ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭೂ ಸ್ವಾಧೀನಕ್ಕೆ ಮೊದಲೇ ಟೆಂಡರ್‌!

Last Updated 1 ಜನವರಿ 2014, 19:30 IST
ಅಕ್ಷರ ಗಾತ್ರ

ಬೆಂಗಳೂರು: ಕರ್ನಾಟಕ ಗೃಹ ಮಂಡಳಿ ಕಾಯ್ದೆ ಪ್ರಕಾರ ಭೂ ಸ್ವಾಧೀನ ಪೂರ್ಣ­ಗೊಂಡ ನಂತರವೇ ವಸತಿ ಯೋಜನೆಗೆ ಟೆಂಡರ್‌ ನೀಡಬೇಕು. ಆದರೆ 2008­ರಿಂದ 2012ರ ಅವಧಿಯಲ್ಲಿ ಈ ಕಾಯ್ದೆಯನ್ನು ಉಲ್ಲಂಘಿಸಿ ಭೂಸ್ವಾಧೀನ  ಪ್ರಕ್ರಿಯೆ ಮುಗಿಯುವ ಮೊದಲೇ ಟೆಂಡರ್‌ ನೀಡಲಾಗಿದೆ.

ವಿವರವಾದ ಯೋಜನಾ ವರದಿ­ಯಲ್ಲಿ ಹೇಳಲಾದ ನಿಬಂಧನೆಗಳಿಗೆ ಒಳಪಟ್ಟು ಟೆಂಡರ್‌ ನೀಡಬೇಕು ಹಾಗೂ ಯೋಜನಾ ವರದಿಗೆ ಗೃಹ ಮಂಡಳಿ ಒಪ್ಪಿಗೆ ನೀಡಿದ ನಂತರ ಅದನ್ನು ಯಾವುದೇ ಕಾರಣಕ್ಕೂ ಬದ­ಲಾ­ಯಿಸುವಂತಿಲ್ಲ ಎಂಬ ನಿಯಮವನ್ನು ಉಲ್ಲಂಘಿಸಲಾಗಿದೆ. ಟೆಂಡರುದಾರರಿಗೆ ಮುಂಗಡ ಹಣ ನೀಡಬಾರದು ಎಂದು  ಮಂಡಳಿಯ  ಒಂದು ಸಭೆಯಲ್ಲಿ ಕೈ­ಗೊಂಡ ತೀರ್ಮಾನವನ್ನು ಮತ್ತೊಂದು ಸಭೆ ಕರೆದು ಮಾರ್ಪಡಿಸಲಾಗಿದೆ.

ಕೆಂಗೇರಿಯ ವಲಗೇರಹಳ್ಳಿಯಲ್ಲಿ ಗೃಹ ಮಂಡಳಿಯ ವಸತಿ ಯೋಜನೆಯ ನಿರ್ಮಾಣ ಕಾಮಗಾರಿಯ ರೂ.230.41 ಕೋಟಿ ಟೆಂಡರನ್ನು ಬೆಂಗಳೂರಿನ ಎನ್‌.­ಸಿ.ಸಿ. ಕಂಪೆನಿಗೆ ನೀಡಲಾಗಿತ್ತು. ಹೆಚ್ಚು ದರ ನಮೂದಿಸಿದರೂ ವಿವರ ಯೋ­ಜನಾ ವರದಿಯನ್ನು ತಿದ್ದಿ ಈ ಟೆಂಡರ್‌ ನೀಡಲಾಗಿದೆ ಎಂಬ ಆರೋಪವೂ ಇದೆ.

ರೂ.230.41 ಕೋಟಿಯಲ್ಲಿ ಶೇ 20ರಷ್ಟು ಮುಂಗಡ ನೀಡಿ ಎಂದು ಎನ್‌ಸಿಸಿ ಗೃಹ ಮಂಡಳಿಗೆ ಕೋರಿಕೆ ಸಲ್ಲಿಸಿತ್ತು. 18–6–2011ರಂದು  ಮಂಡಳಿ ಸಭೆ ಸೇರಿ, ಹೀಗೆ ಶೇ 20ರಷ್ಟು ಮುಂಗಡ ಹಣ ನೀಡುವುದು ಟೆಂಡರ್‌ ಷರತ್ತಿಗೆ ವಿರುದ್ಧ ಎಂದು ಹೇಳಿ ಕೋರಿಕೆಯನ್ನು ತಿರಸ್ಕರಿಸಿತ್ತು. ಆದರೆ ಸಂಸ್ಥೆ ಒತ್ತಡ ತಂದಾಗ, ‘ಈ ಬಗ್ಗೆ ಯಾವ ನಿರ್ಣಯ ಕೈಗೊಳ್ಳಬೇಕು ಎನ್ನುವುದನ್ನು ತಿಳಿಸಿ’ ಎಂದು ವಸತಿ ಇಲಾಖೆಗೆ ಪತ್ರ ಬರೆಯಲಾಯಿತು.

ಆಗಿನ ವಸತಿ ಸಚಿವ ವಿ.ಸೋಮಣ್ಣ ಅವರು 14–7–2011ರಂದು ಮಂಡಳಿ ಸಭೆ ಕರೆದರು. ವಸತಿ ಇಲಾಖೆ ಪ್ರಧಾನ ಕಾರ್ಯದರ್ಶಿ ಲಕ್ಷ್ಮೀನಾರಾ­ಯಣ, ಮಂಡಳಿ ಅಧ್ಯಕ್ಷ ಜಿ.ಟಿ.­ದೇವೇ­ಗೌಡ, ಆಯುಕ್ತ ಎಂ.ಬಿ.­ದ್ಯಾಬೇರಿ, ಹಣ­ಕಾಸು ಅಧಿಕಾರಿ ಎನ್‌.ಎಚ್‌.­ಕಂಡಾರಿ ಅವರೂ ಹಾಜರಿ­ದ್ದರು. ಮುಂಗಡ ಹಣ ನೀಡುವುದು ಟೆಂಡರ್‌ ಷರತ್ತಿಗೆ ವಿರುದ್ಧ­ವಾಗಿದ್ದರೂ ರೂ. 230.41 ಕೋಟಿಯ ಪೈಕಿ ಶೇ 10ರಷ್ಟು ಮುಂಗಡ ನೀಡಲು ಈ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು. ಕಾಮಗಾರಿಗಳು ಪೂರ್ಣವಾಗುವು­ದಕ್ಕೆ ಮೊದಲೇ ಸಂಸ್ಥೆಗೆ ಹಣವನ್ನೂ ನೀಡಲಾಗಿದೆ ಎಂಬ ಆರೋಪವೂ ಇದೆ.

ಭೂಮಿ ಸ್ವಾಧೀನ ಪಡಿಕೊಳ್ಳುವುದಕ್ಕೆ ಮೊದಲೇ ಮೈಸೂರು ತಾಲ್ಲೂಕು ಇಲವಾಲ ಸುತ್ತಮುತ್ತಲಿನ ಭೂಮಿ­ಯನ್ನು ಅಭಿವೃದ್ಧಿ ಪಡಿಸಿ ವಸತಿ ಯೋಜನೆಯನ್ನು ಜಾರಿಗೊಳಿಸುವುದಕ್ಕೆ ಟೆಂಡರ್‌ ನೀಡಲಾಗಿದೆ. ರೂ. 24.45 ಕೋಟಿಗಳ ಇಲವಾಲ ಪ್ಯಾಕೇಜ್‌–4, ರೂ. 65.60 ಕೋಟಿಗಳ ಇಲವಾಲ ಪ್ಯಾಕೇಜ್‌–1, ರೂ. 49.83 ಕೋಟಿಗಳ ಇಲವಾಲ ಪ್ಯಾಕೇಜ್‌–2 ರೂ. 24.96 ಕೋಟಿಗಳ ಇಲವಾಲ ಪ್ಯಾಕೇಜ್‌­–3 ಯೋಜನೆಗಳಿಗೆ 24–8–2012ರಂದು ಮಂಡಳಿ ಟೆಂಡರ್‌ ಕರೆಯಿತು. ಈ ನಾಲ್ಕೂ ಯೋಜನೆ­ಗಳನ್ನು ಸೇರಿ ರೂ. 164.84 ಕೋಟಿ ಕಾಮಗಾರಿಗಳನ್ನು ಸ್ಟಾರ್‌ ಡೆವಲ­ಪರ್ಸ್, ಬಿಎಸ್‌ಆರ್‌ ಕನ್‌ಸ್ಟ್ರಕ್ಷನ್‌, ಎಂ.ಆರ್‌.ಪ್ರೊಟೆಕ್‌ ಕನ್‌ಸ್ಟ್ರಕ್ಷನ್‌, ಎಸ್‌.ಎಂ.ಡಿ. ಕನ್‌ಸ್ಟ್ರಕ್ಷನ್‌ ಕಂಪೆನಿಗಳಿಗೆ ಟೆಂಡರ್‌ ನೀಡಲಾಯಿತು.

ಹೀಗೆ ಟೆಂಡರ್‌ ನೀಡಿದ ಕೆಲವೇ ದಿನಗಳಲ್ಲಿ ಜಿ.ಟಿ.ದೇವೇಗೌಡ ಅವರು ಗೃಹ ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ರಾಜೀ­ನಾಮೆ ನೀಡಿದರು. ಬಿಜೆಪಿಯನ್ನೂ ತೊರೆದು ಜಾತ್ಯತೀತ ಜನತಾ ದಳ ಪಕ್ಷವನ್ನು ಸೇರಿದರು. ಇಲವಾಲ ಹೋಬಳಿ ಗುಂಗ್ರಾಲಛತ್ರ, ಯಲಚನಹಳ್ಳಿ, ಕಲ್ಲೂರು ನಾಗನಹಳ್ಳಿ­ಗಳಲ್ಲಿ 371 ಎಕರೆ ಭೂಮಿಯನ್ನು ಸ್ವಾಧೀನ ಪಡಿಸಿಕೊಂಡು ವಸತಿ ಯೋಜನೆಯನ್ನು ಜಾರಿಗೊಳಿಸಲು ಗೃಹ ಮಂಡಳಿ ಮುಂದಾಗಿದೆ.

ಆದರೆ ಈ ಗ್ರಾಮಗಳಲ್ಲಿ ಇನ್ನೂ ಭೂ ಸ್ವಾಧೀನ ಪ್ರಕ್ರಿಯೆಯೇ ಪೂರ್ಣವಾಗಿಲ್ಲ. ಯಲಚನಹಳ್ಳಿಯ ಸರ್ವೆ ನಂ 99, 99/41ಪಿ, 99/44ಪಿ ಗಳ ತಲಾ 4 ಎಕರೆ, ಸರ್ವೆ ನಂಬರ್‌ 99ರಲ್ಲಿಯೇ ಇರುವ ಜಯಮ್ಮ ಮತ್ತು ಶ್ರೀನಿವಾಸ ಗೌಡ ಅವರ ತಲಾ 4 ಎಕರೆ, ಸರ್ವೆ ನಂಬರ್‌ 8/1, 8/2ರ ಚಲುವೆಗೌಡ ಅವರ 8 ಎಕರೆ, ಸರ್ವೆ ನಂಬರ್‌ 9ರ 2.15 ಎಕರೆ ಇನ್ನೂ ಸ್ವಾಧೀನವಾಗಿಲ್ಲ.

ಕಲ್ಲೂರು ನಾಗನಹಳ್ಳಿ ಕಾವಲ್‌ನ ಸರ್ವೆ ನಂ. 101ರ ಸ್ವಾಮಿಗೌಡ ಅವರ 1.39 ಎಕರೆ, ಸರ್ವೆ ನಂ. 54ರ ಚಲುವಮ್ಮ ಅವರ 0.38 ಎಕರೆ, ಅದೇ ಸರ್ವೆ ನಂಬರಿನ ಲಕ್ಷ್ಮಮ್ಮ ಅವರ 4 ಎಕರೆ, ಸರ್ವೆ ನಂ. 54/ಪಿ–ಪಿ 4ರ ಸಾವ್ವೆ ಶೆಟ್ಟಿ ಅವರ 3 ಎಕರೆ, ಸರ್ವೆ ನಂ. 54/ಪಿ 17 ನ ಚಿಕ್ಕಮ್ಮ ಕುಳ್ಳೇಗೌಡ ಅವರ 4 ಎಕರೆ ಭೂಮಿ ಇನ್ನೂ ಸ್ವಾಧೀನವಾಗಿಲ್ಲ.
ಗುಂಗ್ರಾಲ್‌ ಛತ್ರದ ಆನಂದ್‌ಸಿಂಗ್‌ ಲಕ್ಷ್ಮೀಬಾಯಿ ಅವರ 4 ಎಕರೆ ಹಾಗೂ ಹೂಟಗಳ್ಳಿ ನಿಂಗೇಗೌಡ ಅವರ 2 ಎಕರೆ ಇನ್ನೂ ಗೃಹ ಮಂಡಳಿಯ ಸ್ವಾಧೀನಕ್ಕೆ ಬಂದಿಲ್ಲ. ಆದರೂ ಗೃಹ ಮಂಡಳಿ ಇಲ್ಲಿ ವಸತಿ ಯೋಜನೆ ಜಾರಿಗೊಳಿಸಲು ನಾಲ್ಕು ಸಂಸ್ಥೆಗಳಿಗೆ ಟೆಂಡರ್‌ ನೀಡಿದೆ.

ಮೈಸೂರು ಸುತ್ತ ಭೂಮಿ ಸ್ವಾಧೀನ ಪಡಿಸಿಕೊಳ್ಳುವುದಕ್ಕೆ ಸಂಬಂಧಿಸಿದಂತೆ ವಸತಿ ಇಲಾಖೆ ಪ್ರಧಾನ ಕಾರ್ಯದರ್ಶಿ ರಮಣ ರೆಡ್ಡಿ, ಗೃಹ ಮಂಡಳಿ ಆಯುಕ್ತ ಮತ್ತು ಭೂ ಸ್ವಾಧೀನ ಅಧಿಕಾರಿಗಳು ಗುರುವಾರ ಮೈಸೂರು ಜಿಲ್ಲಾಧಿಕಾರಿ ಕಚೇರಿಯಲ್ಲಿ ಕರೆದಿದ್ದ ರೈತರ ಸಭೆಯನ್ನು ದಿಢೀರ್‌ ರದ್ದುಪಡಿಸ­ಲಾಗಿದೆ. ಮುಖ್ಯ­ಮಂತ್ರಿ ಸಿದ್ದರಾಮಯ್ಯ ಅವರು ಗುರು­ವಾರ ವಸತಿ ಇಲಾಖೆ ಪ್ರಧಾನ ಕಾರ್ಯ­ದರ್ಶಿ ರಮಣರೆಡ್ಡಿ ಅವರೊಂದಿಗೆ ಗೃಹ ಮಂಡಳಿ ಕುರಿತಂತೆ ಚರ್ಚೆ ನಡೆಸುವರು ಎಂದು ಮೂಲಗಳು ತಿಳಿಸಿವೆ.

ಬೆಲೆ ಕಡಿಮೆ ಮಾಡಿ
ಮೈಸೂರು ತಾಲ್ಲೂಕು ಜಯ­ಪುರ ಹೋಬಳಿ ದಾರಿಪುರ ಮತ್ತು ಧನಗಳ್ಳಿ ಗ್ರಾಮಗಳ 212.32 ಎಕರೆಯನ್ನು ಸ್ವಾಧೀನಪಡಿಸಿ­ಕೊಂಡು ವಸತಿ ಯೋಜನೆ ಜಾರಿ­ಗೊಳಿಸಲು ಗೃಹ ಮಂಡಳಿ ಮುಂದಾ­ಗಿದೆ. ಇಲ್ಲಿನ ಭೂಮಿ­ಯನ್ನು ಎಕರೆಗೆ ರೂ. 37.50 ಲಕ್ಷದಂತೆ ಖರೀದಿ ಮಾಡಲು ಜಿಲ್ಲಾ ಬೆಲೆ ನಿಗದಿ ಸಮಿತಿ 5–8–2011ರಂದು ಶಿಫಾರಸು ಮಾಡಿದೆ. ಆದರೆ ಈ ಬೆಲೆ ತುಂಬಾ ದುಬಾರಿಯಾಗಿದ್ದು ಇನ್ನೊಮ್ಮೆ ಸಭೆ ಸೇರಿ ಬೆಲೆಯನ್ನು ಪುನರ್‌ ನಿಗದಿ ಮಾಡಬೇಕು ಎಂದು ಗೃಹ ಮಂಡಳಿ ಆಯುಕ್ತ ರು 13–8–2013ರಂದು ಮೈಸೂರು ಜಿಲ್ಲಾಧಿ­ಕಾರಿ ಅವರಿಗೆ ಪತ್ರ ಬರೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT