ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಿತ್ತಿ ಚಿತ್ರಕಲೆ

Last Updated 19 ಜನವರಿ 2011, 9:15 IST
ಅಕ್ಷರ ಗಾತ್ರ

ಭಾರತೀಯ ದೇವಾಲಯ ವಾಸ್ತು, ಚಿತ್ರ ಹಾಗೂ ಶಿಲ್ಪಕಲೆಗಳಿಗೆ ವಿಜಯನಗರ ಅರಸರ ಕೊಡುಗೆ ಅತ್ಯಂತ ಮಹತ್ವದ್ದು. ವಿಜಯನಗರ ಶೈಲಿ ಎಂದೇ ಅದು ಹೆಸರುವಾಸಿ. ತುಂಗಭದ್ರಾ ನದಿ ದಂಡೆಯ ಮೇಲಿರುವ ವಿಜಯನಗರ ಸಾಮ್ರಾಜ್ಯದ ರಾಜಧಾನಿ ಹಂಪಿಯ ವೈಭವ ಜಗತ್ಪ್ರಸಿದ್ಧ.    

ಒಂಬತ್ತು ಚದರ ಮೈಲಿಗಳ ವಿಸ್ತಾರದ ಹಂಪಿ ಬಯಲು ಮ್ಯೂಸಿಯಂ ಎಂದೇ ಪ್ರಸಿದ್ಧಿ. ವಿಜಯನಗರ ಸಾಮ್ರಾಜ್ಯದ ಪತನದ ನಂತರ ಹಂಪಿ ಹಾಳಾದರೂ ಅದರ ವೈಭವದ ಕುರುಹುಗಳನ್ನು ಇಂದಿಗೂ ತನ್ನ ಒಡಲಲ್ಲಿ ಇರಿಸಿಕೊಂಡಿದೆ. ಹಂಪಿಯ ಇತಿಹಾಸ ಹಾಗೂ ವಿಜಯನಗರ ಸಾಮ್ರಾಜ್ಯದ ವೈಭವವನ್ನು ದೇಶ ವಿದೇಶಗಳ ಪ್ರವಾಸಿಗಳಿಗೆ ಕಟ್ಟಿಕೊಡುವಲ್ಲಿ ಸಹಾಯಕವಾಗಿರುವುದು ಈ ಸ್ಮಾರಕಗಳೇ. ಇತಿಹಾಸ ಪೂರ್ವದ ಹಾಗೂ ನವ ಶಿಲಾಯುಗದ ಗುಹೆಗಳ ಮೇಲೆ ಆ ಕಾಲದ ಜನರು ಚಿತ್ರಿಸಿದ್ದ ಚಿತ್ರಗಳೂ ಹಂಪಿಯಲ್ಲಿವೆ.

ಅವುಗಳ ನಡುವೆ ವಿಜಯನಗರ ಶೈಲಿಯ ಚಿತ್ರಗಳಲ್ಲಿ ನಿರೂಪಿತವಾದ ದೃಶ್ಯ ಸೌಂದರ್ಯ ಇಂದಿಗೂ ಉಳಿದುಕೊಂಡಿರುವುದು ಅಚ್ಚರಿಯ ಹಾಗೂ ಸಂತೋಷದ ಸಂಗತಿ. ಕರ್ನಾಟಕದ ಚಾಲುಕ್ಯ, ಹೊಯ್ಸಳ ಶಿಲ್ಪ ಕಲೆ ಹಾಗೂ ವಾಸ್ತು ಪರಂಪರೆಯನ್ನು ಅರಗಿಸಿಕೊಂಡು ಹಂಪಿ ಪರಿಸರದ ಸರಳ ಸೌಂದರ್ಯವನ್ನು ಬಳಸಿಕೊಂಡು ದೃಶ್ಯ ಧ್ಯಾನದ ಅನುಭವ ನೀಡುವ ಉದ್ದೇಶ ವಿಜಯನಗರ ಶೈಲಿಯದು. ಸ್ಥಳೀಯ ದೃಶ್ಯಕಲೆಯ ಸೊಗಡಿನ ಎಲ್ಲ ಹೊಳಹುಗಳೂ ವಿಜಯನಗರ ಚಿತ್ರ, ಶಿಲ್ಪ, ವಾಸ್ತುಗಳಲ್ಲಿವೆ. ಗಾರೆ, ಶಿಲೆ, ಲೋಹದ ಶಿಲ್ಪಗಳೇ ಅಲ್ಲದೆ ದೇವಾಲಯ ಹಾಗೂ ಅರಮನೆಗಳ ವಾಸ್ತು ಶಿಲ್ಪ ಅಲಂಕರಣಗಳು ಸಮಕಾಲೀನ ಭಾರತೀಯ ಸಂದರ್ಭದ ಹಲವು ಪ್ರಭಾವಗಳನ್ನು ಒಳಗೊಂಡಿವೆ; ಚಿತ್ರಗಳೂ ಅಷ್ಟೇ ವಿಶಿಷ್ಟ.

ಪರಂಪರೆಯ ಜತೆಜತೆಗೇ ಅಂದಿನ ಸಂದರ್ಭದ ಚಿತ್ರ ಕಲೆಯ ಪ್ರಕಾರಗಳನ್ನು ಕಸಿ ಮಾಡಿಕೊಂಡೇ ಕಾಣಿಸಿಕೊಂಡ ‘ಭಿತ್ತಿ ಚಿತ್ರ’ಕಲೆ ಇಂದಿಗೂ ಅಲ್ಪ ಸ್ವಲ್ಪ ಉಳಿದುಕೊಂಡಿರುವುದು ಹೆಮ್ಮೆಪಡುವ ಸಂಗತಿ. ಆದರೆ ಅವನ್ನು ಸಂರಕ್ಷಿಸುತ್ತಿರುವ ರೀತಿ ಸದ್ಯಕ್ಕೆ ಸಮಾಧಾನಕರ ಅನ್ನಿಸಿದರೂ ಶಾಶ್ವತವಾಗಿ ಸಂರಕ್ಷಿಸಲು ಹೊಸ ತಂತ್ರಜ್ಞಾನದ ಆವಿಷ್ಕಾರಗಳನ್ನು ಬಳಸಿಕೊಳ್ಳುವ ಅಗತ್ಯವಿದೆ. ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಈ ನಿಟ್ಟಿನಲ್ಲಿ ಕೆಲಸ ನಿರ್ವಹಿಸುತ್ತಿದೆ ಎಂಬುದು ಸಮಾಧಾನದ ಸಂಗತಿ.

ವಿಜಯನಗರ ಶೈಲಿಯ ಭಿತ್ತಿ ಚಿತ್ರಗಳನ್ನು ಲೇಪಾಕ್ಷಿ, ಸೋಮಪಲ್ಲಿ, ಕಾಂಚಿಪುರ ಸಮೀಪದ ತಿರುಪರತ್ತಿಕುನ್ರಮ್, ಹಂಪಿ, ಆನೆಗೊಂದಿಯ ಹುಚ್ಚಪ್ಪಯ್ಯನ ಮಠದಲ್ಲಿ ಇಂದಿಗೂ ಅಲ್ಪಸ್ವಲ್ಪವಾದರೂ ನೋಡಬಹುದು. ನಾಯಕರ ಚಿತ್ರಕಲೆಯನ್ನು ಮೈಸೂರು, ಸುರಪುರ ಹಾಗೂ ದಕ್ಷಿಣ ಭಾರತದ ಹತ್ತಕ್ಕೂ ಹೆಚ್ಚು ದೇವಾಲಯಗಳಲ್ಲಿ ನೋಡಬಹುದು. ವಿಜಯನಗರ ಶೈಲಿಯ ಅತ್ಯುತ್ತಮ ಭಿತ್ತಿಚಿತ್ರಗಳನ್ನು ಲೇಪಾಕ್ಷಿಯಲ್ಲಿ ಕಾಣಬಹುದು. ಹಂಪಿಯ ವಿರೂಪಾಕ್ಷ ದೇವಾಲಯದ ಮುಂದಿನ ರಂಗ ಮಂಟಪದ ಒಳಮಾಳಿಗೆಯಲ್ಲಿ ಇಂತಹ ಚಿತ್ರಗಳಿವೆ.

ಅಜಂತಾ ಚಿತ್ರಗಳು ಸೂರು ಅಥವಾ ಒಳಮಾಳಿಗೆಗಿಂತಲೂ ಭಿತ್ತಿಗಳಲ್ಲಿಯೇ ಪ್ರಮುಖವಾಗಿ ಚಿತ್ರಿತವಾಗಿವೆ; ಒಳಮಾಳಿಗೆಗಳಲ್ಲಿ ಬಹುತೇಕ ಅಲಂಕರಣ, ವಿನ್ಯಾಸಗಳು ಆಕ್ರಮಿಸಿಕೊಂಡಿವೆ. ಆದರೆ ಎಲ್ಲೋರಾದ  ಕೈಲಾಸ ದೇವಾಲಯದ (ಚಾಲುಕ್ಯರ ಕಾಲ) ಒಳಮಾಳಿಗೆಯಲ್ಲಿ ಮುಖ್ಯವಾದ ಚಿತ್ರಗಳಿವೆ. ಭಿತ್ತಿಗಳಲ್ಲಿ ಬಹುತೇಕ ಉಬ್ಬು ಶಿಲ್ಪ ಹಾಗೂ ಅಲಂಕರಣ ಚಿತ್ರಗಳಿವೆ. ಹೀಗೆ ಎಲ್ಲೋರದ, ಬಾದಾಮಿಯ ಚಿತ್ರ ಪರಂಪರೆ ವಿಜಯನಗರ ಶೈಲಿಯ ಚಿತ್ರಕಲೆಯಲ್ಲಿಯೂ ಮುಂದುವರೆಯಿತು. ಒಳ ಮಾಳಿಗೆಗಳು ಆಕರ್ಷಕ ಚಿತ್ರಗಳಿಂದ ಅಲಂಕೃತವಾದವು.
ಹಂಪಿಯ ವಿರೂಪಾಕ್ಷ ದೇವಾಲಯದ ರಂಗಮಂಟಪ ಕ್ರಿ.ಶ. 1509-10ರಲ್ಲಿ ನಿರ್ಮಾಣಗೊಂಡಿತು. ಕೃಷ್ಣದೇವರಾಯರು ಪಟ್ಟಾಭಿಷಿಕ್ತರಾದುದು ಇದೇ ಸಂದರ್ಭದಲ್ಲಿ. ಆ ಸಂದರ್ಭದ ನೆನಪಿಗಾಗಿ ರಂಗ ಮಂಟಪದ  ಒಳಮಾಳಿಗೆಯಲ್ಲಿ ಚಿತ್ರಗಳು ರಚನೆಯಾದವು. ಒಳ ಮಾಳಿಗೆಯ ಆಯತಾಕಾರದಲ್ಲಿ ಚಿತ್ರ ಸಂಯೋಜನೆಗೆ ಸೂಕ್ತ ವಿನ್ಯಾಸದ ಚೌಕಟ್ಟುಗಳಿಗೆ ಹೊಂದುವಂತೆ ರೂಪ, ವಿನ್ಯಾಸಗಳನ್ನು ರೇಖಿಸಿ ನಂತರ ಮಿತ ಬಣ್ಣಗಳನ್ನು ಬಳಸಿಕೊಂಡು ಪೂರ್ಣಗೊಳಿಸಲಾಗಿದೆ.

 ಮೂರು ಮುಖ್ಯ ಭಾಗಗಳ ವಿಂಗಡಣೆಯಲ್ಲಿ ಎಂಟು ಉಪ ವಿಭಾಗಗಳಿವೆ. ಚೌಕ - ಆಯತಾಕಾರಗಳ ಚಿತ್ರ  ಅವಕಾಶ (ಪಿಕ್ಚೋರಿಯಲ್ ಸ್ಪೇಸ್)ಗಳಲ್ಲಿ ಚಿತ್ರಿಸಿರುವ ಕಲ್ಪನೆ ಬೆರಗು ಮೂಡಿಸುವಂತಿವೆ. ಮಹಾಭಾರತ, ರಾಮಾಯಣಗಳ ಹಲವು ಸಂದರ್ಭಗಳಿವೆ. ಸೀತಾ ಸ್ವಯಂವರ, ಸೀತಾ ಕಲ್ಯಾಣ ಮಹೋತ್ಸವ, ವಿರೂಪಾಕ್ಷ ಪಂಪಾಂಬಿಕೆಯರ ವಿವಾಹ, ಮನ್ಮಥ - ವಿಜಯ, ತ್ರಿಪುರ ಸಂಹಾರ, ಕೃಷ್ಣನ ಗೋಪಿಕೆಯರ ವಸ್ತ್ರಾಪಹರಣ ಇತ್ಯಾದಿ ಚಿತ್ರರೂಪ ಸಂಯೋಜನೆಗಳಿವೆ. ಮೂಲ ಚಿತ್ರರೂಪ ಸಂಯೋಜನೆಯಲ್ಲಿ ಆ ಸಂದರ್ಭದ ಹಲವು ರೂಪ ಕಲ್ಪನೆಗಳಿವೆ.
 
ದೇವಾಲಯ ವಾಸ್ತು ರೂಪಗಳ ಹಾಗೂ ತಾಳೆಮರಗಳ ಸಾಲು, ಅವುಗಳ ಅಕ್ಕಪಕ್ಕ ವಾನರ ಹಾಗೂ ಪಕ್ಷಿಗಳ ಆಟ, ಅಷ್ಟ ದಿಕ್ಪಾಲಕರು, ದಶಾವತಾರಗಳು, ರಥಗಳಲ್ಲಿ ಸಾಗುತ್ತಿರುವ ನಾಗರಿಕರು, ಸೈನಿಕರು, ಸಂಗೀತ ವಾದಕರು, ಲಿಂಗರೂಪಿ ವಿರೂಪಾಕ್ಷನತ್ತ ಮೆರವಣಿಗೆಯಲ್ಲಿ ಹೊರಟಿರುವ ಕೃಷ್ಣದೇವರಾಯರ ಮಾರ್ಗದರ್ಶಿ, ರಾಜಗುರುಗಳೂ ಆಗಿದ್ದ ವ್ಯಾಸರಾಯರ ತೆರೆದ ಪಲ್ಲಕ್ಕಿ ವೈಭವವನ್ನು ಗಮನಿಸಬಹುದು. ಪ್ರತಿ ಚಿತ್ರ ಸಂಯೋಜನೆಯ ಸುತ್ತಲಿನ ಮಿತ ಚೌಕಟ್ಟುಗಳ ನಡುವೆ ಹಲವು ವಿನ್ಯಾಸಗಳ ಅಲಂಕಾರಗಳಿವೆ. ಚಿತ್ರಗಳ ರಚನೆಯಲ್ಲಿ ಆ ಸಂದರ್ಭದ ಮೊಗಲ್ ಚಿತ್ರಕಲೆಯ ಅಲಂಕರಣಗಳ ಪ್ರಭಾವ ಇದ್ದಂತಿದೆ. ರೇಖೆಗಳೇ ಮುಖ್ಯ ಭೂಮಿಕೆ ನಿರ್ವಹಿಸಿರುವ ಎಲ್ಲ ಚಿತ್ರಗಳಲ್ಲಿಯೂ ಕೆಲವು ಬಣ್ಣಗಳನ್ನು ಬಳಸಲಾಗಿದೆ; ಬಹುತೇಕ ಚಪ್ಪಟೆಯಾಗಿ ಲೇಪಿಸಲ್ಪಟ್ಟಿವೆ.
 
ಕಪ್ಪು, ಕೆಂಪು, ಹಸಿರು, ಬಿಳುಪು ಬಣ್ಣಗಳು ಇಂದಿಗೂ ಅಲ್ಪ ಸ್ವಲ್ಪ ಕಾಣುವಂತಿವೆ. ಆದರೆ ಲೇಪಾಕ್ಷಿಯ ಚಿತ್ರಗಳ ರೇಖಾ ಲಾವಣ್ಯ ಇಲ್ಲಿಲ್ಲ! ರಂಗ ಮಂಟಪದ ಸೂರಿನ ಮೇಲಿನ ಹಂಪಿಯ ಚಿತ್ರಗಳು ಬಳ್ಳಾರಿ ಭಾಗದ ರಣ ಬಿಸಿಲಿನ ತೀವ್ರತೆ, ಕಾಲದ ಪ್ರಭಾವ ಮತ್ತಿತರ ಕಾರಣಗಳಿಂದ ಸ್ವಲ್ಪ ಹಾಳಾಗಿರುವಂತಿವೆ. ಹೀಗಾಗಿ ಚಿತ್ರಗಳ ಮುಖ ರೇಖೆಗಳು ನಾಶವಾಗಿವೆ. ಶತಮಾನಗಳ ಹಿಂದೆಯೇ ಈ ಚಿತ್ರಗಳ ರೇಖೆಗಳನ್ನು ತಿದ್ದುವ ಪ್ರಯತ್ನ ನಡೆದಿದೆ. ಮೂಲದ ಲಾವಣ್ಯವನ್ನು ಕಳೆದುಕೊಂಡಿದ್ದರೂ ಆ ತಿದ್ದುವಿಕೆಯ ಕಾರಣಕ್ಕಾಗಿ ಇಂದು ನಾವು ನೋಡುತ್ತಿರುವಷ್ಟಾದರೂ ಸ್ಪಷ್ಟ ರೂಪ - ರೇಖೆಗಳು ಅಸ್ತಿತ್ವ ಉಳಿಸಿಕೊಂಡಿವೆ. ಸೂಕ್ಷ್ಮವಾಗಿ ಕಂಪ್ಯೂಟರ್‌ನಲ್ಲಿ ಗಮನಿಸಿದರೆ ಈ ಅಂಶ ಸ್ಪಷ್ಟವಾಗುತ್ತವೆ. ಈ ಬೆಳವಣಿಗೆಯ ನಡುವೆಯೂ ವಿಜಯನಗರ ಶೈಲಿಯ ಚಿತ್ರಗಳ ಸೊಬಗು ವಿಶಿಷ್ಟ ದೃಶ್ಯಲೋಕವನ್ನೇ ನಿರ್ಮಿಸಿ ನೋಡುಗರಿಗೆ ಖುಷಿ ನೀಡುತ್ತದೆ.

ಈ ಚಿತ್ರಗಳು ಪಾರ್ಶ್ಚಮುಖ ಛಾಯೆಯ ಆಕೃತಿಗಳು. ವಿಶಿಷ್ಟ ರೀತಿಯ ಕಣ್ಣುಗಳನ್ನು ಹೊಂದಿಸಿಕೊಂಡಿವೆ; ಕಣ್ಣುಗಳ ಕಲ್ಪನೆಯೇ ಅಪೂರ್ವ. ಕೋಲು ಮುಖ, ಚೂಪು ಮೂಗು, ನೀಳ ಕಿರೀಟ, ನಿಲುವಿನಲ್ಲಿ ನಾಟಕೀಯತೆ, ಉಟ್ಟ ಉಡುಗೆಗಳ ನಿರಿಗೆಗಳು ಕಾವ್ಯಮಯ; ಸುಂದರ. ಕ್ರಿ.ಶ. 1567ರ ರಕ್ಕಸತಂಗಡಿ ಯುದ್ಧದಲ್ಲಿ ಸೋತ ನಂತರ ವಿಜಯನಗರ ಅರಸರು ಚಂದ್ರಗಿರಿಗೆ ಪಲಾಯನ ಮಾಡಿದರು. ಆನಂತರ ಹಂಪಿಯು ಹಾಳಾಗಿ ನಿರ್ಜನವಾಯಿತಷ್ಟೆ. ಹಾಳು ಹಂಪಿಯ ಶಿಲಾ ಕಟ್ಟಡಗಳು, ದೇವಾಲಯಗಳೆಲ್ಲಾ ಅನಾಥವಾಗಿ ಉಳಿದವು. ಬ್ರಿಟಿಷ್ ಸರ್ಕಾರ ಹಂಪಿಯ ಸ್ಮಾರಕಗಳ ರಕ್ಷಣೆಗೆ ಮುಂದಾಗುವವರೆಗೆ ಹಂಪಿಯ ಶಿಲ್ಪಕಲಾ ವೈಭವ ಅರಣ್ಯ ರೋದನವಾಗಿತ್ತು. ಈ ಬೆಳವಣಿಗೆಯ ನಡುವೆಯೂ ವಿರೂಪಾಕ್ಷ ದೇವಾಲಯವನ್ನು ಹಂಪಿ ಸುತ್ತಮುತ್ತಲಿನ ಆ ಕಾಲದ ಜನರು ಉಳಿಸಿಕೊಂಡದ್ದು ಅತ್ಯಂತ ಸೋಜಿಗದ ಸಂಗತಿ.

ಛತ್ರಪತಿ ಶಿವಾಜಿ ಮಹಾರಾಜರು ಹಂಪಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಅಲ್ಲಿನ ದುಸ್ಥಿತಿಯನ್ನು ಕಂಡು ಮರುಗಿದ್ದರಂತೆ. ವಿರೂಪಾಕ್ಷ ದೇವಾಲಯದ ಪೂಜಾ ಸೇವೆಗಳು ನಿರಂತರವಾಗಿ ನಡೆಯಲು ಹಲವು ಏರ್ಪಾಡುಗಳಿಗಾಗಿ ಆನೆಗೊಂದಿ ಅರಸರಿಗೆ ಹಲವು ಮಾಗಣೆಗಳನ್ನು ಬಿಟ್ಟುಕೊಟ್ಟರೆಂಬ ಸೂಚನೆಗಳಿವೆ. ಚಿತ್ರದುರ್ಗದ ಪಾಳೆಗಾರ ಭರಮಣ್ಣ ನಾಯಕರೂ ಹಂಪಿಗೆ ಬಂದು ಹೋದ ನಂತರ ಹಂಪಿಯು ಧಾರ್ಮಿಕ ಕ್ಷೇತ್ರವಾಯಿತು. ಬಹುಶಃ ಆ ಸಂದರ್ಭದಲ್ಲಿ ಹಂಪಿಯಲ್ಲಿದ್ದ ಚಿತ್ರಗಾರರು ಸ್ಪಲ್ಪ ನಾಶವಾಗಿದ್ದ ಚಿತ್ರಗಳನ್ನು ತಿದ್ದಿರುವ ಸಾಧ್ಯತೆಗಳಿವೆ.

ಸುಮಾರು 2007-08ರ ನಡುವೆ ತಮಿಳುನಾಡಿನ ಸಂಸ್ಥೆಯೊಂದರಿಂದ ಸ್ಯಾಂಡ್‌ಬ್ಲಾಸ್ಟ್ ಮಾಡಿಸಿ ರಂಗಮಂಟಪವನ್ನು ಈಗಿರುವಂತೆ ಶುಚಿಗೊಳಿಸಲಾಯಿತು. ಮಂಟಪದ ಶಿಲ್ಪಗಳ ಮೇಲಿದ್ದ ಶತಮಾನಗಳ ನೆನಪಿನ ಐತಿಹಾಸಿಕ ಕೊಳೆಯನ್ನು ತೆಗೆಯಲಾಗಿದೆ. ಮರಳಿನ ಹೊಡೆತದ ರಭಸಕ್ಕೆ ಚಿತ್ರಗಳಿರುವ ರಂಗಮಂಟಪ ನಡುಗಿರಬಹುದು. ರಾಸಾಯನಿಕ ಆಮ್ಲಗಳನ್ನು ಬಳಸಿ ಇಂತಹ ಅಪೂರ್ವ ಪರಂಪರೆಯ ವಾಸ್ತುಗಳನ್ನು ಶುಚಿಗೊಳಿಸುವುದು ಸೂಕ್ತ. ಬರಿಯ ಉಬ್ಬು ಶಿಲ್ಪಗಳ ಮಂಟಪಗಳಿಗೂ, ಚಿತ್ರಗಳಿರುವ ಮಂಟಪಗಳಿಗೂ ವ್ಯತ್ಯಾಸವಿದೆ.  ಈ ನಡುವೆ ಒಳಮಾಳಿಗೆಯ ಚಿತ್ರಗಳೂ ಶುಚಿಗೊಳಿಸಲ್ಪಟ್ಟಿವೆ. ಈಗ ಇರುವಂತೆಯೇ ಬಹುಕಾಲ ಉಳಿಯುವಂತೆ ಸಂಬಂಧಿಸಿದವರು ರಂಗಮಂಟಪದ ಚಿತ್ರಗಳನ್ನು ಸಂರಕ್ಷಿಸಲು ಹೊಸ ಹೊಸ ವಿಧಾನಗಳನ್ನು ಬಳಸಿಕೊಳ್ಳುವ ಬಗ್ಗೆ ಆಲೋಚಿಸಿ ಕಾರ್ಯೋನ್ಮುಖರಾಗಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT