ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭುವನೇಶ್ವರಿ ಪ್ರತಿಮೆಗೆ 25 ಕೋಟಿ - ಸಿಎಂ

Last Updated 4 ಫೆಬ್ರುವರಿ 2011, 18:50 IST
ಅಕ್ಷರ ಗಾತ್ರ


ಬೆಂಗಳೂರು:  ರಾಜಧಾನಿಯಲ್ಲಿ ತಾಯಿ ಭುವನೇಶ್ವರಿಯ ಬೃಹತ್ ಪ್ರತಿಮೆ ಸ್ಥಾಪಿಸಲು 25 ಕೋಟಿ ರೂಪಾಯಿ ಮತ್ತು ಸಮ್ಮೇಳನದ ನೆನಪಿಗಾಗಿ ಸ್ಮಾರಕ ಭವನ ನಿರ್ಮಿಸಲು ಐದು ಕೋಟಿ ರೂಪಾಯಿ ನೀಡಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಘೋಷಿಸಿದರು.

ನಗರದ ನ್ಯಾಷನಲ್ ಕಾಲೇಜು ಮೈದಾನದಲ್ಲಿ ನಡೆಯುತ್ತಿರುವ 77ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಅವರು, ಅಮೆರಿಕದಲ್ಲಿನ ಲಿಬರ್ಟಿ ಪ್ರತಿಮೆ ಹಾಗೂ ಹೈದರಾಬಾದ್‌ನ ಬುದ್ಧನ ಪ್ರತಿಮೆಯ ಹಾಗೆ ನಗರದಲ್ಲಿ ಭುವನೇಶ್ವರಿ ಪ್ರತಿಮೆಯನ್ನು ಸ್ಥಾಪಿಸಲು ನಿರ್ಧರಿಸಲಾಗಿದ್ದು, ಏಪ್ರಿಲ್‌ನಲ್ಲಿ ನಿರ್ಮಾಣ ಕಾರ್ಯ ಆರಂಭವಾಗಲಿದೆ ಎಂದರು.

ಇದಕ್ಕೆ ಬೇಕಾದ ಹಣವನ್ನು ಬಜೆಟ್‌ನಲ್ಲಿ ನೀಡಲಾಗುವುದು. ಪ್ರತಿಮೆ ಸ್ಥಾಪನೆಗೆ ಬೇಕಾದ ಸೂಕ್ತ ಜಾಗವನ್ನು ಗುರುತಿಸುತ್ತೇವೆ. ವಿಶ್ವದ ಎಲ್ಲ ಕಡೆಯಿಂದ ಪ್ರವಾಸಿಗರು ಬಂದು ನೋಡುವ ಹಾಗೆ ಪ್ರತಿಮೆ ಸ್ಥಾಪನೆಯ ಕೇಂದ್ರವನ್ನು ಅಭಿವೃದ್ಧಿಪಡಿಸಲಾಗುವುದು ಎಂದು ತಿಳಿಸಿದರು. ಕಥೆ, ಕಾವ್ಯ, ಕವನಗಳನ್ನು ಬರೆದು ಮೊದಲ ಬಾರಿಗೆ ಪುಸ್ತಕ ರೂಪದಲ್ಲಿ ಹೊರ ತರುವಂತಹವರಿಗೆ ಆರ್ಥಿಕ ಸಹಾಯದ ಅಗತ್ಯವಿರುವುದನ್ನು ಮನಗಂಡು ನೆರವು ನೀಡಲು ತೀರ್ಮಾನಿಸಲಾಗಿದೆ.

ಇದಕ್ಕಾಗಿ 10 ಕೋಟಿ ರೂಪಾಯಿಯನ್ನು ಕನ್ನಡ ಸಾಹಿತ್ಯ ಪರಿಷತ್‌ಗೆ ನೀಡಿ, ಆ ಸಂಸ್ಥೆ ಮೂಲಕವೇ ಈ ಯೋಜನೆಯನ್ನು ಅನುಷ್ಠಾನಗೊಳಿಸಲಾಗುವುದು ಎಂದರು.

ಗುಲ್ಬರ್ಗದಲ್ಲಿ ಅಪೂರ್ಣಗೊಂಡಿರುವ ಕನ್ನಡ ಭವನ ನಿರ್ಮಾಣಕ್ಕಾಗಿ 50 ಲಕ್ಷ ರೂಪಾಯಿ ನೀಡಬೇಕು ಎಂದು ಸಮ್ಮೇಳನದ ನಿಕಟಪೂರ್ವ ಅಧ್ಯಕ್ಷೆ ಗೀತಾ ನಾಗಭೂಷಣ ಮಾಡಿದ ಮನವಿಗೆ ತಕ್ಷಣ ಸ್ಪಂದಿಸಿದ ಯಡಿಯೂರಪ್ಪ, ರೂ. 50 ಲಕ್ಷ ಹಣ ಬಿಡುಗಡೆ ಮಾಡಲಾಗುವುದು ಎಂದು ವೇದಿಕೆಯಲ್ಲಿಯೇ ಪ್ರಕಟಿಸಿದರು.

ಸಾಹಿತ್ಯ ಪರಿಷತ್‌ಗೆ ಅಗತ್ಯವಿರುವ ಸಿಬ್ಬಂದಿ ಒದಗಿಸಲು ಹಾಗೂ ಹಾಲಿ ಇರುವ ಸಿಬ್ಬಂದಿಗೆ ಬಡ್ತಿ ನೀಡುವ ಸಂಬಂಧ ಕ್ರಮಕೈಗೊಳ್ಳಬೇಕು ಎಂದು ಪರಿಷತ್ ಅಧ್ಯಕ್ಷ ಡಾ.ಆರ್.ಕೆ.ನಲ್ಲೂರು ಪ್ರಸಾದ್ ಮಾಡಿದ ಮನವಿಗೂ ಸ್ಪಂದಿಸಿದ ಯಡಿಯೂರಪ್ಪ, ಸರ್ಕಾರ ಈ ನಿಟ್ಟಿನಲ್ಲಿ ತಕ್ಷಣ ಕ್ರಮಕೈಗೊಳ್ಳಲಿದೆ ಎಂದು ಭರವಸೆ ನೀಡಿದರು.

ನಾಲ್ಕು ದಶಕಗಳ ನಂತರ ನಗರದಲ್ಲಿ ಅಕ್ಷರ ಜಾತ್ರೆ ನಡೆಯುತ್ತಿರುವುದು ಸಂತಸವನ್ನುಂಟು ಮಾಡಿದೆ. ಸುಮಾರು ಒಂದು ಕೋಟಿ ಜನಸಂಖ್ಯೆಯನ್ನು ತನ್ನ ಒಡಲಲ್ಲಿ ಪೋಷಿಸುತ್ತಿರುವ ಮಹಾನಗರದಲ್ಲಿ ಕನ್ನಡಿಗರೊಂದಿಗೆ ಕನ್ನಡೇತರರು ಸಹಕಾರದಿಂದ ಬದುಕುತ್ತಿದ್ದಾರೆ. ಕನ್ನಡಿಗರ ಆತಿಥ್ಯ, ಸಹನಶೀಲತೆ, ಸೋದರಭಾವ ಹಾಗೂ ಎಲ್ಲರೊಳಗೆ ಒಂದಾಗುವ ಗುಣವಿಶೇಷದಿಂದಾಗಿ ಕನ್ನಡೇತರರ ಬದುಕಿಗೆ ಭದ್ರತೆ ದೊರೆತಿದೆ ಎಂದು ಅಭಿಪ್ರಾಯಪಟ್ಟರು.

ಕನ್ನಡಕ್ಕೆ ಶಾಸ್ತ್ರೀಯ ಭಾಷೆಯ ಸ್ಥಾನಮಾನ ದೊರೆತ್ತಿದ್ದು, ಇದರಡಿ ಸಿಗಬೇಕಾದ ಸೌಲಭ್ಯಗಳನ್ನು ಪಡೆಯಲು ಪ್ರಯತ್ನಗಳು ಮುಂದುವರಿದಿವೆ. ಈ ಪ್ರಯತ್ನದಲ್ಲಿ ಯಶಸ್ವಿಯಾಗುವ ವಿಶ್ವಾಸವಿದೆ. ನಾಡು, ನುಡಿಯ ಆರಾಧನೆ ಮತ್ತು ಸಬಲೀಕರಣಕ್ಕೆ ಪೂರಕವಾಗುವ ಇಂತಹ ಸಾಹಿತ್ಯ ಸಮೇಳನಗಳು 77 ವರ್ಷಗಳಷ್ಟು ದೀರ್ಘ ಕಾಲದಿಂದ ದೇಶದ ಯಾವುದೇ ರಾಜ್ಯದಲ್ಲಿ ನಡೆದಿಲ್ಲ. ಇದು ಕನ್ನಡಿಗರ ಭಾಷೆ ಹಾಗೂ ನಾಡ ಪ್ರೇಮಕ್ಕೆ ಸಾಕ್ಷಿಯಾಗಿದೆ ಎಂದರು.

‘ಇಂತಹ ನುಡಿಹಬ್ಬಗಳಲ್ಲಿ ಕವಿಗಳು, ಸಾಹಿತಿಗಳು, ಸಂಶೋಧಕರು, ಅಧ್ಯಾಪಕರು, ವಿದ್ಯಾರ್ಥಿಗಳು ಮತ್ತು ಸಾಹಿತ್ಯಾಸಕ್ತರ ಪಾತ್ರ ಮಹತ್ವದ್ದಾಗಿರುತ್ತದೆ. ಇಲ್ಲಿ ರಾಜಕಾರಣಗಳ ಪಾತ್ರ ಗೌಣ. ನಮ್ಮದು ಪೋಷಕ ಪಾತ್ರವಷ್ಟೆ. ನಾನು ಮುಖ್ಯಮಂತ್ರಿಯಾಗಿ ಬಂದಿಲ್ಲ. ಆರು ಕೋಟಿ ಕನ್ನಡಿಗರ ವಿನಮ್ರ ಸೇವಕನಾಗಿ ಬಂದಿರುವುದಾಗಿ’ ನುಡಿದರು.

ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಗಳಲ್ಲಿ ಮುಂಚೂಣಿಯಲ್ಲಿರುವ ಕನ್ನಡ ಸಾಹಿತ್ಯ ಪರಿಷತ್ತು ಕನ್ನಡ ನಾಡು ನುಡಿ ಮುನ್ನಡೆಗಾಗಿ ನಿರಂತರವಾಗಿ ಶ್ರಮಿಸುತ್ತಿದೆ. ಪರಿಷತ್‌ನ ಚಟುವಟಿಕೆಗಳಿಗೆ ಅಗತ್ಯವಾದ ಹಣಕಾಸಿನ ನೆರವನ್ನು ಮುಂದೆಯೂ ನೀಡಲು ಸರ್ಕಾರ ಬದ್ಧವಾಗಿದೆ. ಬೆಳಗಾವಿಯಲ್ಲಿ ನಡೆಯುವ ವಿಶ್ವ ಕನ್ನಡ ಸಮ್ಮೇಳನದ ಅಂಗವಾಗಿ ಕನ್ನಡ ಸಾಂಸ್ಕೃತಿಕ ಭವನ ನಿರ್ಮಿಸಲು 2 ಕೋಟಿ ರೂಪಾಯಿ ಹಾಗೂ ಸಮ್ಮೇಳನದ ಸಿದ್ಧತೆಗಾಗಿ 10 ಕೋಟಿ ರೂಪಾಯಿ ಬಿಡುಗಡೆ ಮಾಡಲಾಗಿದೆ.

ಪ್ರತಿಯೊಂದು ಸಾಹಿತ್ಯ ಸಮ್ಮೇಳನಗಳಲ್ಲಿ ನಾಡು, ನುಡಿ ಕುರಿತಾದ ಜ್ವಲಂತ ಸಮಸ್ಯೆಗಳನ್ನು ಚರ್ಚಿಸುತ್ತಿರುವುದು ಮತ್ತು ಆ ಬಗ್ಗೆ ನಿರ್ಣಯಗಳನ್ನು ಕೈಗೊಳ್ಳುತ್ತಿರುವುದು ಶ್ಲಾಘನೀಯ. ಆದಷ್ಟು ಅನುಷ್ಠಾನಯೋಗ್ಯವಾದ ನಿರ್ಣಯಗಳನ್ನು ಕೈಗೊಳ್ಳುವುದಲ್ಲದೆ ಅವುಗಳ ಅನುಷ್ಠಾನಕ್ಕೆ ಪೂರಕವಾದ ವಿಧಿವಿಧಾನಗಳನ್ನು ಸಿದ್ಧಪಡಿಸಿ ಸರ್ಕಾರಕ್ಕೆ ನೀಡಿದರೆ ಅವುಗಳನ್ನು ಕಾರ್ಯಗತಗೊಳಿಸಲು ಸರ್ಕಾರ ಸಿದ್ಧವಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT