ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭೂತಕ್ಕೆ ಜಾತಿಯಿಲ್ಲ, ಭೂತ ಕಟ್ಟುವವನಿಗೆ?

Last Updated 17 ಫೆಬ್ರುವರಿ 2013, 19:59 IST
ಅಕ್ಷರ ಗಾತ್ರ

ಜಗತ್ತಿನಾದ್ಯಂತ ಭೂತಗಳ ಬಗೆಗಿನ ನಂಬಿಕೆ ಇದ್ದರೂ ಕೂಡಾ ತುಳುನಾಡು ಹಾಗೂ ಕೇರಳದ ಹೊರತಾಗಿ ಉಳಿದೆಡೆಯ ಜನರು ಅವುಗಳನ್ನು ಕ್ಷುದ್ರಶಕ್ತಿಗಳೆಂದು ಪರಿಗಣಿಸಿ ದೆವ್ವ (ಡೆವಿಲ್ಸ್) ಎಂದು ಹೆಸರಿಸುತ್ತಾರೆ. ಇಲ್ಲಿನ ಜನರು ಮಾತ್ರ ಭೂತಗಳನ್ನು ದಿವ್ಯಶಕ್ತಿಗಳು (divine spirits) ದೈವಗಳೆಂದು ಆರಾಧಿಸುತ್ತಾರೆ.

ತುಳುನಾಡಿನಲ್ಲಿ ಭೂತಗಳನ್ನು ಎಲ್ಲ ಜಾತಿ ಜನರೂ ನಂಬುತ್ತಾರೆ. `ಭೂತ' ಎನ್ನುವ ಪದ ತುಚ್ಛವೆಂದು ಭಾವಿಸಿ ಗೌರವದಿಂದ `ದೈವ' ಎನ್ನುತ್ತಾರೆ. ಭೂತಾರಾಧನೆಯ ಪ್ರಧಾನ ಆಚರಣೆಯೇ ಕೋಲ ಅಥವಾ ನೇಮ. ಗೊನೆ ಕಡಿಯುವುದರಿಂದ ಮೊದಲ್ಗೊಂಡು ಪ್ರಸಾದ ವಿತರಣೆಯವರೆಗೆ 16 ವಿಧಿ-ವಿಧಾನಗಳಿಂದ ಕೂಡಿದ ಈ ಉತ್ಸವದಲ್ಲಿ ಭೂತದ ವೇಷ ತೊಟ್ಟು, ಮುಖ ವರ್ಣಿಕೆಗೈದು, ಕಾಲಿಗೆ `ಗಗ್ಗರ' ತಲೆಗೆ `ಅಣಿ' ಸೊಂಟಕ್ಕೆ `ಜಕ್ಕೆಲಣಿ' ಮುಂತಾದ ಅಲಂಕಾರ ಪರಿಕರಗಳನ್ನು ಕಟ್ಟಿಕೊಂಡು ಕೈಯಲ್ಲಿ ಆಯುಧ ಹಿಡಿದು ಕೊಂಬು, ತಾಸೆ, ನಾಗಸ್ವರದ ಹಿಮ್ಮೇಳಕ್ಕೆ ಆವೇಶ ಭರಿತ ಕುಣಿತ ನಡೆಸುವುದೇ ಕೋಲದ ಮುಖ್ಯ ಭಾಗ.

ಈ ನೇಮೋತ್ಸವಗಳು ಕುಟುಂಬ, ಗ್ರಾಮ, ಮಾಗಣೆಗಳ ಮಟ್ಟದಲ್ಲಿ ಕಾಲಬದ್ಧವಾಗಿ ನಡೆಯುತ್ತವೆ. ಗ್ರಾಮ, ಮಾಗಣೆಗಳ ಮಟ್ಟದಲ್ಲಿ  ಜನರೆಲ್ಲರ ಸಹಕಾರದಿಂದ ಕೋಲ- ಅಂಕ- ಆಯನಗಳನ್ನು ನಡೆಸುವವರು ಗುತ್ತು, ಬೀಡಿನ ಮುಖ್ಯಸ್ಥರಾದ ಬಂಟ, ಬಾರಗ, ಜೈನ, ಬಲ್ಲಾಳ ಎಂಬ `ಉಚ್ಚ' ಜಾತಿಯವರು. ಈ ಉತ್ಸವದಲ್ಲಿ ಭೂತ ಮಾಧ್ಯಮ ವ್ಯಕ್ತಿಯ ಸಹಾಯಕ ಪೂಜಾರಿಯಾಗಿ ಕಾರ್ಯನಿರ್ವಹಿಸುವವರು ಬಿಲ್ಲವರು.

ಇಲ್ಲವೇ ಇನ್ನಿತರ ಹಿಂದುಳಿದ ಜಾತಿಯವರು. ಸ್ಥಳ ಶುದ್ಧಗೊಳಿಸಿ ಮಡಿ ಬಟ್ಟೆಯ ದಲ್ಯ ಒದಗಿಸಿ ಕೊಡುವವರು ಮಡಿವಾಳರು. ಪರಿಸರವನ್ನು ಸ್ವಚ್ಛಗೊಳಿಸಿ ತಳಿರು-ತೋರಣ ಕಟ್ಟಿ ಅಲಂಕರಿಸುವವರು ಮೊಗೇರರು. ಹಿಮ್ಮೇಳದಲ್ಲಿ ದೇವಾಡಿಗರು. ಭೂತರಾಧನೆಯು ಕೂಡಾ ಊಳಿಗಮಾನ್ಯ ಪದ್ಧತಿಗೊಂದು ನಿದರ್ಶನ ಎನ್ನುವುದರಲ್ಲಿ ಎರಡು ಮಾತಿಲ್ಲ.

ಭೂತ ಕೋಲದ ಕೊನೆಯ ಹಂತ ವೀಳ್ಯ ವಿತರಣೆಯ ಸಂದರ್ಭದಲ್ಲಿ ಮೇಲ್ವರ್ಗದವರೆಲ್ಲ ಕಾಣಿಸಿಕೊಳ್ಳುತ್ತಾರೆ. ಗೌರವ ಸ್ವೀಕಾರಕ್ಕಾಗಿ ಮುಂದೆ ಬಂದು ನಿಲ್ಲುತ್ತಾರೆ. ಅಲ್ಲಿ ಭೂತ ಎಂದರೆ ಕ್ಷುದ್ರಶಕ್ತಿ ಎಂದು ಹೇಳುವ ವೈದಿಕ ಸಮುದಾಯಕ್ಕೆ ಮೊದಲ ಆದ್ಯತೆ ಸಲ್ಲುತ್ತದೆ.

ಗುತ್ತು ಬೀಡಿನ ಬಂಟ, ಬಲ್ಲಾಳ, ಜೈನರಿಗೆ ನಂತರದ ಮಾನ್ಯತೆ. ಉಳಿದ ಜಾತಿಯವರಿಗೆಲ್ಲ ಅವರವರ ಜಾತಿಯ ಮಟ್ಟಕ್ಕನುಸಾರವಾಗಿ ಶ್ರೇಣೀಕೃತ ಗೌರವ. ಆವರೆಗೆ ಶ್ರಮವಹಿಸಿ ದುಡಿದ ದಲಿತ-ಅಸ್ಪೃಶ್ಯ ಜಾತಿಯವರೆಂದೆಣಿಸಿಕೊಂಡವರಿಗೆ `ಅಸ್ಪೃಶ್ಯ' ಎಂದೇ ಕರೆಯಿಸಿಕೊಳ್ಳುವವರೇ ಕಟ್ಟುವ ಭೂತದೆದುರು ಮೊದಲು ಪ್ರಸಾದ ಸ್ವೀಕರಿಸುವ ಹಕ್ಕನ್ನು ಮೇಲ್ಜಾತಿ ಎನಿಸಿಕೊಂಡವರು ಬಿಟ್ಟುಕೊಟ್ಟಿಲ್ಲ.

ಭೂತಕೋಲದ ಪ್ರಮುಖ ಪ್ರಕ್ರಿಯೆಗಳು ಭಂಡಾರ ತೆಗೆಯುವಲ್ಲಿಂದ ಪ್ರಾರಂಭಗೊಳ್ಳುತ್ತವೆ. ಭೂತದ ಚಿನ್ನ,ಬೆಳ್ಳಿಯ ಆಭರಣಗಳು, ಮುಖವಾಡ, ಕಡ್ತಲೆ (ಖಡ್ಗ) ಘಂಟಾಮಣಿ, ಚವರಿಯನ್ನು ಭಂಡಾರ ಎನ್ನುತ್ತಾರೆ. ಗುತ್ತು, ಬೀಡು, ತರವಾಡ ಮನೆಗಳಲ್ಲಿ ಇವುಗಳ ಸಂರಕ್ಷಣೆಗಾಗಿ ಪ್ರತ್ಯೇಕ ಕೋಣೆಗಳಿರುತ್ತವೆ. ಕೋಲ ಆರಂಭವಾಗುವ ಮೊದಲು ಈ ಭಂಡಾರಕ್ಕೆ ಪೂಜಾರಿ ಪೂಜೆಗೈದು ಪ್ರಾರ್ಥನೆ ಸಲ್ಲಿಸುತ್ತಾರೆ.

ಅಷ್ಟರಲ್ಲಿ ತಾಸೆ, ತಮಟೆಗಳು ಜೋರಾಗಿ ಮೊಳಗುತ್ತವೆ. ಪೂಜಾರಿ ಆವೇಶ ಭರಿತರಾಗಿ ಮುಖವಾಡವನ್ನು ಎತ್ತಿಕೊಂಡು ಹೊರಗೆ ಬರುತ್ತಾರೆ. ಪರಿಚಾರಕರು ಉಳಿದ ಸಾಮಗ್ರಿಗಳನ್ನು ಎತ್ತಿಕೊಂಡು ಹಿಂಬಾಲಿಸುತ್ತಾರೆ. ಕೋಲ ನಡೆಯುವ ಸ್ಥಳದಲ್ಲಿ ಕಟ್ಟಿದ ತಾತ್ಕಾಲಿಕ ಗುಡಿಯ ಕೊಡಿಯಡಿಯಲ್ಲಿ ನಿರ್ಮಿಸಲಾದ ಸಿಂಗದನವೆಂಬ ಮೆಟ್ಲುಮಣೆಯಲ್ಲಿ ಭಂಡಾರದ ಸಾಮಗ್ರಿಗಳನ್ನಿಟ್ಟು ನಾಂದಿಯ ಕ್ರಿಯಾ ವಿಧಿಗಳನ್ನು ಪೂಜಾರಿ ನಡೆಸಿಕೊಟ್ಟ ಬಳಿಕ ಭೂತದ ಕಲಾವಿದನಿಗೆ ಎಣ್ಣೆ ವೀಳ್ಯ ನೀಡಿ ಕೋಲ ಕಟ್ಟಲು ಗುತ್ತಿನ ಯಜಮಾನ ಅಪ್ಪಣೆ ಕೊಡುತ್ತಾನೆ. ಅಲ್ಲಿಂದ ಮುಂದೆ ಕಲಾವಿದನೇ ಕೋಲದ ಪ್ರಮುಖ ಪಾತ್ರಧಾರಿಯಾಗುತ್ತಾನೆ. ಆತನ ಆದೇಶದಂತೆ ಮುಂದಿನ ಎಲ್ಲ ಪ್ರಕ್ರಿಯೆಗಳು ನಡೆಯುತ್ತವೆ.

ಕೋಲದಲ್ಲಿ ಕಲಾವಿದನು ಭಕ್ತರ ಮನಸ್ಸನ್ನು ತನ್ನ ಹಿಡಿತಕ್ಕೊಳಪಡಿಸಿಕೊಂಡು ಹೇಗೆ ಸಂತೃಪ್ತಿ ಪಡಿಸುತ್ತಾನೆ ಎಂಬುದನ್ನು ಭೂತಾರಾಧನೆಯ ಬಗೆಗೆ ವಿಶೇಷ ಅಧ್ಯಯನ ನಡೆಸಿದ ಪ್ರೊ.ಕೆ.ಚಿನ್ನಪ್ಪಗೌಡ ಅವರು ಹೀಗೆ ಹೇಳುತ್ತಾರೆ `ತಳಿರು ತೋರಣಗಳಿಂದ ಅಲಂಕೃತಗೊಂಡ ಕೋಲ ನಡೆಯುವ ಕಳ, ಕೊಡಿಯಡಿಯಲ್ಲಿ ನಡೆಯುವ ಕ್ರಿಯಾವಿಧಿಗಳು, ಭಯ, ಭಕ್ತಿ ಮೂಡಿಸುವ ಭೂತದ ಮುಖವರ್ಣಿಕೆ, ವೇಷ-ಭೂಷಣ- ಅಲಂಕಾರ.

ಕಾಲಿಗೆ ಕಟ್ಟಿದ ಗಗ್ಗರದ ಭಯ ಹುಟ್ಟಿಸುವ ಸದ್ದು, ಕಲಾವಿದನ ಹೆಗಲೇರಿದ ಐದಾರು ಅಡಿ ಎತ್ತರದ ಅಲಂಕೃತ ಅಣಿ, ತಾರಕಕ್ಕೇರಿದ ತಮಟೆ ವಾದ್ಯಗಳ ಮೊಳಗುವಿಕೆ, ಆಯುಧ ಪಾಣಿಯಾಗಿ ಕಲಾವಿದನು ನಡೆಸುವ ರೋಷಾವೇಶದ ಕುಣಿತಗಳ ಆರ್ಭಟ ಇವೆಲ್ಲ ಅಲ್ಲಿ ಸೇರಿದ ಜನಪದರನ್ನು ಮಂತ್ರ ಮುಗ್ಧರನ್ನಾಗಿ ಮಾಡುತ್ತದೆ. ಒಂದು ವಿಶಿಷ್ಟ ಪರಿಸರ ನಿರ್ಮಾಣಗೊಳ್ಳುತ್ತದೆ. ಅಲ್ಲಿರುವವರೆಲ್ಲ ಭಾವುಕರಾಗಿ ಸಮಷ್ಟಿ ಮನೋಭಾವ ತಾಳುತ್ತಾರೆ.

ತುಳುನಾಡಿನಲ್ಲಿ ಭೂತ ಮಾಧ್ಯಮ ವ್ಯಕ್ತಿಗಳಾಗಿ ವೃತ್ತಿ ನಡೆಸುತ್ತಿರುವ ಪರವ, ಪಂಬದ, ನಲ್ಕೆ, ಪಾಣಾರರೆಲ್ಲ ಮೂಲತಃ ಪಾಣನ್ ಜನಾಂಗಕ್ಕೆ ಸೇರಿದವರು. ಗಾಯನ, ವಾದನ, ನರ್ತನಗಳೇ ಇವರ ಮೂಲೋದ್ಯೋಗ. ಈ ಜನಾಂಗಕ್ಕೆ ವೇದ ಕಾಲದಷ್ಟು ಪ್ರಾಚೀನತೆ ಇದೆ. ಬಸವಣ್ಣ ತಮ್ಮದೊಂದು ವಚನದಲ್ಲಿ `ಯಾಗ ನಟ್ಟುವಿಗೆ ಪಾಣರು ಇವರಿಂದ  (ವೇದ ಶಾಸ್ತ್ರ ಪಂಡಿತರು) ಅಧಿಕವ ಸಾಧಿಸುವ ರೇನ್ ಕಿರಿಯರೇ?' ಎಂದಿದ್ದಾರೆ.

ಬಹಳ ಪ್ರಾಚೀನ ಕಾಲದಲ್ಲಿ ಉತ್ತರ ಭಾರತದಲ್ಲಿ ನೆಲೆಸಿದ್ದ ಇವರು ದ್ರಾವಿಡ ಮೂಲದವರಾಗಿದ್ದರು. ಇವರಿಗೆ ಕೃಷಿ, ಪಶುಸಂಗೋಪನೆ ತಿಳಿದಿರಲಿಲ್ಲ. ವೈದಿಕ ಪಂಥವನ್ನು ಸ್ವೀಕರಿಸದೇ ತಮ್ಮದೇ ಆದ ದ್ರಾವಿಡ ಪದ್ಧತಿಯ ಆರಾಧನಾ ಪದ್ಧತಿಗಳನ್ನು ನಡೆಸಿಕೊಂಡು ಬರುತ್ತಿದ್ದ ಇವರಲ್ಲಿ ಪುರೋಹಿತರು, ಮಾಂತ್ರಿಕರು, ವೈದ್ಯರು ಇದ್ದರು.

ವೈದಿಕ ಸಂಸ್ಕೃತಿಯ ಪ್ರಭಾವ ಬಲಗೊಂಡಾಗ ಈ ಜನಾಂಗದವರು ದಕ್ಷಿಣಕ್ಕೆ ಬಂದರು. ತಮಿಳುನಾಡು ಹಾಗೂ ಶ್ರೀಲಂಕಾದಲ್ಲಿ ತಮ್ಮ ನೆಲೆಯನ್ನು ಕಂಡುಕೊಂಡರು. ಇಲ್ಲಿ ಹಲವು ಶತಮಾನಗಳವರೆಗೆ ಕಲಾವಿದರಾಗಿ ಉಚ್ಛ್ರಾಯ ಸ್ಥಿತಿಯಲ್ಲಿ ಬಾಳಿದ ಸಂಗತಿ ತಮಿಳಿನ ಸಂಗಂ ಸಾಹಿತ್ಯದಲ್ಲಿ ಹೇಳಲಾಗಿದೆ.

ಸುಮಾರು 9-10ನೇ ಶತಮಾನದಲ್ಲಿ ತಮಿಳುನಾಡಿನಲ್ಲಿ ಇವರ ಜನಾಂಗಕ್ಕೆ ಯಾವುದೋ ಒಂದು ಬಗೆಯ ಗಂಡಾಂತರ ಉಂಟಾಯಿತು. ಇದರಿಂದ ಪರಿಹಾರ ಕಾಣಲು ಈ ಜನರು ಊರು ಬಿಡಬೇಕಾಯಿತು. ಪರಿಹಾರ ಕಾಣಲು ಗುಂಪು ಗುಂಪಾಗಿ ಪಾಲ್ಘಾಟು ಕಣಿವೆಯ ಚೇರನಾಡು (ಕೇರಳ) ದಾಟಿ ತುಳುನಾಡಿಗೆ ಪ್ರವೇಶಿಸಿದರು.

ಬೇರೆ ಬೇರೆ ಕಾಲದಲ್ಲಿ ಇಲ್ಲಿಗೆ ಬಂದ ಗುಂಪಿನ ಜನರನ್ನು ಇಲ್ಲಿನ ಜನರು ಬೇರೆ ಬೇರೆ ಹೆಸರುಗಳಿಂದ ಕರೆದರು. ಬಂದವರೆಲ್ಲರೂ ಇಲ್ಲಿನ ಜನಪದ ಆರಾಧನಾ ಕಲೆಯಾದ ಭೂತಾರಾಧನೆಯಲ್ಲಿ ತೊಡಗಿಸಿಕೊಂಡರು. ಭೂತಾರಾಧನೆಗೆ ಹೊಸ ಆಯಾಮ ನೀಡಿದರು. ಈ ವಿಚಾರವನ್ನು ಡಾ.ಸುಶೀಲಾ ಉಪಾಧ್ಯಾಯ ಅವರು ತಮ್ಮ `ಜನಪದ ಆರಾಧನೆ ಮತ್ತು ರಂಗಕಲೆ' (1989) ಎಂಬ ಗ್ರಂಥದಲ್ಲಿ ಉಲ್ಲೇಖಿಸಿದ್ದಾರೆ.

ದೈವಾರಾಧನೆಯಂತಹ ಧಾರ್ಮಿಕ ರಂಗಭೂಮಿಯ ಕಲಾವಿದರಾಗಿ ಮಾತ್ರವಲ್ಲದೇ ಸಮಾಜಕ್ಕೆ ಕಾಲಕಾಲಕ್ಕೆ ಹಾಡು, ಕುಣಿತಗಳಂತಹ ಮನೋರಂಜನೆಯನ್ನು ಒದಗಿಸುವ ನಿಟ್ಟಿನಲ್ಲಿ ಸಮಾಜದ ಸಂಸ್ಕೃತಿಯನ್ನು ಉಳಿಸಿ, ಬೆಳೆಸಿ, ಸಮಾಜೋಪಯೋಗಿ ಕಾರ್ಯಗಳನ್ನು ನಡೆಸುತ್ತಾ ಬಂದ ಇವರನ್ನು ಮೇಲ್ವರ್ಗ ಅನ್ನಿಸಿಕೊಂಡ ಜನರು ಕೆಳಸ್ತರದ ಅಸ್ಪೃಶ್ಯರು ಎಂದು ಪರಿಗಣಿಸಿರುವುದು ಖೇದಕರ ಸಂಗತಿಯಾಗಿದೆ.

ಭೂತ ಕಲಾವಿದರಾಗಿ ವೇಷ-ಭೂಷಣ ತೊಟ್ಟು ಕೋಲ ನಡೆಯುವ ಸಂದರ್ಭದಲ್ಲಿ ಇವರು ಎಲ್ಲ ವರ್ಗದವರನ್ನು ತಮ್ಮ ಅಂಕಿತಕ್ಕೊಳಪಡಿಸುತ್ತಾರೆ. ಭಕ್ತ ಜನರ ಸಂಕಷ್ಟಗಳನ್ನಳಿಸಿ ಪರಿಹಾರ ನೀಡಿ, ಸಾಂತ್ವನಗೊಳಿಸುತ್ತಾರೆ. ಅನೇಕ ಕ್ಲಿಷ್ಟವಾದ ವಿವಾದಗಳನ್ನು ಎರಡು ಕಡೆಯವರು ಕೂಡಾ ಮೆಚ್ಚುವಂತೆ ಪರಿಹರಿಸಿ ನ್ಯಾಯ ತೀರ್ಮಾನ ನೀಡುತ್ತಾರೆ.

ಭೂತಾವೇಶಗೊಂಡಾಗ ಉತ್ಸವದ ಕೇಂದ್ರಬಿಂದುಗಳಾಗಿ, ಪೂರ್ತಿ ಸನ್ನಿವೇಶವನ್ನು ಆಳುವ ಇವರು ಭೂತ ವೇಷ ಕಳಚಿದೊಡನೆ ಸವರ್ಣೀಯರ ಮನೆಯ ಹೊಸ್ತಿಲು ದಾಟಿ ಜಗಲಿ ಏರುವ ಸ್ವಾತಂತ್ರ್ಯವನ್ನು ಕೂಡಾ ಕಳೆದುಕೊಳ್ಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT