ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭೂಮಾಪನ ಇಲಾಖೆ: ಅಳತೆ ಮೀರಿ ಹಣ ವಸೂಲಿ

Last Updated 2 ಫೆಬ್ರುವರಿ 2011, 6:35 IST
ಅಕ್ಷರ ಗಾತ್ರ

ಹಿರಿಯೂರು ತಾಲ್ಲೂಕು ರೈತ ಸಂಘದ ಆರೋಪ
ಹಿರಿಯೂರು: ಇಲ್ಲಿನ ಭೂಮಾಪನ ಇಲಾಖೆಯಲ್ಲಿ ರೈತರ ಭೂಮಿ ಅಳತೆ ಮಾಡಿಕೊಡಲು ಕಚೇರಿ ಅಧಿಕಾರಿ ಹಾಗೂ ಸಿಬ್ಬಂದಿ ವರ್ಗದವರು ಮಿತಿ ಮೀರಿ ಹಣ ಕೇಳುತ್ತಿದ್ದಾರೆ. ಈ ಅಕ್ರಮವನ್ನು ತಡೆಗಟ್ಟುವಂತೆ ತಹಶೀಲ್ದಾರರಿಗೆ ಮನವಿ ಸಲ್ಲಿಸಲು ಮಂಗಳವಾರ ನಗರದ ಕೃಷಿ ಮಾರುಕಟ್ಟೆ ಸಮಿತಿ ಆವರಣದಲ್ಲಿ ಹಮ್ಮಿಕೊಂಡಿದ್ದ ತಾಲ್ಲೂಕು ರೈತ ಸಂಘದ ಸಭೆಯಲ್ಲಿ ತೀರ್ಮಾನಿಸಲಾಯಿತು.

ರೈತರು ಬೆಳೆದ ಉತ್ಪನ್ನಗಳನ್ನು ಮಾರಾಟಕ್ಕೆ ತಂದರೆ, ಕೆಲವು ದಲಾಲಿ ಮಂಡಿ ಮಾಲೀಕರು, ಅಕ್ರಮವಾಗಿ ಬಿಳಿ ಚೀಟಿಯಲ್ಲಿ ಟೆಂಡರ್‌ಮೊತ್ತ ನಮೂದಿಸಿ ಕಮೀಷನ್ ಪಡೆಯುತ್ತಿದ್ದಾರೆ. ತೂಕದ ಸಮಯದಲ್ಲಿ ತಳಗಾಳು ಬಿಡಬಾರದು ಎಂಬ ನಿಯಮವಿದ್ದರೂ, ಹಮಾಲರು ತಳಗಾಳು ಪಡೆಯುತ್ತಿದ್ದಾರೆ. ಮಾರುಕಟ್ಟೆ ಅಧಿಕಾರಿಗಳು ರೈತರಿಗೆ ಆಗುತ್ತಿರುವ ಅನ್ಯಾಯವನ್ನು ತಕ್ಷಣ ತಡೆಯಬೇಕು ಎಂದು ಸಭೆಯಲ್ಲಿ ಒತ್ತಾಯಿಸಲಾಯಿತು.

ಕೃಷಿ ಇಲಾಖೆಯವರು ಸರ್ಕಾರದ ಕಾರ್ಯಕ್ರಮಗಳನ್ನು ರೈತರಿಗೆ ತಿಳಿಸುತ್ತಿಲ್ಲ.ಬೆಸ್ಕಾಂ ಇಲಾಖೆಯಲ್ಲಿ ಇತ್ತೀಚೆಗೆ ಅಮಾನತುಗೊಂಡಿದ್ದ ಅಧಿಕಾರಿಯನ್ನು ಮತ್ತೆ ಅದೇ ಸ್ಥಳದಲ್ಲಿ ಮುಂದುವರಿಸಿರುವ ಇಲಾಖೆಯ ಮೇಲಧಿಕಾರಿಗಳ ಕ್ರಮ ಸಮರ್ಥನೀಯವಲ್ಲ ಎಂದು ಖಂಡಿಸಿದ ಮುಖಂಡರು, ರೈತರಿಗೆ ಗುಣಮಟ್ಟದ ವಿದ್ಯುತ್ ಪೂರೈಕೆ ಮಾಡುವಲ್ಲಿ ವಿಫಲವಾಗಿರುವ ಬೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಬೇಕು ಎಂದು ತೀರ್ಮಾನಿಸಿದರು.

ಗ್ರಾಮಲೆಕ್ಕಿಗರು, ಪಂಚಾಯ್ತಿ ಕಾರ್ಯದರ್ಶಿಗಳು ಕೇಂದ್ರ ಸ್ಥಾನದಲ್ಲಿರದೆ ನಗರದಲ್ಲಿ ವಾಸಿಸುತ್ತಿರುವ ಕಾರಣ ಜನಸಾಮಾನ್ಯರ ಕೈಗೆ ಸಿಗುತ್ತಿಲ್ಲ. ತಹಶೀಲ್ದಾರರು ಸದರಿ ನೌಕರರನ್ನು ಕಡ್ಡಾಯವಾಗಿ ಕೇಂದ್ರ ಸ್ಥಾನದಲ್ಲಿ ನೆಲೆಸುವಂತೆ ಮಾಡಬೇಕು ಎಂದು ಮುಖಂಡರು ಒತ್ತಾಯಿಸಿದರು.ತಾಲ್ಲೂಕು ರೈತ ಸಂಘದ ಅಧ್ಯಕ್ಷ ಎ. ಕೃಷ್ಣಸ್ವಾಮಿ ಅಧ್ಯಕ್ಷತೆ ವಹಿಸಿದ್ದರು.

ಗೌರವಾಧ್ಯಕ್ಷ ಸುಬ್ರಮಣ್ಯಂ, ನರೇಂದ್ರ, ಕೆ.ಟಿ. ತಿಪ್ಪೇಸ್ವಾಮಿ, ಹೊರಕೇರಪ್ಪ, ಗುಂಡೇಗೌಡ, ತುಳಸೀದಾಸ್, ಮುದ್ದಣ್ಣ, ಇಂದೂಧರ್, ಪುಟ್ಟಸ್ವಾಮಿ ಮಾತನಾಡಿದರು.ಕೆ.ಆರ್.ದಿವಾಕರ್, ಸಿದ್ಧರಾಮಣ್ಣ, ಶಿವಸ್ವಾಮಿ, ಪುಟ್ಟರಂಗಪ್ಪ, ದಸ್ತಗೀರ್‌ಸಾಬ್, ಗೌಸ್‌ಪೀರ್, ತವಂದಿ ತಿಪ್ಪೇಸ್ವಾಮಿ, ಎಸ್.ಆರ್. ರಂಗಸ್ವಾಮಿ, ಬುರುಜನರೊಪ್ಪ ತಿಪ್ಪೇಸ್ವಾಮಿ, ಶಕ್ತಿವೇಲ್, ಗೋವಿಂದರಾಜು, ಗುರುಸ್ವಾಮಿ ಮತ್ತಿತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT