ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭೂಮಾಪಕರ ಮುಷ್ಕರಕ್ಕೆ ಜೆಡಿಎಸ್ ಬೆಂಬಲ

Last Updated 17 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: ಪರವಾನಗಿ ನವೀಕರಣದ ಅವಧಿಯನ್ನು ಐದು ವರ್ಷಕ್ಕೆ ಏರಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸರ್ಕಾರಿ ಪರವಾನಗಿ ಭೂಮಾಪಕರ ಸಂಘದ ಸದಸ್ಯರು ಸ್ವಾತಂತ್ರ್ಯ ಉದ್ಯಾನದಲ್ಲಿ ನಡೆಸುತ್ತಿರುವ ಅನಿರ್ದಿಷ್ಟಾವಧಿ ಮುಷ್ಕರ ಹತ್ತನೇ ದಿನಕ್ಕೆ ಕಾಲಿಟ್ಟಿದೆ.

ಬುಧವಾರ ವಿಧಾನ ಪರಿಷತ್ ಮಾಜಿ ಸದಸ್ಯ ವೈ.ಎಸ್.ವಿ. ದತ್ತ, ಮಾಜಿ ಸಚಿವ ಬಿ.ಸೋಮಶೇಖರ್ ರೆಡ್ಡಿ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದರು. `ಪರವಾನಗಿ ಭೂಮಾಪಕರು ತಮ್ಮ ನ್ಯಾಯಯುತ ಬೇಡಿಕೆಗಳಿಗಾಗಿ ಆಗ್ರಹಿಸುತ್ತಿದ್ದಾರೆ. ಗುರುವಾರ ಭೂಮಾಪನ ಇಲಾಖೆ ಆಯುಕ್ತರನ್ನು ಭೇಟಿ ಮಾಡಿ, ಧರಣಿ ಸ್ಥಳಕ್ಕೆ ಕರೆ ತರುತ್ತೇನೆ. ವೇತನ ಪರಿಷ್ಕರಣೆ ಸೇರಿದಂತೆ ಪ್ರತಿಭಟನಾಕಾರರ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯ ಮಾಡುತ್ತೇನೆ. ಅಗತ್ಯ ಬಿದ್ದರೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರನ್ನು ಪ್ರತಿಭಟನಾ ಸ್ಥಳಕ್ಕೆ ಕರೆದುಕೊಂಡು ಬಂದು ತೀವ್ರವಾದ ಹೋರಾಟ ಮಾಡಲಾಗುವುದು~ ಎಂದು ದತ್ತ ಎಚ್ಚರಿಕೆ ನೀಡಿದರು.

`ಭೂಮಾಪಕರು ಪ್ರತಿ ವರ್ಷ ಪರವಾನಗಿಯನ್ನು ನವೀಕರಣ ಮಾಡಿಸಬೇಕು. ಈ ಸಂದರ್ಭದಲ್ಲಿ ಪ್ರತಿ ಸಿಬ್ಬಂದಿಗೂ ಲಂಚ ನೀಡಬೇಕು. ಈ ವ್ಯವಸ್ಥೆಯಿಂದ ತೀವ್ರ ತೊಂದರೆಯಾಗುತ್ತಿದೆ. ಹೀಗಾಗಿ ಪರವಾನಗಿ ಅವಧಿಯನ್ನು ಐದು ವರ್ಷಕ್ಕೆ ಹೆಚ್ಚಿಸಬೇಕು. ಒಂದು ಜಮೀನನ್ನು ಅಳತೆ ಮಾಡಲು ಭೂಮಾಪಕರಿಗೆ 300 ರೂಪಾಯಿ ನೀಡಲಾಗುತ್ತಿದೆ. 1998 ರಿಂದ ಈ ಹಣದಲ್ಲಿ ಪರಿಷ್ಕರಣೆಯಾಗಿಲ್ಲ. ಹೀಗಾಗಿ ಮೊತ್ತವನ್ನು 300 ರಿಂದ 1500 ರೂಪಾಯಿಗೆ ಏರಿಕೆ ಮಾಡಬೇಕು~ ಎಂದು ಸಂಘಟನೆಯ ರಾಜ್ಯ ಘಟಕದ ಅಧ್ಯಕ್ಷ ವಿರೂಪಾಕ್ಷ ಆಗ್ರಹಿಸಿದರು.

ಸಂಘದ ರಾಜ್ಯ ಘಟಕದ ಸಂಚಾಲಕ ಕೆ.ಬಿ. ಲೋಕೇಶ್, `ಭೂಮಾಪನ ಇಲಾಖೆಗಳಲ್ಲಿ, ತಾಲ್ಲೂಕು ಶಾಖೆಗಳಲ್ಲಿ ಭೂಮಾಪಕರನ್ನು ಅಸ್ಪೃಶ್ಯರಂತೆ ಕಾಣುತ್ತಾರೆ. ನಮಗೂ ಪ್ರತ್ಯೇಕ ಮೇಜು, ಕುರ್ಚಿಯನ್ನು ಕೊಟ್ಟು ಜಾಗದ ವ್ಯವಸ್ಥೆ ಮಾಡಿಕೊಡಬೇಕು. ಹತ್ತು ದಿನದಿಂದ ಕೆಲಸ ಸ್ಥಗಿತಗೊಳಿಸಿ ಮುಷ್ಕರ ನಡೆಸುತ್ತಿದ್ದರೂ ಸರ್ಕಾರ ಮತ್ತು ಇಲಾಖಾಧಿಕಾರಿಗಳು ಮೌನಕ್ಕೆ ಶರಣಾಗಿರುವುದು ಖಂಡನೀಯ~ ಎಂದು ಆಕ್ರೋಶ ವ್ಯಕ್ತಪಡಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT