ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭೂ ಹಗರಣ ಪ್ರಕರಣ: ಆಕ್ಷೇಪಣೆ ಸಲ್ಲಿಕೆ

Last Updated 2 ಫೆಬ್ರುವರಿ 2011, 17:50 IST
ಅಕ್ಷರ ಗಾತ್ರ


ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ವಿರುದ್ಧ ತಾವು ಸಲ್ಲಿಸಿರುವ ದೂರುಗಳಿಗೆ ತಡೆ ನೀಡುವಂತೆ ಈ ಹಂತದಲ್ಲಿ ಕೋರುವುದು ಸರಿಯಲ್ಲ ಎಂದು ವಕೀಲ ಸಿರಾಜಿನ್ ಬಾಷಾ ನಗರದ ಲೋಕಾಯುಕ್ತ ವಿಶೇಷ ನ್ಯಾಯಾಲಯದಲ್ಲಿ ಬುಧವಾರ ಆಕ್ಷೇಪಣಾ ಹೇಳಿಕೆ ಸಲ್ಲಿಸಿದರು.

ಲೋಕಾಯುಕ್ತ ಕೋರ್ಟ್‌ನಲ್ಲಿ ನಡೆಯುತ್ತಿರುವ ವಿಚಾರಣೆಗೆ ತಡೆ ನೀಡಬೇಕು ಎಂದು ಯಡಿಯೂರಪ್ಪನವರ ಅಳಿಯ ಸೋಹನ್ ಕುಮಾರ್ ಮಾಡಿಕೊಂಡ ಮನವಿಗೆ ಬಾಷಾ ಈ ರೀತಿ ಆಕ್ಷೇಪಣೆ ಸಲ್ಲಿಸಿದರು. ಮುಖ್ಯಮಂತ್ರಿಗಳ ವಿರುದ್ಧದ ಭೂಹಗರಣದ ತನಿಖೆಯನ್ನು ಯಾರು ನಡೆಸಬೇಕು ಎಂಬ ಬಗ್ಗೆ ಹೈಕೋರ್ಟ್‌ನಲ್ಲಿ ಪ್ರಕರಣವು ಇತ್ಯರ್ಥಕ್ಕೆ ಬಾಕಿ ಇರುವ ಕಾರಣ  ವಿಚಾರಣೆಗೆ ತಡೆ ನೀಡಬೇಕು ಎನ್ನುವುದು ಸೋಹನ್ ಮನವಿಯಾಗಿದೆ.

‘ಈ ರೀತಿ ತಡೆ ನೀಡುವಂತೆ ಕೋರಿ ಅರ್ಜಿ ಸಲ್ಲಿಸುವ ಹಕ್ಕು ಕಾನೂನಿನ ಅಡಿ ಸೋಹನ್ ಕುಮಾರ್ ಅವರಿಗೆ ಇಲ್ಲ. ದೂರಿಗೆ ಸಂಬಂಧಿಸಿದ ಅರ್ಜಿಯನ್ನು ಲೋಕಾಯುಕ್ತ ನ್ಯಾಯಾಲಯ ವಿಚಾರಣೆಗೆ ಅಂಗೀಕರಿಸಿದ ಪಕ್ಷದಲ್ಲಿ ಮಾತ್ರ ತಡೆ ಕೋರಬಹುದು. ಆದರೆ ವಿಚಾರಣೆ ಇನ್ನೂ ಆರಂಭವಾಗದ ಹಿನ್ನೆಲೆಯಲ್ಲಿ ಮಧ್ಯೆ ಪ್ರವೇಶಿಸಲಾಗದು’ ಎಂದು ಆಕ್ಷೇಪಣೆಯಲ್ಲಿ ಬಾಷಾ ತಿಳಿಸಿದ್ದಾರೆ.

ಈ ಮಧ್ಯೆ, ಬಾಷಾ ಮುಖ್ಯಮಂತ್ರಿ ವಿರುದ್ಧ ಸಲ್ಲಿಸಿರುವ 4ನೇ ದೂರಿನ ವಿಚಾರಣೆಯನ್ನು ನ್ಯಾಯಾಧೀಶ ಸಿ.ಬಿ. ಹಿಪ್ಪರಗಿ ಬುಧವಾರ ಕೈಗೆತ್ತಿಕೊಂಡರು. ಕೆಂಪಾಪುರ ಅಗ್ರಹಾರ ಹಾಗೂ ಶ್ರೀರಾಮಪುರದ ಬಳಿಯ ಡಿನೋಟಿಫೈ ವಿವಾದ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಆನೇಕಲ್ ತಾಲ್ಲೂಕಿನಲ್ಲಿ ನಡೆದ ಭೂಪರಿವರ್ತನೆ ವಿವಾದಗಳು ಒಳಗೊಂಡಿವೆ. ಪ್ರಕರಣಗಳನ್ನು ಶುಕ್ರವಾರಕ್ಕೆ ಮುಂದೂಡಲಾಯಿತು. ಬಾಷಾ ಮುಖ್ಯಮಂತ್ರಿ ವಿರುದ್ಧ ಸಲ್ಲಿಸಿರುವ5ನೇ ಹಾಗೂ ಅಂತಿಮ ದೂರಿನ ವಿಚಾರಣೆಯನ್ನು ಗುರುವಾರ ನ್ಯಾಯಾಧೀಶರು ಕೈಗೆತ್ತಿಕೊಳ್ಳಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT