ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭೂ ಸಂಘರ್ಷ ಅನಿವಾರ್ಯ

Last Updated 6 ಅಕ್ಟೋಬರ್ 2012, 7:45 IST
ಅಕ್ಷರ ಗಾತ್ರ

ರಾಯಚೂರು: ಸರ್ಕಾರದ ಆಡಳಿತ ಯಂತ್ರ ಎಷ್ಟೇ ನೋಟಿಸ್, ಬಲಪ್ರಯೋಗ ಮಾಡಿದರೂ ತಾತ ಮುತ್ತಾತನ ಕಾಲದಿಂದ ನೀವು ಸಾಗುವಳಿ ಮಾಡಿಕೊಂಡು ಬಂದಿರುವ ಭೂಮಿಯನ್ನೂ ಬಿಟ್ಟು ಕೊಡಬೇಡಿ. ಭೂಮಿ ಕಳೆದುಕೊಂಡರೆ ತಾಯಿ ಕಳೆದುಕೊಂಡಂತೆ ಎಂಬ ಪ್ರಜ್ಞೆ ನಿಮಗಿರಲಿ.
 
ನಮ್ಮ ಭೂಮಿ, ನಮ್ಮ ಬದುಕು ರಕ್ಷಣೆಗೆ ಹೋರಾಟ ಅನಿವಾರ್ಯ. ಗಟ್ಟಿಯಾದ ಭೂ ಸಂಘರ್ಷಕ್ಕೆ ಸಜ್ಜಾಗಬೇಕು ಎಂದು ಕರ್ನಾಟಕ ರೈತ ಸಂಘದ ರಾಜ್ಯ ಘಟಕದ ಅಧ್ಯಕ್ಷ ಆರ್ ಮಾನಸಯ್ಯ ಶುಕ್ರವಾರ ಇಲ್ಲಿ ರೈತರಿಗೆ, ಸಂಘಟನೆ ಕಾರ್ಯಕರ್ತರಿಗೆ ಕರೆ ನೀಡಿದರು.

ಇಲ್ಲಿನ ಮಹಿಳಾ ಸಮಾಜ ಆವರಣದಲ್ಲಿ ಕರ್ನಾಟಕ ರೈತ ಸಂಘದ ಜಿಲ್ಲಾ ಸಮಿತಿ ಏರ್ಪಡಿಸಿದ್ದ ರಾಯಚೂರು ಜಿಲ್ಲಾ ಭೂ ಸಂಘರ್ಷ ಸಮಾವೇಶದಲ್ಲಿ ಮಾತನಾಡಿದರು.

ಹಲವು ದಶಕಗಳಿಂದ ಸಾಗುವಳಿ ಮಾಡಿಕೊಂಡು ಬಂದ ರೈತರ ಭೂಮಿ ಕಿತ್ತುಕೊಳ್ಳುವುದು, ಒತ್ತಾಯದಿಂದ ನೂರಾರು ಎಕರೆ ಕಿತ್ತುಕೊಂಡ ಭೂಮಿ ವಾಪಸ್ ಕೇಳಿದರೆ ಪೊಲೀಸ್ ಮೂಲಕ ದೌರ್ಜನ್ಯ ನಡೆಸಿ ಜೈಲಿಗೆ ತಳ್ಳುವುದು, ಪಿ.ಜಿ ಸೆಂಟರ್, ಜವಳಗೇರ ಸೆಂಟರ್ ಫಾರ್ಮ್, ನಾರಾಯಣಪುರ ಜಲಾಶಯಕ್ಕೆ ಪಡೆದ ಭೂಮಿ ನಿರ್ದಿಷ್ಟ ಉದ್ದೇಶಕ್ಕೆ ಬಳಸದೇ ಬೀಳು ಬಿಟ್ಟಿರುವುದನ್ನು ಪ್ರಶ್ನಿಸಿ ನಮ್ಮ ಭೂಮಿ ನಮಗೆ ಕೊಡಿ ಎಂದು ಕೇಳಿದ ರೈತರ ಮೇಲೆ ಕೇಸ್ ಹಾಕಿ ಓಡಿಸುವ ಯತ್ನ ಇನ್ನು ಮುಂದೆ ನಡೆಯುವುದಿಲ್ಲ. ಕಾನೂನು ಎಂಬುದು ಜನತೆ ಮತ್ತು ಸರ್ಕಾರ ಎಲ್ಲರಿಗೂ ಒಂದೇ. ಕಾನೂನು ಪ್ರಕಾರ ರೈತರಿಂದ ಕಿತ್ತುಕೊಂಡ ಭೂಮಿ ಅವರಿಗೆ ದೊರಕಿಸಬೇಕು. ದೊರಕಿಸುವವರೆಗೂ ಭೂ ಸಂಘರ್ಷ ನಿಲ್ಲುವುದಿಲ್ಲ ಎಂದು ಹೇಳಿದರು.

ರಾಯಚೂರು ಸಮೀಪ ಯರಗೇರ ಪಿ.ಜಿ ಸೆಂಟರ್‌ಗೆ 188 ಎಕರೆ ಪಟ್ಟಾ ಭೂಮಿ ಭೂಸ್ವಾಧೀನ ಮತ್ತು ಪರಿಹಾರವಿಲ್ಲದೇ ಸರ್ಕಾರ ಕಿತ್ತುಕೊಂಡಿದೆ. 10 ಎಕರೆಯಲ್ಲಿ ಕಟ್ಟಡ ನಿರ್ಮಿಸಿ 240 ಎಕರೆ ಬೀಳು ಬಿಟ್ಟಿದೆ. ಭೂಮಿಗಾಗಿ ಹೋರಾಟ ನಡೆಸಿದ ರೈತರನ್ನು ಜೈಲಿಗೆ ಹಾಕಿದೆ. ಈಚೆಗೆ ರೈತ ಸಂಘಟನೆಯು ಹೋರಾಟ ಕೈಗೆತ್ತಿಕೊಂಡು ರೈತರ ಜಮೀನು ರೈತರಿಗೆ ಕೊಡಬೇಕು ಎಂದು ಹೋರಾಟ ನಡೆಸಿದರೂ ಸರ್ಕಾರ ಕಣ್ತೆರೆಯಲಿಲ್ಲ. ಬದಲಾಗಿ ಒಂದೇ ವಾರದಲ್ಲಿ ಎರಡು ಪ್ರಕರಣ ದಾಖಲಿಸಿ ಜೈಲಿಗೆ ತಳ್ಳಿತು ಎಂದು ಹೇಳಿದರು.

ಜವಳಗೇರಾದ ಸೆಂಟ್ರಲ್ ಫಾರ್ಮ್‌ಗೆ 40 ವರ್ಷಗಳ ಹಿಂದೆ ಸಿಂಧನೂರು ತಾಲ್ಲೂಕಿನಲ್ಲಿ 6,900 ಎಕರೆ ಕಿತ್ತುಕೊಂಡು ಎಕರೆಗೆ 200 ರೂಪಾಯಿ ಪರಿಹಾರ ಕೊಡಲಾಗಿತ್ತು. ಈವರೆಗೂ ಬಳಕೆ ಮಾಡಿದ್ದು ಮಾತ್ರ 1,000 ಎಕರೆ ಮಾತ್ರ. 5,900 ಎಕರೆ ಬೀಳು ಬಿಟ್ಟಿದೆ. ಬೀಳು ಬಿಟ್ಟಿದ್ದೂ ರಾಷ್ಟ್ರೀಯ ಕೃಷಿ ಉತ್ಪನ್ನ, ಆದಾಯಕ್ಕೆ ಮಾಡಿದ ನಷ್ಟ. ಇದಕ್ಕೆ ಯಾರು ಹೊಣೆ ಎಂದು ಪ್ರಶ್ನಿಸಿದ ಅವರು, 40 ವರ್ಷಗಳ ಹಿಂದೆ ಕೇವಲ 200 ರೂಪಾಯಿಗೆ 1 ಎಕರೆ ಜಮೀನು ಪಡೆದಿದ್ದ ಸರ್ಕಾರ ಈಗ ಸಂಬಂಧಪಟ್ಟ ರೈತರಿಗೆ ಆ ಜಮೀನು ಕೊಡಬೇಕು. ಈ ಬಗ್ಗೆ ನಿರಂತರ ಹೋರಾಟ ನಡೆಯಲಿದೆ ಎಂದು ಹೇಳಿದರು.

ಅದೇ ರೀತಿ ನಾರಾಯಣಪುರ ಡ್ಯಾಂ(ಬಸವಸಾಗರ ಜಲಾಶಯ)ಗೆ ಭೂಮಿ ಕಳೆದುಕೊಂಡ ಗ್ರಾಮಗಳ ರೈತರಿಗೆ ಆಗ ಎಕರೆಗೆ ಕೊಟ್ಟ ಪರಿಹಾರ 1700 ಮಾತ್ರ. ಜಲಾಶಯ ಕಟ್ಟಿದಾಗಿನಿಂದ 1000 ಎಕರೆ ಭೂಮಿಯಲ್ಲಿ ನೀರು ನಿಂತಿಲ್ಲ. ಸಂಬಂಧಪಟ್ಟ ರೈತರು ಬೆಳೆ ಬೆಳೆದುಕೊಳ್ಳಲೂ ಬಿಡುತ್ತಿಲ್ಲ. ತಮ್ಮದೇ ಆದ ಭೂಮಿಯನ್ನು ಅಲ್ಲಿನ ರೈತರು ಪಡೆಯಲು ಹೋರಾಟಕ್ಕೆ ಈಗ ಮುಂದಾಗಿದ್ದಾರೆ ಎಂದರು.

ಮುಖ್ಯ ಅತಿಥಿ ಗುಲ್ಬರ್ಗದ ದಲಿತ ಮುಖಂಡ ದೇವೇಂದ್ರ ಹೆಗಡೆ ಮಾತನಾಡಿ, ಮಹಾಭಾರತ ಕುರುಕ್ಷೇತ್ರ ಯುದ್ಧ ನಡೆದಿದ್ದೇ ಭೂಮಿಗಾಗಿ. ಈಗ ಭೂಮಿ ದುಡಿಯುವವರ ಕೈಯಿಂದ ದುಡ್ಡಿದ್ದವರ ಕೈಗೆ ಮಾರಾಟ ಆಗುತ್ತಿದೆ.  ಭೂಮಾಫಿಯಾ ದಂದೆ ವ್ಯವಸ್ಥಿತವಾಗಿ ನಡೆಯುತ್ತಿದೆ. ಆಳುವ ವರ್ಗದ  ಎಲ್ಲ ನಾಯಕರು ದಲ್ಲಾಳಿಗಳಾಗಿ ಪರಿವರ್ತನೆಗೊಂಡಿದ್ದಾರೆ. ಇಂಥವುಗಳ ವಿರುದ್ಧ ಜನತೆ ಹೋರಾಟಕ್ಕೆ ಸಜ್ಜಾದಾಗ ಹೊಸ ಹೊಸ ನಾಟಕಗಳು ಶುರುವಾಗುತ್ತವೆ. ಇಂಥ ನಾಟಕಗಳಿಗೆ ಸೊಪ್ಪು ಹಾಕದೇ ಏಕತೆಯಿಂದ ಹೋರಾಟ ನಡೆಸಿ ಭೂಮಿ ಉಳಿಸಿಕೊಳ್ಳಬೇಕು ಎಂದರು.

ಸಂಘಟನೆ ರಾಜ್ಯ ಕಾರ್ಯದರ್ಶಿ  ಕೊಡಗಿನ ಡಿ.ಎಸ್. ನಿರ್ವಾಣೆಪ್ಪ, ಅಂಬಣ್ಣ ಅರೋಲಿಕರ್, ಸಿ.ದಾನಪ್ಪ ನಿಲೋಗಲ್, ಜಿ.ಎಸ್. ಕಡೇಮನಿ, ಶೇಖರಯ್ಯ ಮಾತನಾಡಿದರು.

ಕೆ ನಾಗಲಿಂಗಸ್ವಾಮಿ, ವಿ ಮುದುಕಪ್ಪ ನಾಯಕ, ಬಸವರಾಜ ನಗನೂರು, ಮಲ್ಲಯ್ಯ ಕಟ್ಟಿಮನಿ, ರಮೇಶ ಪಾಟೀಲ್, ಭೂ ಹೋರಾಟಗಾರ್ತಿ ನೂರಜಹಾನ್, ಮಣಿ ಮತ್ತಿತರರು ವೇದಿಕೆಯಲ್ಲಿದ್ದರು. ಅಧ್ಯಕ್ಷತೆಯನ್ನು ಸಂಘಟನೆ ಜಿಲ್ಲಾಧ್ಯಕ್ಷ ಎಚ್.ಎನ್ ಬಡಿಗೇರ ಅಧ್ಯಕ್ಷತೆವಹಿಸಿದ್ದರು. ಸಂಘಟನೆ ತಾಲ್ಲೂಕು ಅಧ್ಯಕ್ಷ ಎಸ್ ರಾಜಶೇಖರ ಪ್ರಾಸ್ತಾವಿಕ ಮಾತನಾಡಿದರು. ಆರ್ ಹುಚ್ಚರೆಡ್ಡಿ ಮತ್ತು ಬಸವರಾಜ ನೇತೃತ್ವದಲ್ಲಿ ಜನಸಾಂಸ್ಕೃತಕ ತಂಡ ಕಲಾವಿದರು ಕ್ರಾಂತಿಕಾರಿ ಹಾಡು ಹಾಡಿದರು. ಜಿಲ್ಲಾ ಕಾರ್ಯದರ್ಶಿ ಅಬ್ಬಾಸ್ ಅಲಿ ಕಾರ್ಯಕ್ರಮ ನಿರೂಪಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT