ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾಷೆಯೂ ಮಾರಾಟದ ಸರಕಾಗಿದೆ

Last Updated 5 ಆಗಸ್ಟ್ 2011, 8:35 IST
ಅಕ್ಷರ ಗಾತ್ರ

ಉದಯ ಪ್ರಕಾಶ್ ಹಿಂದಿಯ ಪ್ರಮುಖ ಬರಹಗಾರರು. ಕವಿತೆ ಕಥೆ ಕಾದಂಬರಿ -- ಹೀಗೆ ಸಾಹಿತ್ಯದ ವಿಭಿನ್ನ ಕ್ಷೇತ್ರಗಳಲ್ಲಿ ತೊಡಗಿಕೊಂಡಿದ್ದರೂ ಕಥೆಗಾರರೆಂದೇ ಹೆಚ್ಚು ಪ್ರಸಿದ್ಧರು. ಅವರ `ತಿರೀಛ್~ ಎಂಬ ಕತೆಯು ಓದುಗರನ್ನು ಬೆಚ್ಚಿಬೀಳಿಸಿತು.

ಸಾಹಿತ್ಯವಲ್ಲದೇಚಿತ್ರಪಟಲೇಖನ, ಸಾಕ್ಷ್ಯಚಿತ್ರಗಳ ನಿರ್ದೇಶನದ ಮೂಲಕ ಅವರು ದೃಶ್ಯಮಾಧ್ಯಮದಲ್ಲಿಯೂ ಕ್ರಿಯಾಶೀಲರಾಗಿದ್ದಾರೆೆ. ಅವರ ಕಿರು ಕಾದಂಬರಿ `ಮೋಹನದಾಸ್~ ಕನ್ನಡಕ್ಕೆ ಅನುವಾದಗೊಂಡು ಪ್ರಕಟವಾಗಿದೆ. ಇದೇ ಕೃತಿಗೆ ಈ ವರ್ಷ ಕೇಂದ್ರ ಸಾಹಿತ್ಯ ಅಕಾಡೆಮಿಯ ಪುರಸ್ಕಾರ ಸಹ ಸಂದಿದೆ.
`ಸಾಹಿತ್ಯ ಪುರವಣಿ~ಗಾಗಿ ಈ ವಿಶೇಷ ಸಂದರ್ಶನವನ್ನು ಕೈಗೊಂಡಿರುವವರು ಸಂವರ್ಥ `ಸಾಹಿಲ್~

ವರ್ತಮಾನದ ಯಾವುದಾದರು ನಿರ್ದಿಷ್ಟ ವಿಷಯ ಹಿಂದಿಯ ಬರಹಗಾರರನ್ನು ಕಾಡುತ್ತಿದೆಯೆ? ಇವತ್ತು ಬರೆಯುತ್ತಿರುವವರ ಕೆಲವು ಮುಖ್ಯ ಕಾಳಜಿಗಳನ್ನು ಗುರುತಿಸುವುದಾದರೆ ನೀವು ಯಾವುದನ್ನು ಹೆಸರಿಸುತ್ತೀರಿ?

ಉದಯಪ್ರಕಾಶ್: ಇಂದು ಎರಡು-ಮೂರು ತಲೆಮಾರಿನ ಬರಹಗಾರರು ಬರವಣಿಗೆಯಲ್ಲಿ ತೊಡಗಿದ್ದಾರೆ. ಮೊದಲನೆ ತಲೆಮಾರಿನ ಬರಹಗಾರರು ಸೈದ್ಧಾಂತಿಕ ಒಳನೋಟಉಳ್ಳವರು. ನಿಮಗೆ ತಿಳಿದಿರುವಂತೆ ಹಿಂದಿ ಬರವಣಿಗೆಯಲ್ಲಿ ಎರಡು ರೀತಿಯ ಸ್ಕೂಲ್ ಆಫ್ ಥಾಟ್- ಪ್ರಗತಿವಾದ ಹಾಗೂ ಕಲಾವಾದ ಅಸ್ತಿತ್ವದಲ್ಲಿದೆ. ಇವುಗಳ ನಡುವೆ ಶೀತಲ ಸಮರವೂ ನಡೆದುಕೊಂಡು ಬಂದಿದೆ. ಪ್ರಗತಿವಾದಿಗಳು ಕಮ್ಯುನಿಸ್ಟ್ ಪಾರ್ಟಿಯೊಂದಿಗೆ ಸಂಪರ್ಕ ಹೊಂದಿದ್ದರು. ಪ್ರಗತಿವಾದ ಎನ್ನುವುದು ದೊಡ್ಡ ಚಳವಳಿಯ ರೂಪವನ್ನೇ ತಾಳಿತ್ತು. ಇಪ್ಟಾ (Indian People~s Theatre Association)) ಆ ದಿನಗಳಲ್ಲಿ ಬಹಳ ಸಕ್ರಿಯವಾಗಿತ್ತು. ಈ ಚಳವಳಿ ಕಲಾರಂಗದ ಮೇಲೆ ಬಹಳಷ್ಟು ಪ್ರಭಾವ ಬೀರಿತು. ಹುಸೇನರಂಥಾ ಕಲಾವಿದರು ಹೊರಹೊಮ್ಮಿದ್ದು ಇಂಥಾ ಚಳವಳಿಗಳಿಂದ. ಆಮೇಲೆ ಎಂಬತ್ತು-ತೊಂಬತ್ತರ ದಶಕ ಬಹಳಷ್ಟು ಬದಲಾವಣೆ ಕಂಡಿತು. ನಿಮಗೆ ತಿಳಿದಿರುವಂತೆ ಥರ್ಡ್ ಟೆಕ್ನಲಾಜಿಕಲ್ ಕ್ರಾಂತಿಯಿಂದ ಜಗತ್ತು ಬದಲಾಯಿತು. ಈ ಹೊಸ ತಂತ್ರಜ್ಞಾನ ಮತ್ತು ಕಾರ್ಪೊರೇಟ್ ಕ್ಯಾಪಿಟಲ್ ರಾಜಕೀಯವನ್ನೇ ಬದಲಾಯಿಸಿದೆ. ನನಗನಿಸುವಂತೆ ರಾಜಕೀಯ ಈ ಎರಡು forceಗಳ ದಾಸವಾಗಿದೆ. ಇಂಥಾ ಬದಲಾವಣೆಗಳ ನಡುವೆ ಬೆಳೆದ ಬರಹಗಾರರು ಹಲವರು ಇದ್ದಾರೆ. ಇವರುಗಳ ಬರವಣಿಗೆ ಇನ್ನೂ ಒಂದು ನಿರ್ದಿಷ್ಟ ರೂಪ ಪಡೆದುಕೊಳ್ಳಬೇಕಾಗಿದೆ. ಈ ಎಲ್ಲಾ ಬರಹಗಾರರು ಬದಲಾಯಿಸುತ್ತಿರುವ ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದಾರಾದರೂ ಪರಿಸ್ಥಿತಿಯನ್ನು ನಿಯಂತ್ರಿಸುತ್ತಿರುವ ಶಕ್ತಿಗಳನ್ನು ಅಷ್ಟೊಂದು ಸುಲಭವಾಗಿ ಅರ್ಥೈಸಿಕೊಳ್ಳಲು ಆಗುತ್ತಿಲ್ಲ. ಅದೂ ಅಲ್ಲದೆ ಒಂದು ಹೊಸ ದೇಶ-ಕಾಲವಾದ `ವರ್ಚುವಲ್~ ಲೋಕ ಉದಯಿಸಿದೆ. ಈ ಹೊಸ ತಲೆಮಾರಿನ ಬರಹಗಾರರು ಹೆಚ್ಚಾಗಿ ಈ ವರ್ಚುವಲ್ ಲೋಕಕ್ಕೆ ತೆರೆದುಕೊಂಡಿರುವ ಕಾರಣ ಅವರು ವಾಸ್ತವ ಲೋಕದಿಂದ ಒಂದಿಷ್ಟು ದೂರವೇ ಉಳಿದಿದ್ದಾರೆ ಎಂದು ಹೇಳಬಹುದು. ಇವರ ಹಿಂದಿನ ತಲೆಮಾರಿನ ಬರಹಗಾರರಿಗೆ ವಾಸ್ತವ ಲೋಕದೊಂದಿಗೆ ನೇರವಾದ ಒಂದು ಸಂಪರ್ಕವಿದ್ದಿತ್ತು.

ಆದರೆ ಹೊಸ ತಲೆಮಾರಿನ ಬರಹಗಾರರು ಒಂದು ನಿರ್ದಿಷ್ಟ ಲೋಕದೊಳಗೆ ಬಂಧಿತರಾಗಿದ್ದಾರೆ. ಅದರಾಚೆಗಿನ ವಾಸ್ತವ ಲೋಕವೊಂದು ಅವರ ಅರಿವಿಗೆ ಬಂದಿದ್ದರೂ ಅದು ಅವರ ಅನುಭವಕ್ಕೆ ಬಂದಂತಿಲ್ಲ. ಅದನ್ನು ನೋಡಲು ಸಾಧ್ಯವಾಗಿದ್ದರೂ ಅದನ್ನು ಮುಟ್ಟಲು ಅವರಿಂದ ಸಾಧ್ಯವಾದಂತಿಲ್ಲ. ಹಳ್ಳಿ-ಹೊಲ ಇವೆಲ್ಲ ಅವರ ಸ್ಮೃತಿಲೋಕದಲ್ಲಿವೆಯಾದರೂ ಅವರು ನಿತ್ಯ ನೋಡುವ ಲೋಕ ಆ ಸ್ಮೃತಿಗಿಂತ ಕೊಂಚ ಭಿನ್ನವಾಗಿದೆ. ಹೀಗೆ ಹಲವು ಲೋಕಗಳ ಸ್ಮೃತಿ, ವಾಸ್ತವ, ವರ್ಚುವಲ್ ನಡುವಿನ ತಿಕ್ಕಾಟದಲ್ಲಿ ಬೆಳೆದ ಬರಹಗಾರರು ಬಹಳಷ್ಟಿದ್ದಾರೆ. ಇವರಲ್ಲಿ ಮೊದಲಿನ ಬರಹಗಾರರಲ್ಲಿದ್ದಂಥಾ ಸೈದ್ಧಾಂತಿಕ ರಾಜಕೀಯ ದೃಷ್ಟಿಕೋನ ಕಾಣಸಿಗುವುದು ಸ್ವಲ್ಪ ಅಪರೂಪ.

ಇವತ್ತಿನ ದಿನಗಳಲ್ಲಿ ರಾಜಕೀಯ ಮತ್ತು ಮಾಧ್ಯಮ ತನ್ನ ನೋಟವನ್ನು ದೊಡ್ಡ ದೊಡ್ಡ ಪಟ್ಟಣಗಳಿಗೆ ಸೀಮಿತಗೊಳಿಸಿದೆ. ವರ್ಲ್ಡ್ ಕ್ಲಾಸ್ ಸಿಟಿ ನಿರ್ಮಾಣವೇ ಇಂದು ಗುರಿ ಒಂದು ಕನಸಾಗಿದೆ. ಕೆಲವು ತಿಂಗಳುಗಳ ಹಿಂದೆ ಕಾಮನ್‌ವೆಲ್ತ್ ಗೇಮ್ಸ ನಡೆಯುವಾಗ ದೆಹಲಿಯಲ್ಲಿ ಸರಿಸುಮಾರು 2.5 ಲಕ್ಷ ಮಂದಿ ಬಡಜನರು ತಲೆಯ ಮೇಲಿನ ಸೂರು ಕಳೆದುಕೊಂಡರು. ಬಹಳ ಅಮಾನವೀಯವಾದ ಘಟನೆ ಅದು. ಆದರೆ ಈ ದೇಶದ ಮಾಧ್ಯಮ ಈ ದುರಂತವನ್ನು ನಿರ್ಲಕ್ಷಿಸಿತು. ಆದರೆ ಜಾನ್ ಫಿಲ್ಜರ್ ಎಂಬ ವಿದೇಶಿ ಈ ಕುರಿತು ಸುದೀರ್ಘವಾದ ಲೇಖನವನ್ನು ಬರೆದ. ಇಂಥಾ ಸಮಯದಲ್ಲಿ ಬರೆಯುತ್ತಿರುವವರು ಕಾಲದೊಂದಿಗೆ ವೇಗ ವೇಗವಾಗಿ ಹೆಜ್ಜೆ ಇಡುತ್ತಿದ್ದಾರಾದರೂ ಒಂದು ಕ್ಷಣ ನಿಂತು ಇಂಥಾ ದುರಂತವನ್ನು ನೋಡುತ್ತಿಲ್ಲ. ಒಂದು ವೇಳೆ ಗಮನಿಸಿದರೂ ಅವರು ಇಂದಿನ ಸ್ಥಿತಿಯನ್ನು ಸಂಪೂರ್ಣವಾಗಿ ಗ್ರಹಿಸಿಕೊಳ್ಳುವಲ್ಲಿ ಸೋತಂತಿದೆ. ಕೆಲವು ಕಥೆಗಳು `ಡಾಟ್‌ಕಾಮ್~ ಅಥವಾ `ಚಾಂದ್ ಅಟ್ ಆಸಮಾನ್ ಡಾಟ್‌ಕಾಮ್~ ಎಂಬ ಹೆಸರನ್ನಿಟ್ಟುಕೊಂಡಿವೆ. ಆದರೆ ಅವುಗಳು ಈ ಕಾಲದ ತಳಮಳಗಳ ಸಂಪೂರ್ಣ ಚಿತ್ರಣ ನೀಡುವುದಿಲ್ಲ. ಕಾರಣ ಅವುಗಳು ಕೇವಲ ಭಾಷಾ ರೂಪದಲ್ಲಿ ಮಾತ್ರ ಇಂದಿನ ಸ್ಥಿತಿಯನ್ನು ಹಿಡಿದಿಡಲು ನೋಡುತ್ತಿರುವುದಾಗಿದೆ. ಈ ಬರಹಗಾರರು ಭಾಷೆಯ ಮುಖಾಂತರ ಇಂದಿನ ಲೋಕವನ್ನು ಕಟ್ಟಿಕೊಡಲು ಪ್ರಯತ್ನಿಸುತ್ತಿಲ್ಲ. ಇನ್ನೂ ಕೆಲವು ಬರಹಗಾರರು ಹಿಂದಿ ಭಾಷಾ ಸಂಶೋಧಕರಾಗಿರುವ ಕಾರಣ, ಸಾಂಪ್ರದಾಯಿಕ ಬರವಣಿಗೆ ಶೈಲಿಯಿಂದ ಬಿಡಿಸಿಕೊಳ್ಳಲು ವಿಫಲರಾಗಿದ್ದಾರೆ.
ಆದರೆ ಕೆಲವು ಬರಹಗಾರರು ಭರವಸೆ ಮೂಡಿಸುತ್ತಾರೆ. ಉದಾಹರಣೆಗೆ ನಾನು ಇತ್ತೀಚೆಗೆ ಉಮಾಶಂಕರ ಚೌಧರಿ ಬರೆದ ಕಥೆಯೊಂದನ್ನು ಓದಿದೆ. ಒಬ್ಬ ಕಮ್ಮಾರ ಹೇಗೆ ತಂತ್ರಜ್ಞಾನ ಯುಗದಲ್ಲಿ, ಕೈಗಾರಿಕರಣದ ಭರದಲ್ಲಿ ತನ್ನ ಉದ್ಯೋಗ ಮತ್ತು ಗೌರವವನ್ನು ಕಳೆದುಕೊಳ್ಳುತ್ತಾನೆ ಎಂಬುದನ್ನು ಹೇಳುವ ಕಥೆ. ಇಂಥಾ ದುರಂತಗಳನ್ನು ಗಮನಿಸುವ, ಅರ್ಥಮಾಡಿಕೊಳ್ಳುವ ಪ್ರಯತ್ನ ಅಲ್ಲಲ್ಲಿ ನಡೆಯುತ್ತಿವೆ ಎಂದು ಹೇಳಬೇಕು.

ಇಲ್ಲಿಂದ ಹತ್ತು-ಹದಿನೈದು ವರ್ಷಗಳ ಹಿಂದೆ ಹೋದರೆ ಒಂದು ರೀತಿಯ ಸೆಕ್ಯುಲರ್ ಬರವಣಿಗೆಗಳನ್ನು ಹೆಚ್ಚಾಗಿ ನೋಡಬಹುದು. ಆದರೆ ಅವು ಒಳಗಿನಿಂದ ಚಿಗುರಿದ ಕತೆಗಳಂತಿರದೆ ಕೇವಲ ರಾಜಕೀಯ ನಿಲುವುಗಳನ್ನು ಪ್ರತಿಪಾದಿಸಲು ಬರೆದಂತಿದ್ದವು.
ಅಂದರೆ, ಬೇರೆ ಬೇರೆ ಕೋಮಿಗೆ ಸೇರಿದ ನಾಯಕ ನಾಯಕಿ, ಬಾಬ್ರಿ ಮಸೀದಿ ಘಟನೆಯ ಹಿನ್ನಲೆಯಲ್ಲಿ ಇಲ್ಲಾ ಮುಂಬೈ ಗಲಭೆಯ-ಹಿನ್ನೆಲೆಯಲ್ಲಿ, ಬಂದು ಹೋಗುತ್ತಿದ್ದರು. ಅವುಗಳು ಕಥೆಗಿಂತ ಹೆಚ್ಚಾಗಿ ರಾಜಕೀಯ ಘೋಷಣೆಗಳಂತೆ ಕೇಳಿಸಿದ ಕಾರಣ ಓದುಗರು ಹೆಚ್ಚು ಕಾಲ ಅಂಥಾ ಕತೆಗಳನ್ನು ಓದಲು ಇಚ್ಛಿಸಲಿಲ್ಲ.

ಭಾಷೆಯೇ ಒಂದು ಮಾರಾಟದ ಸರಕಾಗಿರುವ ಕಾಲದಲ್ಲಿ ನಾವೀಗ ಬರೆಯುತ್ತಿದ್ದೇವೆ, ಬದುಕುತ್ತಿದ್ದೇವೆ. ಇತ್ತೀಚೆಗೆ ನಾನು ಪೋಲಿಶ್ ಕವಿ ತಾಮ್ಯೇಕ್ ರೋಜಾವಿಚ್‌ನ ಕವಿತೆಗಳನ್ನು ಓದುತ್ತಿದ್ದೆ. ಆತ `ವರ್ಡ್ಸ್~ ಎಂಬ ತನ್ನ ಕವಿತೆಯಲ್ಲಿ ಹೇಳುತ್ತಾನೆ: `ಇಂದು ಪದಗಳ (ಭಾಷೆ)ನ್ನು ಟೀವಿ ಆ್ಯಂಕರ್‌ಗಳು ಬಬಲ್‌ಗಮ್‌ನಂತೆ ಜಗಿಯುತ್ತಿದ್ದಾರೆ, ರಾಜಕಾರಣಿಗಳು ತಮ್ಮ ಗಲೀಜು ಬಾಯಿಯನ್ನು ಸ್ವಚ್ಛಗೊಳಿಸಲು ಟೂತ್‌ಪೇಸ್ಟ್‌ನಂತೆ ಬಳಸುತ್ತಿದ್ದಾರೆ. ಆದರೆ ನನ್ನ ಬಾಲ್ಯದ ದಿನಗಳಲ್ಲಿ ಭಾಷೆಯನ್ನು ಮುಲಾಮಿನಂತೆ ಬಳಸಲಾಗುತ್ತಿತ್ತು, ಪ್ರೀತಿಯನ್ನು ವ್ಯಕ್ತಪಡಿಸಲು ಬಳಸಲಾಗುತ್ತಿತ್ತು~. ಇಷ್ಟೆಲ್ಲಾ ಹೇಳಿದ ಕವಿ ತನ್ನ ಕವಿತೆಯನ್ನು ಅಂತ್ಯಗೊಳಿಸುವುದು ಹೀಗೆ: `ಭಾಷೆ ಮಾಧ್ಯಮದೊಂದಿಗೆ ಬೆರೆತುಹೋಗಿದೆ ಆದರೆ ನಶಿಸಿಹೋಗಿಲ್ಲ. ಪ್ರೀತಿ ಪಾತ್ರಳಾದ ಸುಂದರಿಯೋರ್ವಳ ಒಳ ಉಡುಪಿನೊಳಗಡೆಯೆಲ್ಲೊ ಭಾಷೆ ಅಡಗಿ ಕೂತಿದೆ. ಒಂದು ಮುಂಜಾವಿನಂದು ಚಿಟ್ಟೆಯೊಂದರಂತೆ ಹಾರಿ ಹೊರಬರುತ್ತದೆ ಭಾಷೆ, ಸ್ಫೋಟಗೊಳ್ಳುತ್ತದೆ ಭಾಷೆ. ನುಡಿಯುವ ಶಕ್ತಿ ಭಾಷೆಯೊಳಗಡೆ ಇನ್ನೂ ಜೀವಂತವಾಗಿದೆ~. ಈ ಕವಿತೆ ಓದಿದಾಗ ನನಗೆ ಅನ್ನಿಸಿದ್ದೇನೆಂದರೆ ಹೊಸ ತಲೆಮಾರಿನವರು ಮಾಧ್ಯಮದ ಪ್ರಭಾವಕ್ಕೊಳಗಾಗಿ ಭಾಷೆಯನ್ನು ಬಹಳ ಕರ್ಕಶವಾಗಿ ಬಳಸುತ್ತಿದ್ದಾರೆ ಮತ್ತು ಅತೀವ ಭಾಷಾ ಪೋಲು ನಡೆಯುತ್ತಿದೆ ಎಂದು.

ಒಬ್ಬ ರಾಜಕಾರಣಿಗೂ, ಜಾಹೀರಾತಿಗೂ ಒಬ್ಬ ಬರಹಗಾರನಿಗೂ, ಬರವಣಿಗೆಗೂ ವ್ಯತ್ಯಾಸ ಇದೆ ಎಂದು ಅರ್ಥಮಾಡಿಕೊಳ್ಳಬೇಕಾಗಿದೆ. ನನ್ನ ಪರಿಚಯದ ಹಲವು ಬರಹಗಾರರು ವಾರಕ್ಕೊಂದು ಕತೆ ಬರೆಯುತ್ತಾರೆ. ಹೀಗೆ ಬರವಣಿಗೆ ಹೆಚ್ಚಾಗಿದೆ. ಭಾಷಾ ಪೋಲು ಜಾಸ್ತಿಯಾಗಿದೆ. ಭಾಷೆಯನ್ನು ಮಿತವಾಗಿ ಶಕ್ತಿಶಾಲಿಯಾಗಿ ಬಳಸಬೇಕಾಗಿದೆ.

ನಾನು ನಂಬುವಂತೆ ಪ್ರೇಮಚಂದ್ ನಮ್ಮ ನೆನಪಿನಲ್ಲಿರುವುದು ಮತ್ತು ನಮಗೆ ಆಪ್ತರಾಗಿರುವುದು ಅವರ ಕಾದಂಬರಿಗಳಿಗಿಂತ ಜಾಸ್ತಿಯಾಗಿ ಅವರ ಸಣ್ಣ ಕತೆಗಳ ಮುಖಾಂತರ. ಕತೆ ಪ್ರೀ ಮಾಡರ್ನ್ ಕಲೆ. ಕಾದಂಬರಿ ಹಾಗಲ್ಲ. ಕತೆಯನ್ನು ಹೇಳಲು ಸಾಧ್ಯವಿದೆ, ಕಾದಂಬರಿಯನ್ನಲ್ಲ. ಅದನ್ನು ಓದಲು ಮಾತ್ರ ಸಾಧ್ಯ. ಇದರ ಕುರಿತು ವಾಲ್ಟರ್ ಬೆಂಜಮಿನ್ ಬರೆದಿದ್ದಾನೆ. ಕತೆಯೆಂಬುದು ಪ್ರಿಂಟಿಂಗ್ ಪ್ರೆಸ್ ಇಲ್ಲದ ಕಾಲದಲ್ಲಿಯೂ ಇತ್ತು. ಈಗಲೂ ಜನ ಮಾಂಟೋವಿನ ಕತೆಯನ್ನು ನಿಮಗೆ ಹೇಳಬಲ್ಲರು. ಆದರೆ ವಾರ್ ಆ್ಯಂಡ್ ಪೀಸ್ ಹೇಳಲು ಬರುವುದಿಲ್ಲ. ನೀವೇ ಹೇಳಿ, ಮಾಂಟೋನ ಕಾಲದಲ್ಲಿ ಬಂದ ಎಷ್ಟು ಕಾದಂಬರಿಗಳನ್ನು ನಾವು ನೆನಪಿನಲ್ಲಿಟ್ಟುಕೊಂಡಿದ್ದೇವೆ? ಮಾಂಟೋನ ಕತೆ ಉಳಿದುಕೊಂಡಿರಲು ಒಂದು ಕಾರಣವೆಂದರೆ ಅಲ್ಲಿ ಅನಗತ್ಯ ಭಾಷಾ ಪೋಲು ನಡೆದಿಲ್ಲ.

ಉತ್ತಮ/ಜನಪ್ರಿಯ ಕಾದಂಬರಿ ರೂಪ ತಾಳಲಾರದಂತ ಅಂತರ್ಗತ ಕಾರಣವೇನಾದರು ಹಿಂದಿ ಭಾಷೆಯೊಳಗಡೆ ಇದೆ ಎಂದು ನಿಮಗನಿಸುತ್ತದಾ?

ಉದಯಪ್ರಕಾಶ್:
ನೋಡಿ, ಇತರ ಭಾರತೀಯ ಭಾಷೆಗಳಿಗೆ ಹೋಲಿಸಿದರೆ ಹಿಂದಿ ಇನ್ನೂ ಬಾಲ್ಯಾವಸ್ಥೆಯಲ್ಲಿರುವ ಭಾಷೆ. ನನಗನ್ನಿಸುವಂತೆ ಹಿಂದಿ ಮಾರ್ಕೆಟ್, ಮಾಧ್ಯಮ ಮತ್ತು ಸರ್ಕಾರದ ಭಾಷೆ. 19ನೇ ಶತಮಾನದಲ್ಲಿ ಉದಯಗೊಂಡ ಈ ಭಾಷೆ ಇತ್ತೀಚೆಗಷ್ಟೆ ಕೆಲವರ ಮಾತೃ ಭಾಷೆಯಾಗಿರುವುದು. ನನ್ನದೇ ಉದಾಹರಣೆ ತೆಗೆದುಕೊಳ್ಳಿ. ನನ್ನ ತಾಯಿ ಭೋಜಪುರಿ, ತಂದೆ ಬಘೇಲಿ ಮಾತನಾಡುವ ಪ್ರದೇಶಕ್ಕೆ ಸೇರಿದವರು. ನಾನು ಬೆಳೆದದ್ದು ಕಡಿಬೋಲಿ ಮಾತನಾಡಲ್ಪಡುವ ಛತ್ತೀಸಘಡದಲ್ಲಿ. ಹಿಂದಿ ಕೇವಲ ಪ್ರಭುತ್ವದ ಕೇಂದ್ರದಲ್ಲಿ ಮಾತನಾಡುವ ಭಾಷೆಯಾಗಿದೆ. ಅಲ್ಲಿಯ ಜನರು ಹಿಂದಿ ಭಾಷೆಯ ವಿವಿಧ ಪ್ರಭೇದಗಳನ್ನು ಕೊಂಚ ಅಗೌರವದಿಂದಲೇ ನೋಡುತ್ತಾರೆ. ಮತ್ತು ಯಾವುದನ್ನು ಹಿಂದಿ ಎಂದು ಗುರುತಿಸಲಾಗುತ್ತಿದೆಯೋ ಅದು ಉತ್ತರ ಭಾರತದ ಮೇಲ್ಜಾತಿಯ, ಪ್ರಭುತ್ವದ ಕೇಂದ್ರಗಳಲ್ಲಿ ಮಾತ್ರ ನುಡಿಯಲಾಗುತ್ತಿರುವ ಭಾಷೆ. ಹಿಂದಿ ಒಂದು ಭಾಷೆಯಾಗಿ ಇನ್ನೂ ಬೆಳೆಯಬೇಕಾಗಿದೆ. ಅದು ಬೆಳೆಯುತ್ತಲೂ ಇದೆ. ಇಂದು ಹಿಂದಿ ಇತರ ಭಾಷೆಗಳೊಂದಿಗೆ ಸಂವಹನ ನಡೆಸುತ್ತಿದೆ. ಸಂಶೋಧನೆಯೊಂದರ ಪ್ರಕಾರ ಒಂದು ದಿನಕ್ಕೆ ಹೆಚ್ಚುಕಡಿಮೆ ನಾನ್ನೂರು ಪದಗಳು ಹಿಂದಿಯೊಳಗೆ ಪ್ರವೇಶಿಸುತ್ತಿದೆ. ಇತ್ತೀಚೆಗೆ ನಾನು ರಾಜಸ್ತಾನದಲ್ಲಿದ್ದೆ. ಅಲ್ಲಿಯ ಭೀಲ್ ಸಮುದಾಯದ ಜನರೊಂದಿಗೆ ಕೆಲವು ದಿನಗಳನ್ನು ಕಳೆದೆ. ಭೀಲ್ ಸಮುದಾಯದ ಮಂದಿ ಒಂದು ಹೊಸ ಪದ ಚಾಲ್ತಿಗೆ ತಂದಿದ್ದಾರೆ. `ಮೌತರಣ್~ ಎಂಬ ಈ ಪದ ಅವರುಗಳ ಹೊಸ ಸಂಪ್ರದಾಯ. ಆ ಸಂಪ್ರದಾಯದ ಕುರಿತು ಹಿಂದಿಯಲ್ಲಿ ಬರೆದ ಕ್ಷಣ ಆ ಪದ ಹಿಂದಿ ಭಾಷೆಯನ್ನೂ ಪ್ರವೇಶಿಸುತ್ತದೆ.

ಹಿಂದಿ ಭಾಷೆಯೊಳಗೆ ಪ್ರವೇಶಿಸುತ್ತಿರುವ ಹೊಸ ಪದಗುಚ್ಛ ಹಿಂದಿ ಸಾಹಿತ್ಯದಲ್ಲಿ ಬಳಸಲ್ಪಡುತ್ತಿದ್ದಾವೆಯೆ?

ಉದಯಪ್ರಕಾಶ್:
ಹೌದು. ಈಚಿನ ದಿನಗಳಲ್ಲಿ ಆಂಗ್ಲ ಭಾಷೆ ಮತ್ತು ಹಿಂದಿ ಭಾಷೆ ಒಂದು ಹಂತದಲ್ಲಿ ಒಂದಾಗಿವೆ ಎಂದು ಹೇಳಬಹುದು. ಉದಾಹರಣೆಗೆ ಮೊಬೈಲ್, ಚಾರ್ಜಿಂಗ್ ಇಂಥಾ ಪದಗಳನ್ನು ಹಿಂದಿಗೆ ತರ್ಜುಮೆ ಮಾಡಿದರೆ ಅದು ತೀರ ಕೃತಕವಾಗಿ ಕಾಣುವುದಲ್ಲದೆ ಜನಭಾಷೆಗೆ ದೂರವಾಗುತ್ತದೆ. ಇಂಥಾ ಪದ ಬಳಕೆ ವಿಮರ್ಶಕರಿಗೆ ಕಸಿವಿಸಿ ಉಂಟುಮಾಡುತ್ತದೆ. ಆದರೆ ಅವರು ನೇರವಾಗಿ ಇವುಗಳನ್ನು ತಿರಸ್ಕರಿಸಲೂ ಸಾಧ್ಯವಾಗುತ್ತಿಲ್ಲ. ಭಾರತ ಒಂದು ದೇಶವಾಗಿ ಇನ್ನೂ ರೂಪ ತಾಳಬೇಕಾಗಿರುವಂತೆ, ಹಿಂದಿ ಸಹ ಒಂದು ಭಾಷೆಯಾಗಿ ರೂಪ ತಾಳಬೇಕಾಗಿದೆ.

ಭಾಷೆಯ ಕುರಿತು ಒಂದು ರೀತಿಯ ಛೋವೆನಿಸಮ್ ಹೆಚ್ಚಾದರೆ ಭಾಷೆ ಹಳಸಿಹೋಗುತ್ತದೆ ಮತ್ತು ನೆಲದಿಂದ ಬೇರ‌್ಪಡುತ್ತದೆ. ಸಂಪೂರ್ಣ ಭಾರತವು ಒಂದೇ ಎಂಬುದು ನಮ್ಮ ಕಲ್ಪನೆ. ಆದರೆ ಅದು ಹಾಗಿಲ್ಲ. ಅಂತೆಯೇ ಹಿಂದಿ ಒಂದೇ ರೀತಿಯದು ಎಂದು ವಾದಿಸುವುದು ಹಿಂದಿಯೊಳಗಿನ ಭಿನ್ನತೆಯನ್ನು ತಿರಸ್ಕರಿಸಿದಂತೆ. `ಭಾಸ್ಕರ~ದಂತಹ ದಿನಪತ್ರಿಕೆಗಳು ತಮ್ಮ ಲೋಕಲ್ ಎಡಿಷನ್‌ಗಳಲ್ಲಿ ಸ್ಥಳೀಯ ಭಾಷೆಯನ್ನು ಉಪಯೋಗಿಸುತ್ತಿವೆ. ಈ ಲೋಕಲ್ ಎಡಿಷನ್‌ಗಳ ಭಾಷೆಯನ್ನು ಪ್ರಭುತ್ವದ ಹಿಂದಿಯೊಂದಿಗೆ ಹೋಲಿಸಿ ನೋಡಬೇಕು.

ಹೀಗೆ ಕೇಳಿಸದೆ ಹೋದ ಸ್ವರಗಳು, ಧ್ವನಿಸದೇ ಹೋದ ಸ್ವರಗಳಲ್ಲ. ಅವುಗಳು ಕೇಳಿಸದೇ ಹೋಗುವಲ್ಲಿ ಪ್ರಕಾಶಕರ ಪಾತ್ರವೇನಾದರೂ ಇದೆಯಾ?

ಉದಯಪ್ರಕಾಶ್:
ಪ್ರಕಾಶಕರು ಪಟ್ಟಣದ ಬರಹಗಾರರ ಬರವಣಿಗೆಯನ್ನೇ ಪ್ರಕಟಿಸುತ್ತಿರುವುದು ಒಂದು ಮಹತ್ತರವಾದ ಕಾರಣವೇ. ಆದರೆ ಪ್ರತಿ ಬರಹಗಾರನೂ, ಪ್ರತಿ ಸ್ವರವೂ ಒಂದು ರೀತಿಯಲ್ಲಿ ವಿಕಿಲೀಕ್ ಇದ್ದಂತೆ. ಅದು ಒಂದಲ್ಲಾ ಒಂದು ದಿನ ಸ್ಫೋಟಗೊಂಡು ಲೋಕಕ್ಕೆಲ್ಲಾ ಕೇಳಿಸುತ್ತದೆ. ಅಭಿವೃದ್ಧಿಯ ಹೆಸರಿನಲ್ಲಿ ನಡೆಯುತ್ತಿರುವ ಅವಘಡಗಳೆಲ್ಲಾ ಲೋಕಕ್ಕೆ ಕೇಳಿಸಬೇಕಾಗಿದೆ. ಪ್ರಕಾಶಕರು ಹೊಸ ದನಿ ಹೊಸ ಅನುಭವ ತುಂಬಿದ ಬರವಣಿಗೆಯನ್ನು ಪ್ರಕಟ ಮಾಡುವತ್ತ ಗಮನಹರಿಸಬೇಕಾಗಿದೆ. ಓದುಗರು ಯಾವಾಗಲೂ ಒಳ್ಳೆಯ ಬರವಣಿಗೆಯನ್ನು ಸ್ವೀಕರಿಸುತ್ತಾರೆ. ಹಾಗಾಗಿ ಕೆಲವು ಸಣ್ಣ ಸಣ್ಣ ಪ್ರಕಾಶಕರಾದರೂ ಮೆಟ್ಟಲ್ಪಟ್ಟ ಸ್ವರಗಳನ್ನು  ಕೇಳಿಸುವಂತೆ ಮಾಡಬೇಕು. ಇಂಥಾ ಪ್ರಕಾಶಕರು ಸಣ್ಣ ಮಾರುಕಟ್ಟೆಗಳನ್ನು ನಿರ್ಮಿಸಬೇಕು. ಮಾರುಕಟ್ಟೆಯಿಂದ ಮೆಟ್ಟಲ್ಪಟ್ಟಿರುವ ಧ್ವನಿಯನ್ನು ಮಾರುಕಟ್ಟೆಯ ಮುಖಾಂತರವೇ ಎತ್ತಿ ಹಿಡಿಯಬೇಕಾಗಿದೆ. ಮಾರುಕಟ್ಟೆಗೆ ಇಂಥಾ ಶಕ್ತಿಯೊಂದಿದೆ. ಅದಕ್ಕಾಗಿಯೇ ನಾನು ಮಾರುಕಟ್ಟೆಯನ್ನು ವಿರೋಧಿಸುವುದಿಲ್ಲ. ಕೆ. ದಾಮೋದರನ್ ಹೇಳುವಂತೆ ಮಿಡೀವಿಯಲ್ ಕಾಲದಲ್ಲಿ ಕೆಳಜಾತಿಯ ಕುಶಲಕರ್ಮಿಗಳನ್ನು ಊಳಿಗಮಾನ್ಯ ಶೋಷಣೆಯಿಂದ ಮುಕ್ತಗೊಳಿಸಿದ್ದು ಮಾರುಕಟ್ಟೆ. ಹಿಂದಿ ಕವಿ ಭುಮಿಲ್ ಹೇಳುತ್ತಾನೆ: ಚಮ್ಮಾರನಿಗೆ ಪ್ರತಿ ಮನುಷ್ಯನೂ ಒಂದು ಜೊತೆ ಚಪ್ಪಲಿಯಲ್ಲದೆ ಮತ್ತಿನ್ನೇನೂ ಅಲ್ಲ. ಹಾಗೆ ಮಾರುಕಟ್ಟೆಗೂ ಪ್ರತಿಯೊಬ್ಬನೂ ಒಂದೇ. ಅಂಬಾನಿಗೂ ಅಲ್ಲಿ ಸ್ಥಳವಿದೆ. ಸಾಮಾನ್ಯ ತರಕಾರಿ ಮಾರುವವನಿಗೂ ಅಲ್ಲಿ ಸ್ಥಾನವಿದೆ.

`ಡಾನ್ಸಿಂಗ್ ವಿದ್ ವೂಲ್ಫ್ಸ್~ ಎಂಬ ಸಿನಿಮಾವೊಂದಿದೆ. ಅಲ್ಲಿ ನಾಯಕಿ ಜೀವನಪರ‌್ಯಂತ ಕ್ರೂರ ಎಂದು ನಂಬಿದ ಸಮುದಾಯದೊಂದಿಗೆ ನೇರ ಸಂಪರ್ಕಕ್ಕೊಳಗಾದಾಗ ಅವರಲ್ಲಿಯೂ ಮಾನವೀಯ ಮೌಲ್ಯ ಇದೆ ಎಂದು ತಿಳಿಯುತ್ತಾನೆ. ಹಾಗೆ ಆದರೆ ಭಾರತದಲ್ಲಿ ಮಾರುಕಟ್ಟೆಯ ಸ್ವರೂಪ ಬದಲಾಗಬೇಕಾಗಿದೆ. ಅಲ್ಲದೆ ಪ್ರತಿ ಬರಹಗಾರನೂ ತಾನೊಬ್ಬ ವಿಕಿಲೀಕಿಯನ್ ಎಂಬಂತೆ ಸಾಹಿತ್ಯ ರಚಿಸಬೇಕಾಗಿದೆ.

ಲೇಖಕರಾಗಿ ಇತರ ಭಾರತೀಯ ಭಾಷೆಗಳ ಸಾಹಿತ್ಯದ ಜೊತೆಗೆ ನಿಮಗಿರುವ ಸಂಬಂಧದ ಕುರಿತು ಮತ್ತು ನಿಮ್ಮನ್ನು ಬಹಳವಾಗಿ ಪ್ರಭಾವ ಬೀರಿದ ಲೇಖಕರು ಮತ್ತು ಬರವಣಿಗೆಯ ಕುರಿತು ಹೇಳಿ.

ಉದಯಪ್ರಕಾಶ್: ಹಿಂದಿ ಸಾಹಿತ್ಯ ಲೋಕ ನನ್ನನ್ನು ಮೂರ್ತಿಭಂಜಕನೆಂಬಂತೆ ನೋಡಿತು. ಆದರೆ ನನ್ನನ್ನು ಉಳಿಸಿದ್ದು ಇತರ ಭಾಷೆಗಳೇ, ಭಾಷಾಂತರದ ಮೂಲಕ. ಸಣ್ಣಂದಿನಿಂದಲೂ ನಾನೊಬ್ಬ ಪುಸ್ತಕದ ಹುಳು. ಇಂದಿಗೂ ನನಗೆ ಓದುವುದು, ಬರೆಯುವುದನ್ನು ಬಿಟ್ಟರೆ ಮತ್ತಿನ್ನೇನೂ ಮಾಡಲು ಗೊತ್ತಿಲ್ಲ. ನನಗೆ ಬಹಳ ಪ್ರಿಯವಾದ ಬರಹಗಾರರು ಹಲವರು -- ನಿಮ್ಮ ಭಾಷೆಯ ಪ್ರಸನ್ನ, ಶಿವಪ್ರಕಾಶ, ಕಂಬಾರ ಇವರೆಲ್ಲರೂ ನನ್ನ ಮನಸ್ಸಿಗೆ ಆಪ್ತರು. ಮಲಯಾಳಂ ಭಾಷೆಯ ಕೆ. ಸಚ್ಚಿದಾನಂದ ನನ್ನ ಪ್ರಕಾರ ಇಂದಿನ ಕಾಲದ ಅತ್ಯಂತ ಶ್ರೇಷ್ಠ ಕವಿ. ಅಂಥಾ ಕವಿ ಹಿಂದಿಯಲ್ಲಿ ಇಲ್ಲವೇ ಇಲ್ಲ. ಬಹಳಷ್ಟು ಬರಹಗಾರರ ಪ್ರಭಾವ ನನ್ನ ಮೇಲಿದೆ. ಚೆಕಾವ್, ಗಾರ್ಕಿ, ಅನಂತಮೂರ್ತಿ. ಆದರೆ ಎಲ್ಲರಿಗಿಂತ ಹೆಚ್ಚು ಪ್ರಭಾವ ಬೀರಿದ ಬರಹಗಾರ ಬ್ರೆಕ್ಟ್, ಮತ್ತೆ ಮಾರ್ಕ್ಸ್. ಚಿಲಿ ದೇಶದ ಕವಿ ನೆರೂದನ ಪ್ರಭಾವ ಬಹಳಷ್ಟಿದೆ. ಇತ್ತೀಚೆಗೆ ಆತನ ಜೀವನವನ್ನಾಧರಿಸಿದ `ಇಲ್ ಪೋಸ್ಟಿನೊ~ ಸಿನಿಮಾ ನೋಡಿದೆ. ಒಬ್ಬ ಬರಹಗಾರ ತನ್ನ ಸುತ್ತಲಿನ ಲೋಕದೊಂದಿಗೆ ಎಂಥಾ ಮಾನವೀಯ ಸಂಬಂಧ ಇಟ್ಟುಕೊಂಡಿದ್ದ!

ಋತ್ವಿಕ್ ಘಟಕ ತನ್ನ `ತಿತಸ್ ಏಕ್ ನದಿರ ನಾಮ್~ನಂತಹ ಸಿನಿಮಾಗಳ ಮುಖಾಂತರ ನನ್ನೊಳಗೆ ಹಲವು ಅಲೆಗಳನ್ನು ಎಬ್ಬಿಸಿದ್ದಾನೆ. ಅವನಂತೆಯೇ ಹಬೀಬ್ ತನ್ವೀರರು ನನ್ನನ್ನು ಹಲವಾರು ಆಲೋಚನೆಗಳಿಗೆ ಹಚ್ಚಿದ್ದಾರೆ. ಈ ಎಲ್ಲಾ ಬರಹಗಾರರು ಯಾವುದೇ ದೇಶ-ಭಾಷೆಗೆ ಸೀಮಿತರಾದವರು ಎಂದು ನನಗನ್ನಿಸುವುದಿಲ್ಲ. 90ರ ದಶಕದಲ್ಲಿ ಪೂರ್ವ ಯುರೋಪಿನಲ್ಲಿ ವಾರ್ ಹೀರೋಗಳ ಪ್ರತಿಮೆಗಳನ್ನೆಲ್ಲಾ ನಾಶಮಾಡಲಾಯಿತು. ಅಲ್ಲೇ ಹತ್ತಿರದಲ್ಲಿದ್ದ ಪುಶ್ಚಿನ್‌ನ ಪ್ರತಿಮೆಯನ್ನು ಆಕ್ರೋಶಿತ ವಿದ್ಯಾರ್ಥಿಗಳು ಮುಟ್ಟಲಿಲ್ಲ. ಯಾಕೆಂದು ಕೇಳಿದಾಗ ಆತ ರಷ್ಯನ್ ಅಲ್ಲವೇ ಅಲ್ಲ ಎಂದರಂತೆ!

ರೋಲಾ ಬಾರ್ತ್ ಹೇಳುವಂತೆ ಒಬ್ಬ ರೈಟರ್ ಮತ್ತು ಆಥರ್ ನಡುವೆ ವ್ಯತ್ಯಾಸ ಇದೆ. ಒಬ್ಬ ರೈಟರ್ ಅತಾರ್ಕಿಕವಾಗಿ ಬರೆಯಲಾರ. ಆದರೆ ಒಬ್ಬ ಆಥರ್‌ಗೆ ಆ ಸ್ವಾತಂತ್ರ್ಯವಿದೆ. ಅಂಥಾ ಅತಾರ್ಕಿಕತೆಯ ಮುಖಾಂತರ ಆತ ಸತ್ಯದರ್ಶನ ಮಾಡಿಸಬಲ್ಲ. ಅದಕ್ಕೆ ಆತ ಒಬ್ಬ ರೈಟರ್‌ಗಿಂತ ಹೆಚ್ಚು ಗೌರವಾರ್ಹ. ಅದಕ್ಕೆ ಆತ ದೇಶ-ಕಾಲಾತೀತನಾಗಬಲ್ಲ. ನನಗನ್ನಿಸುವುದೇನೆಂದರೆ ಗಾಂಧಿಯೂ ಒಬ್ಬ ಆಥರ್. ಭೂಕಂಪಕ್ಕೂ ಅಸ್ಪೃಶ್ಯತೆಗೂ ಸಂಬಂಧ ಕಲ್ಪಿಸಿ ಅಸ್ಪೃಶ್ಯತೆಯ ಅಮಾನವೀಯತೆ ಕಾಣಿಸಬಲ್ಲ ಶಕ್ತಿ ಆತನಲ್ಲಿದ್ದಿತ್ತು. ಇವತ್ತಿಗೂ ನೀವು ವಿಭಜನೆಯ ಕುರಿತು ಇರುವ ಬರವಣಿಗೆಗಳನ್ನು ನೆನಪಿಸಿಕೊಳ್ಳಲು ಹೊರಟರೆ ಐತಿಹಾಸಿಕ ಬರವಣಿಗೆ, ಪ್ರಬಂಧ, ಆತ್ಮಕಥೆ ಇವೆಲ್ಲವುಗಳಿಗಿಂತ ತೀವ್ರವಾಗಿ ನೆನಪಿಸಿಕೊಳ್ಳುವುದು ಮಾಂಟೋನ `ತೋಬಾ ತೇಕ್ ಸಿಂಗ~ನನ್ನು. ಅಲ್ಲಿನ `ಗಿಡಗಿಡದಿ ಪಿಡಪಿಡದಿ...~ ಸಾಲು ಯಾವ ಭಾಷೆಗೂ ಸೇರದ ಯಾವುದೇ ರಾಶನಾಲಿಟಿ ಇಲ್ಲದ ಸಾಲು. ಆದರೂ ಅದು ವಿಭಜನೆಯ ಇರ‌್ರಾಶನಾಲಿಟಿ ತೋರಿಸುತ್ತದೆ.

ಬರವಣಿಗೆಯ ಹಿಂದೆ ಒಂದು ರೀತಿಯ ತುರ್ತು, ಅನಿವಾರ್ಯತೆ ಇರುತ್ತದೆ. ನಿಮ್ಮ ಬರವಣಿಗೆಯನ್ನೇ ಕೇಂದ್ರದಲ್ಲಿಟ್ಟು ಈ ತುರ್ತು ಈ ಅನಿವಾರ್ಯತೆ ಕುರಿತು ಸ್ವಲ್ಪ ಹೇಳಿ. ಮತ್ತೆ ಬರೆಯುವಲ್ಲಿ ಬರೆಯುವಾತ ಎದುರಿಸುವ ಸವಾಲುಗಳು ಯಾವುವು?

ಉದಯಪ್ರಕಾಶ್:
ಒಬ್ಬ ಕ್ಷೌರಿಕನಿಗೆ ರಾಜನ ತಲೆಕೂದಲು ಕತ್ತರಿಸುವಾಗ ರಾಜನಿಗೆ ಕೊಂಬು ಇದೆ ಎಂದು ತಿಳಿಯಿತಂತೆ. ಆದರೆ ಈ ವಿಷಯವನ್ನು ಯಾರ ಬಳಿಯೂ ಹೇಳಲು ಸಾಧ್ಯವಿರಲಿಲ್ಲ. ಯಾಕೆಂದರೆ ಆತ ರಾಜ. ಹೇಳದೆ ಉಳಿಯಲೂ ಆಗಲಿಲ್ಲ. ಹಾಗಾಗಿ ಆತ ಹೋಗಿ ಮರವೊಂದರ ಬಳಿ ವಿಷಯವನ್ನು ಹೇಳಿದನಂತೆ. ಮುಂದೆ ಆ ಮರವನ್ನು ಕಡಿದು ಸಾರಂಗಿ ಮಾಡಲಾಯಿತು. ಆ ಸಾರಂಗಿ ನುಡಿಸಿದಾಗಲೆಲ್ಲಾ ಅದು `ರಾಜನಿಗೆ ಕೊಂಬಿದೆ~ ಎಂದು ಹಾಡಲಾರಂಭಿಸುತ್ತಿತ್ತಂತೆ. ನಿಮಗೊಂದು ಸತ್ಯ ತಿಳಿಯಿತು ಎಂದಾದರೆ ಅದನ್ನು ಹೇಳದೆ ಇರಲು ಸಾಧ್ಯವಿಲ್ಲ. ಆದರೆ ಸತ್ಯ ಹೇಳುವುದು ಕಷ್ಟ. ಹಾಗಾಗಿ ಸತ್ಯಕ್ಕೆ ಪ್ರತಿಮೆಗಳ ಬಟ್ಟೆ ತೊಡಿಸಿ ಸೃಜನಶೀಲ ಬರವಣಿಗೆ ಎಂಬಂತೆ ಜನರಿಗೆ ಕೊಡಲಾಗುತ್ತದೆ. ಅದೂ ಅಲ್ಲದೆ ಲೇಖಕನೂ ಒಬ್ಬ ಸಾಮಾನ್ಯ ವ್ಯಕ್ತಿಯಾಗಿರುವ ಕಾರಣ ಆತ ಲೋಕಾನುಭವಕ್ಕೆ ಹೊರಗಿನವನಲ್ಲ.

ಅವನ ಅನುಭವ ಇತರರ ಅನುಭವದಂತೆಯೇ ಇರುತ್ತದೆ. ಆದರೆ ಅದನ್ನು ಆತ ತನ್ನ ಕತೆಯಲ್ಲ ಎಂಬಂತೆ ಹೇಳುತ್ತಾನೆ. ಹಾಗೆ ಹೇಳಿಕೊಳ್ಳುವುದು ಮತ್ತು ಓದುಗ ತನ್ನನ್ನೇ ಗುರುತಿಸಿಕೊಳ್ಳುವಂತಾಗುವುದು ಲೇಖಕನ ಮುಂದಿರುವ ಸವಾಲು. ಮತ್ತೆ ತನ್ನ ಸೃಜನಶೀಲ ಬರವಣಿಗೆಯ ಮುಖಾಂತರ ಬರಹಗಾರ ಜಗತ್ತನ್ನು ವಿಮರ್ಶಿಸುತ್ತಾ ಇರುತ್ತಾನೆ. ಈ ವಿಮರ್ಶೆ ಆತನ ಜವಾಬ್ದಾರಿ.

ನೀವು ಈಗತಾನೆ ಹೇಳಿದ ಕತೆಯಲ್ಲಿ ಹಾಸ್ಯದ ಲೇಪವಿದ್ದರೂ ಅದು ತುಂಬಾ ಸೀರಿಯಸ್ ಆದಂತದ್ದಾಗಿತ್ತು. ನಿಮ್ಮ `ದಿಲ್ಲಿ~ಯಂತಹ ಕತೆಗಳಲ್ಲೂ ಆ ಗುಣ ಇದೆ.
ಉದಯಪ್ರಕಾಶ್: ಹಾಸ್ಯ ಒಂದು ದೊಡ್ಡ ಅಸ್ತ್ರ. ಬ್ಯೂನೆಲ್ ತನ್ನ ಆತ್ಮಚರಿತ್ರೆಯಲ್ಲಿ ಹೇಳಿಕೊಳ್ಳುತ್ತಾನೆ, ನಾಜಿಗಳು ಪ್ರಚಾರಕ್ಕಾಗಿ ಮಾಡಿದ ಸಿನಿಮಾಗಳು ಪ್ರಗತಿಪರ ಚಿತ್ರ ನಿರ್ದೇಶಕರನ್ನೆಲ್ಲಾ ನಡುಗಿಸಿತು. ಅವುಗಳಿಗೆ ಪ್ರತಿಯಾಗಿ ಸಿನಿಮಾ ಮಾಡುವುದು ಹೇಗೆಂದು ತಿಳಿಯದಾದರು. ಯಾಕೆಂದರೆ ಫ್ಯಾಸಿಸಂಗೆ ಇರುವಂತೆ ಫ್ಯಾಸಿಸ್ಟರ ಸಿನಿಮಾಕ್ಕೆ ಒಂದು ರೀತಿಯ ಜ್ಟಚ್ಞಛ್ಠಛಿ ಇತ್ತು. ಆದರೆ ಆ ಸಿನಿಮಾಗಳನ್ನು ನೋಡಿದ ಚಾಪ್ಲಿನ್ ಜೋರಾಗಿ ನಕ್ಕನಂತೆ. ಮುಂದೆ ಅತಿ ಹಾಸ್ಯವೆಂಬ ಅಸ್ತ್ರ ಬಳಸಿ ಹಿಟ್ಲರನನ್ನು ಚಿಲ್ಲರೆಯಂತಾಗಿಸಿದ. ವ್ಲಾದಮಿರ್ ನಟಕೋಬ್ ತನ್ನ ಪ್ರಬಂಧವೊಂದರಲ್ಲಿ ಹೇಳುತ್ತಾನೆ, ಕಾಮನ್ ಸೆನ್ಸ್ ಕಲಾವಿದರ ಶತ್ರು ಎಂದು.

ಹಿಂದಿ ಸಾಹಿತ್ಯದಲ್ಲಿ ಯಾವ ಪ್ರಕಾರದ ಯಾವ ಶೈಲಿಯ ಬರವಣಿಗೆ ಜಾಸ್ತಿಯಾಗುತ್ತಿದೆ? ಮತ್ತು ಇದಕ್ಕೆ ಕಾರಣವೇನಿರಬಹುದು?

ಉದಯಪ್ರಕಾಶ್: ಕತೆಗಳೇ ಹಿಂದಿ ಸಾಹಿತ್ಯದಲ್ಲಿ ಜನಪ್ರಿಯ. ಪ್ರಕಾಶಕರೂ ಹೆಚ್ಚೆಚ್ಚು ಕತೆಗಳನ್ನೇ ಪ್ರಕಟಿಸುತ್ತಾರೆ. ಕಾವ್ಯದ ಓದುಗರು ಬಹಳ ಕಡಿಮೆಯಾಗಿದ್ದಾರೆ. ಇಂದು ಬೆಳಿಗ್ಗೆ ನನ್ನನ್ನು ಭೇಟಿಯಾಗಲು ಬಂದಿದ್ದ ಯುವ ಕವಿಯೊಬ್ಬ ಹೇಳುತ್ತಿದ್ದ: ಆತನನ್ನು ಐಇಇ್ಕನವರು ಕವಿತೆ ಓದಲು ಆಹ್ವಾನಿಸಿದರಂತೆ. ಅಂದಿನ ಕಾರ್ಯಕ್ರಮದಲ್ಲಿ ಇದ್ದುದು ಕೇವಲ 16 ಮಂದಿಯಂತೆ. ಅವರಲ್ಲಿ 8 ಮಂದಿ ಕವಿಗಳೇ! ಸರಕಾರವೂ ಕವನ ಸಂಕಲನಗಳನ್ನು ಖರೀದಿಸುತ್ತಿಲ್ಲ.

ಸಾಹಿತ್ಯಾಭಿರುಚಿ ಹೆಚ್ಚಿಸುವಂತಾ ಪ್ರಯೋಗಗಳು ಹಿಂದಿಯಲ್ಲಿ ನಡೆಯುತ್ತಿವೆಯಾ? ಇತರ ಭಾಷಾ ಸಾಹಿತ್ಯ ಹಿಂದಿ ಸಾಹಿತ್ಯದಿಂದ ಕಲಿಯಬಹುದಾದ್ದು ಏನು?

ಉದಯಪ್ರಕಾಶ್:
ಅಂಥ ಪ್ರಯೋಗ ಏನಾದರು ಇದೆ ಎಂದು ನಿಮಗನಿಸುತ್ತದೆಯೆ? ನನಗೆ ಹಾಗನ್ನಿಸುತ್ತಿಲ್ಲ.

ಹಿಂದಿ ಉಳಿದ ಭಾಷೆಗಳಿಂದ ಕಲಿಯಬೇಕಾಗಿದೆ ಅಂತ ಅನ್ನಿಸುತ್ತದೆ. ಹೊಸ ಪ್ರಯೋಗಗಳನ್ನು ಗುರುತಿಸುವ ವಿಮರ್ಶಕರು ಹಿಂದಿಯಲ್ಲಿಲ್ಲದ ಕಾರಣ ಹೊಸ ಪ್ರಯೋಗಗಳು ಸಾಧ್ಯವಾಗಿಲ್ಲ.

ಹೊಸ ಬರಹಗಾರರು ಪಟ್ಟಣದತ್ತ ಮುಖ ಮಾಡಿದುದನ್ನು ಸೂಚಿಸಿದಿರಿ. ಭಾಷೆಯನ್ನು ಏಕರೂಪಿಯಾಗಿಸುವ ಪ್ರಯತ್ನ ನಡೆಯುತ್ತಿದೆ ಎಂದೂ ಸೂಚಿಸಿದಿರಿ. ಇದರಿಂದಾಗಿ ಮೂಲೆಗುಂಪಾಗಿರುವ ಅನುಭವ ಮತ್ತು ಲೋಕಗಳ್ಯಾವು? ಇಂಥಾ ಸಾಹಿತ್ಯ ಓದುತ್ತಾ ಬೆಳೆಯುವ ತಲೆಮಾರಿನ ಸಂವೇದನೆ ಯಾವ ಸ್ವರೂಪದ್ದಾಗಿರಬಹುದು?

ಉದಯಪ್ರಕಾಶ್:
ಭಾಷೆಯನ್ನು ಏಕರೂಪಿಯಾಗಿಸುವ ಪ್ರಯತ್ನ ಎಂದೂ ಯಶಸ್ವಿಯಾಗಿದ್ದಿಲ್ಲ.

ಇಂಥಾ ಪ್ರಯತ್ನ, ಭಾಷೆ, ಸಂಸ್ಕೃತಿ ಯಾವುದೇ ವಲಯದಲ್ಲಿ ನಡೆದರೂ ಅದು ಆತ್ಮಹತ್ಯೆ ಮಾಡಿಕೊಂಡಂತೆಯೇ. ಅದು ಶ್ರೀಮಂತವಾದ ಲೋಕವನ್ನು ಕಡೆಗಣಿಸುತ್ತದೆ. ಆ ಮುಖಾಂತರ ತನ್ನನ್ನು ತಾನೇ ಬಡವಾಗಿಸಿಕೊಳ್ಳುತ್ತದೆ.

ಮೀರಾಳಿಗಿಂತ ಸಶಕ್ತವಾದ ಕವಿ ಕನ್ನಡ ಭಾಷೆಯಲ್ಲಿದ್ದಿರಬಹುದು. ಆದರೆ ರಾಷ್ಟ್ರೀಯ ಭಾಷೆ ಹಿಂದಿಯಾಗಿರುವ ಕಾರಣ ದೇಶದ ಇತರ ಭಾಗಗಳಲ್ಲಿ ಜನರಿಗೆ ಆ ಕವಿಯ ಪರಿಚಯ ಇದ್ದಿರಲಿಕ್ಕಿಲ್ಲ. ಬಿ.ವಿ. ಶಾಸ್ತ್ರಿ ಬರೆಯುತ್ತಾರೆ, ದಕ್ಷಿಣ ಭಾರತದ ಸಂಸ್ಕೃತಿ ಉತ್ತರ ಭಾರತದ ಸಂಸ್ಕೃತಿಗಿಂತ ಹೆಚ್ಚು ಶ್ರೀಮಂತವಾದುದೆಂದು. ಆದರೆ ದುಃಸ್ಥಿತಿಯೆಂದರೆ ಭಾರತ ಎಂದರೆ ಉತ್ತರ ಭಾರತ ಎಂಬಂತಾಗಿದೆ. ಒಂದರ್ಥದಲ್ಲಿ ಇದು ಉತ್ತರ ಭಾರತಕ್ಕಾದ ನಷ್ಟ.

ಹಿಂದಿ ಭಾಷೆಯೊಳಗಡೆಯೂ, ಈ ಹಿಂದೆ ಹೇಳಿದಂತೆ, ವಿಮರ್ಶಕರು ತೀರ ಸಂಪ್ರದಾಯವಾದಿಗಳು. ಸಂಸ್ಕೃತಮಯ ಹಿಂದಿಯನ್ನೇ ಅಪೇಕ್ಷಿಸುವವರು. ಹೀಗಾಗಿ ಅವರು ಹಲವು ಸಂಸ್ಕೃತಿ ಹಲವು ಅನುಭವಗಳನ್ನು ತಮ್ಮ ಲೋಕದಿಂದ ಹೊರಗಿಡುತ್ತಾರೆ. ಪ್ರೇಮಚಂದ್ ಪರ್ಶಿಯನ್-ಉರ್ದು ಭಾಷಾ ಹಿನ್ನಲೆಯಿಂದ ಬಂದ ಕಾರಣ ಅವರನ್ನು ಮೊದಲಿಗೆ ತಿರಸ್ಕರಿಸಲಾಗಿತ್ತು. ಇಂಥಾ ಸಂಪ್ರದಾಯವಾದಿಗಳಿಗೆ ಹಿಂದಿ ರಾಷ್ಟ್ರ ಭಾಷೆಯಾದದ್ದು ಇನ್ನಷ್ಟು ಪುಷ್ಟಿ ನೀಡಿತು, ಮತ್ತು ಸಂಸ್ಕೃತಮಯ ಹಿಂದಿ ಭಾಷೆಯನ್ನು ಅಧಿಕೃತ ಹಿಂದಿ ಭಾಷೆ ಎಂಬಂತೆ ಮಾಡಿತು.

ಸಾಹಿತ್ಯವನ್ನು ಲೋಕ ಜೀವನದ ಚೌಕಟ್ಟಿನೊಳಗಿಟ್ಟು ನೀವು ಮಾತನಾಡುತ್ತಿದೀರಿ. ಸಂಗೀತಕಾರ ಹಾನ್ಸ್ ಈಸ್ಟರ್ ಹೇಳುತ್ತಾನೆ-ಕಲೆಯನ್ನು ಬಿಕ್ಕಟ್ಟಿನಿಂದ ಪಾರುಮಾಡಲು ಜಗತ್ತಿನ ಸಾಮಾಜಿಕ-ಆರ್ಥಿಕ ಬಿಕ್ಕಟ್ಟನ್ನು ಪರಿಹರಿಸಲು ಕಲೆಯನ್ನು ಉಪಯೋಗಿಸುವುದು. ಆತ ಕಲೆಯ ಬಿಕ್ಕಟ್ಟಿಗೆ ಸಾಮಾಜಿಕ-ಆರ್ಥಿಕ ಬಿಕ್ಕಟ್ಟು ಕಾರಣ ಎಂದು ನಂಬಿದ್ದ ನಿಮಗೂ ಹಾಗೆನಿಸುತ್ತದೆಯಾ?

ಉದಯಪ್ರಕಾಶ್: ಅದ್ಭುತ. ಈಸ್ಟರ್‌ನೊಂದಿಗೆ ನನಗೆ ಪೂರ್ಣ ಸಮ್ಮತಿ ಇದೆ. ಭೋಪಾಲ ದುರಂತದ ನಂತರ ಅಲ್ಲಿ ಕೆಲಸ ಮಾಡುತ್ತಿದ್ದ ಕಾರ್ಯಕರ್ತರು ಅಲ್ಲಿ ಬದುಕುಳಿದ ಮಕ್ಕಳ ಕೈಯಲ್ಲಿ ಕಾಗದ, ಬಣ್ಣದ ಪೆನ್ಸಿಲ್ ನೀಡಿ ಚಿತ್ರ ಬರೆಯಲು ಹೇಳಿದರಂತೆ. ಮಕ್ಕಳೆಲ್ಲ ಚಿಟ್ಟೆ, ಸೂರ್ಯೋದಯವನ್ನು ಬಿಡಿಸಿದರು. ಅಂದರೆ ಅವರು ಏನು ಕಳೆದುಕೊಂಡಿದ್ದರೋ ಆ ಲೋಕವನ್ನು ಕಟ್ಟಲು ಬಯಸುತ್ತಿದ್ದರು. ಒಳ್ಳೆಯ ಕಲೆ ಸುತ್ತಲಿನ ಲೋಕವನ್ನು ಕಟ್ಟಲು ಪ್ರಯತ್ನಿಸುತ್ತಿರುತ್ತದೆ ಎಂಬುದು ಸತ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT