ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿ ಬೇಡ

Last Updated 18 ಡಿಸೆಂಬರ್ 2012, 19:59 IST
ಅಕ್ಷರ ಗಾತ್ರ

ಕೃಷಿ ಭೂಮಿ ಖರೀದಿಸುವವರಿಗೆ ವಾರ್ಷಿಕ ಆದಾಯ ಮಿತಿ ವಿಧಿಸುವ ಕರ್ನಾಟಕ ಭೂ ಸುಧಾರಣಾ ಕಾಯ್ದೆಯ ಕಲಂ 79ಎ ಮತ್ತು 79ಬಿ ಯನ್ನು ರದ್ದುಪಡಿಸುವಂತೆ ಆಡಳಿತ ಹಾಗೂ ವಿರೋಧ ಪಕ್ಷದ ಕೆಲವು ಶಾಸಕರು ಸದನದಲ್ಲಿ ಒತ್ತಾಯಿಸಿದ್ದಾರೆ. ಕಾಯ್ದೆಯನ್ನು ರದ್ದುಪಡಿಸದೆ ಕೆಲವು ತಿದ್ದುಪಡಿಗಳನ್ನು ತಂದು ಭೂಮಿ ಖರೀದಿಸುವ ಕೃಷಿಯೇತರ ಉದ್ಯೋಗದ ವ್ಯಕ್ತಿಗಳಿಗೆ ಅನುಕೂಲ ಮಾಡಿಕೊಡುವ ಇಂಗಿತವನ್ನು ಉಪಮುಖ್ಯಮಂತ್ರಿಗಳು ವ್ಯಕ್ತಪಡಿಸಿದ್ದಾರೆ.

ಇಂತಹ ರೈತ ವಿರೋಧಿ, ಕೃಷಿ ವಿರೋಧಿ ಬೇಡಿಕೆಯು ಸದನದಲ್ಲಿ ಪಕ್ಷಭೇದವಿಲ್ಲದೆ, ಅದರಲ್ಲೂ ನಗರ ಪ್ರದೇಶದ ಶಾಸಕರುಗಳಿಂದ ಬಂದಿರುವುದು ಹಲವಾರು ಅನುಮಾನಗಳಿಗೆ ಎಡೆಮಾಡಿಕೊಟ್ಟಿರುವುದರಲ್ಲಿ ಆಶ್ಚರ್ಯವಿಲ್ಲ.

ಈಗಾಗಲೇ ಕಾಯ್ದೆಯ ಕಲಮುಗಳು ವಾರ್ಷಿಕ ಎರಡು ಲಕ್ಷ ರೂಪಾಯಿಗಳಿಗೂ ಕಡಿಮೆ ಕೃಷಿಯೇತರ ವರಮಾನವಿರುವ ವ್ಯಕ್ತಿಗಳಿಗೆ (ಅಂದರೆ ಕೃಷಿ ಕಾರ್ಮಿಕರಿಗೆ ಹಾಗೂ ಇತರೆ ಬಡವರಿಗೆ) ಕೃಷಿಭೂಮಿ ಖರೀದಿಸಲು ಅವಕಾಶ ಮಾಡಿಕೊಟ್ಟಿರುತ್ತದೆ. ಕಾಯ್ದೆಯನ್ನು ತಿದ್ದುಪಡಿಗೊಳಪಡಿಸಿ ಉದಾರೀಕರಿಸುವುದರಿಂದ ಆಗಬಹುದಾದ ದುಷ್ಪರಿಣಾಮಗಳ ಬಗ್ಗೆ ಆಲೋಚಿಸಬೇಕಿದೆ.

ಆರ್ಥಿಕ ಅಪರಾಧಗಳಿಗೂ ಕ್ರಿಮಿನಲ್ ಚಟುವಟಿಕೆಗಳಿಗೂ ಕಾರಣವಾಗುತ್ತಿರುವ ರಿಯಲ್ ಎಸ್ಟೇಟ್ ಉದ್ದಿಮೆದಾರರಿಗೆ ಅನುಕೂಲ ಮಾಡಿಕೊಟ್ಟಂತಾಗುತ್ತದೆ ಎಂದಷ್ಟೇ ಮೇಲ್ನೋಟಕ್ಕೆ ಕಂಡುಬಂದರೂ ಇದರ ಹೊರತಾಗಿ ನಗರೀಕರಣದ ವೇಗವೂ ಹೆಚ್ಚಿ ಈಗಾಗಲೇ ತಿಪ್ಪೆಗುಂಡಿಗಳಾಗುತ್ತಿರುವ ಮಹಾನಗರಗಳಿಗೆ ಸ್ವಚ್ಛತೆ, ನೀರು, ವಿದ್ಯುತ್ ಇತ್ಯಾದಿ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಸಲುವಾಗಿ ಇನ್ನಷ್ಟು ಭೂಮಿಯನ್ನು ಬಲಿ ಕೊಡಬೇಕಾದೀತು. ಅಲ್ಲದೆ ಇಂತಹ ಪ್ರಕ್ರಿಯೆಗಳು ಇತ್ತ ಕೃಷಿ ಉತ್ಪಾದನೆಯಲ್ಲಿನ ಕೊರತೆಗೂ ಕಾರಣವಾದೀತು.

ಇತ್ತ ಗ್ರಾಮೀಣ ಪ್ರದೇಶದಲ್ಲಿ ಮಳೆ ಕೊರತೆ, ರಸಗೊಬ್ಬರಗಳ ಬೆಲೆಯೇರಿಕೆ, ಅನಿಶ್ಚಿತ ಮಾರುಕಟ್ಟೆಗಳಿಂದಾಗಿ ಕೃಷಿಯಿಂದ ವಿಮುಖರಾಗುವ ಹಂತದಲ್ಲಿರುವ ರೈತರನ್ನು ವಂಚಿಸಿ ಅವರಿಂದ ಭೂಮಿ ಖರೀದಿಸಿ ತಮ್ಮ ಅಕ್ರಮ ಸಂಪಾದನೆಯನ್ನು ಸಕ್ರಮಗೊಳಿಸಿಕೊಳ್ಳುವುದಕ್ಕೆ ರಾಜಕಾರಣಿಗಳಿಗೂ, ಉದ್ದಿಮೆದಾರರಿಗೂ ಇಂತಹ ತಿದ್ದುಪಡಿಗಳು ಅನುಕೂಲ ಮಾಡಿಕೊಡುವ ಸಂಭವವಿದೆ. ಅಲ್ಲದೆ ನಂತರದ ಅವರ `ಸಂಪಾದನೆ'ಗಳನ್ನು `ಕೃಷಿ-ವರಮಾನ' ಎಂದು ತೋರಿಸಿ ವಂಚಿಸುತ್ತಾರೆ.

ಇಷ್ಟೇ ಅಲ್ಲದೆ ಇಂತಹ ಭೂಮಿ ಖರೀದಿಸುವ ಪೈಪೋಟಿಯಿಂದಾಗಿ ಭೂಮಿಯ ಬೆಲೆಯೂ ಹೆಚ್ಚಿ ಹಣದಾಸೆಗೆ ರೈತರು ಭೂಮಿ ಮಾರಿಕೊಳ್ಳುವುದಷ್ಟೆ ಅಲ್ಲದೆ, ಅದರೊಂದಿಗೆ ಸ್ವಂತ ಭೂಮಿ ಹೊಂದುವ ಕೃಷಿ ಕಾರ್ಮಿಕ ಮತ್ತಿತರ ಬಡಜನರ ಕನಸುಗಳು ಕನಸಾಗಿಯೇ ಉಳಿದುಬಿಡುವ ಸಂಭವವಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT