ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭೀಮರಾಯನಗುಡಿ: ರೈತರ ಪ್ರಶ್ನೆಗೆ ಅಧಿಕಾರಿ ಪಡೆ ತತ್ತರ!

Last Updated 23 ಜುಲೈ 2012, 10:25 IST
ಅಕ್ಷರ ಗಾತ್ರ

ಶಹಾಪುರ: ರಾಜಕಾರಣಿಗಳಂತೆ ಸಭೆಯಲ್ಲಿ ಆಶ್ವಾಸನೆ ಬೇಡ. ಕರ್ತವ್ಯದ ಬಗ್ಗೆ ಮಾತ್ರ ಮಾತನಾಡಿ. ಉಪದೇಶ ಕೇಳಿ ರೋಸಿ ಹೋಗಿದ್ದೇವೆ. ಎಷ್ಟು ದಿನ ಅನ್ನದಾತರನ್ನು ವಂಚಿಸುವಿರಿ. ಬೆಳೆ ವಿಮೆಯ ಮಾಹಿತಿ ಯಾರಿಗೆ ಬೇಕು. ಬ್ಯಾಂಕ್‌ಗಳಲ್ಲಿ ದಲ್ಲಾಳಿಗಳ ಹಾವಳಿಯಿಂದ ರೈತರು ಕಂಗೆಟ್ಟು ಹೋಗಿದ್ದಾರೆ.

ಭೀಮರಾಯನಗುಡಿ ಕೃಷಿ ಮಹಾವಿದ್ಯಾಲಯ ಆವರಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಕೃಷಿ ಮಾಹಿತಿ ಮೇಳದಲ್ಲಿ `ಬೆಳೆ ವಿಮೆ ಮತ್ತು ಬ್ಯಾಂಕ್‌ಗಳಿಂದ ಕೃಷಿ ಸಾಲ ಸೌಲಭ್ಯ~ ವಿಷಯದ ಬಗ್ಗೆ ಮಾಹಿತಿ ನೀಡಲು ಜಿಲ್ಲಾ ಲೀಡ್ ಬ್ಯಾಂಕಿನ ಅಧಿಕಾರಿ ಡಿ.ಡಿ. ಒಡೆಯರ್ ಮುಂದಾದಾಗ ರೈತ ಮುಖಂಡರಾದ ಮಲ್ಲಿಕಾರ್ಜುನ ಸತ್ಯಂಪೇಟೆ ಹಾಗೂ ಮಲ್ಲಣ್ಣಗೌಡ ಚಂದಾಪೂರ ಇಂತಹ ಪ್ರಶ್ನೆಗಳ ಸುರಿ ಮಳೆಯನ್ನು ಸುರಿಸಿ ಅಧಿಕಾರಿಯನ್ನು ತರಾಟೆ ತೆಗೆದುಕೊಂಡರು ಆಗ ಸಭೆಯಲ್ಲಿ ಕಾವೇರಿದ ವಾತಾವರಣ ಉಂಟಾಯಿತು.

ಸಮಾಧಾನ ಚಿತ್ತರಾಗಿ ರೈತರ ಮಾತುಗಳನ್ನು ಆಲಿಸಿದ ಒಡೆಯರ್ ನಂತರ ಬೆಳೆ ವಿಮಾ ಪಾಲಿಸಿ ಸರ್ಕಾರದ ಮಟ್ಟದಲ್ಲಿ ತೀರ್ಮಾನವಾಗುತ್ತದೆ ಎಂದು ಉತ್ತರಿಸಿದರು.

ಬ್ಯಾಂಕ್‌ನಲ್ಲಿ `ಬೇಬಾಕಿ ಪ್ರಮಾಣ ಪತ್ರ~ ನೀಡಲು ರೈತರಿಂದ ಹಣ ವಸೂಲಿ ಮಾಡುತ್ತಾರೆ ಎಂಬ ರೈತರ ಆರೋಪಕ್ಕೆ ಒಡೆಯರ್ ಉತ್ತರಿಸುತ್ತಾ ಇಲ್ಲ ಕೃಷಿ ಸಾಲದ ಬೇಬಾಕಿ ಪ್ರಮಾಣ ಪತ್ರವೆಂದು ಅರ್ಜಿಯಲ್ಲಿ ನಮೂದಿಸಿ ನಯಾ ಪೈಸೆಯನ್ನು ಬ್ಯಾಂಕ್ ಅಧಿಕಾರಿಗಳು ತೆಗೆದುಕೊಳ್ಳಬಾರದೆಂದು ಕಟ್ಟಪ್ಪಣೆ ನೀಡುತ್ತಿದ್ದೇನೆ ಎಂದು ಸ್ಪಷ್ಟಪಡಿಸಿದರು.

ಜಿಲ್ಲೆಯಲ್ಲಿ 15 ರಾಷ್ಟ್ರೀಕೃತ ಬ್ಯಾಂಕಿನ 81 ಶಾಖೆಗಳು ಕಾರ್ಯ ನಿರ್ವಹಿಸುತ್ತಿವೆ. 1,098 ಕೋಟಿ ವಿವಿಧ ಚಟುವಟಿಕೆಗಳಿಗೆ ಹಣ ವಿನಿಯೋಗಿಸಲಾಗಿದೆ. ಅದರಲ್ಲಿ 798 ಕೋಟಿ ಕೃಷಿ ಸಾಲ ನೀಡಲಾಗಿದೆ ಎಂದು ಅವರು ವಿವರಿಸಿದರು.

ಕೃಷಿಗೆ ಸಂಬಂಧಿಸಿದ ವಿಷಯದ ಬಗ್ಗೆ ಜಂಟಿ ಕೃಷಿ ನಿರ್ದೇಶಕರಾದ ಎಂ. ತಿರುಮಲೇಶ ಮಾತನಾಡಲು ಮುಂದಾದ ತಕ್ಷಣ ರೈತ ಮುಖಂಡ ಮಲ್ಲಣ್ಣ ಪರಿವಾಣ `ಅಲ್ಲಾರೀ ಎಷ್ಟು ಸಲ ನಿಮಗ್ ಹೇಳಬೇಕು. ಹತ್ತಿ ಬೀಜ, ರಸಗೊಬ್ಬರ ದುಪ್ಪಟ್ಟು ಬೆಲೆಗೆ ಮಾರಾಟ ಮಾಡಿ ನಮ್ಮ ಕುತ್ತಿಗಿ ಹಿಚುಕುತ್ತಿದ್ದಾರೆ ರಸಗೊಬ್ಬರ ಹಾಗೂ ಕ್ರಿಮಿನಾಶಕ ಅಂಗಡಿಗಳ ಜಿಲ್ಲಾ ಅಧ್ಯಕ್ಷರನ್ನು ಪಕ್ಕದಾಗ ಕುಳ್ಳಿರಿಸಿಕೊಂಡು  ಸಭೆ ಮಾಡುತ್ತೀರಿ ನಿಮಗೆ ನಾಚಿಗೆ ಆಗುವುದಿಲ್ಲವೇ~ ಎಂದು ಖಾರವಾಗಿ ಪ್ರಶ್ನಿಸಿದರು.

ಆಗ ಜಂಟಿ ಕೃಷಿ ಅಧಿಕಾರಿ ಮಾರುತ್ತರ ನೀಡಿ ನೋಡಿ ಯಾವ ಅಂಗಡಿಯಲ್ಲಿ ದುಬಾರಿ ಬೆಲೆಗೆ ಬೀಜ ಇಲ್ಲವೆ ಗೊಬ್ಬರ ಮಾರಾಟ ಮಾಡಿದ್ದರ ರಸೀದಿ ನೀಡಿ. ಜೊತೆಗೆ ಲಿಖಿತವಾಗಿ ದೂರು ಸಲ್ಲಿಸಿ. ರಸೀದಿ ನೀಡದೆ ಅಂಗಡಿ ಮಾಲೀಕರು ಸತಾಯಿಸಿದ್ದರೆ  ಅದಕ್ಕೂ ದೂರು ಕೊಡಿ. ಕ್ರಮ ತೆಗೆದುಕೊಳ್ಳಲಾಗುತ್ತದೆ. ಬೇಕಾದರೆ ನನ್ನ ಮೊಬೈಲ್ ನಂಬರ್ ತೆಗೆದುಕೊಂಡು ಯಾವುದೇ ಸಮಯಲ್ಲಿ ಮಾತನಾಡಿ ಎಂದು ಉತ್ತರಿಸಿದರು.

ದಿನ ನಿತ್ಯ ರೈತರು ಅನುಭವಿಸುತ್ತಿರುವ ಸಮಸ್ಯೆಗಳಿಗೆ ಆಯಾ ಇಲಾಖೆಯ ಮುಖ್ಯಸ್ಥರು ಸಭೆಯಲ್ಲಿ ಕಡ್ಡಾಯ ಹಾಜರಾಗಬೇಕೆಂದು ರೈತರು ಆಗ್ರಹಿಸಿದಾಗ ಚುನಾಯಿತ ಪ್ರತಿನಿಧಿಗಳಾದ ಶಾಸಕರು ಹಾಗೂ ಸಚಿವರನ್ನು ಸಭೆಯಿಂದ ತೆರಳದಂತೆ ಹೇಳಲು ಅಧಿಕಾರಿಗಳಿಂದ ಸಾಧ್ಯವೆ ? ಎಂದು ಜಂಟಿ ನಿರ್ದೇಶಕರು ಕೇಳಿದರು.
ಹೀಗೆ ರೈತರು ಎಸೆದ ಪ್ರಶ್ನೆಗಳು ಪ್ರಶ್ನೆಗಳಾಗಿ ಉಳಿದುಕೊಂಡವು.

ಸಂವಾದ ಕಾರ್ಯಕ್ರಮದಲ್ಲಿ ಭೀಮರಡ್ಡಿ ಪೊಲೀಸ್ ಪಾಟೀಲ್, ಸಂಗಣ್ಣ ಗುಳಿಗಿ, ಡಾ.ಮಲ್ಲೇಶ ದೇವಿಕೇರಿ ಸೇರಿದಂತೆ ಹೆಚ್ಚಿನ ರೈತರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT