ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭುವಿಯ ತುಂಬಾ ಭರ್ಜರಿ ಬೆಳೆ

ಅಮೃತ ಭೂಮಿ 22
Last Updated 22 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

`ರೈತರನ್ನು ಸ್ವಾವಲಂಬಿಗಳನ್ನಾಗಿ ಮಾಡುವುದು, ಕೃಷಿಯನ್ನು ಲಾಭದಾಯಕ ಉದ್ಯಮದತ್ತ ಕೊಂಡೊಯ್ಯುವುದು, ಇದರ ಜೊತೆಗೆ ಜನರಿಗೂ ರಾಸಾಯನಿಕಮುಕ್ತ ಪೌಷ್ಟಿಕ ಆಹಾರ ನೀಡುವ ಶಕ್ತಿ ಇರುವುದು ಕೇವಲ ನೈಸರ್ಗಿಕ ಕೃಷಿಗೆ' ಎನ್ನುತ್ತಾರೆ ಬೆಳಗಾವಿ ಜಿಲ್ಲೆಯ ಸವದತ್ತಿ ತಾಲ್ಲೂಕಿನ ಮುನವಳ್ಳಿಯ ರೈತ ಶಿವಲಿಂಗಪ್ಪ ಪಂಚಪ್ಪ ಸುಣಗಾರ.

`ರಾಸಾಯನಿಕ, ಕ್ರಿಮಿನಾಶಕಗಳ ಬಳಕೆಯಿಂದ ಭೂಮಿ ಬರಡಾಗುತ್ತಿದೆ. ಬೇಡಿದ್ದನ್ನು ನೀಡುವ ಭೂತಾಯಿಯ ಮಣ್ಣು ರಾಸಾಯನಿಕದಿಂದಾಗಿ ಒಣಗಿ ಹೋಗಿದೆ. ಹೀಗೆಯೇ ಮುಂದುವರಿದರೆ ಮುಂದಿನ ಪೀಳಿಗೆಗೆ ಫಲವತ್ತಾದ ಭೂಮಿ ಎನ್ನುವುದು ಮರೀಚಿಕೆ ಆಗುತ್ತದೆ' ಎಂಬ ಆತಂಕ ಇವರದ್ದು. ಆದುದರಿಂದ ನೈಸರ್ಗಿಕ ಕೃಷಿಯಲ್ಲಿ ತೊಡಗಿ ಲಾಭದ ಜೊತೆಗೆ ಭೂತಾಯಿಯನ್ನೂ ಸಂತೃಪ್ತಿಗೊಳಿಸಿ ಎನ್ನುವ ಪಂಚಪ್ಪ, ಅದನ್ನೇ ಸಾಧಿಸಿ ತೋರಿಸಿದ್ದಾರೆ.

ಶಿವಲಿಂಗಪ್ಪ ಅವರು ನೀರಾವರಿ ಇಲಾಖೆಯಲ್ಲಿ ವಾಹನ ಚಾಲಕರಾಗಿದ್ದವರು. ಶೂನ್ಯ ಬಂಡವಾಳದಲ್ಲಿ ಹೇರಳ ಲಾಭ ಪಡೆಯುವ ಕುರಿತು ನಡೆದ ಶಿಬಿರದಲ್ಲಿ 2007ರಲ್ಲಿ ತರಬೇತಿ ಪಡೆದು ಕೃಷಿಯನ್ನೇ ಕಸುಬು ಮಾಡಿಕೊಳ್ಳುವ ಪಣ ತೊಟ್ಟರು. ಆರಂಭದಲ್ಲಿ ತಮ್ಮ ಭೂಮಿಯಲ್ಲಿ ಪ್ರಯೋಗಾತ್ಮಕವಾಗಿ ಸಮ್ಮಿಶ್ರ ಬೆಳೆಯಾಗಿ ಕಬ್ಬು, ಗೋವಿನಜೋಳ, ಜೋಳ, ಕಡಲೆ ಬೆಳೆದಾಗ ಅದರಲ್ಲಿ ಕಬ್ಬು ಉತ್ತಮ ಬೆಳೆಯಾಗಿ ಹೆಚ್ಚು ಇಳುವರಿ ಬಂದಿತು. ಅಂದಿನಿಂದ ಕಬ್ಬು ಬೆಳೆಯಲಾರಂಭಿಸಿದರು. ಸದ್ಯ ಅವರು ತಮ್ಮ ಒಂದು ಎಕರೆ ಭೂಮಿಯಲ್ಲಿ 86,032 ತಳಿಯ ಕಬ್ಬನ್ನು ಸರಾಸರಿ 83 ಟನ್ ಬೆಳೆದು ಉತ್ತಮ ಲಾಭ ಗಳಿಸಿದ್ದಾರೆ.

ಗಣಜೀವಾಮೃತ : 10 ಬುಟ್ಟಿ ಅಥವಾ 1 ಕ್ವಿಂಟಾಲ್ ಆಕಳ ಸೆಗಣಿ, 10 ಲೀಟರ್ ಆಕಳ ಗಂಜಲು (ಗೋಮೂತ್ರ), 2 ಕೆ.ಜಿ. ಬೆಲ್ಲ, 2 ಕೆ.ಜಿ. ಅಲಸಂದಿ ಹಿಟ್ಟು, 2 ಬೊಗಸೆ ಹೊಲದ ಬದುವಿನ ಮಣ್ಣು ಇವುಗಳನ್ನು ಚೆನ್ನಾಗಿ ಮಿಶ್ರಣ ಮಾಡಿ, ಮೂರು ದಿನಗಳ ಕಾಲ ನೆರಳಿನಲ್ಲಿ ಮುಚ್ಚಿಡಬೇಕು. ನಂತರ ತೆಗೆದಾಗ ಅದೊಂದು ಉತ್ತಮ ಜೀವನಾಂಶ ಹೊಂದಿದ ಗೊಬ್ಬರವಾಗುವುದು.

ಹೀಗೆ ತಯಾರಾದ ಘನಾಮೃತ ಗೊಬ್ಬರವನ್ನು ಒಂದು ಎಕರೆಗೆ ಕ್ವಿಂಟಾಲ್ ಮಾತ್ರ ಒಮ್ಮೆ ಹಾಕಿದರೆ ಸಾಕು. ಅದು ಇಡೀ ವರ್ಷದ ಬೆಳೆಗೆ ಎಷ್ಟು ಬೇಕೋ ಅಷ್ಟು ಲವಣಾಂಶಗಳನ್ನು ಪೂರೈಸುವುದರ ಜತೆಗೆ ಭೂಮಿಯಲ್ಲಿನ ಫಲವತ್ತತೆ ಹಾಗೇ ಉಳಿಸಿಕೊಳ್ಳುವುದು.

ಜೀವಾಮೃತ : 200 ಲೀಟರ್ ನೀರು ಅಥವಾ ಒಂದು ಬ್ಯಾರೆಲ್ ನೀರು. 10 ಲೀಟರ್ ಗೋಮೂತ್ರ, 10 ಕೆ.ಜಿ. ದೇಶಿ ಆಕಳ ಸಗಣಿ, 1 ಕೆ.ಜಿ. ಬೆಲ್ಲ ಕರಗಿಸಿ ಹಾಕಬೇಕು. 1 ಕೆ.ಜಿ. ಅಲಸಂದಿ ಹಿಟ್ಟು ಹಾಗೂ 2 ಬೊಗಸೆ ಹೊಲದ ಮಣ್ಣು ನೆರಳಲ್ಲಿ ಇರಿಸಿದ ತೊಟ್ಟಿಯಲ್ಲಿ 48 ಗಂಟೆಗಳ ಕಾಲ ಇರಿಸಬೇಕು. ನಿತ್ಯ ಐದು ನಿಮಿಷ ಕೋಲಿನಿಂದ ತಿರುಗಿಸಬೇಕು. 2 ದಿನದ ಬಳಿಕ ಜೀವಾಮೃತ ತಯಾರಾಗುತ್ತದೆ.

ಜೀವಾಮೃತ ತಯಾರಾದ 2 ರಿಂದ 7 ದಿನದೊಳಗೆ ಬ್ಯಾರೆಲ್‌ನಲ್ಲಿನ ಜೀವಾಮೃತ ಉಕ್ಕುವುದು. ಅದರಲ್ಲಿ ಉತ್ಪಾದಿತ ಮೀಥೇನ್, ಕಾರ್ಬನ್‌ಮೋನಾಕ್ಸೈಡ್ ಇತ್ಯಾದಿ ಅನಿಲಗಳು ಹೊರಹೋಗುವುದರೊಳಗೆ ಭೂಮಿಗೆ ಕೊಡಬೇಕು.

ನೀರಾವರಿ ಸೌಲಭ್ಯ ಇರುವವರು ನೀರಿನ ಜತೆಗೆ (ಪೈಪ್)ಕೊಳವೆಯ ಸಹಾಯದಿಂದ ಬಿಡಬೇಕು. ಒಂದು ಎಕರೆಗೆ ಒಂದು ಬ್ಯಾರೆಲ್ ಸಾಕಾಗುವುದು. ಹೀಗೆ ಜೀವಾಮೃತ ಎಂಬ ಹೆಪ್ಪವನ್ನು ಪ್ರತಿ ತಿಂಗಳಿಗೊಮ್ಮೆ ಕೊಡಬೇಕು.  

ಈ ನೈಸರ್ಗಿಕ ಕೃಷಿಗೆ ಶಿವಲಿಂಗಪ್ಪನವರಿಗೆ ಹೆಂಡತಿ ಶಾಂತವ್ವ, ಮಗಳು ಸುಮಂಗಲಾ ಸಾಥ್ ಇದೆ. ಆರು ವರ್ಷಗಳಿಂದ ನೈಸರ್ಗಿಕ ಕೃಷಿಕನಾದರೂ ಸರ್ಕಾರ ಗುರುತಿಸದಿರುವುದಕ್ಕೆ ಇವರು ತೀವ್ರ ವಿಷಾದಿಸುತ್ತಾರೆ. ಒಕ್ಕಲುತನವನ್ನು ಇನ್ನಷ್ಟು ಉಪಯುಕ್ತವಾಗಿಸುವ ನಿಟ್ಟಿನಲ್ಲಿ ಯಾರೇ ಬಂದರೂ ಅವರಿಗೆ ನೆರವಾಗುತ್ತೇನೆ ಎನ್ನುವ ವಿಶ್ವಾಸ ಅವರದ್ದು. ಮಾಹಿತಿಗೆ 9448163301.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT