ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭೂಗಳ್ಳತನ: ದಲಿತ ಮುಖಂಡನ ಬಂಧನಕ್ಕೆ ಆಗ್ರಹ

Last Updated 14 ಡಿಸೆಂಬರ್ 2012, 12:24 IST
ಅಕ್ಷರ ಗಾತ್ರ

ಕೆಜಿಎಫ್: ಬೇತಮಂಗಲ ಗ್ರಾಮ ಮತ್ತು ಸುತ್ತಮುತ್ತಲ ಪ್ರದೇಶದಲ್ಲಿ ಭೂಗಳ್ಳತನ ಮಾಡುತ್ತಿರುವ ದಲಿತ ಸಂಘಟನೆಯೊಂದರ ಮುಖಂಡರನ್ನು ಗಡೀಪಾರು ಮಾಡಬೇಕು ಎಂದು ಆಗ್ರಹಿಸಿ ವಿವಿಧ ರಾಜಕೀಯ ಪಕ್ಷ ಮತ್ತು ಸಂಘಟನೆಗಳ ಕಾರ್ಯಕರ್ತರು ಗುರುವಾರ ಬೇತಮಂಗಲದಲ್ಲಿ ಪ್ರತಿಭಟನೆ ನಡೆಸಿದರು.

ಬೇತಮಂಗಲ ಪೊಲೀಸ್‌ಠಾಣೆ ಮುಂಭಾಗ ಪ್ರತಿಭಟನೆ ನಡೆಸಿದ ಹಸಿರುಸೇನೆ ಕಾರ್ಯಕರ್ತರು ಕೆಲ ಕಾಲ ರಸ್ತೆ ತಡೆ ನಡೆಸಿದರು.

ಗ್ರಾಮದಲ್ಲಿ ಸರ್ಕಾರಿ ಜಮೀನನ್ನು ಅಕ್ರಮವಾಗಿ ವಶಪಡಿಸಿಕೊಳ್ಳುವುದು, ಇದನ್ನು ಪ್ರಶ್ನಿಸುವ ಅಧಿಕಾರಿಗಳನ್ನು ಹೆದರಿಸುವುದು ಮತ್ತು ಅವರ ಮೇಲೆ ಸುಳ್ಳು ಆರೋಪ ಹೊರಿಸಿ ಮಾನಸಿಕ ಕಿರುಕುಳ ನೀಡಲಾಗುತ್ತಿದೆ. ಇದೇ ರೀತಿ ದಲಿತ ಸಂಘಟನೆ ಮುಖಂಡರೊಬ್ಬರ ಕೈವಾಡದಿಂದ ಬೇತಮಂಗಲ ಸಬ್ ಇನ್ಸ್‌ಪೆಕ್ಟರ್ ಜಗದೀಶ್ ಕೂಡ ವರ್ಗಾವಣೆಯಾಗಿದ್ದಾರೆ ಎಂದು ಪ್ರತಿಭಟನಾಕಾರರು ದೂರಿದರು.

ಬೇತಮಂಗಲದಲ್ಲಿ ಹಲವಾರು ದಲಿತ ಸಂಘಟನೆಗಳು ದಲಿತರಿಗೋಸ್ಕರ ಹೋರಾಟ ನಡೆಸುತ್ತಿವೆ. ಆದರೆ ಒಂದು ಸಂಘಟನೆಯವರು ಮಾತ್ರ ಬೆದರಿಕೆ ತಂತ್ರ ಅನುಸರಿಸಿ ಅಮಾಯಕರ ಮೇಲೆ ದೌರ್ಜನ್ಯವೆಸಗುತ್ತಿದ್ದಾರೆ. ಇಂತಹ ನಾಯಕರನ್ನು ಕೂಡಲೆ ಬೇತಮಂಗಲದಿಂದ ಗಡೀಪಾರು ಮಾಡಬೇಕು. ರೌಡಿ ಚಟುವಟಿಕೆಯಲ್ಲಿ ತೊಡಗಿರುವವರನ್ನು ಪೊಲೀಸರು ನಿಯಂತ್ರಿಸಬೇಕು. ಬೇತಮಂಗಲದಲ್ಲಿ ಕೆಲಸ ನಿರ್ವಹಿಸುವ ಪೊಲೀಸ್ ಅಧಿಕಾರಿಗಳು ನಿಷ್ಪಕ್ಷಪಾತವಾಗಿ ಕೆಲಸ ನಿರ್ವಹಿಸಲು ಅಧಿಕಾರಿಗಳು ಅನುವು ಮಾಡಿಕೊಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ನಂತರ ಸ್ಥಳಕ್ಕೆ ಆಗಮಿಸಿದ ಕೋಲಾರದ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಭಗವಾನ್‌ದಾಸ್ ಪ್ರತಿಭಟನಾಕಾರರಿಂದ ಮನವಿ ಸ್ವೀಕರಿಸಿದರು. ಘಟನೆಯ ವಿವರಗಳನ್ನು ಕೆಜಿಎಫ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಗಮನಕ್ಕೆ ತರಲಾಗುವುದು. ತನಿಖೆ ನಡೆಸುವ ಮೊದಲು ಎಲ್ಲಾ ಮುಖಂಡರ ಮನವಿಯನ್ನು ಆಲಿಸಲಾಗುವುದು ಎಂದು ಭಗವಾನ್‌ದಾಸ್ ಹೇಳಿದರು. ಡಿವೈಎಸ್ಪಿ ರಾಜಣ್ಣ, ಸರ್ಕಲ್ ಇನ್ಸ್‌ಪೆಕ್ಟರ್ ಶಿವಕುಮಾರ್ ಹಾಜರಿದ್ದರು.

ಎಪಿಎಂಸಿ ಅಧ್ಯಕ್ಷ ವಿಜಯಶಂಕರ್, ಜಿಲ್ಲಾ ಪಂಚಾಯಿತಿ ಸದಸ್ಯರಾದ ಆರ್.ನಾರಾಯಣರೆಡ್ಡಿ, ಅ.ಮು.ಲಕ್ಷ್ಮೀನಾರಾಯಣ, ಕೋಮುಲ್ ನಿರ್ದೇಶಕ ಜಯಸಿಂಹಕೃಷ್ಣಪ್ಪ, ಹಸಿರು ಸೇನೆ ಮುಖಂಡರಾದ ರಾಮೇಗೌಡ, ಶಿವಶಂಕರ್, ಕೃಷ್ಣಪ್ಪ, ಎಪಿಎಂಸಿ ಮಾಜಿ ಅಧ್ಯಕ್ಷ ಡಾ.ಕೃಷ್ಣಮೂರ್ತಿ, ಮುನಿಸ್ವಾಮಿರೆಡ್ಡಿ, ಕೃಷ್ಣೇಗೌಡ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT