ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭೂಕಂಪ: ಅವಶೇಷದಡಿ ಬದುಕಿದವರಿಗೆ ಶೋಧ

ದುರಂತದಿಂದ ಖಿನ್ನರಾಗಬೇಡಿ: ಪ್ರಧಾನಿ ಲೀ ಕೆಕ್ವಿಯಾಂಗ್ ಕರೆ
Last Updated 21 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ಬೀಜಿಂಗ್(ಪಿಟಿಐ): ನೈರುತ್ಯ ಚೀನಾದ ಸಿಚುವಾನ್ ಪ್ರಾಂತ್ಯದಲ್ಲಿ ಶನಿವಾರ ಸಂಭವಿಸಿದ ಭೂಕಂಪನದಲ್ಲಿ ಸಾವನ್ನಪ್ಪಿದವರ ಸಂಖ್ಯೆ 186ಕ್ಕೆ ಏರಿದ್ದು, 11 ಸಾವಿರಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಘಟನಾ ಸ್ಥಳದಲ್ಲಿ ರಕ್ಷಣಾ ಕಾರ್ಯವು ಭರದಿಂದ ಸಾಗಿದೆ.

ಲೂಶಾನ್ ಕಾಂಟಿ ಪ್ರದೇಶದಲ್ಲಿ  ಶನಿವಾರ ಸಂಭವಿಸಿದ ಭೂಕಂಪನದ ತೀವ್ರತೆಯು ರಿಕ್ಟರ್ ಮಾಪಕದಲ್ಲಿ 7 ರಷ್ಟು ದಾಖಲಾಗಿದೆ.  ಸುಮಾರು 1165 ಬಾರಿ ಲಘು ಭೂಕಂಪನದ ಅನುಭವವಾಗಿದೆ. ಆದ್ದರಿಂದ ರಕ್ಷಣಾ ಕಾರ್ಯದಲ್ಲಿ ಸಮಸ್ಯೆ ಎದುರಾಗಿದೆ ಎಂದು ಸರ್ಕಾರಿ ಸ್ವಾಮ್ಯದ ಮಾಧ್ಯಮ ವರದಿ ಮಾಡಿದೆ.

ಭಗ್ನಾವಶೇಷಗಳಡಿ ಸಿಕ್ಕಿಹಾಕಿಕೊಂಡಿದ್ದ 90 ಜನರನ್ನು ರಕ್ಷಿಸಲಾಗಿದೆ. 600 ಜನರನ್ನು ಸುರಕ್ಷಿತ ಸ್ಥಳಗಳಿಗೆ ಕರೆದೊಯ್ಯಲಾಗಿದೆ.

ಈ ಮಹಾದುರಂತದಲ್ಲಿ ಇಲ್ಲಿಯವರೆಗೆ 186 ಜನರು ಸಾವನ್ನಪ್ಪಿದ್ದು, 11,500 ಜನರು ಗಾಯಗೊಂಡಿದ್ದಾರೆ. ಅವಶೇಷದಡಿ ಇನ್ನೂ ಅನೇಕರು ಸಿಲುಕಿಕೊಂಡಿರುವ ಕಾರಣ ಸಾವಿನ ಸಂಖ್ಯೆ ಹೆಚ್ಚಾಗಬಹುದು ಎಂದು ಅಂದಾಜಿಸಲಾಗಿದೆ.

ಭಾನುವಾರ ಬೆಳಿಗ್ಗೆ ಚೀನಾದ ಹಳದಿ ಸಮುದ್ರದ ಬಳಿ ರಿಕ್ಟರ್ ಮಾಪನದಲ್ಲಿ 5ರಷ್ಟು ತೀವ್ರತೆಯ ಭೂಕಂಪನ ಮತ್ತೆ ಸಂಭವಿಸಿದೆ ಎಂದು ಚೀನಾ ಭೂಕಂಪನ ಮಾಪನ ಕೇಂದ್ರ ಹೇಳಿದೆ. ಇದರ ಪ್ರಕಾರ ಭೂಕಂಪನದ ಕೇಂದ್ರವು ಭೂಮಿಯಿಂದ 10 ಕಿ.ಮೀ ಒಳಗೆ ಇದೆ ಎಂದು ತಿಳಿದು ಬಂದಿದೆ.

ಚೀನಾ ಪ್ರಧಾನಿ  ಅವರ ನೇರ ನಿರ್ದೇಶನದೊಂದಿಗೆ ರಕ್ಷಣಾ ಕಾರ್ಯವನ್ನು ಶನಿವಾರದಿಂದಲೇ ಕೈಗೆತ್ತಿಕೊಳ್ಳಲಾಗಿದೆ.
ಭೂಕಂಪನ ಸಂಭವಿಸಿದ ಯಾನ್ ನಗರದಲ್ಲಿ ನಿರ್ಮಿಸಲಾಗಿರುವ ತಾತ್ಕಾಲಿಕ ಆಸ್ಪತ್ರೆ, ನಿರಾಶ್ರಿತರ ಶಿಬಿರಗಳಿಗೆ ಪ್ರಧಾನಿ ಲೀ ಕೆಕ್ವಿಯಾಂಗ್ ಅವರು ಭೇಟಿ ನೀಡಿ ಪರಿಸ್ಥಿತಿಯನ್ನು ಅವಲೋಕನ ಮಾಡಿದರು.

`ರಕ್ಷಣಾ ಸಿಬ್ಬಂದಿಯವರು ಸಮಯ ವ್ಯರ್ಥ ಮಾಡದೆ ಭಗ್ನಾವಶೇಷದಡಿ ಸಿಲುಕಿಕೊಂಡಿರುವ ಜನರನ್ನು ರಕ್ಷಿಸುವುದರ ಕುರಿತು ತಮ್ಮ ಗಮನವನ್ನು ಕೇಂದ್ರಿಕರಿಸಬೇಕು' ಎಂದು ಲೀ ಹೇಳಿದ್ದಾರೆ.

ಭೂಕಂಪದಿಂದ ಮೃತಪಟ್ಟವರಿಗೆ ಮತ್ತು ಗಾಯಗೊಂಡವರಿಗೆ ಪ್ರಧಾನಿ ಲೀ ಸಂತಾಪ ಸೂಚಿಸಿದ್ದಾರೆ. ಅಲ್ಲದೇ ರಕ್ಷಣಾ ಕಾರ್ಯ ನಡೆಯುತ್ತಿರುವ ಸ್ಥಳಕ್ಕೆ ತೆರಳಿ ಅಲ್ಲಿನ ಸಿಬ್ಬಂದಿಗಳಿಗೆ ಮಾರ್ಗದರ್ಶನವನ್ನೂ ನೀಡಿದ್ದಾರೆ.

`ನಾವು ಇದಕ್ಕಿಂತ ಮುಂಚೆ ಇಂತಹದೆ ಮಹಾದುರಂತಕ್ಕೆ ಒಳಗಾಗಿದ್ದೆವು, ಇಂತಹ ಪರಿಸ್ಥಿತಿಯನ್ನು ಹೇಗೆ ಎದುರಿಸಬೇಕು ಎನ್ನುವುದರ ಕುರಿತು ನಮಗೆ ಅನುಭವ ಇದೆ. ನಾವು ತುರ್ತುಸ್ಥಿತಿಯನ್ನು ಸಂಪೂರ್ಣವಾಗಿ ಎದುರಿಸುವ ವ್ಯವಸ್ಥೆಯನ್ನು ಹೊಂದಿದ್ದೇವೆ. ನಾವೆಲ್ಲ ಶೀಘ್ರವೇ ಒಂದಾಗಿ ವೈಜ್ಞಾನಿಕ ರೀತಿಯಲ್ಲಿ ರಕ್ಷಣಾ ಕಾರ್ಯವನ್ನು ಕೈಗೊಳ್ಳಬೇಕಿದೆ. ನಾವು ದುರಂತದಿಂದಾಗುವ ನಷ್ಟವನ್ನು ಕಡಿಮೆ ಮಾಡುವ ಸಾಮರ್ಥ್ಯ ಹೊಂದಿದ್ದೇವೆ' ಎಂದು ಇಲ್ಲಿನ ಕ್ಸಿನ್‌ಹುವಾ ಸುದ್ಧಿಸಂಸ್ಥೆಗೆ ತಿಳಿಸಿದ್ದಾರೆ.

`ಭೂಕಂಪ ಸಂಭವಿಸಿದ ನಂತರದ 72 ಗಂಟೆಗಳು ಬಹಳ ಮಹತ್ತರವಾದ ಸಮಯ. ಈ ಸಮಯದಲ್ಲಿ ನಾವು ಒಂದು ಕ್ಷಣವನ್ನೂ ಸಹ ವ್ಯರ್ಥ ಮಾಡುವುದಿಲ್ಲ' ಎಂದಿದ್ದಾರೆ.

ಲೀ ಅವರು ದುರಂತಕ್ಕೀಡಾದ ಜನರಿಗೆ ವಸತಿ, ಆಹಾರ ಮತ್ತು ಕುಡಿಯುವ ನೀರು ತಕ್ಷಣ ಒದಗಿಸಲು ಆದೇಶಿಸಿದ್ದಾರೆ. ಹಾಗೆಯೇ ಸೋಂಕು ರೋಗಗಳ ವಿರುದ್ಧವೂ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT