ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಿನ್ನ ಚಿಂತನೆ ವಿಭಿನ್ನ ವರ್ಣಲೋಕ

Last Updated 5 ಆಗಸ್ಟ್ 2012, 19:30 IST
ಅಕ್ಷರ ಗಾತ್ರ

ಕಲಾ ಪ್ರೇಮಿಗಳಿಗೆ ಒಂದಿಲ್ಲೊಂದು ಚಿತ್ರಕಲಾ ಪ್ರದರ್ಶನಗಳ ಮೂಲಕ ರಸಾನುಭವ ನೀಡುವ ರಿನೈಸನ್ಸ್ ಕಲಾ ಗ್ಯಾಲರಿ ಮತ್ತೊಮ್ಮೆ ಹೊರರಾಜ್ಯದ ಪ್ರತಿಭೆಗಳಿಗೆ ಕ್ಯಾನ್ವಾಸ್ ಆಗಲಿದೆ. ತಮ್ಮ ಚಿಂತನೆಗಳಿಗೆ ವರ್ಣರೂಪ ನೀಡಿರುವ ನಾಲ್ವರು ಬೇರೆ ಬೇರೆ ಕಲಾವಿದರು ಈ ಬಾರಿ ಕಲಾಪ್ರೇಮಿಗಳಿಗೆ ಮುಖಾಮುಖಿಯಾಗಲಿದ್ದಾರೆ.

ಛಾಯಾಗ್ರಹಣವನ್ನೇ ಬದುಕು ಅಂದುಕೊಂಡಿರುವ ಡೆಹ್ರಾಡೂನ್‌ನ ಅನುರಾಗ್ ಬರ್ತ್‌ವಾಲ್ ಡಿಜಿಟಲ್ ಛಾಯಾಚಿತ್ರಗಳಿಗೆ ಮರುಸ್ಪರ್ಶ ನೀಡಿ ಕ್ಯಾನ್ವಾಸ್‌ನಲ್ಲಿ ಅದನ್ನು ಬೆಳಗುತ್ತಾರೆ. ಅದು `ಆರ್ಟ್ ಫೋಟೊಗ್ರಫಿ~.

`ನಾನು ಮೂಲತಃ ಛಾಯಾಗ್ರಾಹಕ. ಪ್ರಕೃತಿ ಹಾಗೂ ಭೂದೃಶ್ಯಗಳನ್ನು ಕಣ್ತುಂಬಿಕೊಳ್ಳುತ್ತಾ ಅಲೆದಾಡುತ್ತೇನೆ. ಸುಮ್ಮನೆ ನೋಡುತ್ತಿದ್ದರೆ ಬೆಟ್ಟಗುಡ್ಡದಲ್ಲೂ ಜೀವಸತ್ವವಿದೆ, ಅದು ಉಸಿರಾಡುತ್ತಿದೆ ಎಂದು ಅನಿಸುತ್ತದೆ.

ದೃಷ್ಟಿಗೊಂದು ದೃಷ್ಟಿಕೋನವಿದ್ದರೆ ಕ್ಲಿಕ್ಕಿಸಿದಲ್ಲೆಲ್ಲಾ ನಮ್ಮ ಕಲ್ಪನೆ ಜೀವರೂಪ ಪಡೆಯುತ್ತದೆ. ನಾನು ಬಳಸೋದು ಡಿಜಿಟಲ್ ಕ್ಯಾಮೆರಾ. ನಂತರ ಅದನ್ನು ಕ್ಯಾನ್ವಾಸ್ ಮೇಲೆ ಕಲಾಕೃತಿಯಾಗಿಸುತ್ತೇನೆ~ ಎಂದು ವಿವರಿಸುತ್ತಾರೆ ಅನುರಾಗ್.

ನೇತಲ್ ರಾಥೋಡ್ ತಮ್ಮ ರಾಜಸ್ತಾನದ ಶ್ರೀಮಂತ ಸಂಸ್ಕೃತಿಯನ್ನೇ ಚಿತ್ರಕಲೆಗೆ ವಸ್ತುವಾಗಿಸಿಕೊಂಡವರು. ತೈಲ ಮತ್ತು ಜಲವರ್ಣದಲ್ಲೇ ಅವರ ಹೆಚ್ಚಿನ ಕಲಾಕೃತಿಗಳು ಮೂಡಿಬಂದಿವೆ.

`ನಮ್ಮ ರಾಜ್ಯದಲ್ಲಿ ಕಾಣುವ ಜನಸಂಸ್ಕೃತಿ, ಜನಪದ ಕಲೆ, ಹಬ್ಬಗಳು ಹೀಗೆ ವಿಭಿನ್ನ ವಸ್ತುಗಳನ್ನು ನಾನು ಕಲಾಕೃತಿಯಾಗಿಸಿದ್ದೇನೆ. ಬಹಳ ನಿರೀಕ್ಷೆಯೊಂದಿಗೆ ಬೆಂಗಳೂರಿನ ಪ್ರದರ್ಶನದಲ್ಲಿ ಪಾಲ್ಗೊಂಡಿದ್ದೇನೆ~ ಎನ್ನುತ್ತಾರೆ ನೇತಲ್.

ದಿವ್ಯಾ ರಾಮ್‌ನಾನೆ ಬೆಂಗಳೂರಿನ ಕಲಾವಿದೆ. ಬಹುಮುಖ ಪ್ರತಿಭೆ. 12ರ ವಯಸ್ಸಿನಲ್ಲೇ ಚಿತ್ತಸೆಳೆದ ಚಿತ್ರಕಲೆಯನ್ನು ಇನ್ಯಾವ ಹವ್ಯಾಸಗಳೂ ಮೂಲೆಗುಂಪು ಮಾಡಲಾಗಲಿಲ್ಲ. ಹೀಗಾಗಿ ಸೃಷ್ಟಿ ಕಲಾ ಶಾಲೆಯಲ್ಲಿ ಚಿತ್ರಕಲೆಯ ಬಗ್ಗೆ ಅಕಾಡೆಮಿಕ್ ಶಿಕ್ಷಣ ಪಡೆದು, ನೃತ್ಯಾಭ್ಯಾಸವನ್ನೂ ಮಾಡಿಕೊಂಡರು.

`ಅಬ್‌ಸ್ಟ್ರಾಕ್ಟ್ ನನ್ನಿಷ್ಟದ ಮಾಧ್ಯಮ. ನಮ್ಮ ಚಿಂತನೆ, ಯೋಚನೆ, ಭಾವನೆ, ಒಲುಮೆಯನ್ನು ಅದರಲ್ಲಿ ಬಿಂಬಿಸುವಷ್ಟು ಪ್ರಬಲವಾಗಿ, ಪರಿಣಾಮಕಾರಿಯಾಗಿ ಇನ್ಯಾವ ಮಾಧ್ಯಮದಲ್ಲೂ ಪಡಿಮೂಡಿಸಲು ಸಾಧ್ಯ ಎಂದು ನನಗನಿಸುವುದಿಲ್ಲ.
 
ಬಣ್ಣಗಳನ್ನು ನಮಗೆ ಬೇಕೆನಿಸಿದ ಛಾಯೆಗಳಲ್ಲಿ, ದಟ್ಟವಾಗಿಯೋ ತೆಳುವಾಗಿಯೋ ಕುಂಚದಲ್ಲಿ ಹರಡುವುದು ಸಾಧ್ಯವಾದರೆ ನಾವು ಹೇಳಬೇಕಾದ್ದನ್ನು ಕಲಾಕೃತಿಯೇ ಹೇಳುತ್ತದೆ. ನಾನು ನನ್ನ ಕಲಾಕೃತಿಗಳ ಮೂಲಕವೇ ನನ್ನನ್ನು ಅಭಿವ್ಯಕ್ತಿಗೊಳಿಸುತ್ತೇನೆ~ ಎಂದು ಮನಬಿಚ್ಚಿ ಮಾತನಾಡುತ್ತಾರೆ ದಿವ್ಯಾ.

ಕನಿಂಗ್‌ಹ್ಯಾಮ್ ರಸ್ತೆಯಲ್ಲಿರುವ ರಿನೈಸನ್ಸ್ ಗ್ಯಾಲರಿಯಲ್ಲಿ ಶನಿವಾರ ಆರಂಭವಾಗಿರುವ ಈ ಕಲಾ ಪ್ರದರ್ಶನವು ಆ.9ರಂದು ಕೊನೆಗೊಳ್ಳಲಿದೆ. ಸಮಯ: ಬೆಳಿಗ್ಗೆ 11ರಿಂದ ಸಂಜೆ 7.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT