ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭೂ ಸ್ವಾಧೀನಕ್ಕೆ ಮುಂದಾದರೆ ಹೋರಾಟಕ್ಕೆ ಸಜ್ಜು

Last Updated 19 ಸೆಪ್ಟೆಂಬರ್ 2011, 9:10 IST
ಅಕ್ಷರ ಗಾತ್ರ

ಸಾಗರ: ರೈತರ ಭೂಮಿಯ ಮೇಲೆ ಕಣ್ಣು ಹಾಕುವವರು ಉದ್ಧಾರವಾಗುವುದಿಲ್ಲ.  ಹೀಗೆ ಮಾಡಿದ ಅನೇಕ ರಾಜಕಾರಣಿಗಳು ಈಗಾಗಲೇ ಅದರ ಫಲ ಉಣ್ಣುತ್ತಿದ್ದಾರೆ ಎಂದು ಜೆಡಿಎಸ್‌ನ ರಾಜ್ಯ ಪ್ರಧಾನ ಕಾರ್ಯದರ್ಶಿ ಮಧು ಬಂಗಾರಪ್ಪ ಹೇಳಿದರು.

ತಾಲ್ಲೂಕಿನ ಕುಗ್ವೆ ಗ್ರಾಮದಲ್ಲಿ ಕರ್ನಾಟಕ ಗೃಹಮಂಡಳಿ ವಶಪಡಿಸಿಕೊಳ್ಳಲು ಉದ್ದೇಶಿಸಿರುವ 101 ಎಕರೆ ಕೃಷಿಭೂಮಿ ಇರುವ ಪ್ರದೇಶಕ್ಕೆ ಭಾನುವಾರ ಭೇಟಿ ನೀಡಿ ನಂತರ ನಡೆದ ಸಭೆಯಲ್ಲಿ ಅವರು ಮಾತನಾಡಿದರು.

ರೈತರಿಗೆ ತೊಂದರೆಯಾಗುವ ವಿಷಯ ಬಂದಾಗ ಹಿಂದೆ ಸರಿಯುವ ಪ್ರಶೆಯಿಲ್ಲ. ಖಾತೆ ಜಮೀನಿನ ರೈತರನ್ನು ಒಕ್ಕಲೆಬ್ಬಿಸಿ ಅಲ್ಲಿ ಗೃಹಮಂಡಳಿ ಮನೆ ನಿರ್ಮಿಸಿ ಬೇರೆಯವರಿಗೆ ಹಂಚುವ ಯೋಜನೆಯೆ ಅವೈಜ್ಞಾನಿಕವಾದುದು. ಕೂಡಲೇ ಭೂಸ್ವಾಧೀನ ಪ್ರಕ್ರಿಯೆಯನ್ನು ನಿಲ್ಲಿಸದಿದ್ದರೆ ಸೊರಬ ತಾಲ್ಲೂಕಿನ ನಡೆದ ದಂಡಾವತಿ ವಿರೋಧಿ ಮಾದರಿಯ ಹೋರಾಟವನ್ನು ಕುಗ್ವೆಯಲ್ಲೂ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.

101 ಎಕರೆ ಕೃಷಿಭೂಮಿಯ ಸ್ವಾಧೀನ ಪ್ರಕ್ರಿಯೆಗೆ ಅಧಿಸೂಚನೆ ಹೊರಡಿಸಿದ್ದರೂ ಈ ಕ್ಷೇತ್ರದ ಶಾಸಕರಿಗೆ ವಿಷಯ ಗೊತ್ತಿಲ್ಲ ಎಂಬ ಸಂಗತಿ ಆಶ್ಚರ್ಯಕರವಾಗಿದೆ. ಗುಟ್ಟಾಗಿ ಅಧಿಸೂಚನೆ ಹೊರಡಿಸಿರುವುದರ ಹಿಂದೆ ಒಂದು ಕೋಮಿಗೆ ತೊಂದರೆ ಕೊಡುವ ಮತ್ತು ಕೆಲವೇ ವ್ಯಕ್ತಿಗಳಿಗೆ ಲಾಭ  ಮಾಡಿಕೊಡುವ ದುರುದ್ದೇಶ ಇದ್ದಂತಿದೆ ಎಂದರು.

ಸಾಮಾಜಿಕ ಕಾರ್ಯಕರ್ತ ಶಿವಾನಂದ ಕುಗ್ವೆ ಮಾತನಾಡಿ, ಸ್ಥಳೀಯ ಆವಶ್ಯಕತೆಗಳನ್ನು ಗಮನಿಸದೆ ರೈತರ ಭೂಮಿಯ ಸ್ವಾಧೀನಕ್ಕೆ ದಿಢೀರ್ ಪ್ರಕಟಣೆ ಹೊರಡಿಸಿರುವುದು ದಿಗ್ಭ್ರಮೆ ಮೂಡಿಸಿದೆ. ರೈತರೊಂದಿಗೆ ಸಮಾಲೋಚನೆ ನಡೆಸಿ ನಂತರ ತೀರ್ಮಾನ ತೆಗೆದುಕೊಳ್ಳಬೇಕೆಂಬ ಕನಿಷ್ಠ ಪ್ರಜ್ಞೆಯೂ ಸರ್ಕಾರದ ಅಂಗಸಂಸ್ಥೆಗಳಿಗೆ ಇಲ್ಲವಾಗಿದೆ. ಕುಗ್ವೆಯಲ್ಲಿ ಕಾಂಕ್ರಿಟ್ ಕಾಡು ನಿರ್ಮಾಣವಾಗುವ ಅಪಾಯವಿದೆ ಎಂದು ಹೇಳಿದರು.

ತಾಲ್ಲೂಕು  ಜೆಡಿಎಸ್ ಅಧ್ಯಕ್ಷ ಕೆ.ಎಸ್. ಪ್ರಭಾಕರ್ ಮಾತನಾಡಿ, ರಾಷ್ಟ್ರೀಯ ಹೆದ್ದಾರಿ ಪಕ್ಕದ್ಲ್ಲಲೇ ಕುಗ್ವೆ ಗ್ರಾಮಕ್ಕೆ ಸೇರಿದ ಬೆಲೆಬಾಳುವ ಭೂಮಿಯ ಮೇಲೆ ಕೆಲವು ರಾಜಕಾರಣಿಗಳ ಕಣ್ಣು ಬಿದ್ದಿದೆ. ಮೊದಲು ಗೃಹಮಂಡಳಿ ಮೂಲಕ ಸ್ವಾಧೀನಕ್ಕೆ ಪಡೆದು ನಂತರ ತಾವು ಅದನ್ನು ಕಬಳಿಸುವ ಹುನ್ನಾರ ನಡೆದಂತಿದೆ ಎಂದು ಆರೋಪಿಸಿದರು.

ಸೊರಬ ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಅಜ್ಜಪ್ಪ ಮಾತನಾಡಿ, ಬಿಜೆಪಿ ನಾಯಕರಿಗೆ ಭೂಮಿಯಿಂದ ಬರುವ ಲಾಭದ ರುಚಿ ನಾಲಿಗೆಗೆ ಹತ್ತಿಬಿಟ್ಟಿದೆ. ಯಾವತ್ತೂ ಗೇಣಿರೈತರ ಅಥವಾ ಬಗರ್‌ಹುಕುಂ ರೈತರ ಪರ ಇಲ್ಲದ ಆ ಪಕ್ಷದ ಮುಖಂಡರು ಭೂಮಿ ಮಾರಾಟವನ್ನ ದಂದೆಯನ್ನಾಗಿ ಮಾಡಿಕೊಂಡಿದ್ದಾರೆ. ಕುಗ್ವೆ ಗ್ರಾಮದ ಭೂಸ್ವಾಧೀನ ಪ್ರಕ್ರಿಯೆ ಹಿಂದೆ ಇದೇ ಪಕ್ಷದ ಮುಖಂಡರ ಕೈವಾಡ ಇದೆ ಎಂದು ದೂರಿದರು.

ಕುಗ್ವೆ ಭೂಸ್ವಾಧೀನ ವಿರೋಧಿ ಹೋರಾಟ ಸಮಿತಿಯ ಅಧ್ಯಕ್ಷ ಮಹಾಬಲೇಶ್ವರ ಕುಗ್ವೆ, ಅ.ರಾ. ಶ್ರೀನಿವಾಸ್, ವಿ.ಟಿ. ಸ್ವಾಮಿ, ಪಡವಗೋಡು ಹುಚ್ಚಪ್ಪ, ಲೋಕೇಶ್ ಗಾಳಿಪುರ, ಕನ್ನಪ್ಪ ಇನ್ನಿತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT