ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭೂತನಾಥೇಶ್ವರ ದೇಗುಲ ಪರಿಸರದಲ್ಲಿ ಆಟೋಟ ಜಾತ್ರೆ

Last Updated 18 ಫೆಬ್ರುವರಿ 2012, 6:25 IST
ಅಕ್ಷರ ಗಾತ್ರ

ಬಡಗಮಿಜಾರು: ಆ ಓಟದ ಹೆಸರು `ಕುಲೆತ್ತ ಬಲ್ಪಾಟ~. ಕನ್ನಡದಲ್ಲಿ ಪ್ರೇತಗಳ ಓಡಾಟ. ದೇಹ ಕವರ್ ಮಾಡುವಂತೆ ಉದ್ದನೆಯ ಬಿಳಿಯ ಮುಸುಕು ಹೊಲಿಸಿ ಕಣ್ಣಿನ ಜಾಗದಲ್ಲಿ ಮಾತ್ರ ಕಣ್ಣಿನ ಅಕಾರದ ಎರಡು ರಂಧ್ರಗಳು. ಕತ್ತಲಲ್ಲಿ ಕಂಡರೆ ಭಯಪಡುವ ರೀತಿಯಲ್ಲಿದೆ ಈ ಮುಸುಕಿನ ಪ್ರೇತಗಳ ಸಂಚಾರ!

ಮಿಜಾರು ಬಡಗ ಎಡಪದವಿನಲ್ಲಿ ಭೂತನಾಥೇಶ್ವರ ಕ್ರೀಡೋತ್ಸವದ ಮೊದಲ ದಿನವಾದ ಶುಕ್ರವಾರ ನಡೆದ ಸ್ಪರ್ಧೆಗಳಲ್ಲಿ ಗಮನ ಸೆಳೆದಿದ್ದು ಈ ಸ್ಪರ್ಧೆ!

ಎಲ್ಲರಿಗೂ ಭಾಗವಹಿಸಲು ಅವಕಾಶವಿದ್ದ ಆ ಮುಕ್ತ ಸ್ಪರ್ಧೆಯಲ್ಲಿ, ಧಿರಿಸುಗಳನ್ನೂ ಸ್ಪರ್ಧಿಗಳಿಗೆ ಉಚಿತವಾಗಿ ಕೊಡಲಾಗಿತ್ತು. ಓಟದ ಇನ್ನೊಂದು ವಿಶೇಷ ಎಂದರೆ `ಪ್ರೇತ~ ಧಿರಿಸಿನ ಸ್ಪರ್ಧಿಗಳು ಕೆಸರು ಗದ್ದೆಯಲ್ಲಿ 100 ಮೀ. ಕ್ರಮಿಸಬೇಕಿತ್ತು. ಶುಕ್ರವಾರ ಈ ಸ್ಪರ್ಧೆಯ ಹೀಟ್ಸ್‌ಗಳು ಮಾತ್ರ ನಡೆದವು. ಫೈನಲ್ ಭಾನುವಾರ ನಿಗದಿಯಾಗಿದೆ.

ಇನ್ನು ಅಕ್ಕಿಮುಡಿ ಕಟ್ಟುವ ಸ್ಪರ್ಧೆ, ತಟ್ಟಿರಾಯ ಗೊಂಬೆಗಳ (ದೊಡ್ಡ ಗೊಂಬೆಗಳ ಒಳಗೆ ಮನುಷ್ಯರು ಅಡಗಿರುವುದು) ರೇಸ್, ಎರಡು ವಿಭಾಗಳಲ್ಲಿ ಮಕ್ಕಳಿಗೆ ಚಿತ್ರಕಲಾ ಸ್ಪರ್ಧೆ, ರಂಗೋಲಿ ಸ್ಪರ್ಧೆ, ಪುಷ್ಪಾಲಂಕಾರ, ನಿಧಿ ಶೋಧನೆ ಮೊದಲಾದ ಸ್ಪರ್ಧೆಗಳು ಭೂತನಾಥೇಶ್ವರ ದೇವಸ್ಥಾನದ ಆಸುಪಾಸಿನ ಗದ್ದೆಗಳಲ್ಲಿ ನಡೆದವು.
ಮಕ್ಕಳಿಗೆ ಕೆಸರಿನಲ್ಲಿ ನಿಧಿ ಶೋಧದ ಸ್ಪರ್ಧೆಯೂ ಸಾಕಷ್ಟು ಪ್ರೇಕ್ಷಕರ ಗಮನ ಸೆಳೆಯಿತು. ಮೈಗೆ ಕೆಸರಾದರೂ ನಿಧಿಯ ಆಸೆಯಿಂದ ಮಕ್ಕಳು ಕೆಸರು ಗದ್ದೆಯಲ್ಲಿ ನಿಧಿಗಾಗಿ ಹುಡುಕಾಡಿದರು.

ಒಂದು ರೀತಿ ದೇವಸ್ಥಾನ ಪರಿಸರದಲ್ಲಿ ಹಬ್ಬದ ವಾತಾವರಣ. ಎಲ್ಲಿ ನೋಡಿದರಲ್ಲಿ ಶಾಲಾ ಮಕ್ಕಳು, ಭಾಗವಹಿಸಲು ಸಜ್ಜಾಗಿರುವ ಸ್ಪರ್ಧಿಗಳು. ಸಿನಿಮಾ ತಾರೆಗಳು ಕ್ರೀಡೋತ್ಸವದ ರಂಗು ಹೆಚ್ಚಿಸಿದರು. ಸ್ವಯಂಸೇವಕರೂ ಸಾಕಷ್ಟು ಸಂಖ್ಯೆಯಲ್ಲಿದ್ದರು.

ಈ ಕ್ರೀಡೋತ್ಸವದ ಆಯೋಜಕರಾದ ವಿಜಯನಾಥ ವಿಠಲ ಶೆಟ್ಟಿ ಅವರ ತಾಯಿ ಪ್ರೇಮಲತಾ ವಿ.ಶೆಟ್ಟಿ ಬಲು ತಮಾಷೆಯ ಈ ಆಟೋಟಕ್ಕೆ ಚಾಲನೆ ನೀಡಿದರು. ಮೂರು ದಿನಗಳ ಈ ಕ್ರೀಡೋತ್ಸವದಲ್ಲಿ 40 ವಿವಿಧ ರೀತಿಯ ಸ್ಪರ್ಧೆಗಳು ನಡೆಯಲಿವೆ.

ಮಾಜಿ ಅಂತರರಾಷ್ಟ್ರೀಯ ಹಾಕಿ ಆಟಗಾರ ಧನರಾಜ್ ಪಿಳ್ಳೆ, ಸಂಸತ್ ಸದಸ್ಯ ನಳಿನ್ ಕುಮಾರ್ ಕಟೀಲ್, ಆಳ್ವಾಸ್ ಶಿಕ್ಷಣ ಸಂಸ್ಥೆ ಅಧ್ಯಕ್ಷ ಎಂ.ಮೋಹನ ಆಳ್ವ, ಜಗದೀಶ್ ಅಧಿಕಾರಿ, ಭೋಜಪುರಿ ಚಿತ್ರನಟಿ, ತುಳುನಾಡಿನವರೇ ಆದ ಪಾಕಿ ಹೆಗ್ಡೆ, ಚಿತ್ರನಟ-ನಿರ್ದೇಶಕ ಶಿವಧ್ವಜ್ ಮತ್ತಿತರರಿದ್ದರು. ಕಲಾವಿದ ದಿವಾಕರ ಚಿಪಳೂಣಕರ್ ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

`ಊರಿನ ಕ್ರೀಡೆ ಎಂದು ಭಾಗವಹಿಸಿದ್ದೆ~: ಗೊಂಬೆಗಳ ಓಟದಲ್ಲಿ 3ನೇ ಸ್ಥಾನ ಪಡೆದಿದ್ದ ಶಾಸ್ತಾವು ಕಿನ್ನಿಮಜಲಿನ ಮೋಹನ್ ಅವರಿಗೆ ಇದು ಮೊದಲ ಅನುಭವ.

`ಮೊದಲು ಸ್ವಲ್ಪ ನರ್ವಸ್ ಆಗಿದ್ದೆ. ಆದರೆ ಅಭ್ಯಾಸವಿಲ್ಲದೇ ಓಡಿದ ಕಾರಣ ದಣಿವಾಯಿತು. ಪರಿಣಾಮ  ಮೂರನೇ ಸ್ಥಾನಕ್ಕೆ ತೃಪ್ತಿಪಡಬೇಕಾಯಿತು~ ಎಂದರು ಮೋಹನ್.

ಅವರು ಪ್ರೇತ ಓಟದಲ್ಲೂ (ಕುಲೆತ್ತ ಬಲ್ಪಾಟ) ಅಂತಿಮ ಹಂತಕ್ಕೆ ತಲುಪಿದ್ದಾರೆ. `ನಮ್ಮೂರಲ್ಲಿ ದೊಡ್ಡ ಕ್ರೀಡೋತ್ಸವ ನಡೆಯುತ್ತಿದ್ದು, ಭಾಗವಹಿಸೋಣ ಅಂತ ಅನಿಸಿತ್ತು~ ಎನ್ನುತ್ತಾರೆ ಮೋಹನ್. ಪೆಂಡಾಲ್ ಹಾಕುವ ವೃತ್ತಿ ಅವರದು.

`ನಮಗೆ ವಿಜಯನಾಥರು ಇಲ್ಲಿ ಎಲ್ಲ ವ್ಯವಸ್ಥೆ ಮಾಡಿದ್ದಾರೆ~ ಎನ್ನುತ್ತಾರೆ.
ಮಂಗಳವಾರ ನಿಧನರಾದ ಡಾ.ವಿ.ಎಸ್.ಆಚಾರ್ಯ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಫಲಿತಾಂಶ: ಚಿತ್ರ ಬಿಡಿಸುವ ಸ್ಪರ್ಧೆ (10ರಿಂದ 18 ವರ್ಷ): ವೈಭವ್ ಶೆಣೈ (ಕಸ್ಬ ಬಜಾರ್, ಮಂಗಳೂರು)-1, ಮನ್ವಿತಾ ಎಂ.ಕೆ. (ಕಂಬಳಪದವು, ಪಜೀರು)-2, ನಮೀತಾ (ಪುತ್ತೂರು)-3, ತನುಶ್ರೀ (ಕುಕ್ಕುಂದೂರು, ಕಾರ್ಕಳ)-4; (10 ವರ್ಷದೊಳಗಿನವರು): ಶ್ರೀನಿಧಿ (ಉಡುಪಿ)-1, ಅತುಲ್ (ಬಂಟ್ಸ್‌ಹಾಸ್ಟೆಲ್)-2, ಅನಿರುದ್ಧ (ನಾಯರ್‌ಕೆರೆ, ಅಂಬಲಪಾಡಿ)-3, ಸಾಕ್ಷಾತ್ (ತಾಕೋಡೆ)-4.

ಅಕ್ಕಿಮುಡಿ ಕಟ್ಟುವ ಸ್ಪರ್ಧೆ: ರಾಮಚಂದ್ರ ಸಫಲಿಗ (ಮಳಲಿ, ಗಂಜಿಮಠ)-1, ದತ್ತಾತ್ರೇಯ ಗೌಡ (ಬಡಗ ಎಡಪದವು)-2, ಕೋಚಪ್ಪ ಮಡಿವಾಳ (ಶಾಸ್ತಾವು, ಎಡಪದವು)-3, ಶಂಕರಗೌಡ (ಕಿಳಿಂಜಾರು)-4.

ರಂಗೋಲಿ: ರಂಜಿತಾ (ಮುಂಡ್ಕೂರು)-1, ಪ್ರಮೀಳಾ ಸಾಣೂರು (ಮುರತಂಗಡಿ)-2, ವಿದ್ಯಾ ಹೆರ್ಗ (ಮಣಿಪಾಲ)-3, ಚಂದ್ರಿಕಾ ಜಯರಾಮ ಭಟ್ ಕೆ. -4.

ಪುಷ್ಪಾಲಂಕಾರ: ವಿಜಯ ಶೆಟ್ಟಿ (ಪೊಲೀಸ್ ಲೇನ್, ಪಾಂಡೇಶ್ವರ)-1, ಶಿಲ್ಪಾ ಕಾಮತ್ (ಕಟಪಾಡಿ)-2, ಪ್ರಮೀಳಾ ಶಾಂತಮೇರಿ (ನೀರೋಡೆ)-3, ರತನ್ (ಕಣ್ಣೋರಿ)-4.

ಕೆಸರು ಗದ್ದೆ ನಿಧಿಶೋಧ: ಶುಭಲಕ್ಷ್ಮಿ ಮಡಪ್ಪಾಡಿ (ಎಡಪದವು)-1, ಜೀನ್ (ಪೂ ಪಾಡಿಕಲ್ಲು, ಎಡಪದವು)-2.
ಗೊಂಬೆಗಳ ರೇಸ್: ವಾಸುದೇವ್ (ಎಡಪದವು)-1, ಪ್ರದೀಪ್ (ಗಂಜಿಮಠ)-2, ಮೋಹನ್ -3.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT