ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭೂಕಂಪ ಮಾಪನ ಯಂತ್ರ ಅಳವಡಿಕೆ

Last Updated 10 ಏಪ್ರಿಲ್ 2013, 5:35 IST
ಅಕ್ಷರ ಗಾತ್ರ

ಹಿರಿಯೂರು: ಬಳ್ಳಾರಿಯಲ್ಲಿ ಇರುವ ಉತ್ತರ ವಲಯದ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಜಂಟಿ ನಿರ್ದೇಶಕ ಎಸ್.ಎಸ್. ಹಿರೇಮಠ್ ನೇತೃತ್ವದ ತಂಡ ತಾಲ್ಲೂಕಿನ ಭೂಕಂಪ ಪೀಡಿತ ಗ್ರಾಮಗಳಾದ ನಾಯಕರಕೊಟ್ಟಿಗೆ, ಕೆರೆಕೆಂಚಯ್ಯನಹಟ್ಟಿ, ಯಲ್ಲದಕೆರೆ, ಸೀಗೆಹಟ್ಟಿ ಮತ್ತಿತರ ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಭೂಕಂಪದ ತೀವ್ರತೆ ಅಳೆಯುವ ಮಾಪನ ಯಂತ್ರ ಅಳವಡಿಸಿದ್ದಾರೆ.

ನಾಯಕರಕೊಟ್ಟಿಗೆ, ಕೆರೆ ಕೆಂಚಯ್ಯನಹಟ್ಟಿಗಳಲ್ಲಿ ಮುಂದಿನ ಅಧ್ಯಯನದ ದೃಷ್ಟಿಯಿಂದ ಯಂತ್ರ ಅಳವಡಿಸಿದ್ದೇವೆ. ಗ್ರಾಮಸ್ಥರು ಆತಂಕ ಪಡುವ ಅಗತ್ಯವಿಲ್ಲ ಎಂದು ತಿಳಿಸಿದರು.

ತಜ್ಞರ ತಂಡದ ಸದಸ್ಯರಿಗೆ ಘಟನೆಯ ವಿವರ ನೀಡಿದ ಗ್ರಾಮಸ್ಥರು, ಮಾರ್ಚ್ 31, ಏ. 7, 8 ಮತ್ತು 9ರಂದು ಭೂಕಂಪ ಸಂಭವಿಸಿದಾಗ ವಿದ್ಯುತ್ ಬಡಿದಂತಹ ಅನುಭವವಾಯಿತು. ದೂರದಲ್ಲಿ ಢಂ ಎಂಬ ಶಬ್ದ ಕೇಳಿಬಂತು. ಈ ಘಟನೆಯ ನಂತರ ಮನೆಯ ಒಳಗೆ ಹೋಗಲು ಭಯವಾಗಿ ಮನೆಯ ಹೊರಗೇ ಮಲಗುತ್ತಿದ್ದೇವೆ. ಬಹಳಷ್ಟು ಜನ ಊರುಬಿಟ್ಟು ಹೋಗಿದ್ದಾರೆ.

ಯುಗಾದಿ ಹಬ್ಬ ಎಂದು ಕೆಲವರು ಮರಳಿ ಬಂದಿದ್ದಾರೆ. ಮೂರ‌್ನಾಲ್ಕು ಮನೆಗಳು ಬಿರುಕು ಬಿಟ್ಟ ನಂತರ ಗ್ರಾಮಸ್ಥರು ಮತ್ತಷ್ಟು ಭಯಕ್ಕೊಳಗಾಗಿದ್ದಾರೆ ಎಂದು ಗ್ರಾ.ಪಂ. ಸದಸ್ಯೆ ಸುಧಮ್ಮ ವಿವರಿಸಿದರು.

ಗುಡ್ಡದ ಕರಿಯಪ್ಪ ಎನ್ನುವವರು ಇಂತಹ ಘಟನೆ ಕೇಳಿ-ನೋಡಿದ್ದಿಲ್ಲ. ಭೂಮಿಯಿಂದ ಕರೆಂಟ್ ಬಂದಂತಾಯಿತು. ನಾಯಿಗಳು ಬೊಗಳತೊಡಗಿದವು. ದನಕರುಗಳು ಓಡಿದ್ದವು. ಜನರೂ ಸಹ ಮನೆಯಿಂದ ಹೊರಗೇ ನಿಂತಿದ್ದರು ಎಂದು ಘಟನೆಯ ಬಗ್ಗೆ ತಿಳಿಸಿದರು.

ತಿಮ್ಮಣ್ಣ ಎನ್ನುವವರು ಮಾತನಾಡಿ, ಬರಿಗಾಲಲ್ಲಿ ನೆಲದ ಮೇಲೆ ನಡೆದಾಡಿದರೆ, ಕರೆಂಟ್ ಹೊಡೆದಂತೆ ಆಗಿ ಕೈಕಾಲು ನಡುಕ ಬರುತ್ತಿತ್ತು. ದಿನದಲ್ಲಿ ಆರೇಳು ಬಾರಿ ಭೂಮಿ ಕಂಪಿಸಿದೆ. ಮಕ್ಕಳು ಶಾಲೆಯ ಹೊರಗೆ ಕೂರುತ್ತಿದ್ದಾರೆ ಎಂದು ಹೇಳಿದರು.

ಕಾಂಗ್ರೆಸ್ ಮುಖಂಡ ಡಿ. ಶಿವಣ್ಣ ಮಾತನಾಡಿ, ಕೇವಲ ಐದಾರು ಹಳ್ಳಿಗಳಲ್ಲಿ ಈ ರೀತಿಯ ಘಟನೆ ನಡೆಯುತ್ತಿದ್ದು, ತಜ್ಞರು ಈ ವಿಚಾರವನ್ನು ಗಂಭೀರವಾಗಿ ತೆಗೆದುಕೊಂಡು, ಸತ್ಯಾಂಶವನ್ನು ಹೊರತರಬೇಕು. ಸಾಕಷ್ಟು ಊಹಾಪೋಹಗಳು ಹಬ್ಬುತ್ತಿದ್ದು ಎಲ್ಲದಕ್ಕೂ ತೆರೆ ಎಳೆಯಬೇಕು ಎಂದು ಒತ್ತಾಯಿಸಿದರು.

ಹಿರಿಯ ಭೂವಿಜ್ಞಾನಿ ಮಹಾವೀರ್, ಭೂವಿಜ್ಞಾನಿ ಧರಣೇಶ್, ಸಹಾಯಕ ಎಂಜಿನಿಯರ್ ವೈ.ಸಿ. ನಾಗರಾಜ್, ಕರ್ನಾಟಕ ನೈಸರ್ಗಿಕ ವಿಪತ್ತು ನಿರ್ವಹಣಾ ಕೇಂದ್ರದ ಯೋಜನಾ ವಿಜ್ಞಾನಿಗಳಾದ ಆಶೀಷ್, ಅಭಿನಯ್, ಸಂತೋಷ್ ಉಪಸ್ಥಿತರಿದ್ದರು.

ಜೋಗಿಮಟ್ಟಿ ಭೂಕಂಪನ ಮಾಪನ ಕೇಂದ್ರದಲ್ಲಿಮಾರ್ಚ್ 31ರಂದು 1.2, ಏ. 4 ರಂದು 1.4 ಹಾಗೂ ಏ. 5ರಂದು 1.2ರಷ್ಟು ತೀವ್ರತೆ ದಾಖಲಾಗಿದೆ ಎಂದು ತಜ್ಞರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT