ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾಷೆಯೊಳಗೆ ಗಂಡಿನ ಜಬರ್‌ದಸ್ತ್

Last Updated 12 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಬಿ.ಜೆ.ಪಿ.ಯ ಆಯನೂರು ಮಂಜುನಾಥ್ ಅವರು ನಟಿ ಹಾಗೂ ಜೆಡಿಎಸ್ ಯುವ ಘಟಕದ ಕಾರ್ಯದರ್ಶಿ ಪೂಜಾ ಗಾಂಧಿಯವರನ್ನು `ದಂಡುಪಾಳ್ಯದ ರಾಣಿ~ಯೆಂದು ಕರೆದಿರುವುದು - ಭಾಷೆ, ವ್ಯಕ್ತಿಯ, ಬಹುತೇಕ ಪುರುಷರ ಪೂರ್ವಗ್ರಹ ಪೀಡಿತ, ಆಳವಾಗಿ ಬೇರೂರಿರುವ ಅನಿಸಿಕೆ, ನಂಬಿಕೆಗಳನ್ನು ಬಿಂಬಿಸುತ್ತವೆ.

ಮಂಜುನಾಥ್ ಅವರ ಸುಪ್ತಮೌಲ್ಯ ನೇರವಾಗಿ ಅಭಿವ್ಯಕ್ತಿ ಪಡೆದಿದೆ. ಅವರ ಗುರಿ ಜೆಡಿ(ಎಸ್) ಪಕ್ಷವಾಗಿದ್ದರೂ, ಒಬ್ಬ ಮಹಿಳೆಯ ಸಿನಿಮಾ ಪಾತ್ರವನ್ನು ಸಾಧನವಾಗಿ ಉಪಯೋಗಿಸಿದ್ದು ಅಕ್ಷಮ್ಯ ಹಾಗೂ ಅವರ ಸಂವೇದನಾ ಶಕ್ತಿಯ ಕೊರತೆಯನ್ನು ಪ್ರದರ್ಶಿಸಿದೆ.
 
ಜೊತೆಗೆ ಪೂಜಾಗಾಂಧಿ ಅನುಭವಿಸಿರಬಹುದಾದ ಸಂಕಟ, ಸಾರ್ವಜನಿಕ ಆಭಾಸ ಅವಹೇಳನಕ್ಕೆ (ಕಾನೂನು ಹೊರತುಪಡಿಸಿ) ಪರಿಹಾರವಿದೆಯೆ? ನಮ್ಮ ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆಯೊಬ್ಬರು ಒರಟು ಭಾಷೆಯಲ್ಲಿ ಉತ್ತರ ಕೊಡುವ ಸಂಗತಿ ಅಪರೂಪ. ಹಾಗಾಗಿ ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ. ಕುಮಾರ ಸ್ವಾಮಿಯವರು ಬೇಸರದಿಂದಲೇ ಪೂಜಾಗಾಂಧಿಯವರ ವೃತ್ತಿ ಬದುಕು ಹಾಳುಮಾಡುವ ಅಪಪ್ರಚಾರಕ್ಕೆ ಅಂತ್ಯ ಹಾಡಲು ಪೂಜಾ ಅವರು ಪಕ್ಷ ತೊರೆಯುವ ಆಲೋಚನೆ ಮಾಡಲಿ ಎಂದರು. ಆಯನೂರು ಮಂಜುನಾಥ್ ಅವರು ತಮ್ಮ ಮಾತಿಗೆ ವಿಷಾದ ವ್ಯಕ್ತಪಡಿಸಬಹುದೆಂದು ನಾಡಿನ ನಾಗರಿಕರು ನಿರೀಕ್ಷಿಸಿದ್ದರು. ಅದು ಆದಂತಿಲ್ಲ.

ಇತ್ತೀಚೆಗೆ, ಕೇಂದ್ರ ಕಲ್ಲಿದ್ದಲು ಸಚಿವ  ಶ್ರೀಪ್ರಕಾಶ್ ಜೈಸ್ವಾಲ್ ಹೇಳಿದ ಮಹಿಳಾ ವಿರೋಧಿ ಭಾವನಾ ಶೂನ್ಯ ಮಾತಿಗೇ ಬಹಿರಂಗ ಕ್ಷಮಾಪಣೆ ಯಾಚಿಸಬೇಕಾಯ್ತು. ಅದೂ ಹೇಳಿಕೇಳಿ ಮಹಿಳಾ ಕಾಲೇಜಿನ ಕವಿ ಸಮ್ಮೇಳನದಲ್ಲಿ  ಆಡಿದ ಮಾತು.

ಭಾರತ ಟಿ-20 ಕ್ರಿಕೆಟ್‌ನಲ್ಲಿ ಪಾಕಿಸ್ತಾನದ ವಿರುದ್ಧ ಜಯ ಸಾಧಿಸಿತ್ತು. `ಹೊಸ ಗೆಲುವಿನ ಸಂತೋಷ ಹೊಸ ವಿವಾಹದಂತೆ. ಕಾಲಕ್ರಮೇಣ ಹಳೆಯ ಗೆಲವು ಹಾಗೂ ವಯಸ್ಸಾದ ಪತ್ನಿಯಲ್ಲಿ ಮೊದಲ ಮೋಹಕ ಶಕ್ತಿ ಮರೆಯಾಗುತ್ತದೆ~  ಎಂದಿದ್ದರು.

ವ್ಯಾಪಕ ಪ್ರತಿಭಟನೆಗಳು ಹಾಗೂ ಸೋನಿಯಾ ಗಾಂಧಿಯವರಿಗೆ ಕೊಟ್ಟ ದೂರಿನ ನಂತರವೇ ಜೈಸ್ವಾಲ್ ಕ್ಷಮೆ ಯಾಚಿಸಿದ್ದು. ಆದರೂ ಒಬ್ಬ ಕಾಂಗ್ರೆಸಿಗನಾಗಿ ನಾನು ಅವರ ಹಗುರ ಮಾತನ್ನು ಖಂಡಿಸುವುದು ಅನಿವಾರ್ಯ.
 
ಕೆಲವೇ ದಿನಗಳ ಹಿಂದೆ, ಹರಿಯಾಣದ ಓಂಪ್ರಕಾಶ್ ಚೌತಾಲ ಅವರು ಅಪ್ರಾಪ್ತ ವಯಸ್ಸಿನ ಹೆಣ್ಣು ಮಕ್ಕಳ ವಿವಾಹ ಅತ್ಯಾಚಾರಕ್ಕೆ ಮದ್ದು ಎನ್ನುವ ಉದಾರ ಉಪದೇಶ ಮಾಡಿದ್ದರು.

ಅದೇ ರಾಜ್ಯದ ಕಾಂಗ್ರೆಸ್ ಶಾಸಕ ಧರಂವೀರ್ ಅವರು `ಬಹುತೇಕ ಅತ್ಯಾಚಾರ ಘಟನೆಗಳು ಪರಸ್ಪರ ಒಪ್ಪಿಗೆಯಿಂದಾಗುವ ಪ್ರಕ್ರಿಯೆ~ ಅಂದ ಮಾತು ಲಜ್ಜಗೇಡಿತನದ ಪರಮಾವಧಿ. ಸಮಾಜದಲ್ಲಿ ನಾಯಕತ್ವ ಕೊಡುವ ಇಂತವರ ವಿರುದ್ಧ ರಾಜಕೀಯ ಪಕ್ಷಗಳು ಕಠಿಣ ಕ್ರಮ ತೆಗೆದುಕೊಳ್ಳುವ ಮೂಲಕ ಸ್ತ್ರೀ ವಿರೋಧಿ ಶಕ್ತಿಗಳಿಗೆ ಕಡಿವಾಣ ಹಾಕುವುದು ನಮ್ಮ ಸಮಾಜದ ಆರೋಗ್ಯಕ್ಕೆ ಒಳಿತು.

`ಮಾತೃದೇವೋ ಭವ~, `ಪಿತೃದೇವೋ ಭವ~ ಎಂದು ನಿರಂತರವಾಗಿ ಜಪಿಸುವ ನಾವು ವಾಸ್ತವ ನೆಲೆಗಟ್ಟಿನಲ್ಲಿ ದಿನ ನಿತ್ಯದ ಬದುಕಿನಲ್ಲಿ ಪಿತೃ ಅಥವಾ ಪುರುಷನಿಗೇ ಪ್ರಾಧಾನ್ಯತೆ ಕೊಡುತ್ತೇವೆ.  ಮೃದು ಗಂಡಸಿಗೆ `ಹೆಣ್ಣಿಗ ರಾಮ~ ಎಂತಲೂ, ಹೆಣ್ಣಿಗೆ `ಗಂಡುಬೀರಿ~, `ಬಜಾರಿ~ ಎಂತಲೂ ಪದಗಳನ್ನ ಲೋಕಾಭಿರಾಮವಾಗಿ ಬಳಸುವುದಿಲ್ಲವೆ? ದಿನ ನಿತ್ಯದ ಬೈಗುಳದ ಭಾಷೆಯಲ್ಲಿ `ಸೂಳೆ ಮಗನೆ, ಬೋಳಿ ಮಗನೆ~ ಎಂದು ಬಳಸುವಾಗ `ಮಗ~ನಿಗಿಂತ ಹೆಣ್ಣು ಕುರಿತ ಗುಣವಾಚಕವೇ ಗಮನಾರ್ಹ.

ಅಂದರೆ, ಗಂಡು ತಪ್ಪೆಸಗಿದಾಗಲೂ ಭಾಷೆಯಲ್ಲಿ ಹೆಣ್ಣಿನ (ಲಿಂಗ) ಮೂಲಕವೇ ಹೊಣೆ ಹೊರಿಸುವುದು. ಹೊಗಳುವುದೂ(?) ಹಾಗೇ: `ಇಂದಿರಾ ಗಾಂಧಿಯವರ ಸಚಿವ ಸಂಪುಟದಲ್ಲಿ ಅವರೊಬ್ಬರೇ ಗಂಡಸರು~ ಎನ್ನುವ ಮಾತು ಎಷ್ಟು ಸಲ ಕೇಳಿಲ್ಲ! ಕನ್ನಡ ಟಿ.ವಿ. ಚಾನೆಲ್‌ಗಳ  ನಗೆ  ಕಾರ್ಯಕ್ರಮಗಳಲ್ಲಿ  ಸ್ತ್ರೀ (ಪತ್ನಿ) ಕೇಂದ್ರಿತ ಜೋಕ್‌ಗಳು ಹೆಚ್ಚಾಗುತ್ತಿರುವುದು ಕೀಳು ಅಭಿರುಚಿಯಲ್ಲವೆ? ಹಾಗೇ, ವಿಧವೆಯರ ಬಗ್ಗೆ ನಿಕೃಷ್ಟ ಭಾಷೆ, ಮನೋಧೋರಣೆ ನಮ್ಮ ಸಂಸ್ಕೃತಿಯ ಭಾಗವಾಗಿರುವುದು ದುರದೃಷ್ಟ.

ನಮ್ಮ ಭಾಷೆ ಅಥವಾ ಅಭಿವ್ಯಕ್ತಿ ಪುರುಷ ಪ್ರಧಾನ ಸಮಾಜದ ಲಿಂಗತ್ವ (ಜೆಂಡರ್) ಮತ್ತು ಲೈಂಗಿಕ ತಾರತಮ್ಯ (ಸೆಕ್ಸಿಸ್ಟ್)ಗಳ ಪ್ರತಿಬಿಂಬವಿರಬಹುದಲ್ಲವೇ? ಇಂಥ ಕಲ್ಪನೆಗಳು  `ಯಜಮಾನ್ಯ~ ಅಥವಾ `ಕುಲದ ಅಧಿಪತಿ~ (ಪ್ಯಾಟ್ರಿಯಾರ್ಕ್) ಮೌಲ್ಯಗಳು ಸಮಾಜದ ರಚನೆ ವಿನ್ಯಾಸಗಳಲ್ಲಿ ಹಾಸುಹೊಕ್ಕಾಗಿವೆ. ಅವು ಸೈದ್ಧಾಂತಿಕ ಸ್ಥಾನ-ಮಾನವನ್ನೂ ಪಡೆದು ಲಿಂಗ ಅಸಮತೆಗೆ ದೃಢೀಕರಣವನ್ನು ಒದಗಿಸಿದೆ. ಎಲ್ಲದರಲ್ಲೂ ಗಂಡಿನ ಜಬರ್‌ದಸ್ತ್ `ನೈಜವಾಗಿ~ರುವಂತೆ ತೋರುತ್ತದೆ.

ಸ್ವಾಮಿ ವಿವೇಕಾನಂದರು, ಮಹಿಳೆಯರನ್ನು ಕಡೆಗಣಿಸಿದ, ಶೋಷಣೆಗೆ ಒಳಪಡಿಸಿದ ಸಮಾಜ ಕುರಿತಂತೆ ಕಠಿಣ ಭಾಷೆಯಲ್ಲಿ ವಿಶ್ಲೇಷಣೆ ಮಾಡಿದರು. `ಅತ್ಯಂತ ಸಚ್ಚಾರಿತ್ಯ ಹೊಂದಿರುವ ಭಾರತೀಯ ಮಹಿಳೆಯರಿಗೆ ನೂರಾರು ವರ್ಷಗಳಿಂದ ಶಿಕ್ಷಣ, ಸಾಕ್ಷರತೆಯಿಂದ ಉದ್ದೇಶಪೂರ್ವಕವಾಗಿ ವಂಚಿಸಲಾಗಿದೆ~ ಎಂದರು. ಆದರೂ ಸಾಮಾಜಿಕ ರಚನೆಯಾಗಿದೆ ಎನ್ನುವ ಕಾರಣದಿಂದಲೇ ಇಂತಹ ವ್ಯವಸ್ಥೆಯನ್ನು ಮಾರ್ಪಡಿಸುವ ಸಾಧ್ಯತೆಗಳೂ ಇವೆ ಎಂದಿದ್ದರು.

ಮಾರ್ಚಿ 19, 1894ರಲ್ಲಿ ಚಿಕಾಗೋ ನಗರದಿಂದ ಶಶಿ (ರಾಮಕೃಷ್ಣಾನಂದ) ಅವರಿಗೆ ಬರೆದ ಸುದೀರ್ಘ ಪತ್ರದಲ್ಲಿ: `ಮಹಿಳೆಯರು ಕಳೆದುಕೊಂಡಿರುವ ಅವರ ವ್ಯಕ್ತಿತ್ವ, ಹೆಣ್ಣಾಗಿ ಅವರ ಸ್ವಾಭಾವಿಕ ಘನತೆಯನ್ನು ಪುನಶ್ಚೇತನಗೊಳಿಸಬೇಕು. ನಮ್ಮ ಸಮಾಜದಲ್ಲಾಗುತ್ತಿರುವ ಅವರ ನಿಂದನೆಯನ್ನು ಖಂಡಿಸುತ್ತೇನೆ~ ಎಂದು ನೋವಿನಿಂದ ಬರೆದರು.
 
ಅವರ ಭವಿಷ್ಯ, ಅದೃಷ್ಟವನ್ನು ಪುರುಷರು ರೂಪಿಸುವ ಕಿಡಿಗೇಡಿತನದಿಂದಲೇ ಮಹಿಳೆ ಹಿಂದುಳಿದಿರುವುದು. ಸ್ವಾಮಿ ವಿವೇಕಾನಂದರು ಅಮೆರಿಕಾದಿಂದ ಹಿಂತಿರುಗಿದ ನಂತರದ ಕಾರ್ಯಯೋಜನೆಯಲ್ಲಿ ಎರಡು ಪ್ರಮುಖ ಅಂಶಗಳಿದ್ದು, ಒಂದು: ಬಡತನದಿಂದ ನರಳುತ್ತಿರುವ ಸಾಮಾನ್ಯ ಜನರ ಬದುಕನ್ನು ಸುಧಾರಿಸುವುದು ಮತ್ತು ಎರಡು: ನಮ್ಮ ಚರಿತ್ರೆ - ಸಂಸ್ಕೃತಿಯ ಗಾರ್ಗಿ ಮತ್ತು ಮೈತ್ರೇಯಿ ಸಾಧನೆಯ ಮಾದರಿಯಲ್ಲಿ ಕಾರ್ಯಪ್ರವೃತ್ತವಾಗುವಂತ ಮಹಿಳೆಯರಿಗಾಗಿ ಒಂದು ಮಠದ ಸ್ಥಾಪನೆ. (In India there are two great evils. Trampling on the Women, and grinding the poor through caste restrictions).

ಚೌತಾಲ, ಜೈಸ್ವಾಲ್  ಮತ್ತು ಆಯನೂರು ಮಂಜುನಾಥ್ ಅವರಂತಹ ಪ್ರತಿಷ್ಠಿತ ವ್ಯಕ್ತಿಗಳು ಹೃದಯ ವೈಶಾಲ್ಯತೆ ತೋರಬಹುದೆ?

(ಲೇಖಕರು ಕರ್ನಾಟಕ ಪ್ರದೇಶ ಕಾಂಗ್ರೆಸ್ ಉಪಾಧ್ಯಕ್ಷರು ಹಾಗೂ ಮಾಜಿ ಸಚಿವರು) 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT