ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭೀಮಸಮುದ್ರ ಕೆರೆಗೆ ನೀರು; ಅನ್ನೇಹಾಳ್ ರೈತರ ವಿರೋಧ

Last Updated 13 ಡಿಸೆಂಬರ್ 2013, 8:26 IST
ಅಕ್ಷರ ಗಾತ್ರ

ಚಿತ್ರದುರ್ಗ: ತಾಲ್ಲೂಕಿನ ಅನ್ನೇಹಾಳು ಕೆರೆಯಿಂದ ಭೀಮಸಮುದ್ರ ಕೆರೆಗೆ ಪೂರಕ ನಾಲೆ ಮೂಲಕ ನೀರನ್ನು ಹರಿಸಲು ಮುಂದಾಗಿರುವ ಜಲಸಂಪನ್ಮೂಲ ಇಲಾಖೆ ಕ್ರಮ ವಿರೋಧಿಸಿ ಹುಲ್ಲೂರು ವಿಘ್ನೇಶ್ವರ ಕೆರೆ ಬಳಕೆದಾರರ ಸಂಘ, ಟಿ. ನುಲೇನೂರು, ಬಂಜೆಗೊಂಡನಹಳ್ಳಿ, ಹೊಳಲ್ಕೆರೆ ತಾಲ್ಲೂಕು ಹಾಗೂ ಬೆನಕನಹಳ್ಳಿ, ಹುಲ್ಲೂರು, ಸಿಂಗಪೂರ, ಕಾತ್ರಾಳು ಕೆರೆ ಅಚ್ಚುಕಟ್ಟು ರೈತರು ಗುರುವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು.

ನಾಲೆ ನಿರ್ಮಾಣದ ಸಂಬಂಧ 67 ಎಕರೆಯಷ್ಟು ಭೂಮಿ ಸ್ವಾಧೀನಪಡಿಸಿಕೊಳ್ಳಲು ಉಪ ವಿಭಾಗಾಧಿಕಾರಿ ರೈತರಿಗೆ ನೋಟಿಸ್ ಜಾರಿ ಮಾಡಿದ್ದು, ಇದರಿಂದ ರೈತರು ಆತಂಕಕ್ಕೆ ಒಳಗಾಗಿದ್ದಾರೆ. ಅನ್ನೇಹಾಳು ಕೆರೆಯಿಂದ ಭೀಮಸಮುದ್ರಕ್ಕೆ ನೀರು ಹರಿಸುವ ಯೋಜನೆ ಅವೈಜ್ಞಾನಿಕವಾಗಿದ್ದು, ಕೂಡಲೇ ಈ ಯೋಜನೆಯನ್ನು ಅಧಿಕಾರಿಗಳು ಕೈಬಿಡದಿದ್ದರೆ ತೀವ್ರ ಹೋರಾಟ ನಡೆಸಬೇಕಾದೀತೆಂದು ರೈತರು ಸರ್ಕಾರವನ್ನು ಎಚ್ಚರಿಸಿದರು.

ಹತ್ತು ವರ್ಷಗಳ ಹಿಂದೆಯೇ ಅನ್ನೇಹಾಳು ಕೆರೆಯ ನೀರನ್ನು ವ್ಯವಸಾಯಕ್ಕೆ ಬಳಕೆ ಮಾಡಿಕೊಳ್ಳಲಾಗುತ್ತಿತ್ತು. ಆದರೆ, ಇತ್ತೀಚೆಗೆ ಸಕಾಲಕ್ಕೆ ಸರಿಯಾಗಿ ಮಳೆ ಬಾರದ ಕಾರಣ ಕೃಷಿಗೆ ನೀರನ್ನು ಬಳಸದೆ ಕೆರೆಯಲ್ಲೇ ಉಳಿಸಿಕೊಂಡು ಅಂರ್ತಜಲ ಮಟ್ಟವನ್ನು ಕಾಯ್ದುಕೊಳ್ಳಲಾಗುತ್ತಿದೆ.

ಕಳೆದು ೨೫ ವರ್ಷದಲ್ಲಿ ಈ ಕೆರೆ ಎರಡು ಬಾರಿ ಮಾತ್ರ ಕೋಡಿಬಿದ್ದಿದೆ. ಕೆರೆಯ ಹಿಂಭಾಗವಿರುವ ಕಕ್ಕೇರವು ಗುಡ್ಡಗಳ ಮೇಲೆ ಬೀಳುವ ಮಳೆ ನೀರು ಹರಿದು ಈ ಕೆರೆಗೆ ಸೇರುವುದನ್ನು ಬಿಟ್ಟರೆ ಬೇರೆ ಯಾವ ಜಲಮೂಲವು ಈ ಕೆರೆಗಿಲ್ಲ. ಅನ್ನೇಹಾಳು ಕೆರೆಗೆ ಹರಿದು ಬರುವ ಅಚ್ಚುಕಟ್ಟು ಪ್ರದೇಶದ ನೀರಿನ ಮಾರ್ಗ ಬದಲಿಸಿ ಭೀಮಸಮುದ್ರಕ್ಕೆ ಕೊಂಡೊಯುವುದರಿಂದ ಕೆಳಭಾಗದ ರೈತರ ಆಕ್ರೋಶಕ್ಕೆ ತುತ್ತಾಗಬೇಕಾಗುತ್ತದೆ. ಇಂಥ ಅವೈಜ್ಞಾನಿಕ ನೀತಿಯನ್ನು ಅಧಿಕಾರಿಗಳು ಕೈಬಿಡುವುದು ರೈತರ ಹಿತದೃಷ್ಟಿಯಿಂದ ಒಳಿತು. ಇಲ್ಲವಾದಲ್ಲಿ ಮುಂದೆ ಆಗುವ ಅನಾಹುತಗಳಿಗೆ ಸರ್ಕಾರವೇ ಹೊಣೆಯಾಗ ಬೇಕಾಗುತ್ತದೆ’
ಎಂದು ರೈತರು  ಆಕ್ರೋಶ ವ್ಯಕ್ತಪಡಿಸಿದರು.

ಜಿಲ್ಲಾಡಳಿತ ಮತ್ತೊಮ್ಮೆ ಈ ಯೋಜನೆಯನ್ನು ಪರಾಮರ್ಶಿಸಿ ಸ್ಥಳ ಸಮೀಕ್ಷೆ ನಡೆಸಿ ಇದರಿಂದ ರೈತರ ಕೃಷಿ ಪದ್ಧತಿ ಮೇಲಾಗುವ ಸಾಧಕ-ಭಾದಕಗಳನ್ನು ಅರಿತು ಮುಂದಿನ ನಿರ್ಧಾರ ಕೈಗೊಳ್ಳುವುದು ಒಳಿತು. ಅನ್ನೇಹಾಳು ಕೆರೆಯಿಂದ ಭೀಮಸಮುದ್ರ ಕೆರೆಗೆ ನೀರು ಹಾಯಿಸುವುದನ್ನು ಬಿಟ್ಟು ಬೇರೆ ಯಾವುದಾದರೂ ಮೂಲದಿಂದ ನೀರು ಕೊಂಡೊಯಲಿ
ಎಂದು ಅನ್ನೇಹಾಳು ಕಾತ್ರಾಳು ಕೆರೆ ಅಚ್ಚುಕಟ್ಟುದಾರರು ಸರ್ಕಾರವನ್ನು ಕೋರಿದರು.

ಜಿಲ್ಲಾಧ್ಯಕ್ಷ ಟಿ. ನುಲೇನೂರು ಶಂಕರಪ್ಪ, ಬಸ್ತಿಹಳ್ಳಿ ಸುರೇಶ್‌ಬಾಬು, ವಿಜಯ್‌ಕುಮಾರ್, ಚಂದ್ರಪ್ಪ, ಜಯಮ್ಮ, ರಾಜಪ್ಪ, ಹೇಮಾಕ್ಷಿ, ಈಶ್ವರಪ್ಪ, ಲೋಕೇಶ್ವರಪ್ಪ, ಪಾಲಯ್ಯ, ನಿಂಗರಾಜು ಸೇರಿದಂತೆ ನೂರಾರು ರೈತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT