ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭೂಕಬಳಿಕೆ: ಸಿಬಿಐ ತನಿಖೆಗೆ ಒತ್ತಾಯ

ಮುಖ್ಯಮಂತ್ರಿಗೆ ಹಿರೇಮಠ ಪತ್ರ
Last Updated 24 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಬೆಂಗಳೂರು: ನಗರ ಭೂಮಿತಿ ಕಾಯ್ದೆ­ಯನ್ನು ಉಲ್ಲಂಘಿಸಿ ಬೆಂಗಳೂರು ನಗರ ಜಿಲ್ಲೆಯ ವ್ಯಾಪ್ತಿಯಲ್ಲಿ ₨ 20 ಸಾವಿರ ಕೋಟಿಗೂ ಹೆಚ್ಚು ಮೌಲ್ಯದ ಸರ್ಕಾರಿ ಜಮೀನನ್ನು ಕಬಳಿಸಲಾಗಿದ್ದು, ಈ ಕುರಿತು ಸಿಬಿಐ ತನಿಖೆ ನಡೆಸಬೇಕು ಎಂದು ಸಮಾಜ ಪರಿವರ್ತನಾ ಸಮು­ದಾ­ಯದ ಮುಖ್ಯಸ್ಥ ಎಸ್‌.ಆರ್‌.­ಹಿರೇಮಠ ಅವರು ಮುಖ್ಯಮಂತ್ರಿ ಸಿದ್ದ­ರಾಮಯ್ಯ ಅವರಿಗೆ ಪತ್ರ ಬರೆದಿದ್ದಾರೆ.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಹಿರೇಮಠ, ‘ಬೆಂಗಳೂರು ಮಹಾನಗರ ಪಾಲಿಕೆಯ ಗಡಿಯಿಂದ 18 ಕಿ.ಮೀ. ದೂರದವರೆಗೆ ಯಾವುದೇ ಸರ್ಕಾರಿ ಜಮೀನನ್ನು ಮಂಜೂರು ಮಾಡು­­ವಂತಿಲ್ಲ ಎಂದು 1964ರಲ್ಲೇ ಕಾನೂನು ತಿದ್ದುಪಡಿ ತರಲಾ­ಗಿತ್ತು. ಆದರೂ, 5,800 ಎಕರೆ ಜಮೀನು ಮಂಜೂರು ಮಾಡಲಾಗಿದೆ. 14,000 ಎಕರೆಗೂ ಹೆಚ್ಚು ಜಮೀನು ಒತ್ತುವರಿ ಮಾಡಿಕೊಂಡಿರುವವರು ಮಂಜೂರಾತಿ­ಗಾಗಿ ಅರ್ಜಿ ಸಲ್ಲಿಸಿದ್ದಾರೆ’ ಎಂದರು.

‘ಒತ್ತುವರಿ ತೆರವುಮಾಡಿ, ಜಮೀನು ವಶಕ್ಕೆ ಪಡೆಯುವಂತೆ ಜಿಲ್ಲಾ­­ಧಿಕಾರಿ ಮತ್ತು ತಹಶೀಲ್ದಾರರಿಗೆ ಮನವಿ ಮಾಡ­ಲಾಗಿತ್ತು. ಅವರು ಕ್ರಮ ಜರುಗಿಸಲು ಹಿಂದೇಟು ಹಾಕುತ್ತಿದ್ದಾರೆ. ಆದ್ದರಿಂದ ಇದೇ 15ರಂದು ಮುಖ್ಯಮಂತ್ರಿ­ಯವರಿಗೆ ಪತ್ರ ಬರೆದಿದ್ದೇನೆ’ ಎಂದರು. 

ಪ್ರಭಾವಿಗಳು: ಜಮೀನು ಕಬಳಿಕೆ ಮಾಡಿ­ರು­ವವರು ಸಣ್ಣ ವ್ಯಕ್ತಿಗಳಲ್ಲ. ರಾಜಕೀಯ ಪ್ರಭಾವದಿಂದಲೇ ಈ ಕೃತ್ಯ ನಡೆದಿದೆ. ಅಕ್ರಮ ಗಣಿಗಾರಿಕೆ ನಡೆಸಿದವರ ವಿರುದ್ಧ ನಡೆದ ಮಾದರಿಯಲ್ಲೇ ಭೂಗಳ್ಳರ ವಿರು­ದ್ಧವೂ ಸಿಬಿಐ ತನಿಖೆ ನಡೆಯ­ಬೇಕು. ಜಮೀನನ್ನು ವಶಕ್ಕೆ ಪಡೆಯಲು ಹಾಗೂ ಭೂಗಳ್ಳರ ವಿರುದ್ಧ ಸಿಬಿಐ ತನಿಖೆಗೆ ಆದೇಶಿಸಲು ಕ್ರಮ ಕೈಗೊಳ್ಳುವಂತೆ ಮುಖ್ಯ­ಮಂತ್ರಿ­­ಯವ­ರನ್ನು ಒತ್ತಾಯಿಸಲಾಗಿದೆ ಎಂದರು.

ಎ.ಟಿ.ರಾಮಸ್ವಾಮಿ ಅಧ್ಯಕ್ಷತೆಯ ಜಂಟಿ ಸದನ ಸಮಿತಿ, ನಿವೃತ್ತ ಐಎಎಸ್‌ ಅಧಿಕಾರಿ ವಿ.ಬಾಲಸುಬ್ರಮಣಿಯನ್‌ ನೇತೃ­ತ್ವದ ಸರ್ಕಾರಿ ಜಮೀನುಗಳ ಸಂರ­ಕ್ಷಣಾ ಕಾರ್ಯಪಡೆ ವರದಿಗಳು ಸೇರಿ­ದಂತೆ ಭೂಕಬಳಿಕೆ ಸಂಬಂಧಿಸಿದ ಹಲವು ದಾಖಲೆಗಳು ಸರ್ಕಾರದ ಬಳಿ ಇವೆ. ಆದರೆ, ಮಾಜಿ ಸಚಿವ ಆರ್‌.­ಅಶೋಕ, ಎ.ನಾರಾಯಣಸ್ವಾಮಿ ಮತ್ತಿತರ ಪ್ರಭಾ­ವಿ­ಗಳ ನೇರ ಕೈವಾಡ­ದಲ್ಲೇ ಎಲ್ಲವೂ ನಡೆದಿ­ರು­ವುದರಿಂದ ಅಕ್ರಮದ ವಿರುದ್ಧ ಕ್ರಮ ಜರುಗಿಸಲು ಯಾರೂ ಧೈರ್ಯ ಮಾಡು­­­­ತ್ತಿಲ್ಲ. ಈ ಕುರಿತು ಮುಖ್ಯ­ಮಂತ್ರಿ­ಯವರ ಗಮನ ಸೆಳೆಯಲಾಗಿದೆ. ಅವರು ಸಕಾರಾತ್ಮಕ ನಿರ್ಧಾರ ಕೈಗೊ­ಳ್ಳುವ ವಿಶ್ವಾಸವಿದೆ ಎಂದರು.

ಕೃಷ್ಣ ಸಂಬಂಧಿಗಳಿಂದ ಭೂಕಬಳಿಕೆ
‘ಮಾಜಿ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಅವರ ಸಹೋದರ ಎಸ್‌.ಎಂ. ಶಂಕರ್‌ ಪುತ್ರಿ ಚೈತ್ರಾ ಮತ್ತು ಕೃಷ್ಣ ಅವರ ಅಳಿಯ ಸಿದ್ಧಾರ್ಥ ಅವರು ನಡೆಸಿರುವ ಮತ್ತೆರಡು ಭೂಕಬಳಿಕೆ ಪ್ರಕರಣಗಳಿಗೆ ಸಂಬಂಧಿಸಿದ ದಾಖಲೆಗಳು ದೊರೆತಿವೆ. ಶೀಘ್ರದಲ್ಲೇ ಈ ಪ್ರಕರಣಗಳ ಬಗ್ಗೆಯೂ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲಾಗು­ವುದು’ ಎಂದು ಹಿರೇಮಠ ತಿಳಿಸಿದರು.

‘ಚೈತ್ರಾ ಅವರಿಗೆ ಡೆಕ್ಕನ್‌ ಎಜುಕೇಷನ್‌ ಸೊಸೈಟಿ ಎಂಬ ಹೆಸರಿನಲ್ಲಿ ಶಾಲೆ ಸ್ಥಾಪಿಸಲು ಯಶವಂತಪುರ ಹೋಬಳಿಯ ಶೆಟ್ಟಿಹಳ್ಳಿ ಗ್ರಾಮದಲ್ಲಿ 5.30 ಎಕರೆ ಜಮೀನನ್ನು 2004ರಲ್ಲಿ ಸರ್ಕಾರ ಮಂಜೂರು ಮಾಡಿತ್ತು. ಈವರೆಗೂ ಅಲ್ಲಿ ಶಾಲೆ ಆರಂಭವೇ ಆಗಿಲ್ಲ. ಯಾವುದೇ ರೀತಿಯ ಕೆಲಸಗಳೂ ಆಗಿಲ್ಲ. ಇದೂ ಒಂದು ಭೂಕಬಳಿಕೆ ಪ್ರಯತ್ನವೇ ಆಗಿದೆ’ ಎಂದು ಆರೋಪಿಸಿದ ಅವರು ಜಮೀನು ಮಂಜೂರಾತಿಗೆ ಸಂಬಂಧಿಸಿದ ದಾಖಲೆಗಳನ್ನು ಪ್ರದರ್ಶಿಸಿದರು.

‘ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿ ಸಿದ್ಧಾರ್ಥ ಒಡೆತನದ ಕೆಫೆ ಕಾಫಿ ಡೇ ಕಂಪೆನಿಯು ಸಾರ್ವಜನಿಕ ಬಳಕೆಗೆ ಮೀಸಲಾದ ನಿವೇಶನವನ್ನು ಕಬಳಿಸಿದೆ. ಇದರ ದಾಖಲೆಯೂ ನಮ್ಮ ಬಳಿ ಇವೆ. ಒತ್ತುವರಿ ತೆರವು ಮತ್ತು ಭೂಗಳ್ಳರಿಗೆ ಶಿಕ್ಷೆ ಆಗುವವರೆಗೆ ನಮ್ಮ ಹೋರಾಟ ಮುಂದುವರಿಯುತ್ತದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT