಲಕುತ್ತಾರೆ. ಒಂದೆರಡು ದೃಶ್ಯಗಳಿಗೆ ಸೀಮಿತವಾಗಿರುವ ಅಮಿತಾಭ್ ಮತ್ತೆ ಬರಬೇಕಿತ್ತು ಅನ್ನಿಸುವುದುಂಟು. ಆದರೆ ಅವರ ಪಾತ್ರಕ್ಕೆ ಅಲ್ಲಿಯೇ ಪೂರ್ಣವಿರಾಮ ಹಾಕಿರುವುದು ಚಿತ್ರದ ಇನ್ನೊಂದು ಸಾಧ್ಯತೆಗೆ ಸಾಕ್ಷಿ. ಅದಿಲ್ ಹುಸೇನ್, ಬಾಲನಟ ಶಿವಂಶ್ ಕೊಟಿಯಾ, ಪ್ರಿಯಾ ಆನಂದ್, ಸುಜಾತಾ ಕುಮಾರ್ ನಟನೆಯ `ನುಡಿಗಟ್ಟನ್ನು~ ಮರೆಯುವಂತಿಲ್ಲ. ಚಿತ್ರದಲ್ಲಿ ಸಣ್ಣಪುಟ್ಟ ತಪ್ಪುಗಳಿವೆ. ಆದರೆ ಅವುಗಳಿಂದ ಚಿತ್ರದ ಒಟ್ಟಂದಕ್ಕೆ ಅಡ್ಡಿಯಾಗಿಲ್ಲ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT