ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಿನ್ನ ಗೋಡೆಗೆ ಗಟ್ಟಿ ಮಣ್ಣಿನ ‘ಒತ್ತಿಟ್ಟಿಗೆ’

Last Updated 24 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಮನೆ ಕಟ್ಟುವುದೆಂದರೆ ಮೊದಲು ಭೂಮಿ ಅಗೆದು ಸೈಜುಗಲ್ಲಿನಲ್ಲಿ ಪಾಯ ನಿರ್ಮಿಸಬೇಕು. ಅದರ ಮೇಲೆ ಇಟ್ಟಿಗೆಯ ಗೋಡೆ, ನಂತರ ಹೆಂಚು ಅಥವಾ ಕಾಂಕ್ರೀಟ್‌ ಛಾವಣಿ ಹಾಕಬೇಕು.

ಹರಪ್ಪ ಮೊಹೆಂಜದಾರೊ ನಾಗರಿಕತೆ ವೇಳೆಯೇ ಸುಟ್ಟ ಇಟ್ಟಿಗೆಗಳಿಂದ ಗೋಡೆಗಳನ್ನು ನಿರ್ಮಿಸಿದ್ದು ದಶಕಗಳ ಹಿಂದಿನ ಉತ್ಖನನದ ವೇಳೆಯೇ ತಿಳಿದುಬಂದಿತು. ಈಗಲೂ ಹೆಚ್ಚಿನಂಶ ಸುಟ್ಟ ಇಟ್ಟಿಗೆಗಳಿಂದಲೇ ಗೋಡೆಗಳನ್ನು ಕಟ್ಟಲಾಗುತ್ತಿದೆ.
ಗ್ರಾಮೀಣ ಭಾಗದಲ್ಲಿ ಕೆಂಪುಮಣ್ಣನ್ನೇ ನೀರು ಹಾಕಿ ಚೆನ್ನಾಗಿ ತುಳಿದು ಕಲಸಿ ಮಣ್ಣಿನ ಗೋಡೆ ನಿರ್ಮಿಸುವುದೂ ರೂಢಿಯಲ್ಲಿತ್ತು, ಈಗಲೂ ಕೆಲವೆಡೆ ಇದೆ.

ಇತ್ತೀಚಿನ ವರ್ಷಗಳಲ್ಲಿ ಸಿಮೆಂಟ್‌, ಮರಳು, ಜಲ್ಲಿ ಪುಡಿ ಮಿಶ್ರಣ ಮಾಡಿ ಕಾಂಕ್ರಿಟ್‌ ಬ್ರಿಕ್ಸ್‌(ಇಟ್ಟಿಗೆ) ಅಚ್ಚುಹಾಕಿ ಬಳಸುವುದೂ ಇದೆ.

ಮಂಗಳೂರು ಹೆಂಚಿನ ಮಾದರಿಯಲ್ಲೇ ಇರುವ, ಹುರುಡಿ ಬ್ಲಾಕ್ಸ್, ಕೆಂಪಿಟ್ಟಿಗೆ, ಟೊಳ್ಳಿಟ್ಟಿಗೆ ಎಂದು ಕರೆಯಲಾಗುವ ಇಟ್ಟಿಗೆಗಳನ್ನೂ (ಆವೆ ಮಣ್ಣನ್ನು ಸೋಸಿ, ಚೆನ್ನಾಗಿ ಕಲೆಸಿ, ಅಚ್ಚುಹಾಕಿ ಸುಟ್ಟ ಇಟ್ಟಿಗೆ) ಮನೆಯನ್ನು ಭಿನ್ನವಾಗಿ ನಿರ್ಮಿಸಬೇಕೆಂದು ಬಯಸುವವರು ಅಲ್ಲಲ್ಲಿ ಬಳಸುತ್ತಿದ್ದಾರೆ.

ಇಷ್ಟೆಲ್ಲದರ ಮಧ್ಯೆಯೂ ‘ಸಾಂಪ್ರದಾಯಿಕ ಇಟ್ಟಿಗೆಗಳಿಗೆ ಪರ್ಯಾಯಗಳೇನು? ಎಂಬ ಹುಡುಕಾಟ ನಿರಂತರ ನಡೆದೇ ಇದೆ. ಗೋಡೆ ನಿರ್ಮಿಸಲು ಬಳಸುವ ಸಾಮಗ್ರಿಗೆ ಪರ್ಯಾಯವೇನು? ಎಂಬ ಪ್ರಶ್ನೆಗೆ ಹೊಸ ಹೊಸ ಉತ್ತರ ಕಂಡುಕೊಳ್ಳುವ ಯತ್ನ ನಡೆದೇ ಇದೆ.

ಮಣ್ಣಿನ ಗೋಡೆ ನಿರ್ಮಿಸಲು ನಗರಗಳಲ್ಲಿ ಪರವಾನಗಿ ಸಿಗುವುದು ಕಷ್ಟ. ಅದಕ್ಕಿಂತ ಮುಖ್ಯವಾಗಿ ಅಂತಹ ಸರಳ ಗೋಡೆಯನ್ನು ನಿರ್ಮಿಸಲು ಆ ವಿಚಾರದಕಲ್ಲಿ ನುರಿತ ಕೆಲಸಗಾರರು  ಸಿಗುವುದೂ ಕಷ್ಟವೆ.

ಹಾಗಾಗಿಯೇ ಇಟ್ಟಿಗೆಗಳ ಬಳಕೆ ಎಲ್ಲೆಡೆಯೂ ಸಾಮಾನ್ಯವಾಗಿದೆ. ಈ ಇಟ್ಟಿಗೆಗಳಲ್ಲಿ ಸುಟ್ಟ ಇಟ್ಟಿಗೆ, ಟೇಬಲ್ ಮೌಲ್ಡ್ ಇಟ್ಟಿಗೆ ಹಾಗೂ ವೈರ್‌ ಕಟಿಂಗ್‌ ಇಟ್ಟಿಗೆ ಎಂಬ ಮೂರು ಬಗೆ. ಇವುಗಳನ್ನು ಕಡ್ಡಾಯವಾಗಿ ಶಾಖದಲ್ಲಿ ಹದಮಾಡಲೇಬೇಕು. ಹಾಗಾಗಿಯೆ ಬೆಲೆ ದುಬಾರಿ.

ಇವುಗಳಿಗೆ ಪರ್ಯಾಯವಾದುದು ಗಟ್ಟಿ ಮಣ್ಣಿನ ಒತ್ತಿಟ್ಟಿಗೆ(ಸಾಯಿಲ್‌ ಸಿಮೆಂಟ್‌ ಬ್ಲಾಕ್). ಸ್ಥಳೀಯವಾಗಿ ಸಿಗುವ ಮಣ್ಣಿನಿಂದಲೇ ಒತ್ತಿಟ್ಟಿಗೆ ತಯಾರಿಸಿಕೊಳ್ಳಬಹುದು.

ಮೈಸೂರಿನಲ್ಲಿ ಸದ್ಯ ಬಳಸಲಾಗುತ್ತಿರುವ ಒತ್ತಿಟ್ಟಿಗೆ ತಯಾರಿಕೆ ಹೀಗಿದೆ. ಮೊದಲು ಮರಳು ಮಿಶ್ರಿತ ಕೆಂಪು ಮಣ್ಣಿಗೆ ಶೇಕಡಾ ಆರರಷ್ಟು ಪ್ರಮಾಣದಲ್ಲಿ ಸಿಮೆಂಟ್‌ ಬೆರೆಸಿ, ಸ್ವಲ್ಪವೇ ನೀರು ಹಾಕಿ ಮಿಶ್ರಣ ಮಾಡಿಕೊಳ್ಳಲಾಗುತ್ತದೆ. ನಂಥರ ಒತ್ತು ಯಂತ್ರದ ಬಾಕ್ಸ್‌ ಮಿಶ್ರಣ ಸುರಿದು ಸಾಕಷ್ಟು ಭಾರ ಬೀಳುವಂತೆ ಮಾಡಿದರೆ ಸಾಮಾನ್ಯಕ್ಕಿಂತ ದೊಡ್ಡ ಗಾತ್ರದ ಒತ್ತಿಟ್ಟಿಗಳು ಸಿದ್ಧವಾಗುತ್ತವೆ. ಗಮನಾರ್ಹ ಸಂಗತಿ ಎಂದರೆ ಇವನ್ನು ಬೆಂಕಿಯಲ್ಲಿ ಸುಟ್ಟು ಹದಮಾಡಬೇಕಿಲ್ಲ. ಹಾಗಾಗಿ ಇಟ್ಟಿಗೆ ಗೂಡು ಒಟ್ಟುವುದರ ಕೂಲಿ ಮತ್ತು ಉರುವಲು ಖರ್ಚೂ ಉಳಿಯುತ್ತದೆ.

ಮನೆ ನಿರ್ಮಿಸುವ ಸ್ಥಳದಲ್ಲಿಯೇ ಕೇವಲ ಐದು ಜನರ ತಂಡದಿಂದಲೇ ಒತ್ತಿಟ್ಟಿಗೆಗಳನ್ನು ಮಾಡಿಕೊಳ್ಳಬಹುದು. ಹಾಗಾಗಿ ಇಟ್ಟಿಗೆ ಸಾಗಣೆ ವೆಚ್ಚವೂ ಇರುವುದಿಲ್ಲ.

ಇಂತಹ ಒತ್ತಿಟ್ಟಿಗೆಯ ಲಾಭವೆಂದರೆ, ಇದು ಸುಲಭಕ್ಕೆ ಒಡೆಯುವುದಿಲ್ಲ. ಸ್ಥಳೀಯವಾಗಿಯೇ ಲಭ್ಯವಿರುವ ಮರಳು ಮಿಶ್ರಿತ ಕೆಂಪುಮಣ್ಣಿನಿಂದ ಬಹಳ ಕಡಿಮೆ ವೆಚ್ಚದಲ್ಲಿ ಸಿದ್ಧಪಡಿಸಿಕೊಳ್ಳಬಹುದು.

ಒತ್ತಿಟ್ಟಿಗೆಯ ಲಾಭ
ಮಣ್ಣು, ಸಿಮೆಂಟಿನ ಒತ್ತಿಟ್ಟಿಗೆ ತಯಾರಿಸುವುದನ್ನೇ ಉದ್ಯಮವಾಗಿ ಮಾಡಿಕೊಳ್ಳುವುದಾದರೆ ಹಲವು ಪ್ರಯೋಜನಗಳೂ ಇವೆ. ಸ್ಥಳೀಯರಿಗೆ ಉದ್ಯೋಗಾವಕಾಶ, ಅವರ ಕೌಶಲಕ್ಕೆ ಮನ್ನಣೆ ಗ್ಯಾರಂಟಿ. ಉರುವಲು ಬಳಸದೇ ಇರುವುದರಿಂದ ಪರಿಸರ ಸಂರಕ್ಷಣೆಯೂ ಆಗುತ್ತದೆ. ಸುಟ್ಟ ಇಟ್ಟಿಗೆಗಳ ತಯಾರಿಕೆಗಾದರೆ ತಿಂಗಳುಗಟ್ಟಲೆ ಸಮಯ ಹಿಡಿಯುತ್ತದೆ. ಆದರೆ, ಒತ್ತಿಟ್ಟಿಗೆ ನಿರ್ಮಾಣ ಯಾವಾಗ ಬೇಕೆಂದರೆ ಆಗ ತಕ್ಷಣದಲ್ಲೇ ಸಿದ್ಧ.

‘ಮುಖ್ಯವಾಗಿ ಈ ಇಟ್ಟಿಗೆಗಳನ್ನು ಸುಡುವುದಿಲ್ಲ. ಇದರಿಂದ ಶೇ 60ರಷ್ಟು ಇಂಧನ ಉಳಿತಾಯವಾಗುತ್ತದೆ. ಗೋಡೆ ಕಟ್ಟುವಾಗ ಬಳಸಿದರೆ ಎರಡು ವಾರ ಕ್ಯೂರಿಂಗ್‌ ಮಾಡಬೇಕು. ಇದರಿಂದ ಗೋಡೆಯ ನಿರ್ಮಾಣದಲ್ಲಿ ಶೇಕಡಾ 15ರಷ್ಟು ದುಡ್ಡು ಉಳಿಯುತ್ತದೆ. ಜತೆಗೆ ಪರಿಸರಸ್ನೇಹಿ’ ಎಂದು ವಿವರಿಸುತ್ತಾರೆ ಮೈಸೂರಿನ ಎನ್‌ಐಐ ಕಾಲೇಜಿನಲ್ಲಿ ಇಂಡಸ್ಟ್ರಿಯಲ್‌ ಮುಕ್ತ ಗ್ರಾಮೀಣ ತಂತ್ರಜ್ಞಾನ ಕೇಂದ್ರದ ನಿರ್ದೇಶಕರಾಗಿದ್ದ, ಸುಸ್ಥಿರ ಕಟ್ಟಡ ನಿರ್ಮಾಣ ಸಲುವಾಗಿ ದುಡಿಯುವ ಯು.ಎನ್‌. ರವಿಕುಮಾರ್‌.

ಗಟ್ಟಿ ಮಣ್ಣಿನ ಒಂದು ಒತ್ತಿಟ್ಟಿಗೆಯು ಆಕಾರ ಮತ್ತು ಗಾತ್ರದಲ್ಲಿ ಎರಡೂವರೆ ಸುಟ್ಟ ಇಟ್ಟಿಗೆಗಳಿಗೆ ಸಮ. ಹಾಗಾಗಿ ಗೋಡೆ ನಿರ್ಮಾಣದ ವೇಳೆ ಇಟ್ಟಿಗೆಗಳ ನಡುವೆ ಬಳಸಬೇಕಾದ ಕ್ರಾಂಕಿಟ್‌ ಮಿಶ್ರಣದ ಪ್ರಮಾಣದಲ್ಲೂ ಉಳಿತಾಯವಾಗುತ್ತದೆ.
ಜತೆಗೆ, ಪ್ಲಾಸ್ಟರಿಂಗ್‌ ಮಾಡಬೇಕಾದ ಅಗತ್ಯವೂ ಇರುವುದಿಲ್ಲ. ಇದೆಲ್ಲದರಿಂದ ಸಾಕಷ್ಟು ದುಡ್ಡು ಉಳಿತಾಯವಾಗುತ್ತದೆ.

ಹೀಗಾಗಿ ಇವು ಆಧುನಿಕ ಮಣ್ಣಿನ ಗೋಡೆಗಳು. ಬೇಸಿಗೆಯಲ್ಲಿ ತಂಪಾಗಿ, ಮಳೆಗಾಲದಲ್ಲಿ ಬೆಚ್ಚಗಿಡುತ್ತವೆ. ಒಂದು ಒತ್ತಿಟ್ಟಿಗೆ ತಯಾರಿಕೆಗೆ 10 ರೂಪಾಯಿ ಮಾತ್ರ ವೆಚ್ಚ ತಗಲುತ್ತದೆ. ಈ ದರ ಮಣ್ಣಿನ ಲಭ್ಯತೆ ಹಾಗೂ ಗುಣಮಟ್ಟ ಆಧರಿಸಿ ಸ್ಥಳದಿಂದ ಸ್ಥಳಕ್ಕೆ ತುಸು ಬದಲಾಗಬಹುದು. ಮನೆಯ ಗೋಡೆಗಷ್ಟೇ ಅಲ್ಲದೆ ಕಾಂಪೌಂಡ್, ಪೋರ್ಟಿಕೊಗಳಿಗೂ  ಒತ್ತಿಟ್ಟಿಗೆಗಳನ್ನು ಬಳಸಬಹುದು.

ಇದಕ್ಕೆ ಉದಾಹರಣೆಯಾಗಿ ರವಿಕುಮಾರ್‌ ಹಾಗೂ ಅವರ ಪತ್ನಿ, ವಾಸ್ತುಶಿಲ್ಪಿ ಡಿ.ಲಲಿತಾರಾಜ್‌ ಅವರು ಮೈಸೂರಿನ ಬೋಗಾದಿಯ ಎರಡನೆಯ ಹಂತದಲ್ಲಿ (ಪಶ್ಚಿಮ) ನಿರ್ಮಿಸಿರುವ ಮನೆ ನೋಡಬಹುದು.

ಇವರ ಮನೆಯ ಕಾರಿನ ಫೋರ್ಟಿಕೊ ಭಿನ್ನವಾಗಿದೆ, ಅಷ್ಟೇ ಅಂದವಾಗಿದೆ. ಒತ್ತಿಟ್ಟಿಗೆಯ ಜತೆಗೆ ಚಪ್ಪಡಿ ಕಲ್ಲನ್ನೂ ಬಳಸಿ ಗಾಳಿ, ಬೆಳಕು ಒಳಕ್ಕೆ ಸರಾಗವಾಗಿ ಬರುವ ಹಾಗೆ ಮಾಡಿದ್ದಾರೆ. ಮನೆ ಕಟ್ಟಿಸುವುದಿದ್ದರೆ ಆದಷ್ಟೂ ಒತ್ತಿಟ್ಟಿಗೆ ಬಳಸಿ ಎಂದು ಮನವರಿಕೆ ಮಾಡಿಕೊಡುತ್ತಾರೆ ಲಲಿತಾರಾಜ್‌.

ಇವರು ವಿನ್ಯಾಸಗೊಳಿಸಿದ ಹಲವಾರು ಮನೆಗಳಿಗೆ ಒತ್ತಿಟ್ಟಿಗೆಗಳನ್ನೇ ಬಳಸಲಾಗಿದೆ. ‘ದೆಹಲಿ ಬಿಟ್ಟರೆ ಗುಜರಾತಿನ ಬೂಜ್‌ ಎಂಬಲ್ಲಿ ಒತ್ತಿಟ್ಟಿಗೆ ಬಳಸಿದ ಮನೆಗಳನ್ನು ಹೆಚ್ಚು ಕಾಣಬಹುದು.  ಭೂಕಂಪದ ನಂತರ ಅಲ್ಲಿ ಒತ್ತಿಟ್ಟಿಗೆಗಳನ್ನೇ ಬಳಸಲಾಗಿದೆ. ಜತೆಗೆ ಬೆಂಗಳೂರು, ಮೈಸೂರಿನಲ್ಲೂ ಒತ್ತಿಟ್ಟಿಗೆಯ ಮನೆಗಳು ನಿಧಾನವಾಗಿ ಜನಪ್ರಿಯವಾಗುತ್ತಿವೆ.

ತಮಿಳುನಾಡಿನ ವಿಲ್ಲುಪುರಂ ಜಿಲ್ಲೆಯ ಆರೋವಿಲ್ಲೆ ಎಂಬಲ್ಲಿ ಒತ್ತಿಟ್ಟಿಗೆಗಳಿಂದಲೇ ವಿವಿಧ ಆಕಾರದ, ವಿನ್ಯಾಸದ ಮನೆಗಳನ್ನು ಕಟ್ಟಿರುವುದನ್ನು ಕಾಣಬಹುದು. ಬೆಂಗಳೂರಿನ ಭಾರತೀಯ ವಿಜ್ಞಾನ ಕೇಂದ್ರದ ‘ಅಸ್ತ್ರ’ ಎಂಬ ವಿಭಾಗದವರ ಸಂಶೋಧನೆಯ ಪರಿಣಾಮ ಇಟ್ಟಿಗೆ ತಯಾರಿಕೆಯ ಒತ್ತು ಯಂತ್ರದ ಜತೆಗೆ ಮರ್ದಿನಿ ಎಂಬ ನೂತನ ಯಂತ್ರವನ್ನೂ ಇತ್ತೀಚೆಗೆ ಬಳಸುತ್ತಿದ್ದಾರೆ. ಇವೆಲ್ಲ ಒತ್ತಿಟ್ಟಿಗೆ ಬಳಕೆ ಮತ್ತು ಮನೆ ನಿರ್ಮಾಣಕ್ಕೆ ಪೂರಕವಾದ ಅಂಶಗಳು’ ಎಂದು ವಿವರಿಸುತ್ತಾರೆ ರವಿಕುಮಾರ್‌.

‘ಕಡಿಮೆ ಖರ್ಚಿನಲ್ಲಿ ಮನೆಗಳನ್ನು ಕಟ್ಟಿಸಲು ಅನೇಕರು ಮುಂದಾಗುವುದಿಲ್ಲ. ಒತ್ತಿಟ್ಟಿಗೆಯಿಂದ ದುಡ್ಡು ಉಳಿಸಬಹುದು. ಹಾಗೆಂದಾಕ್ಷಣ ಪರ್ವಾಗಿಲ್ಲ ತೀರಾ ಕಡಿಮೆ ಬಜೆಟ್ಟಿನ ಮನೆಯೇನೂ ಅಲ್ಲ. ಹೇಗಾದರೂ ಸರಿ ಸ್ವಂತ ಮನೆ ಅಲ್ಲವೇ, ಖರ್ಚು ಮಾಡ್ತೇವೆ ಎಂದು ಮುಂದಾಗುವವರೇ ಹೆಚ್ಚು. ಕಡಿಮೆ ಖರ್ಚಿನ ಒತ್ತಿಟ್ಟಿಗೆ ಎಂದಾಕ್ಷಣ ಗುಣಮಟ್ಟ ಕಡಿಮೆ ಎಂದು ಅನುಮಾನಿಸುವವರೇ ಹೆಚ್ಚು. ಈ ಭ್ರಮೆ ಹೋಗಬೇಕು. ಯಾರದ್ದೇ ಆಗಿರಲಿ ‘ಕನಸಿನ ಮನೆ’ ಎಂದಾಕ್ಷಣ ಅದೆಂದೂ ದುಬಾರಿ ಆಗಬಾರದು’ ಎನ್ನುವುದು ಲಲಿತಾರಾಜ್‌ ಅವರ ಕಿವಿಮಾತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT