ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭೀಮಾ ನದಿಯಲ್ಲಿ ಅಕ್ರಮ ಮರಳು ಗಣಿಗಾರಿಕೆ...

Last Updated 30 ಅಕ್ಟೋಬರ್ 2011, 10:20 IST
ಅಕ್ಷರ ಗಾತ್ರ

ವಿಜಾಪುರ: `ಭೀಮಾ ನದಿಯಲ್ಲಿ ನಡೆಯುತ್ತಿರುವ ಅಕ್ರಮ ಮರಳು ಗಣಿಗಾರಿಕೆಯಲ್ಲಿ ಶಾಸಕರು ಹಾಗೂ ಪೊಲೀಸರು ನೇರವಾಗಿ ಶಾಮೀಲಾಗಿದ್ದಾರೆ~ ಎಂದು ಆಡಳಿತ ಪಕ್ಷದ ಇಂಡಿ ಕ್ಷೇತ್ರದ ಶಾಸಕ ಡಾ.ಸಾರ್ವಭೌಮ ಬಗಲಿ ಗಂಭೀರ ಆರೋಪ ಮಾಡಿದರು.

ಭೀಮಾ ತೀರದಲ್ಲಿ ಬೋಟ್‌ಗಳನ್ನು ಬಳಸಿ ಅಕ್ರಮವಾಗಿ ಮರಳು ಗಣಿಗಾರಿಕೆಯಲ್ಲಿ ತೊಡಗಿರುವವರ ವಿರುದ್ಧ ಕ್ರಮ ಕೈಗೊಳ್ಳುತ್ತಿಲ್ಲ. ಅಮಾಯಕ ಲಾರಿ ಚಾಲಕರ ಮೇಲೆ ಮೊಕದ್ದಮೆ ದಾಖಲಿಸಲಾಗುತ್ತಿದೆ ಎಂದು ಶನಿವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ದೂರಿದರು.

`ಇಂಡಿಯ ಡಿವೈಎಸ್ಪಿ ಮುತ್ತುರಾಜ್ ಅವರು ಹಿಂಗಣಿಯಿಂದ ಧೂಳಖೇಡವರೆಗೆ ನದಿ ತೀರದಲ್ಲಿ ಅಕ್ರಮವಾಗಿ ಮರಳು ಗಣಿಗಾರಿಕೆಗೆ ಬಳಸುತ್ತಿದ್ದ ಏಳು ಬೋಟ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಪ್ರದೇಶ ಝಳಕಿ ಪೊಲೀಸ್ ಠಾಣೆಯ ವ್ಯಾಪ್ತಿಗೆ ಬರುತ್ತದೆ.

ಝಳಕಿ ಠಾಣೆಯಲ್ಲಿದ್ದ ಪ್ರಾಮಾಣಿಕ ಪೊಲೀಸ್ ಅಧಿಕಾರಿಯನ್ನು ವರ್ಗಾವಣೆ ಮಾಡಿ ಅಸಮರ್ಥ ಅಧಿಕಾರಿಯನ್ನು ಅಲ್ಲಿಗೆ ನಿಯೋಜಿಸಲಾಗಿದೆ. ಇದಕ್ಕೆ ಬೆಳಗಾವಿ ವಲಯದ ಐಜಿಪಿ ಸಂಧು ಅವರೇ ಹೊಣೆ~ ಎಂದು ಆರೋಪಿಸಿದರು.

`ಸರ್ಕಾರವೂ ಅಷ್ಟೇ. ಒಂದು ಗುಂಪಿನ ಶಾಸಕರಿಗೆ ಮಾತ್ರ ಆದ್ಯತೆ ನೀಡಿ ಅವರ ಕೆಲಸಗಳನ್ನು ಮಾಡಿಕೊಡುತ್ತಿದೆ. ನಮ್ಮ ಕೆಲಸ ಕಾರ್ಯಗಳನ್ನು ಮಾಡುತ್ತಿಲ್ಲ. ಅಪ್ರಾಮಾಣಿಕ ಅಧಿಕಾರಿಗಳ ವರ್ಗಾವಣೆಗೆ ಮನವಿ ಮಾಡಿದರೂ ನಮ್ಮ ಮಾತಿಗೆ ಮಾನ್ಯತೆ ನೀಡುತ್ತಿಲ್ಲ~ ಎಂದು ದೂರಿದರು.

ಹೋರಾಟದಲ್ಲಿ ಪಾಲ್ಗೊಂಡಿಲ್ಲ: `ಭೀಮಾ ನದಿಯಲ್ಲಿ ಮರಳು ಇದೆ. ಅಲ್ಲಿಯೇ ಗಣಿಗಾರಿಕೆ ನಡೆಯಲು ಸಾಧ್ಯ. ಅದನ್ನು ಬಿಟ್ಟು ಇನ್ನೇನು ವಿಜಾಪುರದಲ್ಲಿ ಅಕ್ರಮ ಮರಳು ಗಣಿಗಾರಿಕೆ ನಡೆಯುತ್ತದೆಯೇ?~ ಎಂದು ಪತ್ರಿಕಾಗೋಷ್ಠಿಯಲ್ಲಿದ್ದ ಸಿಂದಗಿಯ ಶಾಸಕ ರಮೇಶ ಭೂಸನೂರ ಪ್ರಶ್ನಿಸಿದರು.

ತಮ್ಮ ಸ್ವಗ್ರಾಮ ದೇವಣಗಾಂವದಲ್ಲಿ ಅಕ್ರಮ ಮರಳು ಗಣಿಗಾರಿಕೆ ಅವ್ಯಾಹತವಾಗಿ ನಡೆಯುತ್ತಿದೆ ಎಂದು ಅಲ್ಲಿಯ ಜನ ಪ್ರತಿಭಟನೆ ನಡೆಸಿದ್ದಾರಲ್ಲ ಎಂಬ ಪ್ರಶ್ನೆಗೆ ಅವರು ಈ ಉತ್ತರ ನೀಡಿದರು.`ಅಕ್ರಮ ಮರಳು ಗಣಿಗಾರಿಕೆ ವಿರೋಧಿಸಿ ಸಿಂದಗಿ ತಾಲ್ಲೂಕು ದೇವಣಗಾಂವದಲ್ಲಿ ಗ್ರಾಮಸ್ಥರು ನಡೆಸಿದ ಹೋರಾಟದಲ್ಲಿ ನಾನು ಪಾಲ್ಗೊಂಡಿರಲಿಲ್ಲ. ಅವರು ಹೋರಾಟ ನಡೆಸುತ್ತಿದ್ದಾಗ ನಾನು ಅಲ್ಲಿಂದ ಹೊರಟಿದ್ದೆ. ಸೌಜನ್ಯಕ್ಕೆ ಅವರನ್ನು ಭೇಟಿಯಾಗಿದ್ದೆ~ ಎಂದು ಸ್ಪಷ್ಟನೆ ನೀಡಿದರು.

`ನಮ್ಮ ಕ್ಷೇತ್ರದಲ್ಲಿ ಕಾಲುವೆ ನೀರನ್ನು ಕಾಂಗ್ರೆಸ್‌ನ ಮಾಜಿ ಶಾಸಕರೊಬ್ಬರು ಅಕ್ರಮವಾಗಿ ತಮ್ಮ ಹೊಲಕ್ಕೆ ಪಡೆದಿದ್ದಾರೆ ಎಂಬ ವರದಿ ಹಾಗೂ ಅದಕ್ಕೆ ಆ ಮಾಜಿ ಶಾಸಕರು ನೀಡಿದ ಸ್ಪಷ್ಟನೆ ಗಮನಿಸಿದ್ದೇನೆ. ನಾನು ಸ್ಥಳಕ್ಕೆ ಭೇಟಿ ನೀಡಿಲ್ಲ.

ಅಧಿಕಾರಿಗಳಿಂದಲೂ ಮಾಹಿತಿ ಪಡೆದಿಲ್ಲ; ಎಲ್ಲ ರೈತರಿಗೂ ತಲುಪುವಂತೆ ಸಮರ್ಪಕವಾಗಿ ನೀರು ನಿರ್ವಹಣೆ ಮಾಡದ ಅಧಿಕಾರಿಗಳ ವಿರುದ್ಧವೂ ಕ್ರಮಕ್ಕೆ ಒತ್ತಾಯಿಸಿಲ್ಲ~ ಎಂದು ಭೂಸನೂರ ಪ್ರತಿಕ್ರಿಯಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT