ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಿಕ್ಷುಕರ ಪುನರ್ವಸತಿ ಕೇಂದ್ರದಲ್ಲಿ ಜೀವಕಳೆ

Last Updated 2 ಜುಲೈ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: ಕಳಪೆ ಆಹಾರ ಸೇವನೆ, ನೈರ್ಮಲ್ಯ ಸಮಸ್ಯೆ ಸೇರಿದಂತೆ ವಿವಿಧ ಕಾರಣಗಳಿಂದ ಎರಡು ವರ್ಷಗಳ ಹಿಂದೆ ಸಾಲು ಸಾಲು ಭಿಕ್ಷುಕರ ಸಾವಿಗೆ ಕಾರಣವಾಗಿದ್ದ ನಗರದ ಮಾಗಡಿ ರಸ್ತೆಯ ಕೊಟ್ಟಿಗೆಪಾಳ್ಯದಲ್ಲಿರುವ ಭಿಕ್ಷುಕರ ಹಾಗೂ ನಿರಾಶ್ರಿತರ ಪುನರ್ವಸತಿ ಕೇಂದ್ರದಲ್ಲಿ ಪರಿವರ್ತನೆಯ ಬೆಳಕು ಮೂಡಿದೆ. ನರಕಸದೃಶತಾಣವಾಗಿದ್ದ ಪ್ರದೇಶದಲ್ಲಿ ಈಗ ಜೀವಕಳೆ ಚಿಗುರೊಡೆಯಲು ಆರಂಭಿಸಿದೆ. ಕೇಂದ್ರವನ್ನು ಹಸಿರು ತಾಣವನ್ನಾಗಿ ಮಾಡುವ ಸಂಕಲ್ಪ ಮಾಡಲಾಗಿದೆ.

ನರಕಸದೃಶದಂತಹ ಈ ಕೇಂದ್ರದಲ್ಲಿ 2010ರ ಆಗಸ್ಟ್ ತಿಂಗಳಿನಲ್ಲಿ ಭಿಕ್ಷುಕರ ಸರಣಿ ಸಾವು ಸಂಭವಿಸಿ ರಾಜ್ಯದ ಗಮನ ಸೆಳೆದಿತ್ತು. ವ್ಯಾಪಕ ಟೀಕೆ ವ್ಯಕ್ತವಾದ ಬಳಿಕ ರಾಜ್ಯ ಸರ್ಕಾರ ಕೇಂದ್ರದ ಸುಧಾರಣೆಗೆ ಹೆಚ್ಚಿನ ಒತ್ತು ನೀಡಿತ್ತು. ಇದೀಗ ಇಲ್ಲಿರುವ ನಿರಾಶ್ರಿತರ ಸ್ಥಿತಿಯಲ್ಲಿ ಸುಧಾರಣೆ ಕಂಡಿದೆ. ಎಲ್ಲ ನಿರಾಶ್ರಿತರಿಗೆ ಆಧಾರ್ ಕಾರ್ಡ್ ಲಭ್ಯವಾಗಿದೆ. 25 ಮಂದಿಗೆ ಉದ್ಯೋಗವೂ ದೊರಕಿದೆ. ಪರಿವರ್ತನೆಯ ದಿಕ್ಕಿಯಲ್ಲಿ ಕೇಂದ್ರ ಹೆಜ್ಜೆ ಹಾಕಿದೆ. ಕೇಂದ್ರಕ್ಕೆ ಇತ್ತೀಚೆಗೆ ಭೇಟಿ ನೀಡಿದ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಅವರು ಕೃಷಿ ಅಭಿವೃದ್ಧಿಗೆ ಅಗತ್ಯ ನೆರವು ನೀಡುವುದಾಗಿ ಭರವಸೆ ನೀಡಿದ್ದಾರೆ.

162 ಎಕರೆ ವಿಸ್ತೀರ್ಣದಲ್ಲಿ ಪುನರ್ವಸತಿ ಕೇಂದ್ರ ಹರಡಿಕೊಂಡಿದೆ. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ ಪರಭಾರೆ ಮಾಡಿದ್ದ 123 ಎಕರೆ ಜಾಗವನ್ನು ಕೇಂದ್ರದ ಸುಪರ್ದಿಗೆ ಪಡೆಯಲಾಗಿದೆ. ಕೇಂದ್ರದಲ್ಲಿ 491 ಭಿಕ್ಷುಕರು ಹಾಗೂ ನಿರಾಶ್ರಿತರು ಇದ್ದಾರೆ.

ಅರ್ಧ ಎಕರೆ ಪ್ರದೇಶದಲ್ಲಿ ಜೋಳ ಬೆಳೆಯಲಾಗಿದ್ದು, ಎರಡು ಕ್ವಿಂಟಲ್ ಇಳುವರಿ ಬಂದಿದೆ. ಇಲ್ಲಿನ ನಿರಾಶ್ರಿತರೇ ಕಾರ್ಮಿಕರಾಗಿ ದುಡಿದಿದ್ದಾರೆ. ಪ್ರಾಯೋಗಿಕವಾಗಿ ತರಕಾರಿ ಬೆಳೆಯಲಾಗಿದೆ. 200 ಬಾಳೆ ಗಿಡಗಳನ್ನು ನೆಡಲು ಗುಂಡಿ ತೆಗೆಸಲಾಗಿದೆ. ಮಳೆಗಾಲದಲ್ಲಿ ಬಗೆಬಗೆಯ ತರಕಾರಿಗಳನ್ನು ಬೆಳೆಸಲು ಯೋಜಿಸಲಾಗಿದೆ.

ಪ್ರಸ್ತಾವನೆ: `ಹಿರಿಯ ಪರಿಸರವಾದಿ ಡಾ.ಅ.ನ. ಯಲ್ಲಪ್ಪ ರೆಡ್ಡಿ ನೇತೃತ್ವದಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅರಣ್ಯ ವಿಭಾಗದ ಮೂಲಕ 123 ಎಕರೆ ಪ್ರದೇಶವನ್ನು ಅಭಿವೃದ್ಧಿಪಡಿಸಲು ಸಮೀಕ್ಷೆ ನಡೆಸಲಾಗಿದೆ. ಈ ಪ್ರದೇಶವನ್ನು ಎಂಟು ವಲಯಗಳನ್ನಾಗಿ ಮಾಡಿ ಅಭಿವೃದ್ಧಿಪಡಿಸಲು ತಜ್ಞರ ತಂಡ ಸಲಹೆ ನೀಡಿದೆ.
 
ತರಕಾರಿ ತೋಟ, ಹಣ್ಣುಗಳ ತೋಟ ನಿರ್ಮಿಸಲು ಯೋಜಿಸಲಾಗಿದೆ. 25 ಎಕರೆ ಪ್ರದೇಶದಲ್ಲಿ ತೋಪು ನಿರ್ಮಿಸಿ ಹಕ್ಕಿ ಹಾಗೂ ಜೇನುಗಳನ್ನು ಆಕರ್ಷಿಸುವಂತೆ ಮಾಡಲಾಗುವುದು. ಕೆರೆ ಪುನಶ್ಚೇತನಗೊಳಿಸಲಾಗುವುದು. ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಕೆಲವೇ ದಿನಗಳಲ್ಲಿ ಒಪ್ಪಿಗೆ ಸಿಗುವ ನಿರೀಕ್ಷೆ ಇದೆ. ಮಳೆಗಾಲದಲ್ಲಿ ಯೋಜನೆ ಅನುಷ್ಠಾನಗೊಳಿಸಲಾಗುವುದು.

ಕೇಂದ್ರದಿಂದ ಜಮೀನು ಒದಗಿಸಲಾಗುತ್ತದೆ. ಬಿಡಿಎ ತಾಂತ್ರಿಕ ಹಾಗೂ ಆರ್ಥಿಕ ಸಹಾಯ ನೀಡಲಿದೆ~ ಎಂದು ಕೇಂದ್ರ ಪರಿಹಾರ ಸಮಿತಿಯ ಕಾರ್ಯದರ್ಶಿ ಡಾ.ಆರ್.ಎನ್. ರಾಜಾ ನಾಯ್ಕ `ಪ್ರಜಾವಾಣಿ~ಗೆ ಸೋಮವಾರ ತಿಳಿಸಿದರು.

ಆಸ್ಪತ್ರೆ ಮೇಲ್ದರ್ಜೆಗೆ:  `ಮಾಗಡಿ ಪರಿಸರದಲ್ಲಿ ನಾಲ್ಕು ಲಕ್ಷಕ್ಕೂ ಅಧಿಕ ಮಂದಿ ಇದ್ದಾರೆ. ಆಸುಪಾಸಿನಲ್ಲಿ ಉತ್ತಮ ಆಸ್ಪತ್ರೆ ಇಲ್ಲ. ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೆ ಏರಿಸಿ 30 ಹಾಸಿಗೆಯ ಆಸ್ಪತ್ರೆಯನ್ನಾಗಿ ಮಾಡಲು ಪ್ರಸ್ತಾವನೆ ಸಲ್ಲಿಸಲಾಗಿದೆ. ಕೇಂದ್ರದ ಪ್ರವೇಶದ್ವಾರದ ಸಮೀಪದಲ್ಲೇ ಆಸ್ಪತ್ರೆ ನಿರ್ಮಿಸಲಾಗುವುದು. ಇದರಿಂದ ಸ್ಥಳೀಯರಿಗೆ ಅನುಕೂಲವಾಗಲಿದೆ~ ಎಂದು ಅವರು ತಿಳಿಸಿದರು.

ಸ್ವ ಉದ್ಯೋಗ ತರಬೇತಿ:  `ನಗರದ ಭಟ್ ಎಂಟರ್‌ಪ್ರೈಸಸ್ ಸಹಕಾರದಲ್ಲಿ ಕೇಂದ್ರದಲ್ಲಿ ಸಾಬೂನು, ಬ್ಲೀಚಿಂಗ್ ಪೌಡರ್ ಸೇರಿದಂತೆ ಎಂಟು ಬಗೆಯ ಉತ್ಪನ್ನಗಳನ್ನು ಪ್ರಾಯೋಗಿಕವಾಗಿ ತಯಾರಿಸಲಾಗಿದೆ. ಖಾಸಗಿ ಸಂಸ್ಥೆಗೆ ಕಟ್ಟಡವನ್ನು ಉಚಿತವಾಗಿ ನೀಡಲಾಗುತ್ತಿದ್ದು, ಶೇ 10 ಲಾಭಾಂಶವನ್ನು ಕೇಂದ್ರಕ್ಕೆ ನೀಡಲು ಸೂಚಿಸಲಾಗಿದೆ.

ಅಲ್ಲದೆ ಸಂಸ್ಥೆಯವರು ಭಿಕ್ಷುಕರಿಗೆ ತರಬೇತಿ ನೀಡಬೇಕು. ನಿರಂತರವಾಗಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಾಗ ಭಿಕ್ಷುಕರಲ್ಲಿ ಪರಿವರ್ತನೆಯ ಮನೋಭಾವ ಮೂಡುತ್ತದೆ~ ಎಂದು ಕೇಂದ್ರದ ಸಿಬ್ಬಂದಿಯೊಬ್ಬರು ಮಾಹಿತಿ ನೀಡಿದರು.

`ಶುಚಿ ಹಾಗೂ ರುಚಿಯಾದ ಪೌಷ್ಠಿಕಾಂಶವುಳ್ಳ ಆಹಾರವನ್ನು ಇಸ್ಕಾನ್ ಸಂಸ್ಥೆಯಿಂದ ಸರಬರಾಜು ಮಾಡಲಾಗುತ್ತಿದೆ. ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ. ನಿರಾಶ್ರಿತರ ವೈಯಕ್ತಿಕ ಸ್ವಚ್ಛತೆ ದೃಷ್ಟಿಯಿಂದ ಪ್ರತಿದಿನ ಬಿಸಿನೀರಿನ ಸ್ನಾನದ ವ್ಯವಸ್ಥೆ, ಬಟ್ಟೆ ಬದಲಾವಣೆ ಮಾಡಲಾಗುತ್ತಿದೆ. ಬಟ್ಟೆ ಸ್ವಚ್ಛ ಮಾಡಲು ಲಾಂಡ್ರಿ ವ್ಯವಸ್ಥೆ ಮಾಡಲಾಗಿದೆ. ಮಾನಸಿಕ ಅಸ್ವಸ್ಥರಿಗೆ ನಿಮ್ಹಾನ್ಸ್ ಆಸ್ಪತ್ರೆಯ ತಜ್ಞರಿಂದ 15 ದಿನಕ್ಕೊಮ್ಮೆ ವಿಶೇಷ ವೈದ್ಯಕೀಯ ಚಿಕಿತ್ಸೆ ನೀಡಲಾಗುತ್ತಿದೆ.

ತಜ್ಞರ ಉಪಯೋಗ ಪಡೆಯಲು ಟೆಲಿಮೆಡಿಸಿನ್ ವ್ಯವಸ್ಥೆ ಕಲ್ಪಿಸಲಾಗಿದೆ. ನಿರಾಶ್ರಿತರ ವೈಯಕ್ತಿಕ ದಾಖಲಾತಿಗಳನ್ನು ಕಂಪ್ಯೂಟರೀಕರಣ ಮಾಡಲಾಗುತ್ತಿದೆ~ ಎಂದು ಕೇಂದ್ರದ ಸಿಬ್ಬಂದಿಯೊಬ್ಬರು ಹೇಳಿದರು.

`ಕೇಂದ್ರದಲ್ಲಿ ಈಗ ಉತ್ತಮ ಗುಣಮಟ್ಟದ ಆಹಾರ ದೊರಕುತ್ತಿದೆ. ವೈದ್ಯಕೀಯ ಸೌಲಭ್ಯವೂ ಚೆನ್ನಾಗಿದೆ. ಅಧಿಕಾರಿಗಳ ಕಾಳಜಿಯಿಂದ ಕೇಂದ್ರದಲ್ಲಿ ಪರಿವರ್ತನೆಯಾಗಿದೆ~ ಎಂದು ಭಿಕ್ಷುಕರೊಬ್ಬರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT