ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭೀಮಾ ತಟದಲ್ಲಿ ಅದ್ದೂರಿ ಹೊಳಿ ಜಾತ್ರೆ

Last Updated 16 ಜನವರಿ 2012, 10:45 IST
ಅಕ್ಷರ ಗಾತ್ರ

ಯಾದಗಿರಿ: ಎಲ್ಲಿ ನೋಡಿದರೂ ಮಕರ ಸಂಕ್ರಾಂತಿಯ ಹಬ್ಬದ ಸಡಗರ... ಭೀಮೆಯ ತಟದಲ್ಲಿ ಸೇರಿದ ಭಕ್ತ ಸಾಗರ... ಭಕ್ಷ ಭೋಜ್ಯ, ಧಾರ್ಮಿಕ ವಿಧಿಗಳ ಮಧ್ಯೆ ಭಕ್ತರ ಹರ್ಷೋದ್ಘಾರ... ಇದೆಲ್ಲರ ಜೊತೆಗೆ ಭಕ್ತರಿಗೆ ಸ್ವತಃ ಸಿದ್ಧಸಂಸ್ಥಾನ ಮಠದ ಗಂಗಾಧರ ಶ್ರೀಗಳ ಉಪಚಾರ...

ಮಕರ ಸಂಕ್ರಾಂತಿ ಅಂಗವಾಗಿ ಭಾನುವಾರ ತಾಲ್ಲೂಕಿನ ಅಬ್ಬೆತುಮಕೂರಿನ ಬಳಿ ಇರುವ ಗಂಗಾ ನದಿ ತಟದಲ್ಲಿ ಜರುಗಿದ ಹೊಳಿ ಜಾತ್ರೆಯ ಸಂಭ್ರಮವಿದು. ನದಿ ದಡದಲ್ಲಿ ಸೇರಿದ್ದ ಅಪಾರ ಭಕ್ತಾದಿಗಳು, ಮಕರ ಸಂಕ್ರಾಂತಿಯನ್ನು ಹೊಳಿ ಜಾತ್ರೆಯ ರೂಪದಲ್ಲಿ ಅದ್ದೂರಿಯಾಗಿ ಆಚರಿಸಿದರು.

ಡೊಳ್ಳು, ಬಾಜಾ, ಭಜಂತ್ರಿಗಳ ನಿನಾದ, ಭಜನಾ ತಂಡದವರಿಂದ ಸುಮಧುರ ನಾದ, ವಿಶ್ವಾರಾಧ್ಯರಿಗೆ ಜಯವಾಗಲಿ, ಗಂಗಾಧರ ಶ್ರೀಗಳಿಗೆ ಜಯವಾಗಲಿ ಎಂಬ ಜಯಘೋಷಗಳ ಉನ್ಮಾದ, ಪವಿತ್ರ ಗಂಗೆಯಲಿ ಮಿಂದು, ಭಕ್ಷ ಭೋಜ್ಯಗಳ ಆಸ್ವಾದದೊಂದಿಗೆ ಭಕ್ತರ ಸಂಭ್ರಮ ಮುಗಿಲು ಮುಟ್ಟಿತ್ತು.

ಪ್ರತಿ ವರ್ಷ ಮಕರ ಸಂಕ್ರಾಂತಿಯಂದು ತಾಲ್ಲೂಕಿನ ಅಬ್ಬೆತುಮಕೂರಿನ ಸಿದ್ಧ ಸಂಸ್ಥಾನ ಮಠದ ವತಿಯಿಂದ ನಡೆಯುವ ಹೊಳಿ ಜಾತ್ರೆಯು ಈ ಬಾರಿ ಸಡಗರ, ಸಂಭ್ರಮದಿಂದ ಜರುಗಿತು. ಬೆಳಿಗ್ಗೆ ಅಬ್ಬೆತುಮಕೂರಿನ ವಿಶ್ವಾರಾಧ್ಯರ ಕರ್ತೃ ಗದ್ದುಗೆಗೆ ವಿಶೇಷ ಪೂಜೆ ನೆರವೇರಿಸಲಾಯಿತು. ನಂತರ ಮಂಗಲ ವಾದ್ಯಗಳು, ಸುಮಂಗಲಿಯರ ಕಳಸ, ಭಜನಾ ತಂಡದವರೊಂದಿಗೆ ಗಂಗಾಧರ ಶ್ರೀಗಳ ನೇತೃತ್ವದಲ್ಲಿ ಭೀಮಾ ನದಿಯವರೆಗೆ ಪಲ್ಲಕ್ಕಿ ಉತ್ಸವ ನಡೆಯಿತು.

ಭೀಮಾ ನದಿಯ ತಟದಲ್ಲಿ ಗಂಗಾಧರ ಶ್ರೀಗಳು ಗಂಗಾಸ್ನಾನ ಮಾಡಿ, ಗಂಗಾ ಮಾತೆಯ ಪೂಜೆ ನೆರವೇರಿಸಿದರು. ನಂತರ ಸಹಸ್ರಾರು ಸಂಖ್ಯೆಯಲ್ಲಿ ಆಗಮಿಸಿದ್ದ ಭಕ್ತಾದಿಗಳು, ಶ್ರೀಗಳ ಪಾದಪೂಜೆ ಮಾಡಿ, ಆಶೀರ್ವಾದ ಪಡೆದರು.

ಈ ಸಂದರ್ಭದಲ್ಲಿ ಆಶೀರ್ವಚನ ನೀಡಿದ ಗಂಗಾಧರ ಶ್ರೀಗಳು, ನೂತನ ವರ್ಷದ ಮೊದಲ ಹಬ್ಬವಾಗಿರುವ ಮಕರ ಸಂಕ್ರಾಂತಿಯು ರೈತರ ಬದುಕಿಗೆ ಸಮೃದ್ಧಿಯನ್ನು ತರುವ ಹಬ್ಬ. ಈ ಹಬ್ಬವು ಅನ್ನ ನೀಡುವ ರೈತರಿಗೆ ಹಿಗ್ಗನ್ನು ನೀಡಲಿ. ಒಕ್ಕಲಿಗ ಚೆನ್ನಾಗಿದ್ದರೆ, ನಾಡೆಲ್ಲ ಸಮೃದ್ಧಿಯಾಗಿರುತ್ತದೆ. ಆತನ ಬದುಕಿನ ಬೆಳಕಾಗಿ ಈ ಹಬ್ಬ ಸಂಭ್ರಮವನ್ನು ತರಲಿ ಎಂದು ಹಾರೈಸಿದರು.

ಪ್ರತಿಯೊಬ್ಬ ವ್ಯಕ್ತಿಯಲ್ಲಿ ಅರಿವನ್ನು ಮೂಡಿಸಿ, ಹೊಸತನದ ಸಂಕೇತವಾದ ಸಂಕ್ರಾಂತಿ, ಸರ್ವರಿಗೂ ಶಾಂತಿ, ಸಮೃದ್ಧಿಯನ್ನು ನೀಡಲಿ ಎಂದರು.

ಸಂಕ್ರಾಂತಿ ಹಬ್ಬದ ವಿಶೇಷವಾದ ಎಳ್ಳು ಹಚ್ಚಿದ ರೊಟ್ಟಿ, ಶೇಂಗಾ ಹೋಳಿಗೆ, ಎಣ್ಣೆ ಬದನೆಕಾಯಿ, ಶೇಂಗಾ ಹಿಂಡಿ, ಪುಂಡಿ ಪಲ್ಯ, ಹಿಂಡಿ ಪಲ್ಯ, ಭಜಿ, ಭರತ ಮುಂತಾದ ಬಗೆ ಬಗೆಯ ಖಾದ್ಯಗಳನ್ನು ಭಕ್ತರು ಸವಿದರು. ಸ್ವತಃ ಗಂಗಾಧರ ಶ್ರೀಗಳೇ ಭಕ್ತಾದಿಗಳಿಗೆ ಅನ್ನಸಂತರ್ಪಣೆ ಮಾಡಿದ್ದು ವಿಶೇಷವಾಗಿತ್ತು.

ಚನ್ನಪ್ಪಗೌಡ ಮೋಸಂಬಿ, ಡಾ. ಸುಭಾಷಚಂದ್ರ ಕೌಲಗಿ, ವಿಶ್ವನಾಥ ಸಿರವಾರ, ರವಿ ಬಾಪುರೆ, ಹಣಮಂತರಾವ ಹೆಂದೆ, ಡಾ. ವಿರೇಶ ಜಾಕಾ, ಡಿಎಸ್ಪಿ ಎಸ್.ಡಿ. ಬಾಗವಾಡಮಠ, ಬಸವಂತ್ರಾಯಗೌಡ ಮಾಲಿಪಾಟೀಲ, ನಾಗೇಂದ್ರ ಜಾಜಿ, ಬಸವರಾಜ ಮೋಟ್ನಳ್ಳಿ, ಬಸವರಾಜ ರಾಜಾಪೂರ, ವಿಶ್ವನಾಥರೆಡ್ಡಿ ಮಾಲಿಪಾಟೀಲ, ಸಿದ್ಧ ಪಾಟೀಲ, ಎಸ್.ಎನ್. ಮಿಂಚಿನಾಳ ಸೇರಿದಂತೆ ಹಲವಾರು ಭಕ್ತರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT